ನೆರೆಯ ರಾಜ್ಯ ಕೇರಳದಲ್ಲಿ ಹೆಚ್ಚಾಗುತ್ತಿರುವ ನಿಫಾ ವೈರಸ್ ಸೋಂಕು ಕರ್ನಾಟಕದಲ್ಲೂ ಆತಂಕ ಉಂಟುಮಾಡಿದೆ. ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ 12 ವರ್ಷದ ಬಾಲಕ ನಿಫಾ ವೈರಸ್ ಗೆ ಬಲಿಯಾದ ಒಂದು ವಾರದ ನಂತರ, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಸೋಂಕು ಇರುವುದಾಗಿ ಶಂಕಿಸಲಾಗಿದೆ ಮತ್ತು ಆತನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಆರೋಗ್ಯ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕ್ ಚಂದ್ರ ಅವರ ಪ್ರಕಾರ, ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುವ ವ್ಯಕ್ತಿ ಸ್ಯಾಂಪಲ್ ಅನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ (NIV) ಪರೀಕ್ಷೆಗೆ ಕಳುಹಿಸುವವರೆಗೂ ಅವರಲ್ಲಿ ಯಾವುದೇ ತೀವ್ರ ಲಕ್ಷಣಗಳು ಕಂಡು ಬಂದಿರಲಿಲ್ಲ ಎನ್ನಲಾಗಿದೆ. ನಾವು ಜಾಗರೂಕರಾಗಿರಬೇಕು ಆದರೆ ಭಯಪಡುವ ಅಗತ್ಯವಿಲ್ಲ. ವ್ಯಕ್ತಿಯು ಇಲ್ಲಿಯವರೆಗೆ ಯಾವುದೇ ತೀವ್ರವಾದ ರೋಗಲಕ್ಷಣಗಳನ್ನು ವರದಿ ಮಾಡಿಲ್ಲ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಉಪ ಆಯುಕ್ತ ಡಾ.ಕೆ.ವಿ.ರಾಜೇಂದ್ರ ಅವರು ಮಂಗಳವಾರ (ಸೆಪ್ಟೆಂಬರ್ 14) ಸುದ್ದಿಗಾರರೊಂದಿಗೆ ಮಾತನಾಡಿ, ಇದು ಕೇವಲ ಶಂಕಿತ ಪ್ರಕರಣ, ಆದರೆ ನಿರ್ಲಕ್ಷಿಸಲಾಗದು ಎಂದು ತಿಳಿಸಿದ್ದಾರೆ. ಶಂಕಿತ ವ್ಯಕ್ತಿಯು ಕಾರವಾರ ಮೂಲದವರಾಗಿದ್ದು ಅವರು ಗೋವಾದ ಆರ್‌ಟಿ-ಪಿಸಿಆರ್ ಪರೀಕ್ಷಾ ಕಿಟ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ವ್ಯಕ್ತಿ ಸೆಪ್ಟೆಂಬರ್ 8 ರಂದು ಮಳೆಯಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಗೋವಾದಿಂದ ತನ್ನ ಊರಾದ ಕಾರವಾರಕ್ಕೆ ಬಂದಿದ್ದರು. ಈ ವೇಳೆ ಅವರು ಕೇವಲ ಜ್ವರ ಮತ್ತು ತಲೆನೋವಿನಿಂದ ಬಳಲುತ್ತಿದ್ದರು. ಇದಾದ ಬಳಿಕ ಅವರಲ್ಲಿ ನಿಫಾ ಸೋಂಕಿನ ಮಾದರಿಯಲ್ಲಿ ಕೆಲ ಲಕ್ಷಣಗಳು ಗೋಚರಿಸಿದೆ. ಹೀಗಾಗಿ ರಾಜ್ಯದಲ್ಲೂ ನಿಫಾ ಆತಂಕ ಮನೆ ಮಾಡಿದೆ. ಸದ್ಯ ಈ ಶಂಕಿತ ನಿಫಾ ಸೋಂಕಿತನ ಸ್ಯಾಂಪಲ್ ಅನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಿ ವರದಿಗಾಗಿ ಕಾಯಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಉಪ ಆಯುಕ್ತ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದ್ದಾರೆ.
ಆದಾಗ್ಯೂ, ಮುನ್ನೆಚ್ಚರಿಕೆಯ ಕ್ರಮವಾಗಿ, ಈ ಶಂಕಿತ ಸೋಂಕಿತನ ಆದ್ಯ ಸಂಪರ್ಕಿತರ ಪಟ್ಟಿಯಲ್ಲಿ ಆತನ ತಂದೆ ತಾಯಿಯನ್ನು ಗುರುತಿಸಿದ್ದು, ಇವರ ಸ್ಯಾಂಪಲ್‌ಗಳನ್ನು ಎನ್‌ಐವಿ ಗೆ ರವಾನಿಸಲಾಗಿದೆ. ಈ ಸ್ಯಾಂಪಲ್‌ಗಳ ವರದಿ ಬರುವವರೆಗೆ ಇವರನ್ನು ಕ್ವಾರಂಟೈನ್ ಮಾಡುವಂತೆ, ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ವಾಸ್ತವವಾಗಿ, ಕೇರಳದಲ್ಲಿ ನಿಫಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇರಳದಿಂದ ಬರುವವರ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ. ಅದ್ಯಾವಾಗ ಕೇರಳದಲ್ಲಿ ನಿಫಾ ಸೋಂಕು ದೃಢವಾಯಿತೋ ಆಗಲೇ ರಾಜ್ಯ ಸರ್ಕಾರ ಕೇರಳದ ಗಡಿ ಜಿಲ್ಲೆಗಳಲ್ಲಿ ವಿಶೇಷ ಕಣ್ಗಾವಲು ರೂಪಿಸಲು ಸೂಚನೆ ನೀಡಿತು. ಅದ್ರಲ್ಲೂ ಮುಖ್ಯವಾಗಿ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾವಹಿಸಲು ಸೂಚಿಸಲಾಗಿತ್ತು