ಡಿಕೆ ಬ್ರದರ್ಸ್ ವಿರುದ್ಧ ಕುಮಾರಸ್ವಾಮಿ ಕೆಂಡಕಾರಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಿಂದ ಚುನಾವಣಾ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಕೂಡಲೇ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯ ಮಾಡಿದರು.

ಬೆಂಗಳೂರಿನಲ್ಲಿ ಮಂಗಳವಾರ ತುರ್ತು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ಪಾರದರ್ಶಕ ಚುನಾವಣೆ ನಡೆಸುವ ಸಲುವಾಗಿ ಕೂಡಲೇ ಈ ಕ್ಷೇತ್ರದಲ್ಲಿ ಅರೆಸೇನಾ ಪಡೆ ತುಕಡಿಗಳನ್ನು ನಿಯೋಜಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನು ಆಗ್ರಹಪಡಿಸಿದರು.ಅಲ್ಲದೆ; ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಡೆಸುತ್ತಿರುವ ಅಕ್ರಮಗಳಿಗೆ ಮೌನ ಸಹಕಾರ ನೀಡುತ್ತಿರುವ ಈ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದು ಆಗ್ರಹ ಮಾಡಿದರು.

ಕರ್ನಾಟಕದಲ್ಲಿ ಚುನಾವಣೆ ಆಯೋಗ ಇದೆಯಾ? ಕೇಂದ್ರ ಆಯೋಗ ಏನು ಮಾಡುತ್ತಿದೆ? ಚುನಾವಣೆ ಘೋಷಣೆಯಾದ ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎನ್ನುವುದು ಆಯೋಗಕ್ಕೆ ಗೊತ್ತಿಲ್ಲವೇ? ಆಯೋಗದ ಸಿಬ್ಬಂದಿ ಏನು ಮಾಡುತ್ತಿದ್ದಾರೆ? ಭಾನುವಾರ ರಾತ್ರಿ ಈ ಕ್ಷೇತ್ರದಲ್ಲಿ ಏನು ನಡೆದಿದೆ ಎನ್ನುವುದನ್ನು ನೀವು ನೋಡಬೇಕು ಎಂದು ಆಯೋಗವನ್ನು ಒತ್ತಾಯ ಮಾಡಿದ ಕುಮಾರಸ್ವಾಮಿ ಅವರು; ಕಾಂಗ್ರೆಸ್ಅಭ್ಯರ್ಥಿ ಮತದಾರರಿಗೆ ಹಂಚಲು ಇರಿಸಲಾಗಿದ್ದ ಕುಕ್ಕರ್ʼಗಳ ಲೋಡ್ ಇದ್ದ ಲಾರಿಗಳ ಚಿತ್ರಗಳು, ವಿಡಿಯೋಗಳನ್ನು ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಡಿಕೆಶಿ ವಿರುದ್ಧ ಗರಂ..!
ಶಿವಕುಮಾರ್ ಯಾವನಿಗೆ ಬೇಕು ಇವರ ಅನುಕಂಪ? ನಮ್ಮ ಕಾರ್ಯಕರ್ತರಿಗೆ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ ಎಂದು ಡಿ.ಕೆ.ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇವತ್ತು ಜೆಡಿಎಸ್ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಮೂಲ ಕಾರಣವೇ ನೀವು. ನಿಮ್ಮಿಂದಲೇ ಈ ಮೈತ್ರಿ ಆಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಹೊಂದಾಣಿಕೆ ಮಾಡಿಕೊಳ್ಳೊದಕ್ಕೆ ಮೂಲ ಕಾರಣವೂ ನೀವೇ. ಹಿಂದೆ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರಕಾರ ರಚನೆ ಆದಾಗ ಈ ಸರಕಾರ ಐದು ವರ್ಷ ಇರಬೇಕು ಎಂದು ಹೇಳಿದ್ದಿರಿ. ಆದರೆ ಪಕ್ಕದಲ್ಲೇ ಕೂತು ಬಿಲ ಕೊರೆದಿರಿ. ಅಧಿಕಾರವನ್ನೂ, ಆ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಪಕ್ಷವನ್ನೇ ರಾಮನಗರದಲ್ಲಿ ಮುಗಿಸಲು ಷಡ್ಯಂತ್ರ ರೂಪಿಸಿದಿರಿ. ಆಗ ಮಂಡ್ಯದಲ್ಲಿ ದೋಖಾ ಮಾಡಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲುವಂತೆ ಮಾಡಿದಿರಿ. ಬೆಂಗಳೂರು ಗ್ರಾಮಾಂತರದಲ್ಲಿ ನಿಮ್ಮ ಸಹೋದರನಿಗೆ ನಮ್ಮ ಕಾರ್ಯಕರ್ತರು ಇದನ್ನೇ ಮಾಡಿದ್ದಿದ್ದರೆ ಆತನೂ ಮನೆಯಲ್ಲಿ ಕೂರಬೇಕಿತ್ತು. ಮೈತ್ರಿಗೆ ನಾವು ಮೋಸ ಮಾಡಲಿಲ್ಲ. ಬಿಜೆಪಿ ಜತೆ 20 ತಿಂಗಳು ಸರಕಾರ ಮಾಡಿದ್ದರಿಂದ ನಾನು ಪಕ್ಷವನ್ನು ಉಳಿಸಿಕೊಂಡಿದ್ದೇನೆ. ಆದರೆ ನಿಮ್ಮ ಜತೆ 14 ತಿಂಗಳ ಮೈತ್ರಿಯಲ್ಲಿ ನಾವು ಸಾಕಷ್ಟು ಕಳೆದುಕೊಂಡಿದ್ದೇನೆ ಅಂತ ವಾಗ್ದಾಳಿ ನಡೆಸಿದ್ರು.






