ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್ ಹಾಗು ಬಿಜೆಪಿ ಅಭ್ಯರ್ಥಿಯಾಗಿ ಡಾ ಮಂಜುನಾಥ್ ಚುನಾವಣಾ ಅಖಾಡದಲ್ಲಿ ಇದ್ದಾರೆ.ಡಿ.ಕೆ ಸುರೇಶ್ ಶಕ್ತಿ ಏನು ಕಡಿಮೆ ಇಲ್ಲ. ಹಣ ಬಲ, ತೋಳ್ಬಲ, ರಾಜಕೀಯ ಶಕ್ತಿ ಹೀಗೆ ಎಲ್ಲಾ ಆಯಾಮದಲ್ಲೂ ಡಾ ಮಂಜುನಾಥ್ಗೆ ಹೋಲಿಸಿದರೆ ಡಿ.ಕೆ ಸುರೇಶ್ ಮುಂದಿದ್ದಾರೆ. ಆದರೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿ ನಿವೃತ್ತರಾದ ಡಾ ಮಂಜುನಾಥ್ಗೆ ಸೇವೆ ಮಾಡುವುದಷ್ಟೇ ಗೊತ್ತು. ರಾಜಕಾರಣಕ್ಕೆ ಹೊಸಬರು. ಆದರೂ ಬಿಜೆಪಿ ಹಾಗು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಕಾರಣ ಡಾ ಮಂಜುನಾಥ್ ಗೆಲುವಿನ ಬಗ್ಗೆ ಹೆಚ್ಚಿನ ವಿಶ್ವಾಸ ಇದೆ.

ಡಾ ಮಂಜುನಾಥ್ ಗೆಲುವಿನ ಲೆಕ್ಕಾಚಾರ ಹೇಗಿದೆ..?
ರಾಮನಗರ ಜಿಲ್ಲೆಯನ್ನು ಒಳಪಟ್ಟಂತೆ ತುಮಕೂರಿನ ಕುಣಿಗಲ್, ಬೆಂಗಳೂರಿಗೆ ಸೇರಿದ ಆನೇಕಲ್, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರವೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಲಿದ್ದು, ಬೆಂಗಳೂರು ಭಾಗದ ನಗರವಾಸಿಗಳು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎನ್ನುವ ಲೆಕ್ಕಾಚಾರದಲ್ಲಿ ದೋಸ್ತಿ ನಾಯಕರಿದ್ದಾರೆ. ಹೆಚ್ಚೂ ಕಡಿಮೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಒಟ್ಟು ಮತಗಳಲ್ಲಿ ಅರ್ಧಕ್ಕೂ ಅಧಿಕ ಜನರು ಈ ಮೂರು ಕ್ಷೇತ್ರದಲ್ಲೇ ಇದ್ದಾರೆ. ಇನ್ನು ರಾಮನಗರ ಜಿಲ್ಲೆ ಹಾಗು ತುಮಕೂರಿನ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಸಮ ಬಲಶಾಲಿಗಳು. ಹೀಗಾಗಿ ಗೆಲ್ಲುತ್ತಾರೆ ಎನ್ನಲಾಗ್ತಿದೆ.

ಸಂಸದ ಸುರೇಶ್ ಸೋಲಿಗೆ ಇರುವ ಅಂಶಗಳು ಏನು..?
ಸಂಸದ ಸುರೇಶ್ ಹೆಚ್ಚು ಕ್ರಿಯಾಶೀಲರಾಗಿರುವ ಸಂಸದ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನರ ಕಷ್ಟ ಸುಖಗಳಿಗೆ ಸ್ಪಂದಿಸ್ತಾರೆ (ಕಾಂಗ್ರೆಸ್ ಕಾರ್ಯಕರ್ತರ) ಅನ್ನೋ ಮಾತುಗಳೂ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಆದರೆ ಸುರೇಶ್ ಹಾಗು ಅವರ ಬೆಂಬಲಿಗರು ಗೂಂಡಾಗಳ ರೀತಿ ನಡೆದುಕೊಳ್ತಾರೆ. ಭೂ ವಿಚಾರದಲ್ಲಿ ಭಾಗಿಯಾಗ್ತಾರೆ. ಒತ್ತುವರಿ ವಿಚಾರದಲ್ಲಿ ಸುರೇಶ್ ಹೇಳಿದ್ದೇ ಆಗಬೇಕು. ಬಡವರ ಭೂಮಿ ಕಂಡವರ ಪಾಲಾಗುವುದರಲ್ಲಿ ಸುರೇಶ್ ಕೈವಾಡ ಇರುತ್ತದೆ ಎನ್ನುವ ಆರೋಪವೂ ಬೆಂಗಳೂರು ಸುತ್ತಮುತ್ತಲ ಜನರ ಮಾತು. ಇದೆಲ್ಲವೂ ಕಾನೂನು ಮೂಲಕ ಸಾಬೀತಾಗಿಲ್ಲ ಎನ್ನುವುದು ಸತ್ಯ. ಆದರೂ ಜನರ ಮನಸ್ಸಿನ ಆಳದಲ್ಲಿ ಸುರೇಶ್ ಹಾಗು ಬೆಂಬಲಿಗರ ಗೂಂಡಾಗಿರಿ ಬೇರು ಬಿಟ್ಟಿದೆ ಎನ್ನಬಹುದು.

ಡಾ ಮಂಜುನಾಥ್ ಯಾಕೆ ಗೆಲ್ಲಬೇಕು.. ಕರ್ನಾಟಕ ಸೋಲುವುದು ಹೇಗೆ..?
ನಿಜ, ಶೀರ್ಷಿಕೆಯಲ್ಲೇ ಡಾಕ್ಟರ್ ಮಂಜುನಾಥ್ ಗೆಲುವಿನ ಬಗ್ಗೆ ಹೇಳಿದ್ದೇವೆ. ಇಬ್ಬರು ಬಲಶಾಲಿ ಅಭ್ಯರ್ಥಿಗಳು ಎರಡು ರಾಷ್ಟ್ರೀಯ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ. ಇನ್ನೂ ಸಾಕಷ್ಟು ಅಭ್ಯರ್ಥಿಗಳು ಕ್ಷೇತ್ರದಲ್ಲಿ ಇದ್ದಾರೆ. ಜನರ ಮತ ಚಲಾವಣೆ ಮಾಡುವಾಗ ಅಭ್ಯರ್ಥಿಗಳನ್ನು ನೋಡಿ ಮತ ಚಲಾವಣೆ ಮಾಡಬೇಕಾಗುತ್ತದೆ. ಎಲ್ಲರನ್ನೂ ಒಮ್ಮೆ ನೋಡಿಕೊಂಡು ಅಂತಿಮವಾಗಿ ಇಬ್ಬರ ನಡುವೆ ಜಟಾಪಟಿ ನಡೆಯಬೇಕು. ಆಗ ಕುಕ್ಕರ್ ಕೊಟ್ಟವರು, 500 ರೂಪಾಯಿ ಹಣ ಕೊಟ್ಟವರು, ಯಾವುದೋ ಕೆಲಸ ಮಾಡಿಸಿಕೊಟ್ಟವರು ಅನ್ನೋ ಕಾರಣಕ್ಕೆ ಮತ ನೀಡಬಾರದು. ಇಬ್ಬರು ವ್ಯಕ್ತಿಗಳಲ್ಲಿ ಉತ್ತಮರು ಯಾರು ಅನ್ನೋದನ್ನು ಮನಗಂಡು ಮತ ಚಲಾವಣೆ ಮಾಡಬೇಕು. ಡಾ ಮಂಜುನಾಥ್ ಅರೆ ಸರ್ಕಾರಿ ಸಂಸ್ಥೆಯನ್ನು ಖಾಸಗಿ ಆಸ್ಪತ್ರೆಯನ್ನೂ ಮೀರಿಸುವಂತೆ ಮಾಡಿದ್ದಾರೆ. ಡಾ ಮಂಜುನಾಥ್ ರಾಜಕಾರಣಕ್ಕೆ ಹೊಸಬರು ಇರಬಹುದು, ಆದರೆ ಅಧಿಕಾರವನ್ನು ಉತ್ತಮ ರೀತಿಯಲ್ಲಿ ನಡೆಸಿದ್ದಾರೆ ಎನ್ನುವುದಕ್ಕೆ ಜಯದೇವ ಜೀವಂತ ಸಾಕ್ಷಿ. ಆಯ್ಕೆ ನಿಮ್ಮದು.