2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶತಾಯಗತಾಯ ಗೆಲ್ಲಲು ಮುಂದಾಗಿದೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪಟ್ಟಿ ಕೈಯಲ್ಲೇ ಹಿಡಿದುಕೊಂಡು ಆಪರೇಷನ್ ಹಸ್ತಕ್ಕೆ ತಯಾರಿ ನಡೆಸಿಕೊಂಡಿದ್ದಾರೆ. ಈ ಮಧ್ಯೆಯೇ ಚುನಾವಣಾ ಮೈತ್ರಿ ಮತ್ತು ಆಪರೇಷನ್ ಹಸ್ತಕ್ಕೆ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದರು. ಚುನಾವಣಾ ಮೈತ್ರಿ, ಆಪರೇಷನ್ ಹಸ್ತಕ್ಕೆ ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಿಧಾನ ಪರಿಷತ್, ಜಿಲ್ಲಾ ಪಂಚಾಯತ್ ಚುನಾವಣೆ ಕುರಿತು ಸ್ಥಳೀಯ ನಾಯಕರ ಸಭೆ ನಡೆಸಿದ್ದರು. ಜಿಲ್ಲಾವಾರು ಜೆಡಿಎಸ್ ನಾಯಕರನ್ನು ಕಾಂಗ್ರೆಸ್ಗೆ ಸೇರಿಸಿ ಎಂದು ಸಭೆಯಲ್ಲಿ ಚರ್ಚೆ ನಡೆಸಿದ್ದರು.
ಅದರಂತೆಯೇ ಈಗ ರಾಜ್ಯದಲ್ಲಿ ಆಪರೇಷನ್ ಹಸ್ತ ಮುಂದುವರಿದಿದೆ. ಅದರಲ್ಲೂ ಜೆಡಿಎಸ್ ಪಕ್ಷವನ್ನೇ ಟಾರ್ಗೆಟ್ ಮಾಡಿ ಕಾಂಗ್ರೆಸ್ ಭಾರೀ ರಣತಂತ್ರ ಹೆಣೆಯುತ್ತಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಹಲವು ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ದಳಪತಿಗಳಿಗೆ ಆಘಾತ ನೀಡಿದ್ದಾರೆ. ಹೀಗಿರುವಾಗಲೇ ಜೆಡಿಎಸ್ ಯಾವುದೇ ಕಾರಣಕ್ಕೂ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರೋದಿಲ್ಲ. ಬದಲಿಗೆ ಅತಂತ್ರ ಫಲಿತಾಂಶ ಬಂದರೆ ಕೇವಲ 30 ಸೀಟಲ್ಲೇ ಆಟ ಆಡುವ ಪಕ್ಷ ಜೆಡಿಎಸ್ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಈ ಹೇಳಿಕೆಗೆ ಕಾಲವೇ ಉತ್ತರ ನೀಡಲಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕೂಡ ಟಾಂಗ್ ಕೊಟ್ಟಿದ್ದಾರೆ. ಈ ನಡುವೆ ಜೆಡಿಎಸ್ಗೆ ಮತ್ತೊಂದು ಆಘಾತಕಾರಿ ಸುದ್ದಿ ಕಾದಿದೆ.
ಹೌದು, ಕೇವಲ ಜೆಡಿಎಸ್ನ ಘಟಾನುಘಟಿ ಶಾಸಕರು ಮಾತ್ರವಲ್ಲ ಬದಲಿಗೆ ಪಕ್ಷದ ಸ್ಥಳೀಯ ನಾಯಕರಿಗೂ ಕಾಂಗ್ರೆಸ್ ಗಾಳ ಹಾಕಿದೆ. ಹಲವು ಜೆಡಿಎಸ್ ಶಾಸಕರು ಪಕ್ಷದಿಂದ ಒಂದು ಕಾಲು ಹೊರಗಿಟ್ಟ ಸಂದರ್ಭದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲೇ ಹಲವು ಜೆಡಿಎಸ್ ಸ್ಥಳೀಯ ನಾಯಕರು ತೆನೆ ಇಳಿಸಿ ಕಾಂಗ್ರೆಸ್ ಸೇರಿದ್ದಾರೆ. ಇವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಬಾವುಟ ನೀಡಿ ಬರಮಾಡಿಕೊಂಡಿದ್ದಾರೆ.
ಇನ್ನು, ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಮಾತಾಡಿದ್ದ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ ವಿರುದ್ಧ ಹರಿಹಾಯ್ದಿದ್ದರು. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಎಚ್.ಡಿ ಕುಮಾರಸ್ವಾಮಿ ಒಂದಾಗಿದ್ದಾರೆ. ಜೆಡಿಎಸ್ಸಿನದ್ದು ಯಾವಾಗಲೂ ಹೊಂದಾಣಿಕೆ ರಾಜಕೀಯ. ಇವರು ಅಧಿಕಾರಕ್ಕೆ ಬರುವ ಗಿರಾಕಿಗಳು ಅಲ್ಲವೇ ಅಲ್ಲ. ನೀವು ಕಾಂಗ್ರೆಸ್ಗೆ ಬಂದಿದ್ದೀರಿ, ನಿಮ್ಮ ರಾಜಕೀಯ ಭವಿಷ್ಯ ಉತ್ತಮವಾಗಿರಲಿದೆ ಎಂದರು.
ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೇ ಜಿಲ್ಲಾ ಮಟ್ಟದಲ್ಲೂ ಜೆಡಿಎಸ್ ನಾಯಕರನ್ನು ಸೆಳೆಯಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಕೊಪ್ಪಳದ ಮಾಜಿ ಸಂಸದ ಎಚ್.ಜಿ ರಾಮುಲು ಅವರನ್ನು ಭೇಟಿ ಮಾಡಿದ ಡಿ.ಕೆ ಶಿವಕುಮಾರ್, ಎಚ್.ಜಿ ರಾಮುಲು ಅವರ ಪುತ್ರ ಹಾಗೂ ಜೆಡಿಎಸ್ ನಾಯಕರಾದ ಎಚ್.ಆರ್.ಶ್ರೀನಾಥ್ ಹಾಗೂ ಗಂಗಾವತಿ ಜೆಡಿಎಸ್ ಅಭ್ಯರ್ಥಿ ಕರಿಯಣ್ಣ ಸಂಗಟಿ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಚುನಾವಣೆಗೆ ಇನ್ನು ಒಂದೂವರೆ ವರ್ಷ ಬಾಕಿಯಿರುವಂತೆ ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ತೆನೆ ಇಳಿಸಲು ಸಜ್ಜಾಗಿರೋ ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಹೆಣಗಾಡುತ್ತಿರೋ ಸಮಯದಲ್ಲೇ ದಳಪತಿಗಳಿಗೆ ಸ್ಥಳೀಯ ನಾಯಕರು ಮತ್ತಷ್ಟು ಆಘಾತ ಉಂಟು ಮಾಡಿದ್ದಾರೆ. ಒಂದೆಡೆ ದಳಪತಿಗಳು ಪಕ್ಷ ಸಂಘತನೆಯತ್ತ ಚಿತ್ತ ಹರಿಸಿದ್ರೆ, ಇತ್ತ ಹಸ್ತದ ಆಪರೇಷನ್ನಿಂದಾಗಿ ತೆನೆ ಹೊತ್ತ ಮಹಿಳೆ ಬಲ ಕಳೆದುಕೊಳ್ಳುತ್ತಿರೋದಂತು ಸತ್ಯ.
ಕೇವಲ ಜೆಡಿಎಸ್ ಶಾಸಕರನ್ನು ಮಾತ್ರ ಕರೆತಂದರೆ ಸಾಲದು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿರುವ ಎಲ್ಲಾ ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್ಗೆ ಸೇರಿಸಬೇಕು. ಆಗ ಮಾತ್ರ ನಾವು ಮುಂದಿನ ಚುನಾವಣೆಯನ್ನು ಪ್ರಬಲವಾಗಿ ಎದುರಿಸಲು ಸಾಧ್ಯ. ಅಧಿಕಾರಕ್ಕೇರಲು ಏನು ಬೇಕೋ ಎಲ್ಲಾ ರೀತಿಯ ತಂತ್ರಗಳನ್ನು ಈಗಲೇ ಹೆಣೆಯಬೇಕು ಎಂಬುದು ಡಿಕೆಶಿ ಪ್ಲಾನ್.
ಇನ್ನು, ಮೊದಲಿನಿಂದಲೂ ಮಾಜಿ ಸಿಎಂ ಸಿದ್ದರಾಮಯ್ಯಗೆ ಜೆಡಿಎಸ್ ಕಂಡರೆ ಸಿಟ್ಟು. ಜೆಡಿಎಸ್ನಿಂದ ಡಿಕೆಶಿ ಯಾರನ್ನೇ ಕರೆದುಕೊಂಡರು ಬಂದರೂ ಸಿದ್ದರಾಮಯ್ಯ ಮಾತ್ರ ಸರಿ ಎನ್ನುತ್ತಿದ್ದಾರೆ. ಸಹಜವಾಗಿ ಆಪರೇಷನ್ ಹಸ್ತಕ್ಕೆ ವಿರೋಧ ವ್ಯಕ್ತಪಡಿಸುವ ಸಿದ್ದರಾಮಯ್ಯ ಜೆಡಿಎಸ್ ಶಾಸಕರನ್ನು ಕರೆತರುವ ಡಿಕೆಶಿ ಪ್ರಯತ್ನಕ್ಕೆ ಜೈ ಜೋಡಿಸುತ್ತಿದ್ದಾರೆ. ಇದು 2023 ವಿಧಾನಸಭಾ ಚುನಾವಣೆಗೆ ಮುನ್ನವೇ ಜೆಡಿಎಸ್ ಮುಗಿಸುವ ಪ್ಲಾನ್ ಎಂದು ಹೇಳಲಾಗುತ್ತಿದೆ.