ಭಾರತೀಯ ಜನತಾ ಪಾರ್ಟಿಯನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರುವಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಶ್ರಮವನ್ನೂ ಯಾರೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಆದರೂ ಯಡಿಯೂರಪ್ಪ ಬಿಜೆಪಿ ಪಕ್ಷದಿಂದ ಅನುಭವಿಸಿರುವ ಅವಮಾನಗಳನ್ನು ನೋಡಿದಾಗ ಅದೂ ಕೂಡ ಕಡಿಮೆ ಇಲ್ಲ ಎಂದೆನಿಸುವುದು ಸತ್ಯ. ಆದರೆ ಬಿಜೆಪಿಯನ್ನು ಬಲವಾಗಿ ಪ್ರೀತಿಸುವ ಯಡಿಯೂರಪ್ಪ, ಪಕ್ಷನಿಷ್ಠೆ ತೋರಿಸುತ್ತಿದ್ದಾರೆ. ಕೊನೆಗಾಲದಲ್ಲಿ ಪಕ್ಷಕ್ಕೆ ಯಾವುದೇ ಹಾನಿಯಾಗಬಾರದು ಅನ್ನೋ ನಿಟ್ಟಿನಲ್ಲಿ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ನಿವೃತ್ತಿ ಘೋಷಣೆ ಮಾಡಿದರೂ ಪಕ್ಷ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಮತ್ತೆ ಅಖಾಡಕ್ಕೆ ಎಂಟ್ರಿ ಕೊಡ್ತಿದ್ದಾರೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ. ಮೊನ್ನೆ ಮೊನ್ನೆಯಷ್ಟೇ ಯಡಿಯೂರಪ್ಪರನ್ನು ಬದಿಗಿಟ್ಟು ಸಭೆ ಮಾಡಿದ್ದ ಬಿ.ಎಲ್ ಸಂತೋಷ್, ಸಂಕಷ್ಟ ಕಾಲದಲ್ಲಿ ಸಹಾಯ ಪಡೆದುಕೊಳ್ಳುವ ಕಸರತ್ತು ಮಾಡಿದ್ದಾರೆ..
ಬಿಜೆಪಿಯಲ್ಲಿ ಲಿಂಗಾಯತರ ನಿರ್ಲಕ್ಷ್ಯ ಆರೋಪಕ್ಕೆ ಕೌಂಟರ್..!
ರಾಜ್ಯ ಬಿಜೆಪಿಯಲ್ಲಿ ಲಿಂಗಾಯತ ನಾಯಕ ಯಡಿಯೂರಪ್ಪ ಪರಮೋಚ್ಚ ನಾಯಕ ಎನ್ನುವಂತಿದ್ದರು. ಆದರೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಬಳಿಕ ಬಿ.ಎಲ್ ಸಂತೋಷ್ ನಾಯಕತ್ವ ಪಡೆದುಕೊಳ್ಳುವ ಯತ್ನ ಮಾಡಿದರು. ಇದೀಗ ಲಿಂಗಾಯತ ವರ್ಸಸ್ ಬ್ರಾಹ್ಮಣ ಸಮುದಾಯದಲ್ಲಿ ನಡೆಯುತ್ತಿರುವ ಸಮರದಿಂದಲೇ ವಿರೋಧ ಪಕ್ಷದ ನಾಯಕ ಹಾಗು ಅಧ್ಯಕ್ಷ ಸ್ಥಾನಕ್ಕೆ ನೇಮಕ ಆಗುವುದು ವಿಳಂಬ ಆಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಲಿಂಗಾಯತ ಸಮುದಾಯ ನಿರ್ಲಕ್ಷ್ಯ ಮಾಡಲಾಗ್ತಿದೆ ಅನ್ನೋ ಆರೋಪಗಳು ಬಿಜೆಪಿ ನಾಯಕರಿಂದಲೇ ಹೊರ ಬರುತ್ತಿವೆ. ಕೂಡಲೇ ಎಚ್ಚೆತ್ತುಕೊಂಡಿರುವ ಬಿಜೆಪಿ ಹೈಕಮಾಂಡ್, ಬಿ.ಎಸ್ ಯಡಿಯೂರಪ್ಪ ಹಾಗು ಅವರ ಪುತ್ರ ಶಾಸಕ ವಿಜಯೇಂದ್ರ ಮೂಲಕ ಸುದ್ದಿಗೋಷ್ಠಿ ಮಾಡಿಸಿ, ನಿರ್ಲಕ್ಷ್ಯ ಮಾಡಿಲ್ಲ ಎಂದು ಹೇಳಿಸುತ್ತಿದೆ. ಇದೀಗ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿ ಲಿಂಗಾಯತರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಅತ್ಯಂತ ಗೌರವದಿಂದ ನಡೆಸಿಕೊಳ್ತಿದೆ ಎಂದು ಹೇಳಲು ಹೊರಟಿದ್ದಾರೆ.
ಲಿಂಗಾಯತರ ಎದುರು ಹೈಕಮಾಂಡ್ ಮಂತ್ರ.. ಲೋಖಸಭೆಗೆ ತಯಾರಿ..
ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದೆ ಎನ್ನುವ ಆರೋಪ ಬಹಳ ದಿನಗಳಿಂದಲೂ ಇದೆ. ಇದೇ ಕಾರಣಕ್ಕೆ ವಿಧಾನಸಭಾ ಚುನಾವಣೆಯಲ್ಲೂ ಸೋಲುಂಡಿದ್ದಾರೆ. ಇದೀಗ ಮತ್ತೆ ಲಿಂಗಾಯತರ ನಿರ್ಲಕ್ಷ್ಯ ಆರೋಪಗಳು ಕೇಳಿ ಬರುತ್ತಿವೆ. ಇದರಿಂದ ಮತ್ತೆ ಲೋಕಸಭಾ ಚುನಾವಣೆಯಲ್ಲೂ ಹಿನ್ನಡೆ ಆಗುವ ಸಾಧ್ಯತೆ ಇದೆ. ಹೀಗಾಗಿ ಲಿಂಗಾಯತರು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಯಡಿಯೂರಪ್ಪ ಮೂಲಕ ಪ್ರವಾಸ ಮಾಡಿಸಿ ಮತಗಳನ್ನು ಒಟ್ಟುಗೂಡಿಸುವ ತಂತ್ರಗಾರಿಕೆ ಮಾಡಲಾಗಿದೆ. ಕಳೆದ ಚುನಾವಣೆ ನಂತರ ಯಾವೆಲ್ಲಾ ನಾಯಕರು ಚದುರಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಯಾರೆಲ್ಲಾ ಪಕ್ಷದಿಂದ ಅಸಮಧಾನಗೊಂಡು ದೂರ ಉಳಿದಿದ್ದಾರೆ. ಅವರನ್ನು ಸಂಪರ್ಕಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾರೆಲ್ಲಾ ಅತೃಪ್ತರು, ಅಸಮಧಾನಿತರು ಇದ್ದಾರೆ ಅವರ ಜೊತೆಗೆ ಮಾತನಾಡಬೇಕು. ಲಿಂಗಾಯತ ನಾಯಕರನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮನವರಿಕೆ ಮಾಡಬೇಕು. ಇದು ಹೈಕಮಾಂಡ್ ಕೊಟ್ಟಿರುವ ಸೂಚನೆ ಎನ್ನಲಾಗಿದೆ.
ಯಡಿಯೂರಪ್ಪನನ್ನು ಬೆದರಿಸಿ ಹೇಳಿಕೆ ಕೊಡಿಸುತ್ತಾ ಹೈಕಮಾಂಡ್..?
ಬಿಜೆಪಿ ಹೈಕಮಾಂಡ್ ಬಿ.ಎಸ್ ಯಡಿಯೂರಪ್ಪ ಅವರಿಗೆ ಕಿಂಚಿತ್ತು ಗೌರವ ಕೊಡುವುದಿಲ್ಲ ಅನ್ನೋದು ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲೇ ಬಹಿರಂಗ ಆಗಿತ್ತು. ಆದರೂ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡಿ, ನನಗೆ ಬಿಜೆಪಿಯಲ್ಲಿ ಅವಮಾನ ಆಗಿಲ್ಲ, ನನನ್ನ ಗೌರವದಿಂದ ನಡೆಸಿಕೊಂಡಿದ್ದಾರೆ. ಬಿಜೆಪಿಯನ್ನು ಬೆಂಬಲಿಸಿ ಎಂದು ಹೇಳಿಕೊಂಡು ಪ್ರಚಾರ ಮಾಡಿದ್ದರು. ಆದರೆ ಯಡಿಯೂರಪ್ಪ ಪರಮಾಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ನಾಯಕರು ಕಾಂಗ್ರೆಸ್ ಸೇರಿದ್ದರು. ಇದೀಗ ಲೋಕಸಭೆಗೂ ಬಿಜೆಪಿ ಹೈಕಮಾಂಡ್ ಅದೇ ತಂತ್ರಗಾರಿಕೆ ಮಾಡುತ್ತಿದೆ. ರಾಜ್ಯ ಬಿಜೆಪಿ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ಬಿ.ಎಲ್ ಸಂತೋಷ್ ಯಡಿಯೂರಪ್ಪ ಹಾಗು ಅವರ ಕುಟುಂಬಸ್ಥರನ್ನು ತನಿಖಾ ಸಂಸ್ಥೆಗಳ ಮೂಲಕ ಬೆದರಿಸುವ ಕೆಲಸ ಮಾಡ್ತಿದ್ದಾರಾ..? ಪದೇ ಪದೇ ಯಡಿಯೂರಪ್ಪ ಹಾಗು ಅವರ ಪುತ್ರರ ಮೂಲಕ ಸ್ಪಷ್ಟನೆ ಕೊಡಿಸುವ ಕೆಲಸ ಯಾಕೆ ಆಗ್ತಿದೆ ಅನ್ನೋದು ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗಿರುವ ಅನುಮಾನ. ಬಿಜೆಪಿಗೆ ಕಷ್ಟ ಬಂದಾಗ ಮಾತ್ರ ಯಡಿಯೂರಪ್ಪ ಹಾಗು ಅವರ ಪುತ್ರರು ನೆನಪಾಗ್ತಾರಾ..? ಎಂದು ಯಡಿಯೂರಪ್ಪ ಬೆಂಬಲಿಗರೇ ಕೇಳುತ್ತಿದ್ದಾರೆ.
ಕೃಷ್ಣಮಣಿ