
ಮುಡಾ 50:50 ಹಗರಣದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಪಾಲಿಗೆ ಬಿಗ್ ಡೇ ಆಗಿದೆ. ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಬೀಳಲಿದೆ. ಲೋಕಾಯುಕ್ತ ಬಿ ರಿಪೋರ್ಟ್ ಕುರಿತು ದೂರುದಾರ ಸ್ನೇಹಮಯಿ ಕೃಷ್ಣ ಚಾಲೆಂಜ್ ಮಾಡಿದ್ದರು. ಖುದ್ದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದ್ದರು. ಲೋಕಾಯುಕ್ತ ವರದಿಯಲ್ಲಿ ಸುಳ್ಳು ಹೇಳಿದೆ. ದಾಖಲೆಗಳ ಪ್ರಕಾರ ತನಿಖೆ ಮಾಡಿಲ್ಲ ಎಂದು ವಾದ ಮಾಡಿದ್ದರು. ಆರೋಪಿಗಳ ರಕ್ಷಣೆಗೆ ಲೋಕಾಯುಕ್ತ ಮುಂದಾಗಿದೆ. ಮುಡಾದಲ್ಲಿ ಹಗರಣ ಆಗಿದೆ, ಆದ್ರೆ ಸಿದ್ದರಾಮಯ್ಯ ಸೇರಿದಂತೆ ಆರೋಪಿಗಳ ತಪ್ಪಿಲ್ಲ ಅಂತ ಲೋಕಾಯುಕ್ತ ಹೇಳಿದೆ. ಹಗರಣ ಆಗಿದೆ ಅಂದಮೇಲೆ ಆರೋಪಿಗಳ ತಪ್ಪು ಇದೇ ಅಂತ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. .
ಲೋಕಾಯುಕ್ತ ಬಿ ರಿಪೋರ್ಟ್ ನಿರಾಕರಿಸಿ ಅಂತ ವಾದ ಮಂಡನೆ ಆಗಿದ್ದು, ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖುದ್ದು ವಾದ ಮಾಡಿದ್ದರು ಸ್ನೇಹಮಯಿ ಕೃಷ್ಣ. ಎರಡು ಕಡೆಯ ವಾದ ವಿವಾದ ಅಲಿಸಿ ಇಂದಿಗೆ ಆದೇಶ ಕಾಯ್ದಿರಿಸಿದೆ ನ್ಯಾಯಾಲಯ. ಲೋಕಾಯುಕ್ತ ರಿಪೋರ್ಟ್ ತಿರಸ್ಕೃತಗೊಂಡರೇ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಂಕಷ್ಟ ಎದುರಾಗಲಿದೆ. ಒಂದು ವೇಳೆ ಕೋರ್ಟ್ ಬಿ ರಿಪೋರ್ಟ್ ಒಪ್ಪಿಕೊಂಡರೆ, ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯೂ ಇದೆ. ಆದರೆ ಸ್ನೇಹಮಯಿ ಕೃಷ್ಣ ಮಾತ್ರ ಕೋರ್ಟ್ನಲ್ಲಿ ಬಿ ರಿಪೋರ್ಟ್ ತಿರಸ್ಕಾರ ಆಗಲಿದೆ ಅನ್ನೋ ವಿಶ್ವಾಸದಲ್ಲಿದ್ದಾರೆ

ಮುಡಾ 50:50 ಸೈಟ್ ಹಗರಣದಲ್ಲಿ ಲೋಕಾಯುಕ್ತ ಬಿ ರಿಪೋರ್ಟ್ ವಿಚಾರವಾಗಿ ತೀರ್ಪು ಹೊರ ಬೀಳಲಿದೆ. ಈ ಬಗ್ಗೆ ಮೈಸೂರಿನಲ್ಲಿ ಸ್ನೇಹಮಯಿ ಕೃಷ್ಣ ಮಾತನಾಡಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಆದೇಶ ಬರುತ್ತದೆ. ಲೋಕಾಯುಕ್ತ ವರದಿ ತಿರಸ್ಕಾರವಾಗುತ್ತದೆ ಎಂದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಆರೋಪಿಗಳನ್ನು ಬಜಾವ್ ಮಾಡಲು ಸುಳ್ಳು ವರದಿ ನೀಡಿದ್ದಾರೆ. ಸಾಕ್ಷಿಗಳ ಕೊರತೆ ಅಂತ ವರದಿಯಲ್ಲಿ ಹೇಳಿದ್ದಾರೆ. ನಾನು ಸಾಕಷ್ಟು ದಾಖಲೆಗಳನ್ನು ಕೊಟ್ಟಿದ್ದೆ. ಅದರ ಪ್ರಕಾರ ತನಿಖೆ ಮಾಡಿಲ್ಲ. ಹೀಗಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಾನೇ ಖುದ್ದು ವಾದ ಮಾಡಿದ್ದೇನೆ. ಲೋಕಾಯುಕ್ತದ ತಪ್ಪುಗಳನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲಾ ಆರೋಪಿಗಳ ತಪ್ಪನ್ನು ಕೂಡ ವಾದದಲ್ಲಿ ಮಂಡನೆ ಮಾಡಿದ್ದೇನೆ. ಮುಡಾದಲ್ಲಿ ಅಕ್ರಮ ಸೈಟು ಪಡೆದಿರೋದು ತಪ್ಪು. ಹೀಗಿದ್ದರೂ ಲೋಕಾಯುಕ್ತ ಅಧಿಕಾರಿಗಳು ಒತ್ತಡದ ಮೇಲೆ ಕೋರ್ಟ್ಗೆ ಸುಳ್ಳು ವರದಿ ಕೊಟ್ಟಿದ್ದಾರೆ. ಅಕ್ರಮದ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಮೈಸೂರಿನಲ್ಲಿ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಅಂದರೆ ಒಂದು ವೇಳೆ ಕೋರ್ಟ್ ಬಿ ರಿಪೋರ್ಟ್ ಅನ್ನೇ ಒಪ್ಪಿಕೊಂಡರೂ ಹೈಕೋರ್ಟ್ ಹಾಗು ಸುಪ್ರೀಂಕೋರ್ಟ್ನಲ್ಲೂ ಕಾನೂನು ಹೋರಾಟ ನಡೆಸಲು ದೂರುದಾರ ಸ್ನೇಹಮಯಿ ಕೃಷ್ಣ ನಿರ್ಧಾರ ಮಾಡಿದ್ದಾರೆ.
================