(ದಿನಾಂಕ 15 ಮೇ 2026ರಂದು ಡಾ ಬಿ.ಆರ್. ಅಂಬೇಡ್ಕರ್ ಜಯಂತಿಯ ಪ್ರಯುಕ್ತ
ದಲಿತ ಸಂಘರ್ಷ ಸಮಿತಿ (ಸಂಯೋಜಕ) ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಉಪನ್ಯಾಸದ ಲೇಖನ ರೂಪ )
ನಾ ದಿವಾಕರ
ಭಾಗ 1
ಪ್ರಸ್ತಾವನೆ
ಭಾರತದ ಸಂವಿಧಾನ ಮೂಲತಃ ನೆಲಮೂಲ ಸಂಸ್ಕೃತಿಯಿಂದ ಉದಯಿಸಿದ ಒಂದು ಶಾಸನಾತ್ಮಕ ಸಂಹಿತೆಗಳ ಗ್ರಂಥ. ಸಂವಿಧಾನವನ್ನು ಎರಡು ಬಗೆಯಲ್ಲಿ ನೋಡುತ್ತೇವೆ. ಮೊದಲನೆಯದು ಈ ದಸ್ತಾವೇಜಿನ ನಿಯಮಗಳ ಅನುಸಾರವಾಗಿ ಚುನಾಯಿತ ಸರ್ಕಾರಗಳು ಜಾರಿಗೊಳಿಸುವ ಕಾಯ್ದೆ ಕಾನೂನುಗಳು ಮತ್ತು ಅವುಗಳ ಪ್ರಾಮಾಣಿಕ ಅನುಷ್ಟಾನ. ಆಯಾ ಕಾಲಕ್ಕೆ ಆಡಳಿತಾರೂಢ ಪಕ್ಷಗಳ ಸೈದ್ಧಾಂತಿಕ ಗುರಿಯ ಅನುಸಾರ ಬದಲಾಗುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಎರಡನೆಯ ಬಗೆ ದೇಶದ ಸಮಸ್ತ ಜನತೆಯ ದೃಷ್ಟಿಕೋನದಿಂದ ನೋಡಿದಾಗ, ಎಲ್ಲ ಸ್ತರಗಳ-ಸ್ವರೂಪಗಳ ಸಮಾಜದಲ್ಲಿ ಅಪೇಕ್ಷಿಸಲಾಗುವ ಮಾನವ ಸಂಬಂಧಗಳು, ಸಮಾನ ಅವಕಾಶಗಳು, ಘನತೆಯ ಬದುಕು ಮತ್ತು ತಾರತಮ್ಯ ರಹಿತ ಸಾಮಾಜಿಕ ಸಂರಚನೆಗಳು ಪ್ರಧಾನವಾಗಿ ಕಾಣಿಸುತ್ತವೆ. ಈ ಎರಡೂ ಬಗೆಯ ದೃಷ್ಟಿಕೋನದಲ್ಲಿ ಕಾಣಬಹುದಾದ ಸಮಾನ ಎಳೆ ಎಂದರೆ ವರ್ತಮಾನದಲ್ಲಿ ದಾಳಿಗೊಳಗಾಗುತ್ತಿರುವಷ್ಟೇ ಚರ್ಚೆಗೂ ಗ್ರಾಸವಾಗುತ್ತಿರುವ ʼ ಬಹುತ್ವ ʼ ಅಥವಾ ಬಹುಸಾಂಸ್ಕೃತಿಕ ಸಮನ್ವಯ-ಸೌಹಾರ್ದತೆ.
ದೇಶದ ಸರ್ವತೋಮುಖ ಅಭಿವೃದ್ಧಿ ಮತ್ತು ಸರ್ವಾಂಗೀಣ ಪ್ರಗತಿಯ ದೃಷ್ಟಿಯಿಂದ ʼ ಬಹುತ್ವ ʼ ತನ್ನದೇ ಆದ ಸಾಮಾಜಿಕ-ಸಾಂಸ್ಕೃತಿಕ ಮಹತ್ವವನ್ನು ಪಡೆದಿದೆ. ಈಗ ನಾವು ನಿತ್ಯ ಪಠಿಸುವ ʼ ಸಂವಿಧಾನ ಪೀಠಿಕೆ ಅಥವಾ ಪ್ರಸ್ತಾವನೆ ʼ ಈ ಮಹತ್ವವನ್ನು ಕೆಲವೇ ಪದಗಳಲ್ಲಿ ಹಿಡಿದಿಟ್ಟಿದೆ. ( ಈ ಸಭೆಯಲ್ಲಿ ಇದು ಕಾಣಲಿಲ್ಲ, Ritualistic ಆಗಿ ನಡೆಯಲೇಬೇಕೆಂದಿಲ್ಲ).
ಬಹುತ್ವ-ಸಂವಿಧಾನವನ್ನು ಅಸ್ಥಿರಗೊಳಿಸುವುದೆಂದರೆ ಈ ಪ್ರಸ್ತಾವನೆಯನ್ನು ಉಲ್ಲಂಘಿಸುವುದು ಎಂದೇ ಅರ್ಥ. ಇಲ್ಲಿ ಬಹುತ್ವದ ಕಲ್ಪನೆ, ಸಂವಿಧಾನ ಎಂಬ ವಿಶಾಲ ಬಯಲೊಳಗಿನ ಒಂದು ಪ್ರತಿಮೆಯಾಗಿ ಮಾತ್ರ ಕಾಣುತ್ತದೆ. ನಾವು ಪ್ರತಿಮೆಯ ಸುತ್ತ ಭಜನೆ ಮಾಡುತ್ತಿದ್ದೇವೆ. ಬಯಲು ತನ್ನ ಅಂತಃಸತ್ವವನ್ನು ಕಳೆದುಕೊಳ್ಳುತ್ತಿದೆ. ಇದನ್ನೇ ನಾವು ʼ ಅಸ್ಥಿರಗೊಳಿಸುವ ʼ ಪ್ರಕ್ರಿಯೆಯಾಗಿ ಕಾಣುತ್ತೇವೆ. ಈ ಬಯಲಿನ ಫಲವತ್ತತೆ ಮತ್ತು ಮಣ್ಣಿನ ಗುಣ ಅಥವಾ ನೆಲದ ಗುಣವನ್ನು ಕಾಪಾಡಬೇಕಾದರೆ ನಾವು ಎರಡು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು.
ತಾತ್ವಿಕ ಪ್ರಶ್ನೆಗಳ ಸುತ್ತ
ಮೊದಲನೆಯ ಪ್ರಶ್ನೆ ಎಂದರೆ, ಗ್ರಾಂಥಿಕವಾಗಿ ಅನುಸರಿಸಲಾಗುತ್ತಿರುವ ಸಂವಿಧಾನದ ಮೂಲ ಆಶಯಗಳನ್ನು ನಾವು ನಮ್ಮ ಸಾಮಾಜಿಕ ಜೀವನದ ಭಾಗವಾಗಿ ಅಳವಡಿಸಿಕೊಂಡಿದ್ದೇವೆಯೇ ? ಇದನ್ನು ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ ಹಾಗೂ ರಾಜಕೀಯ ನೆಲೆಗಳಲ್ಲಿ ನಿರ್ವಚಿಸಬಹುದು. ಎರಡನೆಯ ಪ್ರಶ್ನೆ ಎಂದರೆ ಈ ಆಶಯಗಳಿಗೆ ನಿರಂತರವಾಗಿ ಧಕ್ಕೆ ಉಂಟುಮಾಡುತ್ತಿರುವ ಶಕ್ತಿಗಳನ್ನು ತಡೆಗಟ್ಟುವ ಹಾದಿಯಲ್ಲಿ ನಮ್ಮ ತಾತ್ವಿಕ ಆಲೋಚನಾ ವಿಧಾನಗಳು ಪಕ್ವವಾಗಿದೆಯೇ ? ಅಂದರೆ, ಸಂವಿಧಾನ ಪ್ರಸ್ತಾಪಿಸುವ ಸಮಾನತೆ, ಬಂಧುತ್ವ, ಸ್ವಾತಂತ್ರ್ಯ (ನಾನು ಇದನ್ನು ವ್ಯಕ್ತಿಗತ ನೆಲೆಯ ಸ್ವಾಯತ್ತತೆ ಎಂದೂ ವ್ಯಾಖ್ಯಾನಿಸುತ್ತೇನೆ ) ಮತ್ತು ಸಮನ್ವಯ (ಸಹಬಾಳ್ವೆ) ಈ ಉದಾತ್ತ ಚಿಂತನೆಗಳನ್ನು ನಮ್ಮ ಆಲೋಚನೆಗಳಲ್ಲಿ, ಭೌತಿಕ ಬದುಕಿನಲ್ಲಿ, ಮನುಜ ಸಂಬಂಧಗಳಲ್ಲಿ ಅಳವಡಿಸಿಕೊಂಡಿದ್ದೇವೆಯೇ ? ಇವೆರಡೂ ಪ್ರಶ್ನೆಗಳಿಗೆ ಉತ್ತರ ಹೌದು ಎಂದಾದರೆ, ಅಸ್ಥಿರಗೊಳಿಸುತ್ತಿರುವುದು ಯಾವುದನ್ನು, ಯಾರು ಮತ್ತು ಹೇಗೆ ಎಂಬ ಪ್ರಶ್ನೆಗಳು ನಮ್ಮನ್ನು ಕಾಡಲೇಬೇಕು.
ಈ ಅಳವಡಿಕೆಯ ಹಾದಿಯಲ್ಲಿ ವ್ಯಕ್ತಿ ಪ್ರಜ್ಞೆಗೆ ದೊಡ್ಡ ತೊಡಕಾಗುವುದು ʼ ಅಸ್ಮಿತೆ ʼ (Identity) .ಭಾರತೀಯ ಸಮಾಜದಲ್ಲಿ ಅಸ್ಮಿತೆಯು ಆಕ್ಟೊಪಸ್‌ನ ಹಾಗೆ ನಾನಾ ವಿಧಗಳಲ್ಲಿ ಹೊರಚಾಚುತ್ತವೆ. ಜಾತಿ, ಉಪಜಾತಿ, ಪಂಗಡ-ಒಳಪಂಗಡ, ಮತ, ಧರ್ಮ, ಭಾಷೆ ಮತ್ತು ಪ್ರಾದೇಶಿಕ ಗುರುತುಗಳು ಪ್ರತಿಯೊಬ್ಬ ವ್ಯಕ್ತಿಯನ್ನೂ ಆಕ್ಟೋಪಸ್‌ನ Tentacles ರೀತಿಯಲ್ಲಿ ಬಂಧಿಸುತ್ತವೆ ಅಥವಾ ನಿರ್ಬಂಧಿಸುತ್ತವೆ. ಈ ಅಸ್ಮಿತೆಗಳು ಬೌದ್ಧಿಕವಾಗಿ ಬೇರೂರಿದಂತೆಲ್ಲಾ ಭೌತಿಕ ಜೀವನದ ನಮ್ಮ ಚಟುವಟಿಕೆಗಳೂ ಸಹ ಕೆಲವು ಗ್ರಾಂಥಿಕ-ತಾತ್ವಿಕ-ಸಾಂಪ್ರದಾಯಿಕ ಸಂಹಿತೆಗಳ ಸಂಕೋಲೆಯಲ್ಲಿ ಸಿಲುಕಿಬಿಡುತ್ತವೆ. ಈ ಅಸ್ಮಿತೆಗಳು ಗಾಢವಾಗಿ ಆವರಿಸಿ ನಮ್ಮ ನಿತ್ಯ ಬದುಕಿನ ಎಲ್ಲ ಕ್ರಿಯೆಗಳನ್ನೂ ನಿರ್ದೇಶಿಸುವಂತಾದಾಗ ಅಲ್ಲಿ ಕೋಮು ಅಥವಾ commune ಎಂಬ ಸಾಮಾಜಿಕ ಸಂರಚನೆ ತನ್ನ ಸುತ್ತಲೂ ಎತ್ತರದ ಪ್ರತ್ಯೇಕತೆಯ ಗೋಡೆಗಳನ್ನು ಕಟ್ಟಿಕೊಳ್ಳುತ್ತದೆ.
ಕೋಮು ಅಥವಾ ಸಮುದಾಯದ ಅಸ್ಮಿತೆಗಳು (commune-community Indentities) ಇಡೀ ಸಮಾಜವನ್ನು ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುವ ಸಾಧನಗಳಾಗಿ ಪರಿಣಮಿಸುತ್ತವೆ. ನಮ್ಮ ಶ್ರೇಣೀಕೃತ ಜಾತಿ ಸಮಾಜದಲ್ಲಿ, ಬಹುಧಾರ್ಮಿಕ ನೆಲೆಯಲ್ಲಿ ನಿಂತು ನೋಡಿದಾಗ ಈ ಸಂಕೋಲೆಗಳೇ ಸಾಮಾಜಿಕ ಸಂಬಂಧಗಳನ್ನು ಬೆಳೆಸುವುದಕ್ಕೂ, ಕಡಿದುಕೊಳ್ಳುವುದಕ್ಕೂ ನೆರವಾಗುವುದನ್ನು ಗುರುತಿಸಬಹುದು. ಯಾರೊಡನೆ ಮಾತನಾಡಬೇಕು, ಎಲ್ಲಿ ಮಾತನಾಡಬಹುದು, ಎಷ್ಟು ಮಾತನಾಡಬೇಕು, ಯಾರೊಡನೆ ಸಂಬಂಧ ಬೆಳೆಸಬೇಕು, ಯಾರೊಂದಿಗೆ ಸಹಬಾಳ್ವೆ ನಡೆಸಬಹುದು, ಕೌಟುಂಬಿಕ ಸಂಬಂಧಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಇವೆಲ್ಲವನ್ನೂ ನಿರ್ದೇಶಿಸುವುದು, ನಿಯಂತ್ರಿಸುವುದು ನಮ್ಮ ಈ ಸಾಮುದಾಯಿಕ ಅಸ್ಮಿತೆಗಳೇ. ಇದು ಪ್ರತಿಯೊಂದು ಜಾತಿ-ಒಳಜಾತಿ, ಪಂಗಡ-ಒಳಪಂಗಡವನ್ನೂ ಆವರಿಸುವ ಒಂದು ವ್ಯಸನ.
ಮೂಲಭೂತವಾದದ ಆದಿಮೂಲ
ಈ ಎಲ್ಲಾ ಲಕ್ಷಣಗಳೂ ಆಳಕ್ಕಿಳಿದಂತೆಲ್ಲಾ ಸಾಮುದಾಯಿಕ ಪ್ರಜ್ಞೆ ಗಟ್ಟಿಯಾಗುತ್ತಾ, ಶ್ರೇಷ್ಠತೆಯ ಮೇಲರಿಮೆ, ಅಂತಸ್ತಿನ ಹಿರಿಮೆ, ಸಾಮಾಜಿಕ ಸ್ಥಾನಮಾನದ ಅಹಮಿಕೆ ಇವೆಲ್ಲ ಮನಸ್ಥಿತಿಗಳನ್ನೂ ಹುಟ್ಟುಹಾಕುತ್ತದೆ. ಈ ಮನಸ್ಥಿತಿಯನ್ನು ಬಳಕೆ ಮಾಡಿಕೊಳ್ಳುವ ಒಂದು ಪ್ರಬಲ ಸಾಂಘಿಕ ಅಥವಾ ಸಾಂಸ್ಥಿಕ ಶಕ್ತಿ ಇಡೀ ಸಮಾಜ ಅಥವಾ ಸಮುದಾಯ-ಕೋಮಿನ ಮೇಲೆ ನಿಯಂತ್ರಣ ಸಾಧಿಸುತ್ತದೆ. ಸಹಜವಾಗಿ ಆ ಪ್ರಬಲ ಶಕ್ತಿಗೆ ಸಾಮಾಜಿಕ/ಆರ್ಥಿಕ-ಸಾಂಸ್ಕೃತಿಕ ವಲಯಗಳಲ್ಲಿ ತನ್ನದೇ ಆದ ಹಿಡಿತ ಇರುತ್ತದೆ. ಹಿಂದೂ, ಇಸ್ಲಾಂ, ಕ್ರೈಸ್ತ ಮುಂತಾದ ಧಾರ್ಮಿಕ ಚೌಕಟ್ಟುಗಳಲ್ಲಿ ಅಥವಾ ಬ್ರಾಹ್ಮಣ ಶೂದ್ರ ದಲಿತ ಮೊದಲಾದ ಜಾತಿಗಳ ಆವರಣಗಳಲ್ಲಿ ಇದನ್ನು ಗುರುತಿಸಬಹುದು. ಈ ಶಕ್ತಿಗಳು ಸಮಾಜದ ಮೇಲೆ ಹೇರುವ ಅಥವಾ ಭಾವನಾತ್ಮಕವಾಗಿ ಜನರನ್ನು ಧೃವೀಕರಿಸುವ ಆಚರಣಾತ್ಮಕ ಸಂಹಿತೆಗಳು ಸಮುದಾಯಗಳನ್ನು ಏಕೀಕರಿಸಿ ಅಲ್ಲೊಂದು ಹೊಸ ʼ ಅಸ್ಮಿತೆ ʼಯನ್ನು ಹುಟ್ಟುಹಾಕುತ್ತವೆ. ಈ ವಿಶಾಲ ಅಸ್ಮಿತೆಯನ್ನು ಭಾರತದ ಸಂದರ್ಭದಲ್ಲಿ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಇತ್ಯಾದಿಗಳಲ್ಲಿ ಗುರುತಿಸುತ್ತೇವೆ.
ಧಾರ್ಮಿಕ-ಮತೀಯ ಮೂಲಭೂತವಾದ (Religious Fundamntalism) ಮತ್ತು ಆಂತರಿಕವಾಗಿ ಜಾತೀಯ ಮೂಲಭೂತವಾದ ಸೃಷ್ಟಿಯಾಗುವುದು ಈ ವಿಶಾಲ ಅಸ್ಮಿತೆಗಳ ನಾಲ್ಕು ಗೋಡೆಗಳ ನಡುವೆ. ವಿವಿಧ ಮತಕೇಂದ್ರಗಳು, ಧರ್ಮಗಳು ತಮ್ಮ ಧಾರ್ಮಿಕ ಆಚರಣೆ, ಶ್ರದ್ಧೆ ನಂಬಿಕೆಗಳ ವಿಧಿವಿಧಾನಗಳ ಮೂಲಕ ಸೃಷ್ಟಿಮಾಡುವ ಮೂಲಭೂತವಾದವನ್ನು ಜಾತಿ ಸಮುದಾಯಗಳು ಸಾಂಪ್ರದಾಯಿಕ ನೆಲೆಯಲ್ಲಿ ಸೃಷ್ಟಿಸುತ್ತವೆ. ನಾವು ಸಂವಿಧಾನವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಈ ಮತೀಯ-ಧಾರ್ಮಿಕ ಮೂಲಭೂತವನ್ನು ತಾಯಿಬೇರು ಎಂದು ವರ್ಗೀಕರಿಸಬಹುದು. ಇದು ಹುಟ್ಟುಹಾಕುವ ಶ್ರೇಷ್ಠತೆ, ಪಾವಿತ್ರ್ಯತೆ ಮತ್ತು ಆಧಿಪತ್ಯದ ಗುಣಗಳನ್ನು ಆ ವೃಕ್ಷದ ಕಾಂಡ ಎಂದು ವ್ಯಾಖ್ಯಾನಿಸಬಹುದು. ಈ ಕಾಂಡದಿಂದ ಹೊರಚಾಚಿಕೊಳ್ಳುವ ರೆಂಬೆಗಳು ಮೂಲ ಬೇರಿನ ಲಕ್ಷಣಗಳನ್ನು ಕಾಪಾಡುವ ಗುರಾಣಿಗಳಾಗಿ, ಭದ್ರಕೋಟೆಗಳಾಗಿ, ಸೇತುವೆಗಳಾಗಿ, ಸಂವಾಹಕ ಸಾಧನಗಳಾಗಿ ಸಮಾಜದಲ್ಲಿ ತಮ್ಮದೇ ಪ್ರಭಾವವನ್ನು ಬೆಳೆಸಿಕೊಳ್ಳುತ್ತವೆ.
ʼ ಕೋಮುವಾದಿ ಶಕ್ತಿಗಳು ʼ ಎಂದು ವರ್ಗೀಕರಿಸುವಾಗ ನಮ್ಮ ಗಮನ ಈ ಮೂಲಭೂತವಾದಿ ಶಕ್ತಿಗಳು ಮತ್ತು ಅವುಗಳ ಸಾಂಸ್ಥಿಕ ಬಲ, ಸಾಂಘಿಕ ವಿಸ್ತಾರ ಹಾಗೂ ಬೌದ್ಧಿಕ ಪ್ರಸರಣದ ಸಾಮರ್ಥ್ಯದ ಕಡೆ ಇರಬೇಕಾಗುತ್ತದೆ. ಇಡೀ ಸಮುದಾಯವನ್ನು ತನ್ನ ಬಿಗಿಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಲು ಸಾಮುದಾಯಿಕ ಅಸ್ಮಿತೆಯನ್ನು ಬತ್ತಳಿಕೆಯ ಹಾಗೆ ಬಳಸುವ ಈ ಮತೀಯ ಶಕ್ತಿಗಳು, ಜನಸಾಮಾನ್ಯರನ್ನು ಸಮ್ಮೋಹನಗೊಳಿಸಿ ನಿಯಂತ್ರಣದಲ್ಲಿಟ್ಟುಕೊಳ್ಳಲು ಶ್ರದ್ಧಾನಂಬಿಕೆಗಳನ್ನು, ಆಚರಣೆಗಳನ್ನು ಬಾಣಗಳಂತೆ ಬಳಸಿಕೊಳ್ಳುತ್ತವೆ. ತಮ್ಮ ಕೋಮಿನಿಂದಾಚೆಗಿನ ಸಮುದಾಯಗಳನ್ನು ʼ ಅನ್ಯೀಕರಿಸುವ ʼ ( Othering ) ಗೋಡೆಗಳನ್ನು ನಿರ್ಮಿಸಲು ಜನಸಾಮಾನ್ಯರ ಭಾವನೆಗಳನ್ನು ಗುರಾಣಿಯಂತೆ ಬಳಸಿಕೊಳ್ಳುತ್ತವೆ. ಸ್ವತಂತ್ರ ಭಾರತದ ಪಯಣದಲ್ಲೇ ʼ ಭಾವನೆಗಳಿಗೆ ಧಕ್ಕೆ ಉಂಟಾಗುವ ʼ ಒಂದು ವಿದ್ಯಮಾನ ಎಷ್ಟು ಜನರ ಜೀವನವನ್ನು ನಾಶಪಡಿಸಿದೆ ಎನ್ನುವುದನ್ನು ಗಮನಿಸಿದರೆ ಇದರ ಆಳ-ವ್ಯಾಪ್ತಿಯನ್ನು ಗ್ರಹಿಸಲು ಸಾಧ್ಯ.
ಸಂವಿಧಾನದ ಕನಸುಗಳ ನಡುವೆ
ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವೀಯ ಆಶಯಗಳು ಮೂಲತಃ ಈ ಲಕ್ಷಣಗಳನ್ನು ತಿರಸ್ಕರಿಸುತ್ತವೆ. ಆದಾಗ್ಯೂ ಇದೇ ಸಂವಿಧಾನದ ವ್ಯಾಪ್ತಿಯಲ್ಲೇ ರಾಜಕೀಯ ಅಧಿಕಾರ ಹಿಡಿಯುವ ಮೂಲಕ, ಬಲಪಂಥೀಯ ಪಕ್ಷಗಳು ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಮತೀಯ ಮೂಲಭೂತವಾದವನ್ನು ಪ್ರಣಾಳಿಕೆಗಳಂತೆ ಬಳಸುತ್ತಿರುವುದನ್ನು ಕಾಣುತ್ತಿದ್ದೇವೆ. ಇದನ್ನು ಏಕಮುಖಿಯಾಗಿ ನೋಡಿದರೆ ನಮ್ಮ ಅರಿವಿನ ಹಾದಿ ಕವಲೊಡೆದುಬಿಡುತ್ತದೆ. ಅಧಿಕಾರಸ್ಥ ನೆಲೆಯಲ್ಲಿ ಬಳಸಲಾಗುವ ಮೂಲಭೂತವಾದಕ್ಕೆ ಪ್ರತಿಯಾಗಿ ಅಧಿಕಾರೇತರ ಕೇಂದ್ರಗಳಲ್ಲೂ, ಸಾಮಾಜಿಕ-ಸಾಂಸ್ಕೃತಿಕ ವಲಯಗಳಲ್ಲೂ ಇದೇ ಮೂಲಭೂತವಾದದ ಮತ್ತೊಂದು ರೂಪ ನಮಗೆ ಕಾಣುತ್ತಲೇ ಇರುತ್ತದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಸಿಖ್ ಸಮಾಜಗಳಲ್ಲಿ ಇದರ ಭಿನ್ನ ಮಗ್ಗುಲುಗಳನ್ನು ವಿವಿಧ ರೂಪಗಳಲ್ಲಿ ಕಾಣಬಹುದು. ವ್ಯತ್ಯಾಸವೇನಾದರೂ ಕಂಡಲ್ಲಿ ಅದು ಸೌಮ್ಯ-ಮೃದು-ಉಗ್ರ ಇತ್ಯಾದಿ ಗುಣಲಕ್ಷಣಗಳಲ್ಲಿ ಮಾತ್ರ ಕಾಣಬಹುದು. ಈ ವಿವಿಧ ಗಣಗಳ ನಡುವಿನ ಸಂಘರ್ಷವನ್ನು ನಾವು ಕೋಮು ಗಲಭೆ, ಕೋಮು ಸಂಘರ್ಷ ಎಂದು ವ್ಯಾಖ್ಯಾನಿಸುತ್ತೇವೆ. ಇದರ ಕರಾಳ ಇತಿಹಾಸ ಬೇರೆಯೇ ಇದೆ.
ವರ್ತಮಾನದ ಸನ್ನಿವೇಶದಲ್ಲಿ ಭಾರತದ ಬಹುತ್ವ-ಸಂವಿಧಾನವನ್ನು ಶಿಥಿಲಗೊಳಿಸುತ್ತಿರುವ ಕೋಮುವಾದವನ್ನು ವಿಶ್ಲೇಷಿಸುವಾಗ, ನಮ್ಮ ಗುರಿ ಈ ವಿಶಾಲ ನೆಲೆಯ ಧಾರ್ಮಿಕ ಮೂಲಭೂತವಾದದ ಕಡೆ ಇರಬೇಕಾಗುತ್ತದೆ. ಇಲ್ಲವಾದರೆ ಬೇರನ್ನು ನೆಲದಲ್ಲೇ ಬಿಟ್ಟು ಕಾಂಡವನ್ನು ಕಡಿದು ವಿಜೃಂಭಿಸುತ್ತೇವೆ. ಅಲ್ಲಿ ಮತ್ತೆ ಚಿಗುರೊಡೆಯುತ್ತದೆ. ಬಹು ಧಾರ್ಮಿಕತೆಯಷ್ಟೇ ಆಳವಾಗಿ ಈ ಮೂಲಭೂತವಾದದ ಬಹು ಆಯಾಮಗಳು ಸಮಾಜದೊಳಗೆ ಚಾಚಿಕೊಂಡಿವೆ. ಭಾರತದ ಸಂವಿಧಾನ ಧಾರ್ಮಿಕ ಹಾಗೂ ಉಪಾಸನಾ ಸ್ವಾತಂತ್ರ್ಯವನ್ನು ಕಲ್ಪಿಸಿದೆ ಎಂದ ಮಾತ್ರಕ್ಕೆ ಅವುಗಳೊಳಗಿನ ಜೀವ ವಿರೋಧಿ ಮೂಲಭೂತವಾದಕ್ಕೂ ಅವಕಾಶ ನೀಡಿದೆ ಎಂದರ್ಥವಲ್ಲ. ಉಪಾಸನೆ ಅಥವಾ ಆಚರಣೆಗಳು ಒಳಗೊಳ್ಳುವ ರೀತಿಯಲ್ಲಿ (Inclusive way) ಅಥವಾ ಸಹಬಾಳ್ವೆಯ ಮಾರ್ಗದಲ್ಲಿ ಕಾರ್ಯಗತವಾದಾಗ ಅಲ್ಲಿ ಬಹುತ್ವ ಟಿಸಿಲೊಡೆಯುತ್ತದೆ. ಹೊರಗಿಟ್ಟು (Exclusionary) ಕಾರ್ಯೋನ್ಮುಖವಾದಾಗ ಬೇಲಿಗಳು ಹುಟ್ಟಿಕೊಳ್ಳುತ್ತವೆ. ಈ ಸಾಂವಿಧಾನಿಕ ಎಚ್ಚರಿಕೆಯನ್ನು ನಾವು ಗಮನಿಸಿದ್ದೇವೆಯೇ ?
ಭಾರತದ ಸಂವಿಧಾನ ಬಹುತ್ವವನ್ನು ಸಾರಿ ಹೇಳುತ್ತದೆ.
ಪ್ರಜಾಪ್ರಭುತ್ವದ ಬುನಾದಿಯೇ ಬಹುತ್ವ ಎನ್ನುತ್ತದೆ. ಈ ಬಹುತ್ವ ಹುಟ್ಟುವುದು ಎಲ್ಲಿ ? ಶಾಸನಗಳಲ್ಲಿ ಅಲ್ಲ, ಗ್ರಾಂಥಿಕ ಸಂವಿಧಾನದಲ್ಲೂ ಅಲ್ಲ. ಮೇಲಿನಿಂದ ಕೆಳಗಿನವರೆಗೆ ಸಮಾಜ, ಸಮುದಾಯಗಳಲ್ಲಿ ಇದರ ಉಗಮಸ್ಥಾನಗಳು ಇರುತ್ತವೆ. ಇಲ್ಲಿ ಬಹುತ್ವ ಕಾಪಾಡಿಕೊಳ್ಳಬೇಕಾದರೆ, ಸಾಮುದಾಯಿಕವಾಗಿ ಪ್ರತ್ಯೇಕಿಸಲ್ಪಡುವ/ದೂರೀಕರಿಸಲ್ಪಡುವ ಭಿನ್ನ ಸಮಾಜಗಳ ನಂಬಿಕೆ, ಆಚರಣೆ ಮತ್ತು ಸಂಪ್ರದಾಯಗಳನ್ನು ಗೌರವಿಸುವುದನ್ನು ಕಲಿಯಬೇಕು. ಹಾಗೆಯೇ ಈ ಸಂಪ್ರದಾಯಗಳು ಮಾನವ ಸಮಾಜದ ಉನ್ನತಿಗೆ ಕಂಟಕ ಎನಿಸಿದಾಗ ವಿರೋಧಿಸಬೇಕು. ಆದರೆ ಮೂಲಭೂತವಾದ ಬಲಿಷ್ಠವಾದಾಗ ಈ ಪ್ರತಿರೋಧದ ದನಿಗಳೆಲ್ಲವನ್ನೂ ನೆಲಸಮ ಮಾಡುತ್ತದೆ. ಧಾರ್ಮಿಕ ಅಥವಾ ಮತೀಯ ಅಸ್ಮಿತೆ, ಹಿಂದೂ ಅಥವಾ ಇಸ್ಲಾಂ, ಸುಶಿಕ್ಷಿತ ಮೇಲ್ವರ್ಗದ, ಮೇಲ್ಪದರದ ಜನರನ್ನೂ ಸಹ ಸಮ್ಮೋಹನಗೊಳಿಸಿ ಆವರಿಸಿಕೊಳ್ಳುತ್ತದೆ. ಈ ಅಸ್ಮಿತೆಯನ್ನು ಕಾಪಾಡಿಕೊಳ್ಳುವುದೆಂದರೆ ಕೇವಲ ತನ್ನಷ್ಟಕ್ಕೆ ತಾನು ಸುರಕ್ಷಿತವಾಗಿರುವುದು ಎಂದರ್ಥವಲ್ಲ, ʼಅನ್ಯʼ (other) ಎಂದು ಗುರುತಿಸಲಾಗುವ ಧಾರ್ಮಿಕ, ಜಾತೀಯ,ಸಾಮುದಾಯಿಕ ನಂಬಿಕೆ, ಶ್ರದ್ಧೆ ಮತ್ತು ಆಚರಣೆಗಳನ್ನು ವಿರೋಧಿಸುವು̧ದು ಇಲ್ಲವಾಗಿಸುವುದು, ನಿರಾಕರಿಸುವುದು ಅಥವಾ ತಡೆಗಟ್ಟುವುದು ಎಂದಾಗುತ್ತದೆ.
ಕೋಮು ಧೃವೀಕರಣದ ನೆಲೆಯಲ್ಲಿ
ನಾವು ಸಾಮಾನ್ಯವಾಗಿ ಗುರುತಿಸುವ ʼ ಕೋಮುವಾದಿ ಶಕ್ತಿಗಳು ʼ (Communal Forces) ಈ ಆವರಣಗಳಲ್ಲಿ, ಚೌಕಟ್ಟುಗಳಲ್ಲಿ ಹುಟ್ಟಿಕೊಳ್ಳುತ್ತವೆ. ಭಜರಂಗದಳ, ಶ್ರೀರಾಮಸೇನೆ ಮತ್ತು ಸಂಘಪರಿವಾರದ ವಿವಿಧ ಅಂಗಗಳು, ಜಮಾತ್ ಸಂಘಟನೆ, ಮುಸ್ಲಿಂ ಲೀಗ್, ಪಾಪುಲರ್ ಫ್ರಂಟ್ ಇತ್ಯಾದಿ ಸಂಘಟನೆಗಳನ್ನು ನಾವು ಗುರುತಿಸಬಹುದು. ಈ ಎಲ್ಲ ಸಂಘಟನೆಗಳ ಮೂಲ ಬೇರು ಆಯಾ ಧಾರ್ಮಿಕ ಸಂಹಿತೆಗಳಲ್ಲಿ ಅಡಗಿರುತ್ತವೆ. ರಾಜಕೀಯವಾಗಿ ಸೆಕ್ಯುಲರ್ ಎಂದೇ ಘೋಷಿಸಿಕೊಳ್ಳುವ ಎಸ್‌ಡಿಪಿಐ ನಂತಹ ಪಕ್ಷಗಳೂ ಸಹ ಆಂತರಿಕವಾಗಿ ಈ ಸಂಹಿತೆಗಳಿಗೆ ಬದ್ಧವಾಗಿರುತ್ತವೆ. ಸಾಂಸ್ಥಿಕವಾಗಿ ಈ ಸಂಹಿತೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಅನುಸರಿಸುವಂತೆ ಒತ್ತಾಯಿಸುವ ಕೆಲಸವನ್ನು ಧಾರ್ಮಿಕ-ಅಧ್ಯಾತ್ಮಿಕ ಕೇಂದ್ರಗಳು ನಿರ್ವಹಿಸುತ್ತವೆ. ಸಾಮಾನ್ಯವಾಗಿ ಪ್ರಾರ್ಥನಾ ಸ್ಥಳಗಳು, ಧ್ಯಾನ-ಪೂಜಾ ಸ್ಥಗಳು ಮತ್ತು ಆರಾಧನೆಯ ತಾಣಗಳು ಇಲ್ಲಿ ನಿಯಂತ್ರಣಾ ಕೇಂದ್ರಗಳಾಗುತ್ತವೆ.
ಈ ಕೇಂದ್ರಗಳಲ್ಲಿ ಸೃಷ್ಟಿಯಾಗುವ ಅತಿಯಾದ ಶ್ರದ್ಧೆ-ನಂಬಿಕೆ, ಉನ್ಮಾದ, ಭಾವಾವೇಶ , ಅಸಹಿಷ್ಣುತೆ ಮತ್ತು ಭಾವುಕತೆ ಕೋಮುವಾದಿ ಶಕ್ತಿಗಳಿಗೆ ಮೂಲ ಬಂಡವಾಳವಾಗುತ್ತವೆ. ಮುಸ್ಲಿಮರ ಟೊಪ್ಪಿ, ಮುಸ್ಲಿಂ ಮಹಿಳೆಯರ ಬುರ್ಖಾ-ಹಿಜಾಬ್, ಸಮುದಾಯದ ಅಝಾನ್, ಮೈದಾನದಲ್ಲಿ ಮಾಡುವ ನಮಾಜ್, ಕ್ರೈಸ್ತರ ಮತಬೋಧನೆ ಮತ್ತು ಪ್ರಾರ್ಥನಾ ಸಭೆಗಳು ಇವೆಲ್ಲವೂ ಕೋಮುವಾದಿ ಸಂಘಟನೆಗಳಿಗೆ ಅಸಹನೀಯವಾಗಿ ಕಾಣುವುದೇಕೆ ? ಈ ಸಂಕೇತಗಳ ಮೂಲಕ ʼ ಅನ್ಯರು ʼ ನಮ್ಮ ಜಾಗಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂಬ ಅನಗತ್ಯ ಭೀತಿಯನ್ನು ಹಿಂದೂ ಮೂಲಭೂತವಾದಿಗಳು ಸೃಷ್ಟಿಸುತ್ತಿರುತ್ತಾರೆ. ಅನ್ಯಧರ್ಮೀಯ ವಿವಾಹಗಳಲ್ಲಿ ಈ ಭೀತಿ ಇನ್ನೂ ಹೆಚ್ಚಾಗುತ್ತದೆ ಏಕೆಂದರೆ ಅಲ್ಲಿ ಸಂಕರ ಪ್ರಕ್ರಿಯೆ ಉಂಟಾಗುತ್ತದೆ. ಅಂತರ್ಜಾತಿ ವಿವಾಹಗಳಲ್ಲಿ ನಿರ್ದಿಷ್ಟವಾಗಿ ದಲಿತರೇ ಬಲಿಯಾಗುವುದು ಜಾತಿ ಮೂಲಭೂತವಾದದ ಒಂದು ಲಕ್ಷಣವಾಗಿ ನೋಡಬೇಕಿದೆ. ಇದೂ ಕೋಮುವಾದದ ಒಂದು ಆಯಾಮ ಎನ್ನುವುದನ್ನು ಗ್ರಹಿಸಬೇಕಿದೆ.
ಹಿಂದೂ-ಮುಸ್ಲಿಂ ಎರಡೂ ಬದಿಯ ಮೂಲಭೂತವಾದಿಗಳು ಈ ಧರ್ಮಸಂಕರವನ್ನು ಸಹಿಸಿಕೊಳ್ಳದೆ ಇರುವುದನ್ನು ನೋಡುತ್ತಲೇ ಇದ್ದೇವೆ. ಹಿಂದೂ-ಮುಸ್ಲಿಂ ಯುವಕ ಯುವತಿಯರು ವಿವಾಹವಾಗುವುದಿರಲಿ, ಒಟ್ಟಾಗಿ ಓಡಾಡುವುದನ್ನೂ ಸಹಿಸಿಕೊಳ್ಳದ ಸಮಾಜವೊಂದು ಇದೆ. ಇಂತಹ ಘಟನೆಗಳನ್ನು ಖಂಡಿಸಲೂ ಹಿಂಜರಿಯುವ ಮುಸ್ಲಿಂ ಸಂಘಟನೆಗಳೂ ಇವೆ.
ಆಂತರಿಕವಾಗಿ ನೋಡಿದಾಗ ಇದೇ ಮೂಲಭೂತವಾದಿ ಶಕ್ತಿಗಳು ತಮ್ಮದೇ ಸಮಾಜದ ಮಹಿಳೆಯರ ಮೇಲೆ, ಸಾಮಾನ್ಯ ಜನರ ಮೇಲೆ ನಿಬಂಧನೆಗಳನ್ನು ಹೇರುವ, ಪ್ರಾತಿನಿಧ್ಯ ನಿರಾಕರಿಸುವ ಮೂಲಕ ಆಧಿಪತ್ಯ ಸಾಧಿಸುತ್ತಿರುತ್ತವೆ. ಇದನ್ನು ಆಯಾ ಧರ್ಮಗಳ ಅಂತರಿಕ ವಿಚಾರ ಎನ್ನುವುದು ಸರಿ ಆದರೆ, ಈ ನಿಬಂಧನೆಗಳು ಸೃಷ್ಟಿಸುವ ಪ್ರತ್ಯೇಕತೆಯ ಗೋಡೆಗಳಿಗೆ ಯಾರು ಹೊಣೆ. ಬಹುತ್ವ-ಸಂವಿಧಾನದ ಸಮನ್ವಯ-ಸಹಬಾಳ್ವೆಯ ಉದಾತ್ತ ನಿಯಮಗಳು ಆಂತರಿಕ ನೆಲೆಯಲ್ಲೇ ಉಲ್ಲಂಘನೆಗೊಳಗಾಗುತ್ತಿರುತ್ತವೆ ಅಲ್ಲವೇ ? ಬಹುತ್ವ ನಾಶದ ಬೀಜಗಳು ಇಲ್ಲೂ ಮೊಳೆಯುತ್ತವೆ.
ಇತ್ತೀಚೆಗೆ ಬಿಹಾರದ ಬಿಜೆಪಿ ಸಚಿವರೊಬ್ಬರು ಹೆಣ್ಣು ಮಕ್ಕಳು ಮನೆಯಲ್ಲಿರಬೇಕು, ಅವರಿಗೆ ಶಿಕ್ಷಣ ಏಕೆ ಎಂದು ಫರ್ಮಾನು ಹೊರಡಿಸಿದ್ದಾರೆ. ಸಾಂದರ್ಭಿಕವಾಗಿ ಇವರು ಏನೇ ಹೇಳಿರಲಿ ಇವರ ಸಂಗಾತಿಗಳೇ ಕರ್ನಾಟಕದಲ್ಲಿ ಹಿಜಾಬ್ ಕಾರಣಕ್ಕಾಗಿ ಸಾವಿರಾರು ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ದೂರ ಇರಿಸಿದ್ದಾರೆ. ಹಿಜಾಬ್ ಧರಿಸುವುದು ಮುಸ್ಲಿಂ ಹೆಣ್ಣುಮಕ್ಕಳ ಸಾಂವಿಧಾನಿಕ ಹಕ್ಕು. ಆದರೆ ಅದನ್ನು ಧಾರ್ಮಿಕ ಕಟ್ಟಳೆಗಳ ಮೂಲಕ ವ್ಯಕ್ತಿಗತವಾಗಿ ಹೇರುವುದು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನ ವಿರೋಧಿ ಅಲ್ಲವೇ ? ನಿಮಗೆ ಹಿಜಾಬ್‌ಗಿಂತಲೂ ಶಿಕ್ಷಣ ಮುಖ್ಯ ತೆಗೆದಿಟ್ಟು ಹೋಗಿ ಎಂದು ಮುಸ್ಲಿಂ ಧಾರ್ಮಿಕ ನಾಯಕರು ಹೇಳಿದರೇ ? ಇಲ್ಲ ಏಕೆಂದರೆ ಅವರಿಗೆ ಅದು ಧಾರ್ಮಿಕ ಅಸ್ಮಿತೆಯ ಪ್ರಶ್ನೆ. ಎರಡೂ ಬದಿಯ ದಾಳಿಯಲ್ಲಿ ಬಲಿಯಾಗುವುದು ಮಹಿಳೆಯರು, ಹೆಣ್ಣು ಮಕ್ಕಳು. ಯಾವುದೇ ಧರ್ಮವಾಗಲಿ ನಿರ್ಬಂಧ, ನಿಬಂಧನೆಗೊಳಗಾಗುವುದು ಸದಾ ಮಹಿಳೆಯೇ ಎನ್ನುವುದನ್ನು ಇಲ್ಲಿ ಗುರುತಿಸಬೇಕು. ಇದು ಪಿತೃಪ್ರಧಾನ ಮೌಲ್ಯದ ಒಂದು ಆಯಾಮ.
ಮುಂದುವರೆಯುತ್ತದೆ,,,,,,,,





