• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕ್ರೀಡೆ

ಕ್ರಿಕೆಟ್- ಮೌಢ್ಯ ಮತ್ತು ಬಂಡವಾಳಶಾಹಿ ಮಾರುಕಟ್ಟೆ‌ – ನಾ ದಿವಾಕರ ಅವರ ಬರಹ

ನಾ ದಿವಾಕರ by ನಾ ದಿವಾಕರ
November 25, 2023
in ಕ್ರೀಡೆ
0
ಕ್ರಿಕೆಟ್- ಮೌಢ್ಯ ಮತ್ತು ಬಂಡವಾಳಶಾಹಿ ಮಾರುಕಟ್ಟೆ‌ – ನಾ ದಿವಾಕರ ಅವರ ಬರಹ
Share on WhatsAppShare on FacebookShare on Telegram


ವಿಶ್ವಕಪ್‌ ಸೋಲು ಭಾರತದ ತಂಡಕ್ಕಿಂತಲೂ ಮಾರುಕಟ್ಟೆ ರಾಜಕಾರಣವನ್ನು ಹೆಚ್ಚು ಕಂಗೆಡಿಸಿದೆ

ADVERTISEMENT

ಆಧುನಿಕ ಸಮಾಜದ ಸಾಮಾನ್ಯ ಜನಜೀವನದಲ್ಲಿ ಮೌಢ್ಯ ಎನ್ನುವುದು ಹಲವು ಆಯಾಮಗಳಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಇಲ್ಲದಿರುವುದನ್ನು ಇದೆ ಎಂದು ಭಾವಿಸುವುದು, ಅಸಂಭವನೀಯವಾದುದನ್ನು ಸಂಭಾವ್ಯ ಎಂದು ನಂಬುವುದು, ಮನುಷ್ಯನ ಪ್ರಯತ್ನಗಳ ಸಾಧ್ಯಾಸಾಧ್ಯತೆಗಳಿಗೆ ಅತೀತ ಶಕ್ತಿಗಳು ಕಾರಣವಾಗುತ್ತವೆ ಅಥವಾ ಪ್ರಭಾವ ಬೀರುತ್ತವೆ ಎಂದು ನಂಬುವುದು, ಹೀಗೆ ಹಲವು ವಿಧಗಳಲ್ಲಿ ನಮ್ಮ ಸಮಾಜ ಮೌಢ್ಯದ ಚೌಕಟ್ಟುಗಳನ್ನು ನಿರ್ಮಿಸುತ್ತಲೇ ಇರುತ್ತದೆ. ವಿಜ್ಞಾನದ ಮುನ್ನಡೆ ಹಾಗೂ ವೈಜ್ಞಾನಿಕ ಸಂಶೋಧನೆಗಳು ಅತ್ಯುನ್ನತ ಹಂತವನ್ನು ತಲುಪಿ ಮನುಷ್ಯನ ಜ್ಞಾನ ಸಂಪತ್ತಿನ ವೃದ್ಧಿಗೆ ಪೂರಕವಾಗಿದ್ದರೂ, ಇಂದಿಗೂ ಸಹ ಸಾಂಪ್ರದಾಯಿಕ ಸಮಾಜದ ಅವೈಜ್ಞಾನಿಕ ನಂಬಿಕೆಗಳು ಸುಶಿಕ್ಷಿತರನ್ನೂ ಆವರಿಸಿರುವುದು ಸುಡು ವಾಸ್ತವ.

ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಈ ಅತೀತದಲ್ಲಿನ ನಂಬಿಕೆಗಳು ಸಾಮಾನ್ಯವಾಗಿ ಸಾಂತ್ವನದ ನೆಲೆಯಾಗಿ ಪರಿಣಮಿಸುತ್ತವೆ. ಸಂಭಾವ್ಯ ಫಲಿತಾಂಶದ ನಿರೀಕ್ಷೆಯಲ್ಲಿ ನಾಳೆಗಳನ್ನು ನೆಮ್ಮದಿಯಿಂದ ಕಳೆಯಲು ಶ್ರೀಸಾಮಾನ್ಯನಿಗೆ ಕೆಲವೊಮ್ಮೆ ಫಲಜೋತಿಷ್ಯದಂತಹ ಅವೈಚಾರಿಕ ನಂಬಿಕೆಗಳು ನೆರವಾಗುತ್ತವೆ. ಸಾಕ್ಷರತೆಯ ಪ್ರಮಾಣ ಕಡಿಮೆ ಇರುವ ಅಥವಾ ವೈಜ್ಞಾನಿಕ ಶಿಕ್ಷಣದ ಕೊರತೆ ಹೆಚ್ಚಾಗಿರುವ ಯಾವುದೇ ಸಾಂಪ್ರದಾಯಿಕ ಸಮಾಜದಲ್ಲಿ ಈ ವಿದ್ಯಮಾನ ಢಾಳಾಗಿ ಕಾಣುತ್ತದೆ. ಆಧುನಿಕ ಎನಿಸಿಕೊಳ್ಳುವ ಸಮಾಜದಲ್ಲೂ ಸಹ ಈ ನಂಬಿಕೆಗಳು ಉನ್ನತ ಸ್ತರದಲ್ಲಿ, ವಿಭಿನ್ನ ಆಯಾಮಗಳಲ್ಲಿ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡುಬರುತ್ತವೆ. ಅಮೃತ ಕಾಲದ ಭಾರತ ಈ ಎರಡು ಧ್ರುವಗಳ ನಡುವೆ ಇರುವ ಒಂದು ದೇಶವಾಗಿರುವುದರಿಂದಲೇ ಇಲ್ಲಿ ಮೂಢನಂಬಿಕೆಗಳು ಸಾರ್ವಜನಿಕ ಸ್ವರೂಪ ಪಡೆದು ವಿಜೃಂಭಿಸುತ್ತವೆ.

ಸಾಮಾನ್ಯ ಪರಿಭಾಷೆಯಲ್ಲಿ ಮೌಢ್ಯಗಳನ್ನು ಹೀಗೆ ವಿಂಗಡಿಸಬಹುದು. ಧಾರ್ಮಿಕ-ಆಚರಣೆ ಕೇಂದ್ರಿತ ಮೌಢ್ಯ, ಸಾಮಾಜಿಕ- ಸಾಂಸ್ಕೃತಿಕ ಮೌಢ್ಯ ಮತ್ತು ವಿಶೇಷವಾಗಿ ರಾಜಕೀಯ ಮೌಢ್ಯ. ಭಾರತ ಕ್ರಿಕೆಟ್‌ ವಿಶ್ವಕಪ್‌ ಸೋತ ನಂತರದ ಬೆಳವಣಿಗೆಗಳನ್ನು ಗಮನಿಸಿದರೆ, ಈ ಮೂರೂ ಮೌಢ್ಯಗಳು ಒಂದು ಕ್ರೀಡೆಯ ಸುತ್ತ ಹೆಣೆದುಕೊಂಡಿರುವುದನ್ನು ಕಾಣಬಹುದು. ಭಾರತದ ಸೋಲಿಗೆ ಕಾರಣಗಳನ್ನು ಶೋಧಿಸುತ್ತಾ ಹೋದಂತೆ, ಕ್ರಿಕೆಟ್‌ ಎಂಬ ಕ್ರೀಡೆಯ ಹಿಂದಿರುವ ಸೂಕ್ಷ್ಮ ಕೌಶಲಗಳಿಗಿಂತಲೂ ಹೆಚ್ಚು ಚರ್ಚೆಗೊಳಗಾಗುತ್ತಿರುವುದು, ಕ್ರಿಕೆಟ್‌ ಜಗತ್ತಿಗೆ ಅತೀತವಾದ ಭಾವನಾತ್ಮಕ ಕಾರಣಗಳು ಅಥವಾ ಊಹಾತ್ಮಕ ಕಾರಣಗಳು. ಹಾಗಾಗಿಯೇ ಹೋಮ , ಯಜ್ಞ , ಪೂಜೆ , ಅಭಿಷೇಕ , ಶಕುನ-ಅಪಶಕುನ ಇತ್ಯಾದಿಗಳು ಹೆಚ್ಚು ಚರ್ಚೆಗೊಳಗಾಗುತ್ತಿವೆ.

ಕ್ರಿಕೆಟ್‌ ಸುತ್ತಲಿನ ಮೌಢ್ಯದ ಪರದೆ

ಒಂದು ಕ್ರಿಕೆಟ್‌ ಪಂದ್ಯದ ಫಲಿತಾಂಶ ನಿರ್ಧಾರವಾಗುವುದು ನಿರ್ದಿಷ್ಟ ಪಂದ್ಯವನ್ನು ಆಡುವ 22 ಗಜ ವಿಸ್ತೀರ್ಣದ ಪಿಚ್‌, ಭಾಗವಹಿಸುವ ತಂಡದ ಕೌಶಲ-ಸಾಮರ್ಥ್ಯ-ಪಂದ್ಯದ ದಿನದಂದು ಆಟಗಾರರಲ್ಲಿರುವ ಧೋರಣೆ ಮತ್ತು ಇಡೀ ತಂಡದ ಗೇಮ್‌ ಪ್ಲಾನ್. ಟಾಸ್‌ ಗೆದ್ದರೆ ಮೊದಲು ಬ್ಯಾಟಿಂಗ್‌ ಮಾಡುವುದೋ, ಫೀಲ್ಡಿಂಗ್‌ ಆಯ್ಕೆ ಮಾಡುವುದೋ ಎನ್ನುವುದರಿಂದ ಹಿಡಿದು, ಬ್ಯಾಟರ್‌ಗಳನ್ನು ಕ್ಷೇತ್ರಕ್ಕಿಳಿಸುವ ಶ್ರೇಣೀಕರಣ, ಬೌಲರ್‌ಗಳನ್ನು ಬಳಸುವ ವಿಧಾನ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಅನುಸರಿಸುವ ಜಾಣ್ಮೆಯ ವಿಧಾನಗಳು ಬಹುತೇಕ ಪಂದ್ಯಗಳ ಫಲಿತಾಂಶದಲ್ಲಿ ನಿರ್ಣಾಯಕವಾಗುತ್ತದೆ. ವಾತಾವರಣಕ್ಕೆ ಅನುಗುಣವಾಗಿ ವರ್ತಿಸುವ ಪಿಚ್‌ನಲ್ಲಿ ಆಡುವಾಗ ಬ್ಯಾಟರ್‌ಗಳು ಹೇಗೆ ತಮ್ಮ ಆಟದ ಶೈಲಿಯನ್ನು ಹೊಂದಿಸಿಕೊಳ್ಳುತ್ತಾರೆ ಅಥವಾ ಬೌಲರ್‌ಗಳು ಹೇಗೆ ಚೆಂಡು ಎಸೆಯುವ ಶೈಲಿಯನ್ನು ನಿರ್ಧರಿಸುತ್ತಾರೆ ಎನ್ನುವುದು ಪಂದ್ಯದ ನಿರ್ಣಾಯಕ ಘಟ್ಟ ಆಗುತ್ತದೆ. ಯಾವುದೇ ತಂಡ ಗೆದ್ದರೂ ಪರಿಗಣಿಸಬೇಕಾದ್ದು ಇಷ್ಟನ್ನೇ. 1983ರಲ್ಲಿ ಬಲಾಢ್ಯ ವೆಸ್ಟ್‌ ಇಂಡೀಸ್‌ ತಂಡವನ್ನು ಸೋಲಿಸಿದಾಗ ಕಪಿಲ್‌ ದೇವ್‌ ಮುಂದಾಳತ್ವದ ಭಾರತ ಕ್ರಿಕೆಟ್‌ ತಂಡದ ಕಾರ್ಯತಂತ್ರವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

ಆದರೆ 2023ರ ವಿಶ್ವಕಪ್‌ ಸೋಲಿನ ಪರಾಮರ್ಶೆಯಲ್ಲಿ ಈ ಕ್ರೀಡಾ ಕೇಂದ್ರಿತ ಅಂಶಗಳೆಲ್ಲವೂ ನೇಪಥ್ಯಕ್ಕೆ ಸರಿದು ವ್ಯಕ್ತಿಗತ ನೆಲೆಯಲ್ಲಿ ಕಾರಣಗಳನ್ನು ಶೋಧಿಸಲಾಗುತ್ತಿದೆ. ಆಧುನಿಕ ಕ್ರಿಕೆಟ್‌ ಆಟವನ್ನು ಬಲ್ಲ ಪರಿಣತರ, ಅನುಭವಿಗಳ ಆವರಣದಿಂದ ಮಾರುಕಟ್ಟೆಯ ಅಂಗಳಕ್ಕೆ ತಂದಿಟ್ಟು ನಡೆಸಲಾಗುತ್ತಿರುವ ಚರ್ಚೆಯಲ್ಲಿ ರಾಜಕೀಯ/ವ್ಯಕ್ತಿಗತ ನೆಲೆಯಲ್ಲಿ ಪಂದ್ಯದ ಫಲಿತಾಂಶಗಳನ್ನು ಪರಾಮರ್ಶಿಸಲಾಗುತ್ತಿರುವುದು ವಿಡಂಬನೆಯಾದರೂ ವಾಸ್ತವ. ಈ ವಿಡಂಬನೆಯಲ್ಲಿ ಢಾಳಾಗಿ ಕಾಣುವುದು ರಾಜಕೀಯ ದೋಷಾರೋಪಗಳು. ಪ್ರಧಾನಿ ನರೇಂದ್ರ ಮೋದಿ ಪಂದ್ಯದ ವೇಳೆ ಉಪಸ್ಥಿತರಿದ್ದುದೇ ಒಂದು ಅಪಶಕುನ ಎಂದು ಆರೋಪಿಸುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ಮೌಢ್ಯಪ್ರಸರಣಕ್ಕೆ ಚಾಲನೆ ನೀಡಿದ್ದಾರೆ. ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಇದಕ್ಕೆ ದನಿಗೂಡಿಸಿದ್ದಾರೆ. ಇದನ್ನೂ ಮೀರಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾಸ್‌, ದಿವಂಗತ ಪ್ರಧಾನಿ ಇಂದಿರಾಗಾಂಧಿಯವರ ಹುಟ್ಟುಹಬ್ಬದ ದಿನ ಪಂದ್ಯ ಏರ್ಪಡಿಸಿದ್ದೇ ಭಾರತ ಸೋಲಲು ಕಾರಣ ಎಂದು ಹೇಳುವ ಮೂಲಕ ರಾಜಕೀಯ ಮೌಢ್ಯದ ಹೊಸ ಬಾಗಿಲುಗಳನ್ನು ತೆರೆದಿಟ್ಟಿದ್ದಾರೆ. ಇದಕ್ಕೂ ಮುನ್ನ ಭಾರತದ ದೃಶ್ಯ ಮಾಧ್ಯಮಗಳೂ ಸಹ ಭಾರತದ ಸೋಲಿನ ಕಾರಣಗಳನ್ನು ಅರಸುತ್ತಾ ನಡೆಸಿದ ಸಾರ್ವಜನಿಕ ಸಂದರ್ಶನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಕ್ರೀಡಾಂಗಣವನ್ನು ಫೈನಲ್‌ ಪಂದ್ಯಕ್ಕೆ ಆಯ್ಕೆ ಮಾಡಿದ್ದೇ ಭಾರತದ ಸೋಲಿಗೆ ಕಾರಣ ಎಂಬ ಅದ್ಭುತ ಸಂಶೋಧನೆಗಳೂ ಕೇಳಿಬರುತ್ತವೆ. ಈ ನಿಟ್ಟಿನಲ್ಲಿ ಪ್ರಗತಿಪರ ಎನಿಸಿಕೊಳ್ಳುವ ಕೆಲವು ʼ ಕ್ರಿಕೆಟ್‌ ʼ ಪ್ರೇಮಿಗಳೂ ಸಹ ಪ್ರಧಾನಿ ಮೋದಿ ಅವರನ್ನು ವಿರೋಧಿಸುವ ಅತ್ಯುತ್ಸಾಹದಲ್ಲಿ, ರಾಹುಲ್‌ ಉವಾಚವನ್ನು ಅನುಮೋದಿಸುತ್ತಿರುವುದನ್ನು ಗಮನಿಸಬಹುದು.

ಜಾತಿ ಶ್ರೇಣಿಗಳ ಚೌಕಟ್ಟಿನಲ್ಲಿ ಕ್ರಿಕೆಟ್‌

ಅಷ್ಟಕ್ಕೇ ನಿಲ್ಲದೆ ಈಗ ಕ್ರಿಕೆಟ್‌ ಕ್ರೀಡಾಂಗಣದಿಂದ ಜಾತಿ ರಾಜಕಾರಣದ ಚೌಕಟ್ಟಿನಲ್ಲಿ ಬಂದು ನಿಂತಿದೆ. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವುದಕ್ಕೂ, ಎಲ್ಲ ವಿದ್ಯಮಾನಗಳನ್ನೂ ಜಾತಿ ಮಸೂರದ ಮೂಲಕವೇ ನೋಡುವುದಕ್ಕೂ ಸಾಕಷ್ಟು ಅಂತರವಿದೆ. ಕ್ರಿಕೆಟ್‌ನಲ್ಲಿ ಮೀಸಲಾತಿ ನೀತಿ ಅನುಸರಿಸಿದ್ದಲ್ಲಿ ಭಾರತ ವಿಶ್ವಕಪ್‌ ಸೋಲುತ್ತಿರಲಿಲ್ಲ ಎಂಬ ಒಂದು ವ್ಯಾಖ್ಯಾನವೂ ʼಪ್ರಗತಿಪರ ʼ ವಲಯದಿಂದಲೇ ಕೇಳಿಬಂದಿರುವುದರಿಂದ, ವಸಾಹತುಶಾಹಿ ಜೂಜುಕಟ್ಟೆ ಎಂದೇ ಕರೆಯಲಾಗುವ ಒಂದು ಬಂಡವಾಳಶಾಹಿ ಕ್ರೀಡೆಯನ್ನು ಜಾತಿ ಪ್ರಾತಿನಿಧ್ಯದ ನೆಲೆಯಲ್ಲಿ ತಂದು ನಿಲ್ಲಿಸಿದೆ. ವಾಟ್ಸಾಪ್‌ ವಿಶ್ವವಿದ್ಯಾಲಯದ ಹೊಸ ಪರಿಸರದಲ್ಲಿ ತಮ್ಮ ಅಸ್ತಿತ್ವವನ್ನೂ ಗುರುತಿಸಿಕೊಳ್ಳುತ್ತಿರುವ ಕೆಲವು ಪ್ರಗತಿಪರ ಮನಸುಗಳಾದರೂ ಕ್ರಿಕೆಟ್‌ ಫಲಿತಾಂಶಗಳನ್ನು ಜಾತಿ ಮಸೂರ ತೊಟ್ಟು ನೋಡುತ್ತಿರುವುದು ದುರದೃಷ್ಟಕರ. ಭಾರತದ ಎರಡು ವಿಶ್ವಕಪ್‌ ಗೆಲುವುಗಳಲ್ಲೂ ಸಹ ಜಾತಿ ಸೂಚಕವನ್ನು ನೋಡುವ ಮಟ್ಟಿಗೆ ಸಾಮಾಜಿಕ ಮಾಧ್ಯಮಗಳು ನಮ್ಮೊಳಗಿನ ಸಾಮಾಜಿಕ ಸೂಕ್ಷ್ಮತೆಯನ್ನು ಶಿಥಿಲಗೊಳಿಸಿರುವುದು ದುರಂತ.

ಈ ನಡುವೆಯೇ ಕ್ರಿಕೆಟ್‌ ತಂಡದಲ್ಲಿ ಮೀಸಲಾತಿಗಾಗಿ ಕೂಗು ಸಹ ಕೇಳಿಬರುತ್ತಿದೆ. ನಿಜ 19ನೆಯ ಶತಮಾನದ ಆದಿಯಲ್ಲಿ ವಸಾಹತು ಭಾರತದ ತಂಡವನ್ನು ಪ್ರತಿನಿಧಿಸಿದ ಪಲ್ವಾಂಕರ್‌ ಬಾಲೂ ( ಈ ಪ್ರತಿಭಾವಂತ ಬೌಲರ್‌ ಡಾ. ಅಂಬೇಡ್ಕರ್‌ ಅವರ ಅನುಯಾಯಿಯೂ, ಸಹ ಹೋರಾಟಗಾರರೂ ಆಗಿದ್ದರು ) ಎಂಬ ಅಸಾಧಾರಣ ದಲಿತ ಕ್ರಿಕೆಟಿಗನಿಂದ ಇಂದಿನವರೆಗೂ ಈ ಕ್ರೀಡೆ ಸಮಾಜದ ಮೇಲ್ವರ್ಗದ, ಮೇಲ್ಪದರದ ಕ್ರೀಡೆಯಾಗೇ ಉಳಿದಿದೆ. ಮೂಲತಃ ಕ್ರಿಕೆಟ್‌ ಒಂದು ಎಲೈಟ್‌ ಅಥವಾ ಮೇಲ್ಪದರ ಸಮಾಜದ ಕ್ರೀಡೆ. ಮಧ್ಯಮವರ್ಗದವರಿಗೂ ನಿಲುಕದ ಮಟ್ಟಿಗೆ ಕ್ರಿಕೆಟ್‌ ಇಂದು ಜಾಗತಿಕ ಮಾರುಕಟ್ಟೆಯೊಡನೆ ಬೆಸೆದುಕೊಂಡಿದೆ. ಭಾರತದ ತಳಸಮುದಾಯಗಳ ಆವರಣದಲ್ಲಿ ನಿಂತು ನೋಡಿದಾಗ, ಕ್ರಿಕೆಟ್‌ ಬಹುಮಟ್ಟಿಗೆ ಅನಪೇಕ್ಷಿತ ಕ್ರೀಡೆಯಾಗಿ ಕಾಣುತ್ತದೆ. ಏಕೆಂದರೆ ಇಂದಿಗೂ ಸಮರ್ಪಕವಾದ ಸಾಮಾಜಿಕ-ಸಾಂಸ್ಕೃತಿಕ ಅವಕಾಶಗಳೇ ಇಲ್ಲದೆ ಹಿಂದುಳಿದಿರುವ ಬಹುಸಂಖ್ಯಾತ ದಲಿತ ಸಮುದಾಯಕ್ಕೆ ಈ ಎಲೈಟ್‌ ಕ್ರೀಡೆ ಗಗನಕುಸುಮದಂತೆಯೇ ಕಾಣುತ್ತದೆ ಹೆಚ್ಚೆಂದರೆ ನೋಡಿ ಆಸ್ವಾದಿಸುವ ಮನರಂಜನೆಯಂತೆ ಕಾಣುತ್ತದೆ.

ಭಾರತದಲ್ಲಿ ಕ್ರಿಕೆಟ್‌ ಆಟವನ್ನು ನಿಯಂತ್ರಿಸುವ ಬಿಸಿಸಿಐ ಹಾಗೂ ರಾಜ್ಯಗಳ ಕ್ರಿಕೆಟ್‌ ಸಂಸ್ಥೆಗಳು ಮೂಲತಃ ಮಾರುಕಟ್ಟೆಗೆ ನೇರ ಸಂಪರ್ಕ ಹೊಂದಿರುವ ಬಂಡವಾಳಿಗ ಉದ್ಯಮವಾಗಿದ್ದು, ಈ ಸಂಸ್ಥೆಗಳಿಂದಾಚೆಗೆ ರಾಜ್ಯ ಮಟ್ಟದ-ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನ ಪ್ರವೇಶಿಸುವುದು ಅಸಾಧ್ಯವೇ ಆಗಿದೆ. ಈ ಕ್ರಿಕೆಟ್‌ ಮಂಡಲಿಗಳನ್ನು ನಿಯಂತ್ರಿಸುವ ರಾಜಕೀಯ ನೇತಾರರು-ಪಕ್ಷಗಳು, ಔದ್ಯಮಿಕ ಜಗತ್ತಿನೊಡನೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ತಮ್ಮ ಬಂಡವಾಳ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿವೆ. ಈ ಮಾರುಕಟ್ಟೆ ಪ್ರಕ್ರಿಯೆಯ ಫಲವೇ, ಆಟಗಾರರನ್ನು ಹರಾಜು ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುವ ಐಪಿಎಲ್‌ ಪಂದ್ಯಾವಳಿಗಳೂ ಆರಂಭವಾಗಿವೆ. ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪರಸ್ಪರ ವಿರುದ್ಧ ಸೆಣಸಾಡುವ ಕ್ರಿಕೆಟಿಗರು ಐಪಿಎಲ್‌ನಲ್ಲಿ ಒಂದು ಔದ್ಯಮಿಕ ಸಂಸ್ಥೆಯ ಪರವಾಗಿ ಒಂದೇ ತಂಡದಲ್ಲಿ ಆಡುವುದು ವಿಲಕ್ಷಣ ಎನಿಸಿದರೂ, ಮಾರುಕಟ್ಟೆಯ ಅನಿವಾರ್ಯತೆ.

ಮಾರುಕಟ್ಟೆ ಜಗುಲಿಯಲ್ಲಿ ಕ್ರಿಕೆಟ್‌

ಭಾರತ ಆಸ್ಟ್ರೇಲಿಯಾ ಫೈನಲ್‌ ಪಂದ್ಯದ ವೇಳೆ ವಿಶ್ವದಾದ್ಯಂತ ಜೂಜುಕಟ್ಟೆಗಳು ಮುಕ್ತವಾಗಿ ಕಾರ್ಯನಿರ್ವಹಿಸಿದ್ದು ಬೆಟ್ಟಿಂಗ್‌ ವ್ಯವಹಾರಗಳು ತಾರಕಕ್ಕೆ ತಲುಪಿದ್ದವು. 500ಕ್ಕೂ ಹೆಚ್ಚು ವೆಬ್‌ತಾಣಗಳು, 300ಕ್ಕೂ ಹೆಚ್ಚು ಮೊಬೈಲ್‌ Appಗಳು ಸಕ್ರಿಯವಾಗಿದ್ದವು. ನಿರ್ದಿಷ್ಟ ಆಟಗಾರ ಹೊಡೆಯುವ ರನ್‌ಗಳು, ಪಡೆಯುವ ವಿಕೆಟ್‌ಗಳು, ತಂಡಗಳು ಗಳಿಸುವ ಒಟ್ಟು ಮೊತ್ತ, ಟಾಸ್‌ ಗೆಲ್ಲುವ ಕಪ್ತಾನ , ಸೋಲು-ಗೆಲುವಿನ ಅಂತರ, ಜೊತೆಯಾಟಗಳು ಹೀಗೆ ಎಲ್ಲ ಆಯಾಮಗಳಲ್ಲೂ ಜೂಜು ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಗಳ ವಹಿವಾಟು ನಡೆದಿದೆ. ಜಾಗತಿಕ ಬೆಟ್ಟಿಂಗ್‌ ಮಾರುಕಟ್ಟೆಯಲ್ಲಿ ಭಾರತದ ಬೆಲೆ 45-50 ಪೈಸೆಯಾಗಿದ್ದರೆ ಆಸ್ಟ್ರೇಲಿಯಾದ ಬೆಲೆ 55-60 ಪೈಸೆ ಆಗಿತ್ತು. ಅಂದರೆ, ಭಾರತ ಗೆಲ್ಲುವುದೆಂದು ಬೆಟ್‌ ಕಟ್ಟಿದ ವ್ಯಕ್ತಿಗೆ ಭಾರತ ಗೆದ್ದರೆ 45 ರಿಂದ 50 ಸಾವಿರ ಹೆಚ್ಚಿನ ಗಳಿಕೆಯಾಗುತ್ತಿತ್ತು. ಟಾಸ್‌ ಗೆಲ್ಲುವುದರಲ್ಲಿ ಬೆಟ್ಟಿಂಗ್‌ ಕಟ್ಟಿ ಗೆದ್ದವರಿಗೆ 90 ಸಾವಿರ ರೂಗಳ ಗಳಿಕೆಯಾಗುತ್ತಿತ್ತು. ಮುಂಬೈ ಜೂಜು ಮಾರುಕಟ್ಟೆಯಲ್ಲೇ ಬೆಟ್ಟಿಂಗ್‌ ದಂಧೆಯ ಒಟ್ಟು ವಹಿವಾಟು 70 ಸಾವಿರ ಕೋಟಿ ರೂಗಳಷ್ಟಾಗಿದೆ ಎಂದು ವರದಿಯಾಗಿದೆ. ಹರಾಜು ಪ್ರಕ್ರಿಯೆಯ ಮೂಲಕವೇ ಚಾಲನೆ ಪಡೆಯುವ ಐಪಿಎಲ್‌ನಲ್ಲಿ ಪ್ರತಿಯೊಂದು ಬೌಂಡರಿ/ಸಿಕ್ಸರ್‌ ಸಹ ಬೆಟ್ಟಿಂಗ್‌ ದಂಧೆಯ ಸರಕುಗಳಾಗಿ ಪರಿಣಮಿಸುತ್ತವೆ.

ಇಂತಹ ಒಂದು ಕ್ರೀಡೆಯಲ್ಲಿ ಉನ್ನತ ಹಂತದ ಪ್ರವೇಶ ಪಡೆಯಬೇಕಾದರೆ ಎರಡು ಸಂಗತಿಗಳು ಮುಖ್ಯವಾಗುತ್ತದೆ. ಮೊದಲನೆಯದು ಕ್ರಿಕೆಟ್‌ ಕೌಶಲ/ಪ್ರತಿಭೆ ಮತ್ತು ಎರಡನೆಯದು ವ್ಯಕ್ತಿಗತ ಆರ್ಥಿಕ ಸ್ಥಿತಿಗತಿಗಳು. ಕ್ರಿಕೆಟ್‌ನಲ್ಲಿ ಮೀಸಲಾತಿ ಆಗ್ರಹಿಸುವ ಮುನ್ನ ಎರಡನೆಯ ಅಂಶವನ್ನು ಪ್ರಮುಖವಾಗಿ ಪರಿಗಣಿಸಬೇಕು. ಇಂದಿಗೂ ದಲಿತರಲ್ಲಿ ಅಸಂಖ್ಯಾತ ಯುವಕರಲ್ಲಿ ಅಗಾಧ ಕ್ರಿಕೆಟ್‌ ಕೌಶಲ ಇರಬಹುದು. ಆದರೆ ಲೀಗ್‌ ಹಂತದಿಂದಲೇ ಇವರ ಮುಂಚಲನೆಗೆ ಜಾತಿಯನ್ನೂ ಮೀರಿ ಅಡ್ಡಿಯಾಗುವುದು ಆರ್ಥಿಕ ಸ್ಥಿತಿಗತಿಗಳು. ಒಂದು ವೇಳೆ ಮೀಸಲಾತಿ ನೀತಿಯನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಅಳವಡಿಸಿದರೂ, ವಾಸ್ತವಿಕ ನೆಲೆಯಲ್ಲಿ ಎಷ್ಟು ದಲಿತ ಯುವಕರು ಈ ಎಲೈಟ್‌ ಕ್ರೀಡೆಯಲ್ಲಿ ಪ್ರವೇಶ ಪಡೆಯುವ ಹಣಕಾಸು ಸಾಮರ್ಥ್ಯ ಹೊಂದಿರಲು ಸಾಧ್ಯ ? ಪುನಃ ಇದು ನಗರೀಕರಣಕ್ಕೊಳಗಾದ, ಆಧುನಿಕ ಜಗತ್ತಿಗೆ ತೆರೆದುಕೊಂಡ, ಮೇಲ್ಪದರದ ವ್ಯಕ್ತಿಗಳಿಗೆ ಮಾತ್ರ ನಿಲುಕುವಂತಾಗುತ್ತದೆ. ಜಾತಿ ಸೂಚಕಗಳನ್ನು ಬದಿಗಿಟ್ಟು ನೋಡಿದರೂ ಆಧುನಿಕ ಕ್ರಿಕೆಟ್‌ ಮೇಲ್‌ ಮಧ್ಯಮ ವರ್ಗದ ಅಥವಾ ಮೇಲ್ಪದರದ ಸಮಾಜಕ್ಕೆ ಮಾತ್ರವೇ ನಿಲುಕುವ ಒಂದು ಮಾರುಕಟ್ಟೆ ಕೇಂದ್ರಿತ ಕ್ರೀಡೆಯಾಗಿ ರೂಪುಗೊಂಡಿರುವುದನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಿದೆ.

ಭಾರತ ಎರಡು ಬಾರಿ ವಿಶ್ವಕಪ್‌ ಗೆದ್ದಾಗಲೂ ಹಿಂದುಳಿದ ಜಾತಿಗೆ ಸೇರಿದವರ ನಾಯಕತ್ವವೇ ಇತ್ತು ಎನ್ನುವುದನ್ನು ಪ್ರಧಾನವಾಗಿ ತೋರಿಸುವ ಮೂಲಕ ಸಾಮಾಜಿಕ ಮಾಧ್ಯಮದ ವಾಟ್ಸಾಪ್‌ ವಿದ್ವಾಂಸರಿಗೂ, ಮೀಸಲಾತಿ ಜಾರಿಯಲ್ಲಿದ್ದಿದ್ದರೆ ಭಾರತ ಸೋಲುತ್ತಿರಲಿಲ್ಲ ಎಂಬ ವ್ಯಾಖ್ಯಾನಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಈ ಅತಿರೇಕಗಳನ್ನು ದಾಟಿ ನೋಡಿದಾಗ ನಮಗೆ ಢಾಳಾಗಿ ಕಾಣುವುದು ಅಸಂಖ್ಯಾತ ಅವಕಾಶವಂಚಿತ ಕ್ರೀಡಾಪಟುಗಳು. ಗ್ರಾಮಗಳಿಂದ ಮೆಟ್ರೋಪಾಲಿಟನ್‌ ನಗರಗಳವರೆಗೂ ಇರಬಹುದಾದ ಅಸಂಖ್ಯಾತ ಕ್ರಿಕೆಟ್‌ ಆಕಾಂಕ್ಷಿಗಳಿಗೆ ಮುಂಚಲನೆಯ ಅಥವಾ ಮೇಲ್‌ ಚಲನೆಯ ಅವಕಾಶಗಳನ್ನು ಎಲ್ಲಿ ಕಲ್ಪಿಸಿದ್ದೇವೆ. ಭಾರತದ ಮೂಲೆಮೂಲೆಗಳನ್ನು ಹುಡುಕಾಡಿದರೂ ಒಂದು “ ದಲಿತ ಕ್ರಿಕೆಟ್‌ ಅಕಾಡೆಮಿ ” ಕಾಣುವುದು ಸಾಧ್ಯವಿಲ್ಲ ಅಲ್ಲವೇ ? ಏಕೆ ಎಂಬ ಜಿಜ್ಞಾಸೆಯಾದರೂ ನಮ್ಮನ್ನು ಕಾಡಬೇಕಲ್ಲವೇ ? ಬಾಲೂ ಹೆಸರಿನಲ್ಲಾದರೂ ಇರಬೇಕಿತ್ತಲ್ಲವೇ ?

ಕ್ರಿಕೆಟ್‌ ಕ್ಲಬ್‌ಗಳು ನಮ್ಮಲ್ಲಿ ಹೇರಳವಾಗಿವೆ. ಅಲ್ಲಿ ಜಾತಿಗೋಡೆಗಳನ್ನು ಭೇದಿಸಿ ತರಬೇತಿ ನೀಡುವ ಒಂದು ಪ್ರವೃತ್ತಿ ಇರಲೂ ಸಾಧ್ಯ. ಆದರೆ ಕ್ಲಬ್‌ಗಳು ಸಾಮಾನ್ಯವಾಗಿ ವರ್ಗಕೇಂದ್ರಿತವಾಗಿರುತ್ತವೆ. ಅಲ್ಲಿ ಭಾಗವಹಿಸುವ ಆಕಾಂಕ್ಷಿಗಳ ವ್ಯಕ್ತಿಗತ ಆರ್ಥಿಕ ಸ್ಥಿತಿಗತಿಗಳು ಮುಖ್ಯವಾಗುತ್ತವೆ. ಇಲ್ಲಿಂದ ಹೊರಬರುವ ಅಸಾಧಾರಣ ಪ್ರತಿಭೆಗಳಿಗೆ ಉನ್ನತ ಮಟ್ಟದಲ್ಲಿ ಅವಕಾಶಗಳು ಲಭಿಸಬಹುದು ಆದರೆ ಸಮಾಜದ ಒಂದು ವರ್ಗಕ್ಕೆ ಅಥವಾ ಸಮುದಾಯಕ್ಕೆ ಇಲ್ಲಿನ ಪ್ರವೇಶ ದ್ವಾರಗಳೇ ತೆರೆದಿರುವುದಿಲ್ಲ. ವಿಶಾಲ ನೆಲೆಯಲ್ಲಿ ನಿಂತು ನೋಡಿದಾಗ ದಲಿತ ಸಮುದಾಯ ಎದುರಿಸುವ ಸವಾಲು ಇದು. ಈ ರೀತಿಯ ಅವಕಾಶವಂಚಿತರಿಗಾಗಿಯೇ ತೆರೆಯಬಹುದಾದ ಕ್ರಿಕೆಟ್‌ ಅಕಾಡೆಮಿಗಳು ಆರ್ಥಿಕವಾಗಿ ಕೆಳಸ್ತರದಲ್ಲಿರುವ ಯುವಕರಲ್ಲೂ ಅಡಗಿರಬಹುದಾದ ಅಗಾಧ ಪ್ರತಿಭೆಗಳನ್ನು ಹೊರಗೆಳೆಯಲು ಸಾಧ್ಯ.

ಕೌಶಲ-ಪ್ರತಿಭೆ ಮತ್ತು ಮಾರುಕಟ್ಟೆ

ಒಂದು ಬಂಡವಾಳಶಾಹಿ ವಾಣಿಜ್ಯ ಒಕ್ಕೂಟದಂತೆ ಕಾರ್ಯನಿರ್ವಹಿಸುವ ಬಿಸಿಸಿಐ ಅಥವಾ ರಾಜ್ಯ ಕ್ರಿಕೆಟ್‌ ಮಂಡಲಿಗಳಿಂದ ಈ ಪ್ರಯತ್ನವನ್ನು ನಿರೀಕ್ಷಿಸಲೂ ಆಗುವುದಿಲ್ಲ. ಇದು ಸಾಮಾಜಿಕ ಕಾಳಜಿಯೊಂದಿಗೆ ನಿರ್ವಹಿಸಬೇಕಾದ ಕರ್ತವ್ಯ. ಫೈನಲ್‌ ಪಂದ್ಯಕ್ಕೆ ಕಪಿಲ್‌ ದೇವ್‌ ಅವರನ್ನು ಆಹ್ವಾನಿಸದಿರುವ ಮಟ್ಟಕ್ಕೆ ರಾಜಕೀಯ ಸೂಕ್ಷ್ಮಗಳು ಒಳನುಸುಳಿರುವ ಬಿಸಿಸಿಐ ಸಂಸ್ಥೆಯಿಂದ ಅವಕಾಶವಂಚಿತರತ್ತ ಗಮನಹರಿಸುವ ಸಮಾಜಮುಖಿ ಧೋರಣೆಯನ್ನು ಅಪೇಕ್ಷಿಸುವುದು ದುಬಾರಿ ಎನಿಸಬಹುದು. ಹಾಗೆಯೇ ಭಾರತ ಕ್ರಿಕೆಟ್‌ ತಂಡದ ಪ್ರಸ್ತುತ ಸೋಲು ಗೆಲುವಿಗೆ ಅಥವಾ ಈವರೆಗಿನ ಸಾಧನೆಗಳಿಗೆ ಜಾತಿ ಸೂಚಕಗಳನ್ನು ಆರೋಪಿಸುವುದು ಬೌದ್ಧಿಕ ದೀವಾಳಿತನದ ಪ್ರತೀಕವೇ ಆಗುತ್ತದೆ. ಕೌಶಲ ಮತ್ತು ಸ್ವಪ್ರತಿಭೆಯೊಂದಿಗೆ ದೇಶದ ಘನತೆಯನ್ನು ಹೆಚ್ಚಿಸಿರುವ ಅನೇಕಾನೇಕ ಕ್ರಿಕೆಟ್‌ ಕಲಿಗಳ ನಡುವೆ ಜಾತಿ ಗೋಡೆಗಳನ್ನು ನಿರ್ಮಿಸುವುದು ವಿವೇಕಯುತ ಸಮಾಜದ ಲಕ್ಷಣವಲ್ಲ.

ಬಂಡವಾಳಶಾಹಿ ಆರ್ಥಿಕತೆಯ ಒಂದು ಭಾಗವಾಗಿ, ಕಾರ್ಪೋರೇಟ್‌ ಮಾರುಕಟ್ಟೆಯನ್ನು ಪೋಷಿಸುವ ಸಾಧನವಾಗಿ ರೂಪುಗೊಂಡಿರುವ ಕ್ರಿಕೆಟ್‌ ಇಂದು ಬೃಹತ್‌ ಉದ್ಯಮವಾಗಿದೆ. ಆದರೂ ನೂರಾರು ಪ್ರತಿಭೆಗಳಿಗೆ ಇದು ಆಶ್ರಯವಾಗಿದೆ. ಈ ಪ್ರತಿಭೆಗಳು ಎಲ್ಲಿಂದ ಬರುತ್ತಿವೆ ಎಂದು ನೋಡಿದಾಗ ನಗರೀಕರಣಕ್ಕೊಳಗಾದ, ಆಧುನಿಕತೆಯನ್ನು ರೂಢಿಸಿಕೊಂಡ, ಆರ್ಥಿಕವಾಗಿ ಸಬಲರಾದ ವರ್ಗಗಳಿಂದಲೇ ಬರುತ್ತಿರುವುದು ಸ್ಪಷ್ಟವಾಗುತ್ತದೆ. ಕ್ರಿಕೆಟ್‌ ಸಾಮ್ರಾಜ್ಯದ ಈ ಮೂಲ ಸ್ವರೂಪವನ್ನು ಬದಲಾಯಿಸದ ಹೊರತು, ಮೀಸಲಾತಿಯನ್ನೂ ಒಳಗೊಂಡಂತೆ ಯಾವುದೇ ರೀತಿಯ ಸುಧಾರಣೆಗಳೂ ಅವಕಾಶವಂಚಿತ ಕೆಳಸ್ತರದ ಸಮಾಜಕ್ಕೆ ನೆರವಾಗುವುದಿಲ್ಲ. ಔದ್ಯಮಿಕ ಸಾಮರ್ಥ್ಯ ಹಾಗೂ ಬಂಡವಾಳ ಇರುವವರು “ ದಲಿತ ಕ್ರಿಕೆಟ್‌ ಅಕಾಡೆಮಿ ”ಗಳನ್ನು ಸ್ಥಾಪಿಸುವ ಮೂಲಕ ಈ ಸಮಾಜಕ್ಕೆ ಹೊಸ ಬಾಗಿಲುಗಳನ್ನು ತೆರೆಯುವ ಪ್ರಯತ್ನಗಳನ್ನು ಮಾಡಬಹುದು. (ಹಾಲಿ ಭಾರತದಲ್ಲಿರುವ ಹತ್ತು ಪ್ರತಿಷ್ಠಿತ ಕ್ರಿಕೆಟ್‌ ಅಕಾಡೆಮಿಗಳಲ್ಲಿ ಮಾಸಿಕ ಶುಲ್ಕ ಕನಿಷ್ಠ 30 ಸಾವಿರ ರೂಗಳು.)

ರಾಜಕೀಯ ಪರಿಭಾಷೆಯ ಮೀಸಲಾತಿಗಿಂತಲೂ ಹೆಚ್ಚಾಗಿ ಇಲ್ಲಿ ಅಗತ್ಯವಾಗಿರುವುದು ಸುಪ್ತಪ್ರತಿಭೆಗಳ ಪ್ರವೇಶಾವಕಾಶಗಳ ಹಾಗೂ ಮೇಲ್‌ಚಲನೆಯ ಸಾಧ್ಯತೆಗಳು. ಹೀಗೆ ಅವಕಾಶ ಪಡೆಯುವ ಉತ್ಕೃಷ್ಟ ಪ್ರತಿಭೆಗಳೂ ಅಂತಿಮವಾಗಿ ಐಪಿಎಲ್‌ ಹರಾಜುಕಟ್ಟೆಯಲ್ಲಿ ತಮಗೆ ದೊರೆಯುವ ಮಾರುಕಟ್ಟೆ ಮೌಲ್ಯದ ಆಕಾಂಕ್ಷಿಗಳಾಗಿಬಿಟ್ಟರೆ ? ಆಗ ಕ್ರಿಕೆಟ್‌ ಎಂಬ ಕ್ರೀಡೆ ಮತ್ತೊಮ್ಮೆ ಪೆವಿಲಿಯನ್‌ನಲ್ಲಿ ವೀಕ್ಷಕನಾಗಿ ಕುಳಿತುಕೊಳ್ಳಬೇಕಾಗುತ್ತದೆ ಅಲ್ಲವೇ ? ಇದು ಗಂಭೀರವಾಗಿ ಯೋಚಿಸಬೇಕಾದ ವಿಚಾರ.

-೦-೦-೦-೦-

Tags: BJPCongress Partyಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಸಂವಿಧಾನ ದಿನದಂದು ‘ಮಂತ್ರ ಮಾಂಗಲ್ಯ’ : ಚಾಮರಾಜನಗರ ಎಡಿಸಿ’ಯಿಂದ ಮಾದರಿ ನಡೆ

Next Post

ಅಮಿತ್ ಶಾ, ಮೋದಿ ಇಬ್ಬರು ನನ್ನ ಜೀವ ತೆಗೆದರು : ವಿ ಸೋಮಣ್ಣ ಬೇಸರ

Related Posts

Top Story

Neeraj Chopra: ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬೇಟಿ ಮಾಡಿದ ನೀರಜ್‌ ಚೋಪ್ರ..!!

by ಪ್ರತಿಧ್ವನಿ
July 3, 2025
0

ಅವಳಿ ಒಲಿಂಪಿಕ್ಸ್ ಪದಕ ವಿಜೇತ, ವಿಶ್ವದ ನಂಬರ್ ಒನ್ ಜಾವೆಲಿನ್ ಎಸೆತಗಾರರಾದ ನೀರಜ್ ಚೋಪ್ರಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಇಂದು ಸೌಹಾರ್ದ ಭೇಟಿ ಮಾಡಿದರು....

Read moreDetails
ಶಾಸಕ ಸುನೀಲ್ ಕುಮಾರ್ ಅವರಿಂದ ನೈತಿಕ ಪಾಠ ಕಲಿಬೇಕಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು

ಜನಪರ ಚಿಂತನೆ ಹೊಂದಿರುವ ಕಾಂಗ್ರೆಸ್ ಸರ್ಕಾರ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

June 21, 2025

“ಬಾಲ ಕಾರ್ಮಿಕ ಪದ್ಧತಿ ಬಗೆಗಿನ ಅರಿವು ಮನೆಗಳಿಂದಲೇ ಮೂಡಲಿʼ: ಸಚಿವ ಸಂತೋಷ್‌ ಲಾಡ್‌

June 12, 2025

ಏಯ್ ಕೊಹ್ಲಿ ನನ್ನ ಮೊಮ್ಮಗ ಕಣಯ್ಯ…!

June 10, 2025
ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿ.ಎಂ.ಸಿದ್ದರಾಮಯ್ಯ

ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿ.ಎಂ.ಸಿದ್ದರಾಮಯ್ಯ

June 8, 2025
Next Post
ಅಮಿತ್ ಶಾ, ಮೋದಿ ಇಬ್ಬರು ನನ್ನ ಜೀವ ತೆಗೆದರು : ವಿ ಸೋಮಣ್ಣ ಬೇಸರ

ಅಮಿತ್ ಶಾ, ಮೋದಿ ಇಬ್ಬರು ನನ್ನ ಜೀವ ತೆಗೆದರು : ವಿ ಸೋಮಣ್ಣ ಬೇಸರ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada