ಕೇಂದ್ರ ಲೋಕೋಪಯೋಗಿ ಇಲಾಖೆ (CPWD) ಶೀಘ್ರದಲ್ಲೇ ದೆಹಲಿಯಲ್ಲಿ ಪ್ರಧಾನ ಮಂತ್ರಿಯವರ ಹೊಸ ಕಛೇರಿ (PMO) ನಿರ್ಮಾಣಕ್ಕೆ ಹಣಕಾಸು ಬಿಡ್‌ಗಳನ್ನು ಸಲ್ಲಿಸಲಿದೆ. ಮೂಲತಃ ಇದು ಸುಮಾರು 1,200 ಕೋಟಿ ರೂಪಾಯಿ ವೆಚ್ಚದ ಯೋಜನೆ.
ಹೊಸ ಸಂಸತ್ ಕಟ್ಟಡದಲ್ಲಿ ಬಳಸುತ್ತಿರುವಂತಹ ಕೆಂಪು ಮತ್ತು ಹಳದಿ ಧೋಲ್ಪುರ್ ಮರಳುಗಲ್ಲಿ (sandstone)ನಿಂದ ಪ್ರಧಾನ ಮಂತ್ರಿಯವರ ಕಚೇರಿಯನ್ನು ನಿರ್ಮಿಸಲಾಗುವುದು. ಸೌತ್ ಬ್ಲಾಕ್ ಬಳಿಯ ರಕ್ಷಣಾ ಕಚೇರಿಯ ಬ್ಯಾರಕ್‌ಗಳಿರುವಲ್ಲಿ ಹೊಸ ಕಚೇರಿ ತಲೆ ಎತ್ತಲಿದೆ. ರಕ್ಷಣಾ ಕಚೇರಿಗಳನ್ನು ಈಗಾಗಲೇ ಆಫ್ರಿಕಾ ಅವೆನ್ಯೂ ಮತ್ತು ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿರುವ ಎರಡು ಹೊಸ ಕಚೇರಿ ಸಂಕೀರ್ಣಗಳಿಗೆ ಸ್ಥಳಾಂತರಿಸಲಾಗಿದೆ.
ಪ್ರಧಾನ ಮಂತ್ರಿಯವರ ಕಚೇರಿಯು ಹೈ-ಸೆಕ್ಯುರಿಟಿ ಎಕ್ಸಿಕ್ಯುಟಿವ್ ಎನ್‌ಕ್ಲೇವ್‌ನ ಭಾಗವಾಗಲಿದ್ದು ಇದು ಕ್ಯಾಬಿನೆಟ್ ಸೆಕ್ರೆಟರಿಯೇಟ್, ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಸೆಕ್ರೆಟರಿಯೇಟ್ (ಎನ್‌ಎಸ್‌ಸಿಎಸ್)ಗಳನ್ನು ಸಹ ಹೊಂದಲಿದೆ. ದೇಶದ ಅಧಿಕೃತ ಅತಿಥಿಗಳಿಗೆ ಆತಿಥ್ಯ ನೀಡುವ ಸೌಲಭ್ಯಗಳನ್ನು ಹೊಂದಿರುವ ‘ಇಂಡಿಯಾ ಹೌಸ್’ ಸಹ ಎಕ್ಸಿಕ್ಯೂಟಿವ್ ಎನ್‌ಕ್ಲೇವ್‌ನ ಭಾಗವಾಗಲಿದೆ.

ಇದರ ಅಡಿಯಲ್ಲಿ ಪ್ರಧಾನಿಯವರಿಗಾಗಿ ಹೊಸ ನಿವಾಸವನ್ನು ಸಹ ನಿರ್ಮಿಸಲಾಗುವುದು, ಆದರೆ ಅದರ ವಿನ್ಯಾಸವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಿರ್ಮಾಣ ವಿಭಾಗವಾದ CPWD, ಕಾರ್ಯಕಾರಿ ಎನ್‌ಕ್ಲೇವ್‌ಗಾಗಿ ಹಣಕಾಸಿನ ಬಿಡ್‌ಗಳನ್ನು ಶೀಘ್ರದಲ್ಲೇ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
“ಅರ್ಹತಾ ಪೂರ್ವ ಪ್ರಕ್ರಿಯೆಯ ಮೊದಲ ಹಂತವು ಈಗಾಗಲೇ ಪ್ರಾರಂಭವಾಗಿದೆ. ಇದು ಹೈ-ಸೆಕ್ಯುರಿಟಿ ಪ್ರಾಜೆಕ್ಟ್ ಆಗಿರುವುದರಿಂದ, ನಾವು ಎರಡು ಹಂತದ ಬಿಡ್ ಪ್ರಕ್ರಿಯೆಯನ್ನು ಮಾಡುತ್ತಿದ್ದೇವೆ. ಕಳೆದ ವರ್ಷ ನವೆಂಬರ್‌ನಲ್ಲಿ ತಾಂತ್ರಿಕ ಬಿಡ್‌ಗಳನ್ನು ಕರೆಯಲಾಗಿತ್ತು. ಅರ್ಹ ಬಿಡ್‌ದಾರರಿಗೆ ಮಾತ್ರ ಈಗ ಹಣಕಾಸು ಬಿಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ” ಎಂದು ವಸತಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.
ಒಮ್ಮೆ ಟೆಂಡರ್ ಪಡೆದು ಕಾಮಗಾರಿ ಆರಂಭಗೊಂಡರೆ ಎಕ್ಸಿಕ್ಯುಟಿವ್ ಎನ್‌ಕ್ಲೇವ್ ಯೋಜನೆ ಪೂರ್ಣಗೊಳಿಸಲು 24 ತಿಂಗಳು ಬೇಕಾಗುತ್ತದೆ. ಸದ್ಯ ಅಸ್ತಿತ್ವದಲ್ಲಿರುವ PMO ಸೌತ್ ಬ್ಲಾಕ್‌ನಲ್ಲಿದೆ, ಹೊಸ ಕಚೇರಿ ನಿರ್ಮಾಣವಾದ ನಂತರ ಹಳೆಯ ಕಚೇರಿಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ.