ಪಾಂಡೆ ಕುಟುಂಬ ಮತ್ತು ವಕೀಲ ನಾರಾಯಣ್ ಅವರ ಹೇಳಿಕೆಗಳನ್ನು ನಿರಾಕರಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಬಲವಂತದ ಮದುವೆಗಳ ರೂವಾರಿಯಾಗಿರುವ ಅಭಿಷೇಕ್ ಪಲ್ಲವ್ “ಅವರು ಸುಳ್ಳು ಹೇಳುತ್ತಿದ್ದಾರೆ, ಅವರು ಮರಣೋತ್ತರ ಪರೀಕ್ಷೆಯ ವರದಿಯನ್ನು ಕೇಳಿರಲೇ ಇಲ್ಲ ”ಎಂದಿದ್ದಾರೆ. ಅಲ್ಲದೆ ಮರಣೋತ್ತರ ಪರೀಕ್ಷೆಯ ವರದಿಯನ್ನು ಕೋರ್ಟ್ ಆದೇಶ ಮಾಡಿದ ನಂತರ ಕುಟುಂಬ ಮತ್ತು ಗುಡ್ಸೆ ಗ್ರಾಮದ ಸರಪಂಚ್‌ಗೆ ಹಸ್ತಾಂತರಿಸಲಾಯಿತು ಎಂದಿದ್ದಾರೆ.
ಪಾಂಡೆ ಕವಾಸಿಯನ್ನು ಆಕೆಯ ಗ್ರಾಮದಿಂದಲೇ ಬಂಧಿಸಲಾಗಿತ್ತು. ಆಕೆಗೆ ಯಾವುದೇ ಸಂದರ್ಶಕರನ್ನು ನೋಡಲು ಅವಕಾಶ ನೀಡಿರಲಿಲ್ಲ. ಅಂತಿಮವಾಗಿ ಐದು ದಿನಗಳ ನಂತರ ಆಕೆ ಶವವಾಗಿ ಪತ್ತೆಯಾಗಿದ್ದಳು. ಆದರೆ ಪೊಲೀಸರು ಇದು ‘ಸ್ವಯಂಪ್ರೇರಿತ ಶರಣಾಗತಿ’ ಮತ್ತು ಬಂಧನವಲ್ಲ ಎಂದು ಹೇಳಿದ್ದರಿಂದ ಆಕೆಯ ಸಾವು ಕಾನೂನಿನ ಪ್ರಕಾರ ‘ಕಸ್ಟಡಿ ಸಾವು’ ಅಲ್ಲ.
ಪೊಲೀಸರು ಯಾವುದೇ ವ್ಯಕ್ತಿಯನ್ನು ಬಂಧಿಸಿದರೆ 24 ಗಂಟೆಗಳ ಒಳಗೆ ಹತ್ತಿರದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು. ಹಾಗೆ ಮಾಡಲು ವಿಫಲವಾದರೆ, ಬಂಧನವನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಆದರೆ ಶರಣಾಗತಿಯ ಸಂದರ್ಭದಲ್ಲಿ, ವ್ಯಕ್ತಿಯನ್ನು ಬಂಧನದಲ್ಲಿ ಇರಿಸಿದಾಗಲೂ ಪೊಲೀಸರು ಕಾನೂನುಬದ್ಧವಾಗಿಯೇ ತಮಗಿರುವ ಅಧಿಕಾರವನ್ನು ನಿರ್ದಾಕ್ಷಿಣ್ಯವಾಗಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕಾಗಿಯೇ ಹತ್ತಾರು ಮಂದಿಯ ಕಣ್ಣೆದುರೇ ಪಾಂಡೆ ಅವರನ್ನು ಬಂಧಿಸಿದರೂ ಅದನ್ನು ಶರಣಾಗತಿ ಎಂದು ಪೊಲೀಸರು ದಾಖಲಿಸಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ.

ಸುಪ್ರಿಂ ಕೋರ್ಟ್ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ವ್ಯಕ್ತಿಯೊಬ್ಬರು ಕಸ್ಟಡಿಯಲ್ಲಿದ್ದಾಗ ಮರಣಹೊಂದಿದರೆ ಅಥವಾ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಗಳಿದ್ದಾಗ ಅನುಸರಿಸಲೇಬೇಕಾದ ಮಾರ್ಗಸೂಚಿಗಳನ್ನು ರೂಪಿಸಿವೆ. ಈ ಎರಡೂ ಪ್ರಕರಣಗಳ ಅಡಿಯಲ್ಲಿ ಬರುವ ಕವಾಸಿ ಕೇಸಿನಲ್ಲಿ ಈ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ.
ಕಾನೂನಿನ ಪ್ರಕಾರ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಯ ಸೆಕ್ಷನ್ 176 (1A) ಅಡಿಯಲ್ಲಿ, ಕಸ್ಟಡಿಯಲ್ಲಿನ ಮರಣವನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪರಿಶೀಲಿಸಬೇಕು. ಆದರೆ ಕವಾಸಿಯ ಸಾವನ್ನು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಪರಿಶೀಲಿಸುತ್ತಿದ್ದಾರೆ.
ಈ ಬಗ್ಗೆ ಎಸ್‌ಡಿಎಂ ಅಬಿನಾಶ್ ಮಿಶ್ರಾ ಅವರನ್ನು ಸಂಪರ್ಕಿಸಿದಾಗ ಅವರು ವಿಚಾರಣೆಯನ್ನು ಮುಕ್ತಾಯಗೊಳಿಸಲಾಗಿದೆ ಮತ್ತು ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಪ್ರತಿ ಸಾಕ್ಷಿಗಳು, ಕವಾಸಿಯ ಕುಟುಂಬದವರು ಪೊಲೀಸರ ಮಾತನ್ನು ಬೆಂಬಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆ ನಡೆಸಿದ ಜಿಲ್ಲಾ ವೈದ್ಯಕೀಯ ವಿಭಾಗದ ಮುಖ್ಯಸ್ಥರೂ ಪೊಲೀಸರ ಪರ ನಿಂತಿದ್ದಾರೆ ಎಂದಿದ್ದಾರೆ. ಆತ್ಮಹತ್ಯೆಯ ಹಿಂದಿನ ಸಂಭವನೀಯ ಕಾರಣಗಳ ಬಗ್ಗೆ ಪ್ರತಿಕ್ರಿಯಿಸಿದ ಮಿಶ್ರಾ, “ತನಿಖೆಯ ಸಮಯದಲ್ಲಿ ಪೊಲೀಸರೊಂದಿಗೆ ಮುಖಾಮುಖಿಯಾದಾಗ ಮಾವೋವಾದಿಗಳು ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ತರಬೇತಿ ಪಡೆದುಕೊಂಡಿರುತ್ತಾರೆ” ಎಂದು ಹೇಳಿದ್ದಾರೆ.

ಆದರೆ ಹೀಗೆ ಹೇಳಿದ ಕೆಲವೇ ಗಂಟೆಗಳಲ್ಲಿ ಅವರ ಮಾತಿನ ಧಾಟಿ ಬದಲಾಗಿತ್ತು. ಸಂಜೆಯ ವೇಳೆಗೆ ಮಿಶ್ರಾ ಅವರು ಮೊದಲು ತಾನು ನೀಡಿದ ಹೇಳಿಕೆ ಸುಳ್ಳು ಮತ್ತು ಪಾಂಡೆ ಸಾವಿನ ಕುರಿತಾದ ವಿಚಾರಣೆ ಇನ್ನೂ ಬಾಕಿಯಿದೆ ಎಂದು ಹೇಳಿದರು. ಕವಾಸಿಯ ಕುಟುಂಬ ಮತ್ತು ವೈದ್ಯಕೀಯ ಅಧಿಕಾರಿಗಳನ್ನು ಇನ್ನೂ ಸಾಕ್ಷ್ಯ ಹೇಳಲು ಕರೆದಿಲ್ಲ ಎಂದು ಅವರು ಹೇಳಿದರು. ಇತರ ಎಂಟು ಕಸ್ಟಡಿ ಸಾವಿನ ಪ್ರಕರಣಗಳ ಬಗ್ಗೆ ಅವರು ವಿಚಾರಣೆ ನಡೆಸುತ್ತಿರುವುದರಿಂದ ‘ವಿವಿಧ ಪ್ರಕರಣಗಳ ವಿವರಗಳಲ್ಲಿ ಗೊಂದಲ ಉಂಟಾಯಿತು’ ಎಂದು ಅವರು ಪತ್ರಕರ್ತರಿಗೆ ಹೇಳಿದ್ದಾರೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (NCRB) ವರ್ಷಂಪ್ರತಿ ದೇಶದ ಎಲ್ಲಾ ಜೈಲುಗಳ ಮತ್ತು ಬಂಧಿತರಾದವರ ಡೇಟಾವನ್ನು ಸಂಗ್ರಹಿಸುತ್ತದೆ. ಆದರೆ ಹೀಗೆ ಡಿಟೆನ್ಷನ್ ಕೇಂದ್ರಗಳಲ್ಲಿ ಇರಿಸಲಾದ ಬಂಧಿತರ ಪೂರ್ವಾಪರ NCRBಯಲ್ಲಿ ದಾಖಲಾಗುವುದಿಲ್ಲ ಮತ್ತು ಬಂಧನಗಳ ಡೇಟಾವನ್ನು ಸಾರ್ವಜನಿಕವಾಗಿಯೂ ಪ್ರಕಟಿಸುವುದಿಲ್ಲ. ಕಾನೂನಿನ ಈ ಲೋಪದೋಷವನ್ನು ಬಳಸಿಕೊಂಡು ಅಧಿಕಾರ ಕೇಂದ್ರದಲ್ಲಿರುವವರು ಡಿಟೆನ್ಷನ್ ಕ್ಯಾಂಪ್‌ಗಳನ್ನು ಸ್ಥಾಪಿಸುತ್ತಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ಪಾಂಡೆ ಕವಾಸಿಯಂಥವರ ಸಾವುಗಳು ಇಂತಹ ಆರೋಪಕ್ಕೆ ಮತ್ತಷ್ಟು ಇಂಬು ಕೊಡುತ್ತವೆ. ಸೆರೆಮನೆಗಳನ್ನು ಹೋಲುವ ಇಂತಹ ಡಿಟೆನ್ಷನ್ ಕ್ಯಾಂಪ್‌ಗಳು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿಯೂ ಸರ್ಕಾರದ ಪೂರ್ಣಪ್ರಮಾಣದ ಅಭಯದೊಂದಿಗೆ ನಡೆಯುತ್ತಿದೆ ಎನ್ನುವುದು ಇಡೀ ವ್ಯವಸ್ಥೆಯ ದುರಂತ.
ಈ ಬಗ್ಗೆ ಮಾತನಾಡಿರುವ ಸೋರಿ “ಇದು ಕಾನೂನಿನ ಸ್ಪಷ್ಟ ದುರ್ಬಳಕೆಯಾಗಿದೆ. ಬಂಧಿಸಲ್ಪಟ್ಟವರು ನ್ಯಾಯಕ್ಕಾಗಿ ನ್ಯಾಯಾಲಯಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಯಾವುದೇ ಎಫ್‌ಐಆರ್ ಇಲ್ಲ, ಚಾರ್ಜ್‌ಶೀಟ್ ಇಲ್ಲ, ವಿಚಾರಣೆ ಇಲ್ಲ. ನಿರ್ದಿಷ್ಟ ಸಂಖ್ಯೆಯ ಜನರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ ಮತ್ತು ಈಗ ಪೊಲೀಸರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೋಲೀಸರ ಹೇಳಿಕೆ ನೀಡುತ್ತಾರೆ. ಇದೆಲ್ಲವೂ ಸರ್ಕಾರಿ ಪ್ರಾಯೋಜಿತ ಅಪರಾಧ” ಎನ್ನುತ್ತಾರೆ.

ವಿಶ್ವಸಂಸ್ಥೆಯ Body of Principles for the Protection of All Persons under Any Form of Detention or Imprisonment ನ ಹನ್ನೊಂದನೇ ನೀತಿಯು “ನ್ಯಾಯಾಂಗ ಅಥವಾ ಅಂತಹುದೇ ಸಂಸ್ಥೆಗೆ ತನ್ನ ಅಹವಾಲನ್ನು ಸಲ್ಲಿಸಲು ಅವಕಾಶ ನೀಡದೆ ಯಾವುದೇ ವ್ಯಕ್ತಿಯನ್ನು ಬಂಧನದಲ್ಲಿ ಇರಿಸಬಾರದು” ಎಂದು ಹೇಳುತ್ತದೆ. ಆದರೆ ಛತ್ತೀಸ್ಗಢ ಸರ್ಕಾರವು ಇಂತಹ ಬಂಧನ ಕೇಂದ್ರಗಳನ್ನು ಆರಂಭಿಸಿ ಈ ನಿಯಮವನ್ನೂ ಸ್ಪಷ್ಟವಾಗಿ ಉಲ್ಲಂಘಿಸಿದೆ.
ಆದರೆ ಈ ಬಗ್ಗೆ ಬೇರೆಯದೇ ಕಥೆ ಹೇಳುವ ಪೊಲೀಸ್ ಅಧೀಕ್ಷಕ ಪಲ್ಲವ್ ‘ಶಾಂತಿ ಕುಂಜ್’ನಲ್ಲಿ ಜನರ ವಾಸ್ತವ್ಯವು ಸ್ವಯಂಪ್ರೇರಿತವಾಗಿದೆ ಎನ್ನುತ್ತಾರೆ. ಆದರೆ ಪೊಲೀಸರ ಬೆಂಗಾವಲಿಲ್ಲದೆ ಅದರೊಳಗೆ ಯಾರನ್ನೂ ಪ್ರವೇಶಿಸಲು ಬಿಡುವುದಿಲ್ಲ. ಹಲವಾರು ಎಕ್ರೆ ಪ್ರದೇಶಗಳಲ್ಲಿ ಹರಡಿರುವ ಈ ಪೊಲೀಸ್ ಸಂಕೀರ್ಣದಲ್ಲಿರುವ ‘ಶಾಂತಿ ಕುಂಜ್’ಗೆ ತಲುಪಬೇಕೆಂದರೆ ಒಂದು ದೊಡ್ಡ ಬಯಲನ್ನು ದಾಟಿ ಬ್ಯಾರಿಕೇಡ್‌ಗಳನ್ನು ಹೊಂದಿರುವ ಜಿಲ್ಲಾ ಪೋಲೀಸ್ ಕೇಂದ್ರದ ಮೂಲಕ ಹಾದು ಹೋಗಬೇಕು. ಸ್ವಯಂ ಪ್ರೇರಿತವಾಗಿ ವಾಸಿಸುತ್ತಿರುವವರ ಮೇಲೆ ಇಷ್ಟೆಲ್ಲಾ ಕಣ್ಗಾವಲು ಯಾಕೆ ಬೇಕು ಎಂದು ಕೇಳಿದರೆ ಪೊಲೀಸರ ಬಳಿಯೇ ಉತ್ತರವಿಲ್ಲ. ಹೋಗಲಿ, ಅಲ್ಲಿನ ವ್ಯವಸ್ಥೆಯಾದರೂ ಸರಿ ಇದೆಯಾ ಎಂದರೆ ಅದೂ ಇಲ್ಲ. ಈ ಡಿಟೆನ್ಷನ್ ಸೆಂಟರ್‌ಗಳು ಸರಿಯಾಗಿ ಗಾಳಿಯಾಡಲೂ ಅವಕಾಶವಿಲ್ಲದ ಚಿಕ್ಕ ಕೊಠಡಿಗಳನ್ನು ಹೊಂದಿದೆ. ಅಲ್ಲೇ ವಿವಾಹವಾದ ಕೆಲವು ಜೋಡಿಗಳು ವಾಸಿಸುವ ಕೊಠಡಿಗಳಲ್ಲಿ ಹಾಸಿಗೆಗಳಿವೆ. ಉಳಿದವು ಯಾವ ಸವಲತ್ತುಗಳೂ ಇಲ್ಲದ ಖಾಲಿ ಕೊಠಡಿಗಳು.
ಕವಾಸಿಯ ಸಾವು, ಆಮೇಲಿನ ಪ್ರತಿಭಟನೆಯೂ ಆದಿವಾಸಗೆಳೆಡಿನ ಪೊಲೀಸರ ನಿಲುವನ್ನು ಬದಲಾಯಿಸಲಿಲ್ಲ ಎನ್ನುವುದು ಮತ್ತೊಂದು ದುರಂತ. ಶಾಂತಾಜೋಗಿಯ ಕುಟುಂಬವೂ ಆಕೆಯನ್ನೂ ಕ್ರೂರವಾಗಿ ನಡೆಸಲಾಯಿತು ಮತ್ತು ಶರಣಾಗುವಂತೆ ಒತ್ತಡ ಹೇರಲಾಯಿತು ಎಂದು ಆರೋಪಿಸಿದೆ. ಕವಾಸಿಯ ಮರಣದ ನಂತರ ಜೋಗಿಯ ಕುಟುಂಬ ಅವರನ್ನು ಭೇಟಿಯಾಗಲು ಎಷ್ಟು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಕ್ಟೋಬರ್ 29 ರಂದು ಜೋಗಿ ಕೂಡ ‘ಬಸ್ತಾರ್ ಫೈಟರ್ಸ್’ಗೆ ಸೇರಲು ತರಬೇತಿ ಪಡೆಯುತ್ತಿದ್ದಾರೆ ಎಂದು ಪಲ್ಲವ್ ಪತ್ರಕರ್ತರಿಗೆ ತಿಳಿಸಿದ್ದರು. ಈ ‘ಬಸ್ತಾರ್ ಫೈಟರ್’ ಎಂಬುವುದು ಹಿಂದೆ ನಕ್ಸಲ್ ಚಳವಳಿಯಲ್ಲಿದ್ದು ಆಮೇಲೆ ಪೊಲೀಸರಿಗೆ ಶರಣಾಗಿ ನಕ್ಸಲರ ವಿರುದ್ಧದ ಹೋರಾಟದಲ್ಲಿ ಪೊಲೀಸರಿಗೆ ಸಹಾಯ ಮಾಡುವವರ ಪಡೆ. “ಅವಳು ಟ್ರೈನಿಂಗಿನಲ್ಲಿ ಉತ್ತೀರ್ಣಳಾದರೆ, ಶೀಘ್ರದಲ್ಲೇ ಪಡೆಗೆ ಸೇರಲಿದ್ದಾಳೆ” ಎಂದು ಅವರು ಹೇಳಿದ್ದಾರೆ. ಆದರೆ ಜೋಗಿ ಅವರನ್ನು ಭೇಟಿಯಾಗದೆ, ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯದೆ ಪೊಲೀಸರ ಮಾತನ್ನು ನಂಬಲು ಸಾಧ್ಯವೇ ಇಲ್ಲ. ಗ್ರಾಮಸ್ಥರಿಗೆ ಜೋಗಿ ಬದುಕಿರುವುದರ ಬಗ್ಗೆಯೇ ಸಂಶಯಗಳಿವೆ. ಬಸ್ತಾರ್ ಫೈಟರ್ಸ್‌ಗೆ ಅವರನ್ನು ಸೇರಿಸಿರುವುದೇ ನಿಜ ಆಗಿದ್ದರೆ ಕುಟುಂಬಸ್ಥರಿಗೆ ಅವರನ್ನು ಭೇಟಿಯಾಗಲು ಯಾಕೆ ಅವಕಾಶ ನೀಡುವುದಿಲ್ಲ ಎನ್ನುವುದು ಗ್ರಾಮಸ್ಥರ ಪ್ರಶ್ನೆ.
ನಕ್ಸಲ್ ಶರಣಾಗತಿಯು ಭಾರತಕ್ಕೆ ಹೊಸದೇನಲ್ಲ, ವಿಶೇಷವಾಗಿ ಹಲವಾರು ದಶಕಗಳಿಂದ ಸಶಸ್ತ್ರ ಸಂಘರ್ಷದಿಂದ ಆಳವಾಗಿ ಪ್ರಭಾವಿತವಾಗಿರುವ ಮಧ್ಯ ಭಾರತದಲ್ಲಿ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿರುವ ಪ್ರಕ್ರಿಯೆಯಾಗಿದೆ. ಆದರೆ ಸರೆಂಡರ್ ನೀತಿಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಯೋಜನೆಯ ಅಡಿಯಲ್ಲಿ ಕೆಲವರು ವಿತ್ತೀಯ ಕೊಡುಗೆಗಳನ್ನು ಪಡೆದುಕೊಳ್ಳುತ್ತಾರೆ, ಕೆಲವರು ಪೋಲೀಸ್ ಅಥವಾ ಇತರ ಮಿತ್ರ ಪಡೆಗಳಿಗೆ ಸೇರ್ಪಡೆಯಾಗುತ್ತಾರೆ ಮತ್ತು ಕೆಲವರು ಶಾಂತಿ ಕುಂಜ್‌ನಂತಹ ಸ್ಥಳಗಳಲ್ಲಿ ಸೇರ್ಪಡೆಯಾಗುತ್ತಾರೆ. ಆದರೆ ನಕ್ಸಲರೇ ಅಲ್ಲದವರನ್ನು ಶರಣಾಗತಿಯ ಹೆಸರಿನಲ್ಲಿ ಡಿಟೆನ್ಷನ್ ಸೆಂಟರಿನಲ್ಲಿಡುವ ಅಮಾನವೀಯತೆ ಭಾರತಕ್ಕೆ ಹೊಸದು.
ನವೆಂಬರ್ 2019 ರಲ್ಲಿ ಚಿಕ್ಪಾಲ್ ಗ್ರಾಮದಲ್ಲಿ 27 ಪುರುಷರು ಮತ್ತು ಮಹಿಳೆಯರು ಶರಣಾಗಿದ್ದಾರೆ ಎಂದು ತೋರಿಸಲಾಗಿತ್ತು. ಮತ್ತು ಜನವರಿ 26, 2021 ರಲ್ಲಿ ಎರಡನೇ ಸುತ್ತಿನ ಶರಣಾಗತಿಯೆಂದು ಕೆಲವು ಹೆಸರುಗಳನ್ನು ಪ್ರದರ್ಶಿಸಲಾಯಿತು. ಆದರೆ ಗ್ರಾಮಸ್ಥರ ಪ್ರಕಾರ ಅವರಲ್ಲಿ ಯಾರೂ ನಕ್ಸಲರ ಜೊತೆ ಇದ್ದವರಲ್ಲ ಅಥವಾ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಒಮ್ಮೆಯೂ ದಾಖಲಾಗಿರಲಿಲ್ಲ. ಆದರೂ, ಅವರೆಲ್ಲರೂ ಶರಣಾಗುವಂತೆ ಒತ್ತಾಯಿಸಲಾಗಿತ್ತು. ಈ ಚಿಕ್ಪಾಲ್ ಎಂಬ ಹಳ್ಳಿಯು ಪ್ರತಿರೋಧದ ಸುದೀರ್ಘ ಇತಿಹಾಸವನ್ನು ಹೊಂದಿದೆ. ಸಿಆರ್‌ಪಿಎಫ್ ಗ್ರಾಮದ ಮಧ್ಯದಲ್ಲಿ ಶಿಬಿರವನ್ನು ಸ್ಥಾಪಿಸಲು ನಿರ್ಧರಿಸಿದಾಗ, ಗ್ರಾಮಸ್ಥರು ವಿರೋಧಿಸಿದ್ದರು. ಮತ್ತು ಈ ವಿರೋಧದ ಕಾರಣಕ್ಕಾಗಿ ಅಲ್ಲಿನ ಸರಪಂಚರಾದ ಜಿತೇಂದ್ರ ಮರ್ಕಮ್ ಅವರನ್ನೂ ಸೇರಿಸಿ ಹಲವರನ್ನು ಬಂಧಿಸಲಾಗಿತ್ತು. ಅಂತಿಮವಾಗಿ ಈ ಸಮರದಲ್ಲಿ CRPF ಮೇಲುಗೈ ಸಾಧಿಸಿತು ಮತ್ತು ಜಾನುವಾರುಗಳನ್ನು ಮೇಯಿಸಲು ಬಳಸುತ್ತಿದ್ದ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತ. ಈಗ, CRPF ಗ್ರಾಮ ಕೇಂದ್ರದಿಂದ ಕಾರ್ಯನಿರ್ವಹಿಸುತ್ತಿದೆ. ಕ್ಯಾಂಪ್ ಶುರುವಾದಂದಿನಿಂದ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಅನೇಕ ಗ್ರಾಮಸ್ಥರು ತಮ್ಮನ್ನು ತಡೆದು, ಬೆದರಿಕೆ ಹಾಕಲಾಗಿದೆ ಮತ್ತು ಹಲವಾರು ಸಂದರ್ಭಗಳಲ್ಲಿ ಪೊಲೀಸರು ಕ್ರೂರವಾಗಿ ವರ್ತಿಸಿದ್ದಾರೆಂದು ಹೇಳುತ್ತಾರೆ.
ಒಂದೆಡೆ ಪೊಲೀಸರು ಗ್ರಾಮಸ್ಥರಿಂದ ಸುಳ್ಳು ಶರಣಾಗತಿಯನ್ನು ಬಯಸುತ್ತಾರೆ ಮತ್ತು ಇನ್ನೊಂದೆಡೆ ಪೊಲೀಸರ ವಿರುದ್ಧ ಹೋರಾಡಬೇಕೆಂದು ನಕ್ಸಲರು ಬಯಸುತ್ತಾರೆ. ಅಲ್ಲಿನ ಗ್ರಾಮಸ್ಥರ ಸ್ಥಿತಿ ‘ಅತ್ತ ದರಿ ಇತ್ತ ಪುಲಿ’ ಎಂಬಂತಾಗಿದೆ. ಇದು ಚಿಕ್ಪಾಲ್ ಒಂದರ ಸಮಸ್ಯೆ ಅಲ್ಲ, ಭಾರತದ ಬಹುತೇಕ ಆದಿವಾಸಿಗಳಿರುವ, ಕಾಡಿನ ಅಂಚಿನ ಹಳ್ಳಿಗಳ, ನಕ್ಸಲ್ ಪೀಡಿತ ಪ್ರದೇಶದ ಜನ ಅನುಮಾನದ ಮತ್ತು ದೌರ್ಜನ್ಯದ ಬೀಜಗಳನ್ನು ಬೆನ್ನಿಗಂಟಿಸಿಕೊಂಡೇ ಬದುಕುತ್ತಾರೆ. ನಕ್ಸಲ್ ಬೆಂಬಲಿಗರೆಂದು ಪೊಲೀಸರೂ, ಪೊಲೀಸರ ಮಾಹಿತಿದಾರರೆಂದು ನಕ್ಸಲರೂ ಸದಾ ಅವರ ಮೇಲೊಂದು ಅನುಮಾನ ಕಣ್ಣು ಇಟ್ಟುಕೊಂಡೇ ಇರುತ್ತಾರೆ. ಬಹುಶಃ ನಮ್ಮ ಸಮಸಮಾಜದ ಕನಸು ಪೂರ್ತಿಯಾಗುವವರೆಗೂ ಈ ಪರಿಸ್ಥಿತಿ ಹೀಗೆಯೇ ಮುಂದುವರಿಯಲಿದೆ.
ಮುಗಿಯಿತು.