ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ದಿಲೀಪ್ ಘೋಷ್ ಅವರು ಆಗಸ್ಟ್ 21ರಂದು ರಾಜ್ಯವನ್ನು ಮೂರು ಭಾಗವಾಗಿ ವಿಭಜಿಸುವ ಬೇಡಿಕೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಈಗಿರುವ ಪಶ್ಚಿಮ ಬಂಗಾಳವನ್ನು ವಿಭಜಿಸಿ ಎರಡು ಇತರ ಹೊಸ ರಾಜ್ಯಗಳನ್ನು ಸೃಷ್ಟಿಸುವ ಬೇಡಿಕೆ ಇದಾಗಿದೆ. ರಾಜ್ಯದ ನೈಋತ್ಯ ಭಾಗ ಹಾಗೂ ಜಂಗಲ್ ಮಹಲ್ ಭಾಗವನ್ನು ಈಗಿರುವ ಅಖಂಡ ಪಶ್ಚಿಮ ಬಂಗಾಳದಿಂದ ವಿಭಜನೆ ಮಾಡಬೇಕೆಂದು ಬೇಡಿಕೆ ಇಡಲಾಗಿದೆ.
ವಿಭಜನೆಯ ಬೇಡಿಕೆಗೆ ಬಹಿರಂಗವಾಗಿ ಬೆಂಬಲ ಸೂಚಿಸಿ ಮಾತನಾಡಿರುವ ದಿಲೀಪ್ ಘೋಷ್ ಅವರು, ದೀದಿ ನೇತೃತ್ವದ ಸರ್ಕಾರದ ನಿರ್ಲಕ್ಷ್ಯತನದಿಂದ ಬೇಸತ್ತಿರುವ ಜನರ ದನಿಗಳಿಗೆ ಬೆಂಬಲವಾಗಿ ನಾವು ನಿಲ್ಲುತ್ತೇವೆ, ಎಂದು ಹೇಳಿದ್ದಾರೆ.
ಈ ರೀತಿ ರಾಜ್ಯ ವಿಭಜನೆಗೆ ದನಿಗೂಡಿಸುವುದು ಬಿಜೆಪಿಯ ಮೊದಲ ಪ್ರಯತ್ನವಲ್ಲ. ಈ ಹಿಮದೆ ಡಾರ್ಜಿಲಿಂಗ್ ಮತ್ತು ಅದರ ಆಸುಪಾಸಿನ ಪ್ರದೇಶವನ್ನು ‘ಗೂರ್ಖಾಲ್ಯಾಂಡ್’ ಎಂದು ಘೋಷಿಸಬೇಕೆಂಬ ಇರಾದೆಯಿಂದ ಹುಟ್ಟಿಕೊಂಡಿದ್ದ ಗೂರ್ಖಾ ಜನಮುಕ್ತಿ ಮೋರ್ಚಾವನ್ನು ಬಿಜೆಪಿ ಬೆಂಬಲಿಸಿತ್ತು. ಈ ಪಕ್ಷವು 2008ರಲ್ಲಿ ಅಸ್ಥಿತ್ವಕ್ಕೆ ಬಂದಿತ್ತು. ಆ ನಂತರ 2020ರವರೆಗೆ ಬಿಜೆಪಿ ಇದಕ್ಕೆ ಬೆಂಬಲ ಸೂಚಿಸಿತ್ತು. ಆದರೆ, ವಿಧಾನಸಭೆ ಚುನಾವಣೆಯ ಸೋಲಿನ ನಂತರ ಗೋರ್ಖಾ ಜನಮುಕ್ತಿ ಮೋರ್ಚಾಗೆ ನೀಡಿದ ಬಹಿರಂಗ ಬೆಂಬಲದಿಂದ ಅಲ್ಪಮಟ್ಟಿಗೆ ಬಿಜೆಪಿ ಹಿಂದೆ ಸರಿದಿತ್ತು.
ಆ ಸಂದರ್ಭದಲ್ಲಿ ಮಾತನಾಡಿದ್ದ ದಿಲೀಪ್ ಘೋಷ್ ಅವರು, ಬಿಜೆಪಿಯು ಅಖಂಡ ಪಶ್ಚಿಮ ಬಂಗಾಳವನ್ನು ನೋಡಲು ಇಚ್ಚಿಸುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ ಕೇವಲ ಮೂರು ತಿಂಗಳ ಬಳಿಕ ಮತ್ತೆ ರಾಜ್ಯವನ್ನು ವಿಭಜಿಸುತ್ತ ಬಿಜೆಪಿ ನಾಯಕರು ತಮ್ಮ ಚಿತ್ತ ನೆಟ್ಟಿದ್ದಾರೆ.
ವಿಧಾನಸಭೆಯ ಚುನಾವಣೆಯ ನಂತರ ಪಶ್ಚಿಮ ಬಂಗಾಳದ ಅಧಿಕೃತ ವಿಪಕ್ಷ ನಾಯಕರಾಗಿರುವ ಹೊಸ ಬಿಜೆಪಿ ಸದಸ್ಯ ಸುವೆಂಧು ಅಧಿಕಾರಿ ಅವರು, ನೈಋತ್ಯ ಬಂಗಾಳದ ವಿಭಜನೆಯ ಕುರಿತು ಮಾತನಾಡಿದ್ದರು. ನೈರುತ್ಯ ಬಂಗಾಳದ ಜನರು ಪ್ರತ್ಯೇಕ ರಾಜ್ಯವನ್ನು ಬಯಸುತ್ತಿದ್ದಾರೆ ಎಂದು ಅವರು ಹೇಳಿದ್ದರು. ಆ ವೇಳೆ ಸುವೆಂಧು ಅವರ ಹೇಳಿಕೆಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡದಿದ್ದ ಪಕ್ಷವು, ಈಗ ಅವರ ಹೇಳಿಕೆಯೊಂದಿಗೆ ತಮ್ಮ ಸಮ್ಮತಿಯನ್ನು ಪಕ್ಷದ ಮುಖಂಡರು ಸೂಚಿಸಿದ್ದಾರೆ.
ಈಗ ಮತ್ತೆ ಗೋರ್ಖಾ ಮುಕ್ತಿ ಮೋರ್ಚಾದೊಂದಿಗೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ, ಗೋರ್ಖಾ ಮೋರ್ಚಾದ ಸಂಸದರಾದ ಜಾನ್ ಬಾರ್ಲಾ ಅವರಿಗೆ ಇತ್ತೀಚಿಗೆ ನಡೆದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನವನ್ನೂ ನೀಡಲಾಗಿದೆ.
ಶನಿವಾರದಂದು ನಡೆದ ಸಭೆಯಲ್ಲಿ ಬಾರ್ಲಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ದಿಲೀಪ್ ಘೋಷ್, ರಾಜ್ಯ ವಿಭಜನೆಯಾದರೆ ಅದಕ್ಕೆ ಮಮತಾ ಬ್ಯಾನರ್ಜಿ ಅವರೇ ಕಾರಣಕರ್ತರಾಗಲಿದ್ದಾರೆ, ಎಂದು ವಾಗ್ದಾಳಿ ನಡೆಸಿದ್ದಾರೆ.
“ಸ್ವಾತಂತ್ರ್ಯ ದೊರೆತು 75 ವರ್ಷವಾದರು ಉತ್ತರ ಬಂಗಾಳ ಏಕೆ ಅಭಿವೃದ್ದಿಯನ್ನು ಕಾಣಲಿಲ್ಲ? ಉತ್ತಮ ಕೆಲಸ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಾಗಿ ಇಲ್ಲಿನ ಜನರು ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಇಲ್ಲಿ ಯಾಕೆ ಉತ್ತಮ ಶಾಲೆಗಳಿಲ್ಲ, ಕಾಲೇಜುಗಳಿಲ್ಲ? ಉತ್ತಮ ಆಸ್ಪತ್ರೆಗಳನ್ನು ಏಕೆ ಕಟ್ಟಿಸಲಿಲ್ಲ? ಕೈಗಾರಿಕೆಗಳನ್ನು ಸ್ಥಾಪಿಸಿ ಇಲ್ಲಿ ಉದ್ಯೋಗಾವಕಾಶಗಳನ್ನು ಏಕೆ ಸೃಷ್ಟಿಸಿಲ್ಲ?,” ಎಂದು ದಿಲೀಪ್ ಘೋಷ್ ಪ್ರಶ್ನಿಸಿದ್ದಾರೆ.
ಇದು ಕೇವಲ ಉತ್ತರ ಬಂಗಾಳದ ಪರಿಸ್ಥಿತಿಯಲ್ಲಿ, ಇದೇ ಪರಿಸ್ಥಿತಿ ಜಂಗಲ್ ಮಹಲ್’ನಲ್ಲಿಯೂ ಇದೆ. ಅಲ್ಲಿನ ಮಹಿಳೆಯರು ಈಗಲೂ ಜೀವನೋಪಾಯಕ್ಕಾಗಿ ‘ಸಾಲ್’ ಹಾಗೂ ‘ಕೆಂಡು’ ಮರಗಳ ಎಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಏಕೆ ಅವರು ಕೆಲಸಕ್ಕಾಗಿ ರಾಮಚಿ, ಒಡಿಶಾ ಹಾಗು ಗುಜರಾತ್ ಕಡೆಗೆ ಮುಖ ಮಾಡಬೇಕು? ಅವರಿಗೆ ಅವರ ಸ್ವಾತಂತ್ರ್ಯವನ್ನು ಅನುಭವಿಸುವ ಹಕ್ಕಿಲ್ಲವೇ? ಇಂತಹ ಬೇಡಿಕೆಯನ್ನು ಅವರು ಮುಂದಿಟ್ಟರೆ ಅದು ‘ಅನ್ಯಾಯ’ವಾಗಲು ಸಾಧ್ಯವೇ ಇಲ್ಲ, ಎಂದು ಘೋಷ್ ಹೇಳಿದ್ದಾರೆ.
ಬಿಜೆಪಿಯ ಈ ನಡೆಯು ಸಾಮಾನ್ಯವಾಗಿಯೇ ಟಿಎಂಸಿಯನ್ನು ಕೆರಳಿಸಿದ್ದು, ಚುನಾವಣೆಯಲ್ಲಿ ಸೋತ ನಂತರ ಆಗಿರುವ ಮುಖಭಂಗವನ್ನು ತಪ್ಪಿಸಲು ಈ ರೀತಿಯ ವಿಭಜನಾತ್ಮಕ ರಾಜಕೀಯವನ್ನು ನಡೆಸುತ್ತಿದೆ ಎಂದು ಆರೋಪಿಸಿದೆ.
ಟಿಎಂಸಿ ರಾಜ್ಯಸಭಾ ಸಂಸದರಾಗಿರುವ ಸುಖೇಂದು ರಾಯ್, ಬಿಜೆಪಿಯು ಪ್ರತ್ಯೇಕತಾವಾದಿಗಳೊಂದಿಗೆ ಶಾಮೀಲಾಗಿ ರಾಜ್ಯವನ್ನು ಒಡೆಯಲು ಪ್ರಯತ್ನಿಸುತ್ತಿದೆ. ಇದರೊಂದಿಗೆ ವಿಧಾನಸಭೆ ಸೋಲಿನ ಮುಖಭಂಗವನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ, ಎಂದು ಹೇಳಿದ್ದಾರೆ.
ವಿಭಜನೆಯ ಕೂಗಿಗೆ ಕಾರಣವೇನು?
ಕಳೆದ ಬಾರಿಯ ಲೋಕಸಭಾ ಚುನಾವಣೆಯ ವೇಳೆ ಉತ್ತರ ಬಂಗಾಳದಲ್ಲಿ ಬಿಜೆಪಿ ದಾಖಲೆಯ ಮತಗಳನ್ನು ಪಡೆದಿತ್ತು. ರಾಜ್ಯದಲ್ಲಿ 18 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಂಗಾಳದಲ್ಲಿ ಆಳವಾಗಿ ಬೇರೂರವ ಲಕ್ಷಣವನ್ನು ತೋರಿಸಿತ್ತು. ಆದರೆ, ನಮತರ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಉತ್ತರ ಬಂಗಾಳದಲ್ಲಿ ಬಿಜೆಪಿಗಿದ್ದ ನೆಲೆಯನ್ನು ಧ್ವಂಸಗೊಳಿಸುವಲ್ಲಿ ಟಿಎಂಸಿ ಸಫಲವಾಯಿತು.
ಇದು ಉತ್ತಮ ಬಂಗಾಳವನ್ನು ತಮ್ಮ ಭದ್ರಕೋಟೆಯಾಗಿಸುವ ಬಿಜೆಪಿಯ ತಂತ್ರಗಾರಿಕೆಗೆ ಮಾರಕವಾಗಿ ಪರಿಣಮಿಸಿದೆ. ಒಂದು ವೇಳೆ ಉತ್ತರ ಬಂಗಾಳದಲ್ಲಿ ಮತ್ತೆ ಪಾರುಪತ್ಯ ಸಾಧಿಸುವಲ್ಲಿ ಬಿಜೆಪಿ ವಿಫಲವಾದರೆ, ಸಂಪೂರ್ಣ ಬಂಗಾಳದಲ್ಲಿ ಇದರ ಋಣಾತ್ಮಕ ಪರಿಣಾಮ ಬೀರಲಿದೆ. ಮುಂದಿನ ಲೋಕಸಭಾ ಚುನಾವಣೆಗೆ ದೀದಿ ಈಗಾಗಲೇ ತಯಾರಿ ನಡೆಸುತ್ತಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಳೆದುಕೊಂಡಿರುವ ಕ್ಷೇತ್ರಗಳನ್ನು ಮತ್ತೆ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ. ಈಗ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಉತ್ತರ ಬಂಗಾಳ ಹಾಗೂ ನೈಋತ್ಯ ಬಂಗಾಳದಲ್ಲಿ ತಮ್ಮ ನೆಲೆಯನ್ನು ಮತ್ತಷ್ಟು ವಿಸ್ತರಿಸುವತ್ತ ಬಿಜೆಪಿ ದೃಷ್ಟಿ ನೆಟ್ಟಿದೆ. ಈ ಪ್ರಯತ್ನದಲ್ಲಿ ಬಿಜೆಪಿ ಎಷ್ಟರ ಮಟ್ಟಿಗೆ ಸಫಲವಾಗಬಲ್ಲದು ಎಂದು ಕಾದು ನೋಡಬೇಕಷ್ಟೆ.