ಕೋವಿಡ್ 19 ಲಸಿಕೆ ಖರೀದಿಗಾಗಿ ಸ್ವತಃ ಕೇಂದ್ರ ಸರಕಾರಕ್ಕೆ ಯಾವುದೇ ಅನುದಾನವನ್ನು ನೀಡದಿರುವ ಕೇಂದ್ರದ ನರೇಂದ್ರ ಮೋದಿ ಸರಕಾರದ ನಡೆಯೀಗ ಅನುಮಾನಗಳು ಹಾಗೂ ವಿವಾದಗಳಿಗೆ ಆಹ್ವಾನ ನೀಡಿದೆ.ಒಟ್ಟು 35,000 ಕೋಟಿ ರೂ. ಅನುದಾನವನ್ನು ಕೋವಿಡ್ ಲಸಿಕೆಗಳಿಗೆ ಮೀಸಲಿಟ್ಟಿರುವುದಾಗಿ 2021-22 ರ ಬಜೆಟ್ ದಾಖಲೆಗಳು ತೋರಿಸುತ್ತಿರುವುದು ನಿಜವಾದರೂ, ಆ ಮೊತ್ತವನ್ನು ‘ರಾಜ್ಯಗಳಿಗೆ ವರ್ಗಾವಣೆ’ ಎಂಬ ಶೀರ್ಷಿಕೆಯಡಿ ದೇಶದ ನಾನಾ ರಾಜ್ಯಗಳಿಗೆ ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ. ಆ ಮೂಲಕ ಲಸಿಕೆಗಳ ಹೊಣೆಗಾರಿಕೆಯ ಉತ್ತರದಾಯಿತ್ವವನ್ನೂ ಕೇಂದ್ರವು, ಎಲ್ಲ ರಾಜ್ಯ ಸರಕಾರಗಳ ಹೆಗಲಿಗೇರಿಸಿದೆ ಎಂಬುದು ಈ ವಿವಾದದ ಕೇಂದ್ರ ಬಿಂದು.

ಬಜೆಟ್ ದಾಖಲೆಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಪಕ್ಷವು, ಮೋದಿ ನೇತೃತ್ವದ ಕೇಂದ್ರ ಸರಕಾರವು ಕೋವಿಡ್ ಸಾಂಕ್ರಾಮಿಕ ಸ್ಥಿತಿಯನ್ನು ಹಾಗೂ ಲಸಿಕೆ ಅಭಿಯಾನವನ್ನು ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಪ್ರಶ್ನೆ ಎತ್ತಿದೆ.
“ಕೋವಿಡ್ ಲಸಿಕೆಗಳಿಗಾಗಿ ಕೇಂದ್ರ ಸರಕಾರವು ಈ ವರ್ಷ ಖರ್ಚು ಮಾಡುತ್ತಿರುವುದು ಕೇವಲ ಸೊನ್ನೆ ರೂ. ಮಾತ್ರ. ಅದು 35 ಸಾವಿರ ಕೋಟಿ ರೂ.ಗಳನ್ನು ಸಾಲಗಳು/ ಅನುದಾನಗಳಡಿ ಎಲ್ಲ ರಾಜ್ಯ ಸರಕಾರಗಳಿಗೆ ಒದಗಿಸಿದೆ” ಎಂದು ಕಾಂಗ್ರೆಸ್ ನಾಯಕ, ಪಕ್ಷದ ದತ್ತಾಂಶ ವಿಶ್ಲೇಷಕ ಪ್ರವೀಣ್ ಚಕ್ರವರ್ತಿ ಟ್ಟೀಟ್ ಮಾಡಿದ್ದಾರೆ.
ಲಸಿಕೆ ಜವಾಬ್ದಾರಿಯಿಂದ ಕೇಂದ್ರ ಸರಕಾರವು ನುಣುಚಿಕೊಂಡಿದೆ ಹಾಗೂ ಬಜೆಟ್ ನಲ್ಲಿ ಲಸಿಕೆಯ ಜವಾಬ್ದಾರಿಯನ್ನು ರಾಜ್ಯಗಳಿಗೆ ವರ್ಗಾಯಿಸಿದೆ, ಲಸಿಕೆ ದರ ನಿಗದಿ ಗೊಂದಲವನ್ನು ಇದು ವಿವರಿಸುತ್ತದೆ ಎಂದು ಅದಕ್ಕೂ ಮುನ್ನ ಮಾಡಿದ್ದ ಟ್ವೀಟ್ ನಲ್ಲಿ ಪ್ರವೀಣ್‍ಚಕ್ರವರ್ತಿಯವ ಕಿಡಿ ಕಾರಿದ್ದರು.
ವಿತ್ತ ಮಂತ್ರಿ ಬಜೆಟ್ ನಲ್ಲಿ ಹೇಳಿದ್ದೊಂದು, ಆಗಿದ್ದೊಂದು
ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಮಾಡಿದ್ದ ಬಜೆಟ್‍ಭಾಷಣದಲ್ಲಿ, 2021-22 ರ ಬಜೆಟ್ ನಲ್ಲಿ ತಾವು ಕೋವಿಡ್ 19 ಲಸಿಕೆಗಳಿಗಾಗಿ 35 ಸಾವಿರ ಕೋಟಿ ರೂ. ಒದಗಿಸುವುದಾಗಿ ಹೇಳಿದ್ದರಲ್ಲದೆ, ಅಗತ್ಯ ಬಿದ್ದರೆ ಇನ್ನಷ್ಟು ಅನುದಾನ ಕೊಡಲು ತಾವು ಸಿದ್ಧ ಎಂದು ಘೋಷಿಸಿದ್ದರು.
ಈ ಭಾಷಣ ಕೇಳಿದ ಎಲ್ಲರೂ, ಕೋವಿಡ್ ಲಸಿಕೆಗಳ ಜವಾಬ್ದಾರಿಯನ್ನು ಕೇಂದ್ರ ಸರಕಾರವೇ ವಹಿಸಲಿದೆ ಎಂದು ಸಹಜವಾಗಿಯೇ ನಿರೀಕ್ಷಿಸಿದ್ದರು. ಆದರೆ ಬಜೆಟ್ ನಲ್ಲಿ ‘ರಾಜ್ಯಗಳಿಗೆ ವರ್ಗಾವಣೆ’ ಎಂಬ ಶೀರ್ಷಿಕೆಯಡಿ 35 ಸಾವಿರ ಕೋಟಿ ರೂ.ಗಳನ್ನು ದೇಶದ ನಾನಾ ರಾಜ್ಯಗಳಿಗೆ ವರ್ಗಾಯಿಸುವ ಮೂಲಕ ಕೇಂದ್ರ ಸರಕಾರವು ಲಸಿಕೆ ಹಂಚಿಕೆಯ ಹೊಣೆಗಾರಿಕೆಯಿಂದ ಜಾರಿಕೊಂಡಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪ.
ಅಂದಹಾಗೆ, ಈ ನಡುವೆ ಈ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರವು ಕೋವಿಡ್‍ಲಸಿಕೆಗಳಿಗಾಗಿ ತನ್ನ ಲೆಕ್ಕದಲ್ಲಿ ಖರ್ಚು ಮಾಡಿರುವುದು 2,520 ಕೋಟಿ ರೂ.ಗಳು ಮಾತ್ರ!
ಕರ್ನಾಟಕಕ್ಕೆ 475 ಕೋಟಿ ಕರೋನಾ ಅನುದಾನ
ಈ ನಡುವೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರೋನಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರಕಾರವು ದೇಶದ 25 ರಾಜ್ಯಗಳಿಗೆ 8,923 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ ಪಾಲು 475 ಕೋಟಿ ರೂ. ಆಗಿದ್ದು ಈ ಅನುದಾನವು ರಾಜ್ಯದ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿನ ಪಂಚಾಯತ್ ರಾಜ್‍ಸಂಸ್ಥೆಗಳಿಗೆ ಹಂಚಿಕೆ ಆಗಲಿದೆ. ಇದನ್ನು ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳು ಬಳಸಬಹುದು ಎಂದು ಹಣಕಾಸು ಸಚಿವಾಲಯ ಹೇಳಿದೆ.
15ನೇ ಹಣಕಾಸು ಶಿಫಾರಸಿನಂತೆ ಸ್ಥಳೀಯ ಸಂಸ್ಥೆಗಳಿಗೆ ಮೊದಲ ಕಂತಿನ ಅನುದಾನ ಜೂನ್ ನಲ್ಲಿ ಬಿಡುಗಡೆ ಆಗಬೇಕಿತ್ತು. ಆದೆ ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಮುಂಗಡವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಆದರೆ, ಈ ಹಣವನ್ನು ರಾಜ್ಯ ಸರಕಾರವು ಲಸಿಕೆಗಳ ಖರೀದಿಗೂ ಬಳಸುತ್ತಿದೆಯೇ ಎಂದು ಸ್ಪಷ್ಟಪಡಿಸಿಲ್ಲ.
ಸೂಕ್ತ ಯೋಜನೆ ಇಲ್ಲದ ಕಾರಣಕ್ಕೆ ಲಸಿಕೆ ದುಬಾರಿ
ಕೇಂದ್ರ ಸರಕಾರ ಸರಿಯಾಗಿ ಯೋಜನೆ ರೂಪಿಸಿದ್ದರೆ, ಆರಂಭದ ಒಪ್ಪಂದದಂತೆ ಪ್ರತಿ ಡೋಸ್ ಲಸಿಕೆಗೆ ತಲಾ 150 ರೂ. ಗಳಂತೆ ಒಂದೇ ಸಲಕ್ಕೆ ಮುಂಗಡ ಬುಕಿಂಗ್ ಮಾಡಬಹುದಿತ್ತು. ಹಾಗೂ 36,000 ಕೋಟಿ ರೂ.ಗಳಲ್ಲಿ ಇಡೀ ದೇಶದ 120 ಕೋಟಿ ಜನರಿಗೆ ಕೊರೋನಾ ಲಸಿಕೆ ಹಂಚಿಕೆ ಮಾಡಬಹುದಿತ್ತು!
ಆ ಮೂಲಕ ಲಸಿಕೆ ಹಂಚಿಕೆಯ ಅನುದಾನಗಳಲ್ಲಿ ನಡೆಯಬಹುದಾಗಿದ್ದ ನಿರೀಕ್ಷಿತ ಗೊಂದಲಗಳಿಗೆ ಆರಂಭದಲ್ಲೇ ತೆರೆ ಎಳೆಯಬಹುದಾಗಿತ್ತು. ಆದರೆ ಹಾಗಾಗಲಿಲ್ಲ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಂಥದ್ದೊಂದು ಅಪೂರ್ವ ಅವಕಾಶವನ್ನು ಕೈಚೆಲ್ಲಿ ಲಸಿಕೆ ಹಂಚಿಕೆಯನ್ನು ಗೊಂದಲದ ಗೂಡಾಗಿಸಿತು.
ಮೂರು ಹಂತದ ದರ ನಿಗದಿಯನ್ನು (ಕೇಂದ್ರ, ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು) ಪರಿಚಯಿಸುವ ಮೊದಲು ಕೇಂದ್ರ ಸರಕಾರ ಪ್ರತಿ ಡೋಸ್ ಲಸಿಕೆಯನ್ನು ತಲಾ 150 ರೂ.ನಂತೆ ಖರೀದಿಸುತ್ತಿತ್ತು. ಆದರೆ ನೂತನ ದರ ನಿಗದಿಯ ನಂತರ ಲಸಿಕೆ ತಯಾರಿಕಾ ಸಂಸ್ಥೆಗಳು ದರವನ್ನು ಭಾರಿಯಾಗಿ ಹೆಚ್ಚಿಸಿದ್ದರಿಂದ ಕೊರೋನಾ ನಿರೋಧಕ ಲಸಿಕೆಗಳು ದುಬಾರಿಯಾದವು. ಕೇಂದ್ರ, ರಾಜ್ಯಗಳು ಹಾಗೂ ಖಾಸಗಿ ಆಸ್ಪತ್ರೆಗಳೂ ಹೆಚ್ಚಿನ ಬೆಲೆ ತೆರುವಂತಾಯಿತು.
ಪರಿಣಾಮವಾಗಿ ಖಾಸಗಿ ವಲಯದ ಆಸ್ಪತ್ರೆಗಳು 18-44 ವರ್ಷದ ಗುಂಪಿನ ಜನರಿಗೆ ಕೋವಿಡ್ ಲಸಿಕೆಗಳಿಗೆ 700 ರಿಂದ 1500 ರೂ.ಗಳವರೆಗೆ ದರ ವಿಧಿಸುವಂತಾಗಿದೆ. ಈ ಮೂಲಕ ಇಡಿಯ ಜಗತ್ತಿನಲ್ಲಿ ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವುದು ದುಬಾರಿ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಆಸ್ಪತ್ರೆಗಳು ಸೀರಂ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಗಳಿಗೆ 700 ರಿಂದ 900 ರೂ. ದರ ವಿಧಿಸಿದರೆ, ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಗೆ 1250 ರಿಂದ 1500 ರೂ. ದರವನ್ನು ವಸೂಲಿ ಮಾಡುತ್ತಿವೆ. ಇದು 45 ವರ್ಷಗಳ ವಯೋಗುಂಪಿಗೆ ವಿಧಿಸುವ 250 ರೂ.ಗೆ ಹೋಲಿಸಿದರೆ ಸುಮಾರು ಆರು ಪಟ್ಟು ಹೆಚ್ಚಾಗಿದೆ ಎನ್ನುವ ದೂರುಗಳು ಕೇಳಿಬರುತ್ತಿದೆ.
17 ಕೋಟಿ ಡೋಸ್ ಲಸಿಕೆ ಹಂಚಿಕೆ
ಭಾರತದಲ್ಲಿ ಈಗಾಗಲೇ ಒಟ್ಟು ಕೋವಿಡ್ ನಿರೋಧಕ 17 ಕೋಟಿ ಡೋಸ್ ಗಳಷ್ಟು ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ಮೇ 10ರವರೆಗೆ ದೇಶದಲ್ಲಿ ಒಟ್ಟು ಕೋವಿಡ್ ನಿರೋಧಕ 17,01,76,603 ಡೋಸ್ ಗಳಷ್ಟು ಲಸಿಕೆಗಳನ್ನು ನೀಡಲಾಗಿದೆ. ಇದರಲ್ಲಿ 134404867 ಲಸಿಕೆಗಳು ಮೊದಲ ಡೋಸ್ ಆಗಿದ್ದರೆ, 3,57,71,736 ಲಸಿಕೆಗಳು ಎರಡನೇ ಡೋಸ್ ಆಗಿವೆ.

ಜಗತ್ತಿನಲ್ಲೇ ಅತಿದೊಡ್ಡ ಹಾಗೂ ಅತ್ಯಂತ ವೇಗದ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಕೇವಲ 105 ದಿನಗಳಲ್ಲಿ 17 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರಕಾರ ಬೆನ್ನು ತಟ್ಟಿಕೊಳ್ಳುತ್ತಿದೆ. ಅಂತೂ ಇಂತೂ ದೇಶದೆಲ್ಲೆಡೆ ಕೋವಿಡ್ ವಿರುದ್ಧದ ಲಸಿಕೆಗಳೇನೋ ವಿತರಣೆಯಾಗುತ್ತಿವೆ. ಆ ಲಸಿಕೆಗಳಿಗೆ ಖರ್ಚು ಮಾಡಿದ್ದು ಕೇಂದ್ರ ಸರಕಾರವೇ ಅಥವಾ ರಾಜ್ಯ ಸರಕಾರವೇ ಎಂಬುದು ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪಷ್ಟವಾಗಲಿದೆ.