
ಜಾತಿಗಣತಿ ವರದಿ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ ನಡೆ ಇಡುತ್ತಿದ್ದಾರೆ. ಪಕ್ಷ ಸಿದ್ದಾಂತ ಎನ್ನುತ್ತಿದ್ದ ಡಿ.ಕೆ ಶಿವಕುಮಾರ್ಗೆ ಸಮುದಾಯದ ಭಯ ಕಾಡ್ತಿದೆಯಾ ಎನ್ನುವಂತಾಗಿದೆ. ಜಾತಿಗಣತಿಗೆ ಸಮುದಾಯದಲ್ಲಿ ತೀವ್ರ ವಿರೋಧ ಹಿನ್ನೆಲೆ ಎಚ್ಚೆತ್ತಿರುವ ಡಿ.ಕೆ ಶಿವಕುಮಾರ್, ವಿಶೇಷ ಕ್ಯಾಬಿನೆಟ್‌ಗೂ ಮುನ್ನವೇ ಸಮುದಾಯದ ಶಾಸಕರ ಅಭಿಪ್ರಾಯ ಕೇಳಲು ನಿರ್ಧಾರ ಮಾಡಿದ್ದಾರೆ. ಇಂದು ಒಕ್ಕಲಿಗ ಶಾಸಕರೊಂದಿಗೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಸರ್ಕಾರಿ ನಿವಾಸದಲ್ಲಿ ಕಾಂಗ್ರೆಸ್ ಒಕ್ಕಲಿಗ ಶಾಸಕರ ಸಭೆ ಕರೆದಿದ್ದು, ಸಭೆಯಲ್ಲಿ ಜಾತಿ ಜನಗಣತಿಯಿಂದ ಆಗುವ ಲಾಭ ನಷ್ಟದ ಬಗ್ಗೆ ಶಾಸಕರ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಇಂದಿನ ಸಭೆಗೆ ಒಕ್ಕಲಿಗ ಕಾಂಗ್ರೆಸ್ ಶಾಸಕರು ತಪ್ಪದೇ ಹಾಜರಿರಲು ಡಿ.ಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಒಕ್ಕಲಿಗ ಸಮುದಾಯದಲ್ಲಿ ಜಾತಿ ಜನಗಣತಿ ವರದಿಗೆ ವಿರೋಧ ಮಾಡುತ್ತಿದ್ದಾರೆ. ಬಿಜೆಪಿಯ ಕೆಲವು ಒಕ್ಕಲಿಗ ನಾಯಕರಿಂದಲೂ ವರದಿಗೆ ವಿರೋಧ ಮಾಡಿದ್ದಾರೆ. ಹೀಗಾಗಿ ಈ ಕುರಿತು ಸಮಗ್ರವಾಗಿ ಇಂದು ಚರ್ಚಿಸಲಿದ್ದಾರೆ ಡಿ.ಕೆ ಶಿವಕುಮಾರ್.

ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಎದುರು ಹಾಜರಾಗಿ ಮಾತನಾಡುವ ಮುನ್ನವೇ ಜಾತಿಗಣತಿ ಪ್ರತಿಯನ್ನ ಒಕ್ಕಲಿಗ ಶಾಸಕರ ಮುಂದಿಟ್ಟು ಅಭಿಪ್ರಾಯ ಕೇಳಲು ಮುಂದಾಗಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಜಾತಿ ಜನಗಣತಿಯಿಂದ ಏನಾಗುತ್ತದೆ. ರಾಜಕೀಯ ನಷ್ಟ ಏನಾಗುತ್ತದೆ..? ಯಾವ ನಿಲುವು ತೆಗೆದುಕೊಳ್ಳಬೇಕು ಅನ್ನೋ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಶಾಸಕರೊಂದಿಗಿನ ಸಭೆ ಬಳಿಕ ಸ್ವಾಮೀಜಿಗಳ ಬಳಿಯೂ ಚರ್ಚಿಸಲು ಡಿ.ಕೆ ಶಿವಕುಮಾರ್ ನಿರ್ಧಾರ ಮಾಡಿದ್ದಾರೆ.

ಈಗಾಗಲೇ ಬಿಜೆಪಿ-ಜೆಡಿಎಸ್ ನಾಯಕರು ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮಾಡುವುದಾಗಿ ಘೋಷಣೆ ಮಾಡಿದ್ದು, ಒಂದು ವೇಳೆ ಸಮುದಾಯ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದರೆ ಆಗುವ ನಷ್ಟದ ಬಗ್ಗೆ ಡಿಕೆ ಶಿವಕುಮಾರ್ ಇಂದು ಚರ್ಚೆ ನಡೆಸಲಿದ್ದು, ಆ ಬಳಿಕ ಸ್ವಾಮೀಜಿ ಬಳಿ ಚರ್ಚೆ ನಡೆಸಲಿದ್ದಾರೆ. ನಂತರ ಸಮಗ್ರವಾಗಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ನಿರ್ಧಾರ ಮಾಡಿದ್ದಾರೆ. ಒಟ್ಟಾರೆ ಸಿದ್ದರಾಮಯ್ಯ ಒಂದು ರೀತಿಯ ಲೆಕ್ಕಾಚಾರ ಮಾಡ್ತಿದ್ದು, ಲಿಂಗಾಯತ ಹಾಗು ಒಕ್ಕಲಿಗ ಸಮುದಾಯ ಅಂತರ ಕಾಯ್ದುಕೊಳ್ತಿದೆ.