ನವದೆಹಲಿ : ನಮ್ಮ ಜತೆ ಪ್ರೀತಿ ಹೊಂದಿದ್ದರು, ಮೋದಿ ಜತೆ ಮದುವೆಯಾದರು ಎಂದು ತಮ್ಮ ಬಗ್ಗೆ ಟೀಕೆ ಮಾಡಿದ್ದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ರಾಜ್ಯಸಭೆಯಲ್ಲಿಯೇ ಇಂದು ತಿರುಗೇಟು ನೀಡದ್ದಾರೆ.

ಈ ಕುರಿತು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ದೇವೇಗೌಡ, ನಾನು ಸದನದಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ಖರ್ಗೆ ಅವರು ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ್ದಾರೆ. ಅವರು ನಾನೇನೂ ಅವರಿಗೆ, ಅವರ ಪಕ್ಷಕ್ಕೆ ದ್ರೋಹ ಬಗೆದಿದ್ದೇನೆ ಎಂದು ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಆದರೆ, ನಿಜವಾಗಿಯೂ ಕಾಂಗ್ರೆಸ್ ಪಕ್ಷದಿಂದ ದ್ರೋಹ ಆಗಿರುವುದು ನಮಗೆ, ನಮ್ಮ ಪಕ್ಷಕ್ಕೆ ಎಂದು ಎಂದು ಕೌಂಟರ್ ನೀಡಿದ್ದಾರೆ.
ಕಾಂಗ್ರೆಸ್ ನಮ್ಮ ಪಕ್ಷಕ್ಕೆ ಒಂದಲ್ಲ, ಎರಡಲ್ಲ, ಅನೇಕ ಬಾರಿ ದ್ರೋಹ ಮಾಡಿದೆ. ಅದರ ಬಗ್ಗೆ ನಾನು ಸಾಕ್ಷಿ ಸಹಿತವಾಗಿ ಮಾತನಾಡಬಲ್ಲೆ. ಅದೆಲ್ಲವನ್ನು ಮರೆಮಾಚಲು ಖರ್ಗೆ ನನ್ನ ವಿಷಯ ಎಳೆದು ತಂದಿದ್ದಾರೆ. ಅದಕ್ಕೆ ನಾನು ಉತ್ತರ ನೀಡಬೇಕಿದೆ ಎಂದು ಗರಂ ಆಗಿದ್ದಾರೆ.
ಈ ಸಂದರ್ಭದಲ್ಲಿ ಹಿಂದಿನ ತಮ್ಮರಾಜಕೀಯ ದಿನಗಳನ್ನು ಮೆಲುಕು ಹಾಕಿ, ನಿಜಲಿಂಗಪ್ಪ, ದೇವರಾಜ ಅರಸು, ಬಂಗಾರಪ್ಪ ಅವರಿಗೆ ಏನಾಯಿತು ಎಂಬುದು ಮಲ್ಲಿಕಾರ್ಜುನ ಖರ್ಗೆ ಅವರಿಗೂ ಗೊತ್ತಿದೆ. ಅವರು ಹೇಗೆ ಅಧಿಕಾರ ಕಳೆದುಕೊಂಡರು ಎಂಬುದನ್ನು ಖರ್ಗೆ ಅವರು ಹೇಳಬೇಕಾಗುತ್ತದೆ. ಅವರೆಲ್ಲರೂ ಅಧಿಕಾರ ಕಳೆದುಕೊಂಡಿದ್ದಕ್ಕೆ ನಾವು ಸಾಕ್ಷಿಗಳಾಗಿದ್ದೆವು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ : ಮಧ್ಯಪ್ರಾಚ್ಯ ಸಂಘರ್ಷದ ನಡುವೆ ಭಾರತಕ್ಕೆ ಇರಾನ್ ಕೃತಜ್ಞತೆ
ಮಲ್ಲಿಕಾರ್ಜುನ ಖರ್ಗೆ ಒಳ್ಳೆಯ ವ್ಯಕ್ತಿ. ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕೆಂದು ನಾವೆಲ್ಲರೂ ಆಶಿಸಿದ್ದೆವು. ಆದರೆ, ಅವರ ಸ್ವಂತ ಪಕ್ಷವೇ ಅವರನ್ನು ಸಿಎಂ ಆಗಲು ಬಿಡಲಿಲ್ಲ ಎಂಬ ಸಂಗತಿಯನ್ನು ಮಾಜಿ ಪ್ರಧಾನಿ ರಾಜ್ಯಸಭೆಯಲ್ಲಿ ಕೆದಕಿದ್ದಾರೆ.
ನಿಜ ಹೇಳಬೇಕು ಎಂದರೆ, ನನ್ನ ಮತ್ತು ನರೇಂದ್ರ ಮೋದಿ ಅವರ ನಡುವಿನ ಮೈತ್ರಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಶುರುವಾಗಿದ್ದಲ್ಲ. 2014ರಲ್ಲಿಯೇ ಆರಂಭವಾಯಿತು. ನಾನು ಅವತ್ತಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ವಿರುದ್ಧ ಪ್ರಚಾರ ನಡೆಸಿದ್ದೆ. ಅವರ ಬಗ್ಗೆ ಅತ್ಯಂತ ಕಟುವಾಗಿ ಮಾತನಾಡಿದ್ದೆ. ಅವರು ಅಧಿಕಾರಕ್ಕೆ ಬಂದರೆ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.
ಆದರೆ ಅವರು ಗೆದ್ದ ಬಳಿಕ ನಾನು ನಿಜವಾಗಿಯೂ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದೆ. ಆದರೆ, ಮೋದಿ ಹಾಗೆ ಮಾಡಬೇಡಿ ಎಂದು ತಡೆದರು. ನಾನು ಅವತ್ತಿನ ಅವರ ನಡಳಿವಳಿಕೆಯಿಂದ ಪ್ರಭಾವಿತನಾದೆ ಎಂದು ದೇವೇಗೌಡ ರಾಜೀನಾಮೆ ಸನ್ನಿವೇಶವನ್ನು ಬಿಚ್ಚಿಟ್ಟಿದ್ದಾರೆ.
ಆ ಘಟನೆ ನಡೆದ ನಂತರ ನಾನು ಅವರ ಮೈತ್ರಿಯಲ್ಲಿ ಇದ್ದೇನೆ. ರಾಷ್ಟ್ರಕ್ಕೆ ನರೇಂದ್ರ ಮೋದಿ ಅವರು ಸದೃಢ ನಾಯಕತ್ವ ನೀಡಿದ್ದಾರೆ. ಜನರು ಕೂಡ ಅವರ ಮೇಲೆ ಅಪರಿಮಿತ ವಿಶ್ವಾಸ ಇರಿಸಿ ಸತತವಾಗಿ ಆಯ್ಕೆ ಮಾಡುತ್ತಾ ಬರುತ್ತಿದ್ದಾರೆ. ಇದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಪ್ರಧಾನಿ ಕೊಂಡಾಡಿದ್ದಾರೆ.
2018ರಲ್ಲಿ ಕಾಂಗ್ರೆಸ್ ಪಕ್ಷದ ಜತೆ ನಮ್ಮ ಪಕ್ಷ ಮೈತ್ರಿಯಿದ್ದ ಕಾರಣಕ್ಕೆ ಹೆಚ್.ಡಿ. ಕುಮಾರಸ್ವಾಮಿ ಕರ್ನಾಟಕದ ಸಿಎಂ ಆಗದಂತೆ ತಡೆಯಿತು. ಆಗ ಮತ್ತೆ ಮನೆ ಬಾಗಿಲಿಗೆ ಬಂದು ಮೈತ್ರಿ ಹಸ್ತ ಚಾಚಿದ್ದ ಕಾಂಗ್ರೆಸ್ ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವಂತೆ ಒತ್ತಡ ಹೇರಿತ್ತು. ಮತ್ತೆ ಒಂದೇ ವರ್ಷದಲ್ಲಿ ಕಾಂಗ್ರೆಸ್ ನಮಗೆ ದ್ರೋಹ ಬಗೆಯಿತು. ಈ ಎಲ್ಲಾ ವಿವರಗಳು ಖರ್ಗೆ ಅವರಿಗೆ ಗೊತ್ತಿವೆ ಎಂದು ದೇವೇಗೌಡ ಕುಟುಕಿದ್ದಾರೆ.

ಈ ಸದನದಲ್ಲಿ ಖರ್ಗೆ ಮಾತನಾಡಿದ ಸಂದರ್ಭದಲ್ಲಿ ನಾನು ಹಾಜರು ಇರಲಿಲ್ಲ. ಯುಗಾದಿ ಹಬ್ಬ ದಕ್ಷಿಣ ಭಾರತದಲ್ಲಿಯೇ ದೊಡ್ಡ ಹಬ್ಬ, ಹೀಗಾಗಿ ನಾನು ಬೆಂಗಳೂರಿಗೆ ಹೋಗಬೇಕಿತ್ತು. ಆ ಸಂದರ್ಭದಲ್ಲಿ ಖರ್ಗೆ ನಮ್ಮ ಮತ್ತು ಮೋದಿ ಅವರ ನಡುವಿನ ಮೈತ್ರಿ ಬಗ್ಗೆ ಮಾತಾಡಿದ್ದಾರೆ. ಅದಕ್ಕೆ ನಾನು ಉತ್ತರ ಕೊಡಬೇಕಿತ್ತು ಎಂದು ಹೇಳಿದ್ದಾರೆ.
1962ರಲ್ಲಿ ನಾನು ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಉದ್ದೇಶಿಸಿದ್ದೆ. ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ಕೊಡುವುದಾಗಿ ಹೇಳಿತ್ತು. ನೀಲಂ ಸಂಜೀವರೆಡ್ಡಿ ಅವತ್ತಿನ ಎಐಸಿಸಿ ಅಧ್ಯಕ್ಷರಾಗಿದ್ದರು. ಆದರೆ, ನನಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತು. ನನ್ನ ರಾಜಕೀಯದ ಅಂತ್ಯಕಾಲದಲ್ಲಿ ನಾನಿದ್ದೇನೆ. ಈಗಲೂ ನಾನು ರಾಜ್ಯಸಭೆ ಸದಸ್ಯನಾಗಿ ಇಲ್ಲಿ ಕೂತಿದ್ದೇನೆ. ಇನ್ನೊಂದು ತಿಂಗಳಲ್ಲಿ ಈ ಸದಸ್ಯತ್ವದ ಅವಧಿ ಮುಗಿಯುತ್ತದೆ. ಹೀಗಾಗಿ ನಾನು ಖರ್ಗೆ ಅವರು ಎತ್ತಿರುವ ಪ್ರಶ್ನೆಗೆ ಉತ್ತರ ಕೊಡಬೇಕಿದೆ ಎಂದು ದೇವೇಗೌಡ ಗರಂ ಆಗಿದ್ದಾರೆ.





