ಗುಮ್ಮಟನಗರಿ ವಿಜಯಪುರ ಜಿಲ್ಲೆ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಇಲ್ಲಿನ ಒಂದೊಂದು ಐತಿಹಾಸಿಕ ಸ್ಮಾರಕವೂ ಒಂದೊಂದು ಕಥೆಯನ್ನ ಹೇಳುತ್ತದೆ. ಆದಿಲ್ ಶಾಹಿ ಕಾಲದಲ್ಲಿ ನಡೆದ ಯುದ್ಧಗಳು ಹಾಗೂ ಹಾಗೂ ಮಹತ್ವದ ಘಟನೆಗಳನ್ನು ಇಲ್ಲಿನ ಇತಿಹಾಸ ತಿಳಿಸುತ್ತವೆ. ಇಂತಹ ಐತಿಹಾಸಿಕ ಸ್ಥಳಗಳಲ್ಲಿ ಸಾಠ್ ಕಬರ್ ಎನ್ನುವ ಸ್ಥಳವಿದೆ. ಇದು ಹೆಸರೇ ಹೇಳುವಂತೆ 60 ಘೋರಿಗಳಿರುವ ಸ್ಥಳ. ಇಲ್ಲಿ 60 ಜನರನ್ನು ಒಂದೇ ಸ್ಥಳದಲ್ಲೇ ಸಮಾಧಿ ಮಾಡಿರುವ ಐತಿಹಾಸಿಕ ಸ್ಥಳಗಳಿವೆ.
ಅದು 400 ವರ್ಷಗಳ ಹಿಂದಿನ ಮಾತು ಕೇವಲ ಸಂಸ್ಥಾನವಾಗಿದ್ದ ( ಈಗೀನ ವಿಜಯಪುರ) ಬಿಜಾಪುರ ಮುಂದೆ ಸಾಮ್ರಾಜ್ಯವಾಗಿ ಬೆಳೆದದ್ದು ಮಾತ್ರ ಸಾಧನೆಯೇ ಸರಿ. ಆ ಕಾಲದಲ್ಲಿ ಆದಿಲ್ ಶಾಹಿಗಳು ಬಿಜಾಪುರ ಸಂಸ್ಥಾನವನ್ನು ನಡೆಸುತ್ತಿದ್ದರು. ಆದಿಲ್ ಶಾಹಿಗಳು ವಿಜಯನಗರದ ಸಂಪತ್ತನ್ನು ತಂದು ತಮ್ಮ ರಾಜಧಾನಿಯಾದ ಬಿಜಾಪುರದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಪ್ರಾರಂಬಿಸಿದರು. ಆಗ ಆದಿಲ್ ಶಾಹಿಗಳ ನಾಲ್ಕನೇ ಬಾದಶಹಾ ಆದಿಲ್ ಶಹಾ ರಾಜ್ಯಭಾರ ಮಾಡುತ್ತಿದ್ದ. ಅಲ್ಲಿಯ ಸಂಪತ್ತಿನಿಂದಲೇ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ ಶ್ರೇಯಸ್ಸು ಸಹ ಈತನಿಗೆ ಸಲ್ಲುತ್ತದೆ. ಹೀಗೆ ಜನಪರವಾದ ಕೆಲಸಗಳನ್ನು ಮಾಡುತ್ತಿದ್ದರು. ಆದಿಲ್ ಶಾಹಿ ಕಾಲದಲ್ಲಿ ಅತ್ಯಂತ ಬಲಿಷ್ಠ ಸೇನಾಧಿಪತಿಯಾಗಿದ್ದ ಅಫಜಲಖಾನ್. ಅಫಜಲಖಾನ್ ಓರ್ವ ಶಿಸ್ತಿನ ಶಿಪಾಯಿಯಾಗಿದ್ದ , ಬಿಜಾಪುರದ ಆದಿಲ್ ಶಾಹಿ ಸಾಮ್ರಾಜ್ಯದ ಏಳ್ಗೆಗೆ ಶ್ರಮ ವಹಿಸಿದ ವ್ಯಕ್ತಿಗಳಲ್ಲಿ ಅಗ್ರಮಾನ್ಯನಾಗಿ ಸೇವೆ ಸಲ್ಲಿಸಿದ್ದಾನೆ.
ಅಫಜಲಖಾನ್ ಸೇನಾಧಿಪತಿ ಆಗಿದ್ದ ಸಮಯದಲ್ಲೇ ಶಿವಾಜಿ ಮೇವಾಡದ ಕೋಟೆಗಳನ್ನು ವಶಕ್ಕೆ ಪಡೆದಿದ್ದ. ಶಿವಾಜಿ ಹೀಗೆ ಮುಂದುವರೆದರೆ ಬಿಜಾಪುರದ ಕೋಟೆಯನ್ನು ಸಹ ವಶಪಡಿಸಿಕೊಳ್ಳ ಬಹುದು ಅನ್ನೋ ಕಾರಣದಿಂದಾ ಆತನ ವಿರುದ್ಧ ಯುದ್ಧದ ಸಿದ್ದನಾಗುತ್ತಾನೆ.

ದೈತ್ಯ ದೇಹಿ ಅಫಜಲಖಾನ್ ಬಹುಪತ್ನಿ ವಲ್ಲಭಾ. ಈತನಿಗೆ 65 ಹೆಂಡತಿಯರು ಇರುತ್ತಾರೆ . ಅವರೆಲ್ಲರೂ ಸಹ ಶಿವಾಜಿಯ ಜೊತೆ ಯುದ್ದ ಬೇಡ, ಆತನನ್ನು ಕೊಲ್ಲಲು ಹೋಗಬೇಡಾ ಎಂದು ಅಫಜಲಖಾನ್ ಗೆ ಹೇಳುತ್ತಾರೆ. ಶಿವಾಜಿಯ ಪರಾಕ್ರಮಗಳು, ಪ್ರತಾಪಗಳು, ಯುದ್ಧ ನೀತಿ, ಚಾಣಾಕ್ಷತನಾ ಇಡೀ ಆದಿಲ್ ಶಾಹಿಗಳ ಸಾಮ್ರಾಜ್ಯದಲ್ಲಿಯೇ ಪ್ರಸಿದ್ಧಿಯಾಗಿರುತ್ತದೆ. ಹೀಗಾಗಿ ಶಿವಾಜಿ ಜೊತೆ ಯುದ್ದ ಬೇಡ ಎನ್ನುತ್ತಿದ್ದರು. ಆದರೆ ಆದಿಲ್ ಶಾಹಿ ಸಾಮ್ರಾಜ್ಯದ ಉಳಿವಿಗೆ ಯುದ್ದ ಮಾಡಲು ಅಫಲಖಾನ್ ನಿರ್ಧರಿಸಿದ್ದ.
ಯುದ್ಧದ ಚಿಂತೆಯಲ್ಲಿ ಅಪಜಲಖಾನ್ ರಾತ್ರಿ ಮಲಗಿದಾಗ ಕನಸಿನಲ್ಲಿ ತನ್ನನ್ನು ಶಿವಾಜಿ ಸಾಯಿಸಿದಂತೆ ಹಾಗೂ ತನ್ನ 65 ಹೆಂಡತಿಯರನ್ನು ಬೇರೆಯವರು ಬಂದು ಅತ್ಯಾಚಾರ ಮಾಡಿದ ಹಾಗೆ, ಅವರನ್ನೆಲ್ಲಾ ಹೊತ್ತೊಯ್ದು ತಮ್ಮ ಗುಲಾಮರನ್ನಾಗಿ ಮಾಡಕೊಂಡ ಹಾಗೆ ಕನಸಿನಲ್ಲಿ ಕಂಡು ಬೆವರುತ್ತಾನೆ. ಹೀಗಾಗಿ ಇದಕ್ಕೊಂದು ಪರಿಹಾರವನ್ನೂ ಆತ ಹುಡುಕಿ ಒಂದು ನಿರ್ಧಾರಕ್ಕೆ ಬರುತ್ತಾನೆ. ತನ್ನೆಲ್ಲಾ 65 ಹೆಂಡತಿಯರನ್ನು ಅವರು ಸ್ನಾನ ಮಾಡುವ ಬಾವಿಯ ಬಯಲಲ್ಲಿ ಕರೆ ತರುತ್ತಾನೆ. ಒಬ್ಬೊಬ್ಬರನ್ನೇ ಬಾವಿಯ ಬಳಿ ಕರೆದುಕೊಂಡು ಹೋಗುತ್ತಾನೆ. ಇನ್ನುಳಿದ ಹೆಂಡತಿಯರನ್ನು ಸೈನಿಕರ ಕಾವಲಿನಲ್ಲಿಡುತ್ತಾನೆ. 65 ಹೆಂಡತಿಯರಿಗೂ ಒಂದೆಡೆ ಆಶ್ಚರ್ಯವಾದರೆ ಮತ್ತೊಂದೆಡೆ ಸಂತೋಷವಾಗುತ್ತದೆ. 65 ಜನರೂ ಒಟ್ಟಿಗೆ ಬಂದಿದ್ದು ಸಂತೋಷವಾದರೆ, ಎಲ್ಲರನ್ನೂ ಒಟ್ಟಗೆ ಕರೆಸಿಕೊಂಡದ್ದೇಕೆ ಎಂಬ ಆಶ್ಚರ್ಯವೂ ಅವರನ್ನೆಲ್ಲಾ ಕಾಡುತ್ತದೆ. ಹೀಗೆ ಅಪಜಲಖಾನ್ ತನ್ನ 65 ಜನ ಪತ್ನಿಯರನ್ನು ಒಬ್ಬೊಬ್ಬರನ್ನಾಗಿ ಬಾವಿಯ ಬಳಿ ಕರೆಯ್ದೋಯುತ್ತಾನೆ. ಬಾವಿಯ ಕೆಳಗಿಳಿದು ಪ್ರೀತಿಯಿಂದ ಮಾತನಾಡಿಸುತ್ತಾ, ನೀರಿನಲ್ಲಿ ಅವರ ಕಾಲುಗಳನ್ನು ಬಿಡಿಸಿ ಮಾತನಾಡುತ್ತಾ ಒಮ್ಮಿಂದೊಮ್ಮೆಲೆ ಕುತ್ತಿಗೆಯ ಹಿಂಭಾಗವನ್ನು ಹಿಡಿದು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡುತ್ತಾನೆ.

ಹೀಗೆ ತನ್ನೆಲ್ಲಾ ಹೆಂಡತಿಯರನ್ನು ಕೊಲ್ಲುವ ಪಕ್ಕಾ ಸ್ಕೆಚ್ ಹಾಕಿಕೊಂಡಿರುತ್ತಾನೆ. ಒಟ್ಟು 63 ಜನ ಹೆಂಡತಿಯರು ಬಾವಿಯ ಬಳಿ ಹೋಗಿ ವಾಪಸ್ ಬಾರದೇ ಇರುವುದು ಇನ್ನುಳಿದ ಇಬ್ಬರಿಗೆ ಸಂಶಯ ವ್ಯಕ್ತವಾಗುತ್ತದೆ. ಬಾವಿಯ ಬಳಿ ಹೋದವರು ಮರಳಿ ಏಕೆ ಬರುತ್ತಿಲ್ಲಾ, ಎಂದು ಯೋಚಿಸಿ ಸೈನಿಕರ ಕೈಯ್ಯಿಂದ ತಪ್ಪಿಸಿಕೊಂಡು ಓಡಲು ಪ್ರಾರಂಭಿಸುತ್ತಾರೆ. ಇಬ್ಬರನ್ನು ಬೆನ್ನಟ್ಟಿದ ಸೈನಿಕರು ಓರ್ವಳನ್ನು ಚಿಣಗಿಬಾಬಾ ದರ್ಗಾದ ಬಳಿ ಹತ್ಯೆ ಮಾಡಿದರೆ, ಮತ್ತೋರ್ವಳನ್ನು ತೊರವಿ ಗ್ರಾಮದ ಸಮೀಪ ಕೊಲ್ಲುತ್ತಾರೆ. ಹೀಗೆ ಅಂಧವಿಶ್ವಾಸದಿಂದ, ಸ್ವಾರ್ಥದಿಂದ ಅಫಜಲಖಾನ್ ತನ್ನ 65 ಜನ ಹೆಂಡತಿಯರನ್ನು ಕೊಲ್ಲುತ್ತಾನೆ. ಎಲ್ಲರನ್ನೂ ಕೊಂದು ಹಾಕಿದ ನಂತರ ಬಾವಿಯ ಬಳಿಯಲ್ಲಿ ಎಲ್ಲರಿಗೂ ಒಂದೇ ಸ್ಥಳದಲ್ಲಿ ಸಮಾಧಿಯನ್ನು ನಿರ್ಮಿಸಿದ್ದಾನೆ. ಚೌಕಾರದ ದೊಡ್ಡದಾದ ಕಟ್ಟೆಯನ್ನು ಕಟ್ಟಿ ಅದರಲ್ಲಿ ಸಾಲು ಸಾಲಾಗಿ ಅಭಾಗ್ಯತೆಯರ ಕಳೆಬರವನ್ನು ಹೂಳಿಸಿದ್ದಾನೆ. ನಂತರ ಅಣತಿ ದೂರದಲ್ಲಿಯೇ ತನಗೊಂದು ಸಮಾಧಿಯನ್ನೂ ಸಹ ನಿರ್ಮಿಸಿದ್ದಾನೆ. ಹೀಗೆ ಅಮಾನವೀಯವಾಗಿ ತನ್ನ 65 ಜನ ಪತ್ನಿಯರನ್ನು ಭರ್ಭರವಾಗಿ ಪೈಶಾಚಿಕವಾಗಿ ಕೊಂದು ಅಫಜಲಖಾನ್ ಶಿವಾಜಿಯನ್ನು ಕೊಲ್ಲಲು ತಯಾರಾಗುತ್ತಾನೆ. ಅಂದು 1659 ನವ್ಹೆಂಬರ್ 10 ಹಲವಾರು ರಾಜತಾಂತ್ರಿಕರ ಮಧ್ಯಸ್ಥಿಕೆಯಲ್ಲಿ ಪ್ರತಾಪಗಡದಲ್ಲಿ ಶಿವಾಜಿ ಹಾಗೂ ಅಫಜಲಖಾನ್ನ ಭೇಟಿಯಾಗುತ್ತದೆ. ಅಫಜಲಖಾನ್ ಶಿವಾಜಿಯನ್ನು ಆಲಂಗಿಸುವ ನೆಪದಲ್ಲಿ ಕೊಲ್ಲಲು ಮುಂದಾಗುತ್ತಾನೆ. ಆಗ ಶಿವಾಜಿ ತನ್ನ ಬಿಚುವಾದಿಂದ ಅಂದರೆ ಹುಲಿಯ ಉಗುರುಗಳಿದ ಮಾಡಲ್ಪಟ್ಟ ಕೈ ಚೀಲಗಳ ಸಹಾಯದಿಂದ ಅಫಜಲಖಾನನ ಹೊಟ್ಟೆಯನ್ನು ಸೀಳಿ ಕೊಲ್ಲುತ್ತಾನೆ. ನಂತರ ಅಫಜಲಖಾನನ ಶವವನ್ನು ಪ್ರತಾಪಗಡದಲ್ಲಿ ದಫನ್ ಮಾಡಲಾಯಿತು.