ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಸಚಿವರು
ಬೈಂದೂರು ಕ್ಷೇತ್ರದಲ್ಲಿ ಹಕ್ಕು ಪತ್ರ ವಿತರಣೆ

ಜನ ಸಾಮಾನ್ಯರ ದೃಷ್ಟಿಯಿಂದ ಕಾರ್ಯಕ್ರಮ ರೂಪಿಸಿ ಬದ್ದತೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಹೇಳಿದರು.
ಬೈಂದೂರು (Byndoor) ವಿಧಾನ ಸಭಾ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರಗಳ ವಿತರಣೆ ಮತ್ತು ವಿವಿಧ ಸರ್ಕಾರಿ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯ ಅಭಿವೃದ್ಧಿ ಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಕ್ಷೇತ್ರದ ಅಭಿವೃದ್ಧಿ ಗೆ ಎಲ್ಲರೂ ಕೈಜೋಡಿಸೋಣ ಎಂದರು.
ಬೈಂದೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಗೋಪಾಲ್ ಪೂಜಾರಿ (Gopal Poojari) ಹಾಗೂ ಶಾಸಕ ಗುರುರಾಜ್ ಗಂಟಿಹೊಳೆ (Gururaj Gantihole) ಇಬ್ಬರು ಕ್ಷೇತ್ರದ ದೃಷ್ಟಿಯಿಂದ ಯಾವುದೇ ರಾಜಕೀಯ ಇಲ್ಲದೆ, ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇದು ರಾಜಕಾರಣಿಗಳಿಗೆ ಬೇಕಿರುವ ಬದ್ಧತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಉಡುಪಿ ಜಿಲ್ಲೆ (Udupi District) ಬುದ್ದಿವಂತರ, ಸಂವೇದನಾ ಶೀಲತೆ ಹೊಂದಿರುವ ಜಿಲ್ಲೆ. ಅಧಿಕಾರಿಗಳು ಉಡುಪಿ ಜಿಲ್ಲೆಗೆ ಕೆಲಸ ಮಾಡಲು ಬರಬೇಕು ಅಂದರೆ ಎರಡ್ಮೂರು ಬಾರಿ ಯೋಚನೆ ಮಾಡುತ್ತಾರೆ.ಉಡುಪಿ ಜಿಲ್ಲಾ ಉಸ್ತುವಾರಿ ನನಗೆ ಸಿಕ್ಕಿದ್ದು, ಶ್ರೀಕೃಷ್ಣ ನ ಆಶೀರ್ವಾದ ಸಿಕ್ಕಂತಾಯಿತು.ಇದು ನನ್ನ ಸೌಭಾಗ್ಯ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ಕನಸಿನ ಕೂಸು ಇಂದಿರಾ ಕ್ಯಾಂಟೀನ್(Indira Canteen), ಬಡವರಿಗೆ ಕಡಿಮೆ ದುಡ್ಡಿನಲ್ಲಿ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಈ ಕ್ಯಾಂಟೀನ್ ಆರಂಭಿಸಲಾಯಿತು. ಐದು ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಮಧ್ಯಾಹ್ನದ ಊಟ, ಇಷ್ಟು ಕಡಿಮೆ ದುಡ್ಡಿನ ಲ್ಲಿ ಹೊಟ್ಟೆ ತುಂಬಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯನವರ ಅಂದಿನ ಸರ್ಕಾರದಲ್ಲಿ ಅಕ್ರಮ ಸಕ್ರಮ ಜಾರಿಗೆ ತಂದು, ಜನರಿಗೆ ಹತ್ತಿರ ಆಗುವಂತ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಸಿಕ್ಕಂತ ಅವಕಾಶಗಳನ್ನು ಸೂಕ್ತ ವಾಗಿ ಬಳಸಿಕೊಂಡಿದ್ದೇವೆ. ರಾಜಕೀಯ ಅಷ್ಟು ಸುಲಭವಲ್ಕ, ಜನಸೇವೆಯೇ ಜನಾರ್ದನನ ಸೇವೆ ಅಂದುಕೊಂಡಿದ್ದೇವೆ, ವೈಯಕ್ತಿಕ ಕೆಲಸವನ್ನು ಪಕ್ಕಕ್ಕಿಟ್ಟು ಮಾಡುತ್ತಿದ್ದೇವೆ. ಜನ ಪ್ರತಿನಿಧಿಗಳು ಜವಾಬ್ದಾರಿ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಅಂಗನವಾಡಿ ಆರಂಭಗೊಂಡು ಐವತ್ತು ವರ್ಷಗಳಾಯಿತು,ಇಂದಿರಾ ಗಾಂಧಿಯವರು ಶುರು ಮಾಡಿದರು, ಇದೇ ಅಕ್ಟೋಬರ್ ಎರಡನೇ ತಾರೀಖು ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲಾಗುವುದು ಎಂದರು.

- ವಿದ್ಯಾರ್ಥಿಗಳಿಗೆ ಕ್ಯಾಂಟೀನ್ ಊಟ ಕೊಡಿಸಿದ ಸಚಿವರು
ಕ್ಯಾಂಟೀನ್ ಉದ್ಘಾಟಿಸಿ ವಾಪಸ್ ತೆರಳುವ ವೇಳೆ ಸ್ವಾಗತಿಸಲು ಸಾಲಾಗಿ ನಿಂತಿದ್ದ ವಿದ್ಯಾರ್ಥಿಗಳನ್ನು ಕಂಡ ಸಚಿವರು, ಮತ್ತೆ ಕಾರಿನಿಂದ ಕೆಳಗಿಳಿದು ಕ್ಯಾಂಟೀನ್ ಒಳಗೆ ಕರೆದೊಯ್ದು ಊಟ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಕಾರಿನಲ್ಲಿ ಕುಳಿತಾಗ ಸಚಿವರೊಂದಿಗೆ ಸೆಲ್ಫಿ ಕ್ಲಿಕಿಸಿಕೊಳ್ಳಲು ಬಂದಾಗ, ಬನ್ನಿ ಕ್ಯಾಂಟೀನ್ ನಲ್ಲಿ ತಿಂಡಿ ತಿನ್ನಿ ಎಂದು ವಿದ್ಯಾರ್ಥಿನಿಯರನ್ನು ಕೈಹಿಡಿದು ಒಳಗೆ ಕರೆದುಕೊಂಡು ಬಂದರು.

ಸಮಾರಂಭದಲ್ಲಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳಿ(Gururaj Shetty) , ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ(Manjunath Bandari), ಮಾಜಿ ಶಾಸಕ ಗೋಪಾಲ್ ಪೂಜಾರಿ(Gopal Poojari), ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಶೋಕ್ ಕೊಡವೂರು(Ashok Kodavuru), ಉದಯ್ ಕುಮಾರ್ ಶೆಟ್ಟಿ(Uday Kumar Shetty), ನಾಗರಾಜ್ ಗಾಣಿಗ(Nagaraj Ganiga), ಸದಾಶಿವ.ಡಿ, ಮೋಹನ್ ಪೂಜಾರಿ, ರಾಜು ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ(Swaroop T K), ಉಪ ವಿಭಾಗಧಿಕಾರಿ ರಶ್ಮಿ ಎಸ್.ಆರ್(Rashmi S R), ತಹಶಿಲ್ದಾರರಾದ ಪ್ರದೀಪ್ ಕುರುಡೇಕರ್(Pradeep Kurudekar), ಎಚ್.ರಾಮಚಂದ್ರಪ್ಪ, ಪಟ್ಟಣ ಪಂಚಾಯತ್ ಅಜಯ್ ಭಂಡಾರ್ಕರ್ ಉಪಸ್ಥಿತರಿದ್ದರು.