ದೆಹಲಿಯಲ್ಲಿ ಗುರುವಾರ 411ರಷ್ಟಿದ್ದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) ಶುಕ್ರವಾರ ದಾಖಲೆಯ ಮತ್ತು ಅತ್ಯಂತ ಅಪಾಯಕಾರಿ ಮಟ್ಟವಾದ 471ಕ್ಕೆ ಏರಿದೆ. ದೀಪಾವಳಿ ಹಬ್ಬದ ಬಳಿಕ ಕಳೆದ ಎಂಟು ದಿನಗಳಲ್ಲಿ ಆರು ದಿನಗಳ ಕಾಲ AQI ಅಪಾಯಕಾರಿ ಮಟ್ಟದಲ್ಲಿದೆ.
ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ (ಡಿಪಿಸಿಸಿ) ವಿಶ್ಲೇಷಣೆಯ ಪ್ರಕಾರ, ರಾಷ್ಟ್ರ ರಾಜಧಾನಿಯ ಜನರು ಪ್ರತಿ ವರ್ಷ ನವೆಂಬರ್ 1 ರಿಂದ ನವೆಂಬರ್ 15 ರ ನಡುವೆ ಕೆಟ್ಟ ಗಾಳಿಯನ್ನು ಉಸಿರಾಡುತ್ತಾರೆ. ಫರಿದಾಬಾದ್ (460), ಗಾಜಿಯಾಬಾದ್ (486), ಗ್ರೇಟರ್ ನೋಯ್ಡಾ (478), ಗುರುಗ್ರಾಮ್ (448) ಮತ್ತು ನೋಯ್ಡಾ (488) ಸಹ ಸಂಜೆ 4 ಗಂಟೆಗೆ ತೀವ್ರ ಅಪಾಯಕಾರಿ ವಾಯು ಗುಣಮಟ್ಟವನ್ನು ದಾಖಲಿಸಿದೆ. ಅಲ್ಲದೆ ಗೋಚರತೆಯ ಪ್ರಮಾಣವೂ ಕೇವಲ 200 ಮೀಟರ್ನಷ್ಟಿದೆ. ಪಕ್ಕದಲ್ಲಿ ಸಂಚರಿಸುವ ವಾಹನವೂ ಸ್ಪಷ್ಟವಾಗಿ ಕಾಣಿಸದಷ್ಟು ಗೋಚರತೆ ಕಡಿಮೆ ಇತ್ತು.
ಶೂನ್ಯ ಮತ್ತು 50 ರ ನಡುವಿನ AQI ಅನ್ನು ‘ಉತ್ತಮ’ವೆಂದೂ, 51 ಮತ್ತು 100 ‘ತೃಪ್ತಿಕರ’ವೆಂದೂ, 101 ಮತ್ತು 200 ‘ಮಧ್ಯಮ’ವೆಂದೂ, 201 ಮತ್ತು 300 ‘ಕಳಪೆ’ಎಂದೂ, 301 ಮತ್ತು 400 ‘ಅತ್ಯಂತ ಕಳಪೆ’ ಮತ್ತು 401 ಮತ್ತು 500 ನಡುವಿನ AQIಯನ್ನು ‘ತೀವ್ರ ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ.

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ದೆಹಲಿ-ಎನ್ಸಿಆರ್ನಲ್ಲಿ PM2.5 ಎಂದು ಕರೆಯಲ್ಪಡುವ ಶ್ವಾಸಕೋಶಕ್ಕೆ ಹಾನಿ ಮಾಡುವ ಸೂಕ್ಷ್ಮ ಕಣಗಳ 24-ಗಂಟೆಗಳ ಸರಾಸರಿ ಸಾಂದ್ರತೆಯು ಗುರುವಾರ ಮಧ್ಯರಾತ್ರಿಯ ಹೊತ್ತಿಗೆ 300 ರ ಗಡಿಯನ್ನು ದಾಟಿತ್ತು ಮತ್ತು ಶುಕ್ರವಾರ ಸಂಜೆ 4 ಗಂಟೆಗೆ ಪ್ರತಿ ಘನ ಮೀಟರ್ಗೆ 381 ಮೈಕ್ರೋಗ್ರಾಂಗಳಷ್ಟಿತ್ತು. ಇದು 60 ಮೈಕ್ರೋಗ್ರಾಂಗಳ ಸುರಕ್ಷಿತ ಮಿತಿಗಿಂತ ಆರು ಪಟ್ಟು ಹೆಚ್ಚು. PM10 ಮಟ್ಟವು ಪ್ರತಿ ಘನ ಮೀಟರ್ಗೆ 577 ಮೈಕ್ರೋಗ್ರಾಂಗಳಷ್ಟು ದಾಖಲಾಗಿದೆ.
ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಪ್ರಕಾರ, PM2.5 ಮತ್ತು PM10 ಮಟ್ಟಗಳು ಕ್ರಮವಾಗಿ 48 ಗಂಟೆಗಳ ಕಾಲ ಪ್ರತಿ ಘನ ಮೀಟರ್ಗೆ 300 ಮೈಕ್ರೋಗ್ರಾಂಗಳು ಮತ್ತು 500 ಮೈಕ್ರೋಗ್ರಾಂಗಳಷ್ಟು ಘನ ಮೀಟರ್ಗಿಂತ ಹೆಚ್ಚಿದ್ದರೆ ಗಾಳಿಯ ಗುಣಮಟ್ಟವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
ಭಾರತೀಯ ಹವಾಮಾನ ಇಲಾಖೆ (IMD) ಯ ಅಧಿಕಾರಿಗಳ ಪ್ರಕಾರ ದೆಹಲಿಯಲ್ಲಿ ಶುಕ್ರವಾರ ಕನಿಷ್ಠ ತಾಪಮಾನ 12.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮತ್ತು ಮಂದವಾದ ಗಾಳಿಯು ನೆಲದ ಹತ್ತಿರ ಮಾಲಿನ್ಯಕಾರಕಗಳನ್ನು ಹಿಡಿದಿಟ್ಟುಕೊಳ್ಳುತ್ತಿದೆ. “ಮಧ್ಯಮ ಮಂಜಿನಿಂದಾಗಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸಫ್ದರ್ಜಂಗ್ ವಿಮಾನ ನಿಲ್ದಾಣದಲ್ಲಿ ಗೋಚರತೆಯ ಮಟ್ಟವು 200-500 ಮೀಟರ್ಗೆ ಇಳಿದಿದೆ. ಹೆಚ್ಚಿನ ಆರ್ದ್ರತೆಯಿಂದಾಗಿ ಶುಕ್ರವಾರ ಅದು (ಮಂಜು) ತೀವ್ರಗೊಂಡಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಗ್ರೀನ್ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್’ (ಸಿಎಸ್ಇ) ಕಳೆದ ಕೆಲವು ದಿನಗಳಿಂದ ದೆಹಲಿಯನ್ನು ಭಾದಿಸುತ್ತಿರುವ ಹೊಂಜು (ಹೊಗೆ+ ಮಂಜು) ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಾಗಿದೆ ಮತ್ತು ನಾಲ್ಕು ವರ್ಷಗಳಲ್ಲಿ ಇದು ದೀರ್ಘಾವಧಿಯದ್ದಾಗಿರಬಹುದು ಎಂದು ಹೇಳಿದೆ. ಸ್ಥಳೀಯ ಪರಿಸ್ಥಿತಿಗಳ ಹೊರತಾಗಿಯೂ ಈ ವರ್ಷ ಇಷ್ಟು ದೀರ್ಘಾವಧಿಗೆ ಹೊಂಜು ನೆಲೆಗೊಳ್ಳಲು ನಗರದಲ್ಲಿನ ಮಾಲಿನ್ಯ ನಿಯಂತ್ರಣ ಕ್ರಮಗಳ ಕೊರತೆಯೇ ಕಾತಣವಾಗಿರಬಹುದು ಎಂದು ಸಿಎಸ್ಇ ತನ್ನ ವರದಿಯಲ್ಲಿ ತಿಳಿಸಿದೆ.
ಮತ್ತೊಂದು ವರದಿಯಲ್ಲಿ, ಈ ವರ್ಷದ ಚಳಿಗಾಲದ ಆರಂಭಿಕ ಹಂತದಲ್ಲಿ ಅಂದರೆ ಅಕ್ಟೋಬರ್ 24 ರಿಂದ ನವೆಂಬರ್ 8 ರವರೆಗೆ ದೆಹಲಿಯ ಮಾಲಿನ್ಯಕ್ಕೆ ಶೇಕಡಾ 50 ಕ್ಕಿಂತ ಹೆಚ್ಚಿನ ಕೊಡುಗೆಯನ್ನು ನೀಡಿದೆ ಎಂದು ಹೇಳಲಾಗಿದೆ. ಹಾಗಾಗಿ ದೆಹಲಿಯಲ್ಲಿ ಮತ್ತೆ ಸಮ-ಬೆಸ ಸಂಖ್ಯೆಗಳ ವಾಹನ ನೀತಿ ಜಾರಿಗೆ ತರಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಸರ್ಕಾರ ಮತ್ತು ಪರಿಸರ ಇಲಾಖೆಯ ಸಲಹೆಯನ್ನೂ ಮೀರಿ ದೀಪಾವಳಿಯಂದು ಪಟಾಕಿ ಸಿಡಿಸಿದ್ದು, ವಾಹನಗಳ ಹೊಗೆ, ಅಕ್ಕ ಪಕ್ಕದ ರಾಜ್ಯಗಳಲ್ಲಿ ಸುಡುತ್ತಿರುವ ಕೃಷಿ ತ್ಯಾಜ್ಯಗಳೇ ವಾಯುಮಟ್ಟದಲ್ಲಿನ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಭೂ ವಿಜ್ಞಾನ ಸಚಿವಾಲಯದ ವಾಯು ಗುಣಮಟ್ಟ ಮುನ್ಸೂಚನಾ ಸಂಸ್ಥೆ SAFAR ಪ್ರಕಾರ, ನವೆಂಬರ್ 4 ರಿಂದ ಪ್ರಾರಂಭವಾದ ಒಂಬತ್ತು ದಿನಗಳ ಕಾಲ ದೆಹಲಿಯ PM2.5 ಮಾಲಿನ್ಯದ ಕನಿಷ್ಠ 25 ಪ್ರತಿಶತದಷ್ಟು ಮಾಲಿನ್ಯಕ್ಕೆ ಕೃಷಿ ತಾಜ್ಯ ಸುಡುವಿಕೆ ಕಾರಣವಾಗಿದೆ.

ಅಕ್ಕಿ ಮತ್ತು ಗೋಧಿ ಬೆಳೆಯುವ ಅಕ್ಕ ಪಕ್ಕದ ರಾಜ್ಯಗಳ ರೈತರು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಎಕರೆಗಟ್ಟಲೆ ಹೊಲಗಳಲ್ಲಿನ ಕೃಷಿ ತಾಜ್ಯವನ್ನು ಸುಡುತ್ತಾರೆ. ಇದರ ನೇರ ಪರಿಣಾಮ ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟದ ಮೇಲಾಗುತ್ಯದೆ. ದೆಹಲಿಯ ಮಾಲಿನ್ಯದಲ್ಲಿ ಕೃಷಿ ಬೆಂಕಿಯ ಪಾಲು ಭಾನುವಾರ 48 ಪ್ರತಿಶತಕ್ಕೆ ಏರಿದೆ.
ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ಧೂಳಿನ ಮಾಲಿನ್ಯವನ್ನು ನಿಯಂತ್ರಿಸುವ ಅಭಿಯಾನದ ಎರಡನೇ ಹಂತಕ್ಕೆ ಶುಕ್ರವಾರ ಚಾಲನೆ ನೀಡಿದರು.
ಗುರುವಾರ, ಅವರು ಸ್ಥಳೀಯ ಮೂಲಗಳಿಂದ ಮಾಲಿನ್ಯವನ್ನು ಮತ್ತಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ನಗರದಲ್ಲಿ ತ್ಯಾಜ್ಯ ಮತ್ತು ಜೈವಿಕ ವಸ್ತುಗಳನ್ನು ಬಹಿರಂಗವಾಗಿ ಸುಡುವುದನ್ನು ತಡೆಯಲು ಒಂದು ತಿಂಗಳ ಕಾಲ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ಮೊದಲನೇ ಹಂತಕ್ಕೆ ಚಾಲನೆ ನೀಡಿದ್ದರು. ಅಲ್ಲದೆ 114 ಟ್ಯಾಂಕರ್ ಮೂಲಕ ನೀರು ಸಿಂಪಡಿಸಿ ಮಾಲಿನ್ಯ ತಡೆಗೆ ಪ್ರಯತ್ನ ಮಾಡಲಾಗಿದೆ. ಮಾಲಿನ್ಯ ತಗ್ಗಿಸಲು 92 ಕಟ್ಟಡ ನಿರ್ಮಾಣಕ್ಕೂ ದಿಲ್ಲಿ ಸರ್ಕಾರ ತಡೆ ನೀಡಿದೆ.