ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಪೂರ್ಣ ಯೋಜನೆಯಾದ ಚಂದ್ರಯಾನ 3 ನೌಕೆ ಚಂದ್ರನ ಕಕ್ಷೆಯನ್ನು ಸೇರಿದೆ. ಚಂದಮನ ಅಂಗಳಕ್ಕೆ ಇಳಿಯಲು ಈಗ ಕ್ಷಣಗಣನೆ ಆರಂಭವಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14ಕ್ಕೆ ನಭಕ್ಕೆ ಜಿಗಿದಿರುವ ಮೂರನೇ ಚಂದ್ರಯಾನ ನೌಕೆಯು ಭೂ ಕಕ್ಷೆಯ ಪರಿಭ್ರಮಣೆಯನ್ನು ಪೂರ್ಣಗೊಳಿಸಿ ಶನಿವಾರ (ಆಗಸ್ಟ್ 5) ರಾತ್ರಿ 7.15ಕ್ಕೆ ಚಂದ್ರನ ಕಕ್ಷೆಗೆ ಪವೇಶ ಪಡೆದಿದೆ ಎಂದು ಇಸ್ರೊ ಹೇಳಿದೆ.
ಚಂದ್ರಯಾನ 3 ನೌಕೆಯ ವೇಗವನ್ನು ಇಸ್ರೊ ಹೆಚ್ಚಿಸಿದ್ದು, ಚಂದ್ರನ ಕಕ್ಷೆಗೆ ಸೇರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಆರ್ಬಿಟರ್ ಇನ್ನೂ 17 ದಿನಗಳ ಕಾಲ ಚಂದ್ರನ ಸುತ್ತ ಸುತ್ತಲಿದ್ದು, ಆಗಸ್ಟ್ 23 ರಂದ ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಟಿಂಗ್ ಆಗುವ ಸಾಧ್ಯತೆ ಇದೆ ಎಂದು ಇಸ್ರೊ ತಿಳಿಸಿದೆ.
ಆಗಸ್ಟ್ 5 ರಂದು ಚಂದ್ರಯಾನ 3ರ ಯೋಜನೆಯ ಅತ್ಯಂತ ನಿರ್ಣಾಯಕ ಹಂತ ಪೂರ್ಣಗೊಂಡಿದೆ. ಆರ್ಬಿಟರ್ ಚಂದ್ರನ ಕಕ್ಷೆಗೆ ಪ್ರವೇಶಿಸಿದೆ. ಭೂ ಕಕ್ಷೆಯನ್ನು ಪೂರ್ಣಗೊಳಿಸಿರುವ ನೌಕೆ ಶನಿವಾರ ಸಂಜೆ 7.15ಕ್ಕೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದೆ ಎಂದು ಇಸ್ರೊ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಜುಲೈ 14 ರಂದು ಚಂದ್ರಯಾನ 3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಮುಂದಿನ 17 ದಿನಗಳ ಕಾಲ ಚಂದ್ರನ ಸುತ್ತ ಸುತ್ತುವ ನೌಕೆ ಆಗಸ್ಟ್ 23 ರಂದು ಚಂದ್ರನ ಮೇಲೆ ನೌಕೆಯ ರೋವರ್ ಇಳಿಯಲಿದೆ. ಆ ಬಳಿಕ ಸಂಶೋಧನೆ ನಡೆಸಲಿದೆ.
ಇಸ್ರೊ ಒಟ್ಟು 5 ಹಂತಗಳಲ್ಲಿ ಬಾಹ್ಯಾಕಾಶ ನೌಕೆಯ ಕಕ್ಷೆಯನ್ನು ಹೆಚ್ಚಿಸಿತ್ತು. ಆಗಸ್ಟ್ 1 ರಂದು ನೌಕೆಯು ಭೂಮಿಯ ಕಕ್ಷೆಯನ್ನು ಬಿಟ್ಟು ಚಂದ್ರನ ಕಡೆಗೆ ತನ್ನ ಪ್ರಯಾಣವನ್ನು ಆರಂಭಿಸಿತ್ತು.
ಇಸ್ರೊ ಇದುವರೆಗೆ ಮೂರು ಪ್ರಯೋಗಗಳನ್ನು ನಡೆಸಿದೆ. ಚಂದ್ರಯಾನ 1 ಯಶಸ್ವಿಯಾಗಿತ್ತು. ಚಂದ್ರನ ಮೇಲೆ ನೀರಿನ ಕುರುಹುಗಳಿವೆ ಎಂದು ಸಾಬೀತುಪಡಿಸುವ ಮೂಲಕ ಇದು ಜಗತ್ತನ್ನು ಅಚ್ಚರಿಗೊಳಿಸಿತ್ತು. 2019ರಲ್ಲಿ ಚಂದ್ರಯಾನ 2 ಉಡಾವಣೆ ಮಾಡಲಾಗಿತ್ತು. ಆದರೆ ಈ ಯೋಜನೆ ವಿಫಲವಾಗಿತ್ತು. ಉಡಾವಣೆಯ ಅಂತಿಮ ಹಂತಕ್ಕೆ ಇಳಿದಿತ್ತು. ಆದರೆ ಚಂದ್ರನ ಮೇಲ್ಮೈಗೆ ಇಳಿಯುವಾಗ ನಿಯಂತ್ರಣವನ್ನು ಕಳೆದುಕೊಳ್ಳುವ ಮೂಲಕ ಚಂದ್ರನ ನೆಲಕ್ಕೆ ಅಪ್ಪಳಿಸಿತ್ತು.
ಈ ಸುದ್ದಿ ಓದಿದ್ದೀರಾ? ಅಫ್ಗಾನಿಸ್ತಾನ | 5.8 ತೀವ್ರತೆಯ ಭೂಕಂಪ ; ದೆಹಲಿ, ಜಮ್ಮು-ಕಾಶ್ಮೀರದಲ್ಲೂ ಭೂಮಿ ಕಂಪನ
ಆದರೆ ಈ ಬಾರಿ ಇಸ್ರೊ ಶೇಕಡಾ 100 ರಷ್ಟು ಗುರಿಯೊಂದಿಗೆ ಸಂಪೂರ್ಣ ಮುನ್ನೆಚ್ಚರಿಕೆ ವಹಿಸಿದ್ದು, ಯಾವುದೇ ತಪ್ಪು ಆಗದಂತೆ ತಂತ್ರಾಂಶವನ್ನು ನವೀಕರಿಸಿ ಚಂದ್ರಯಾನ 3 ನೌಕೆಯನ್ನು ಉಡಾವಣೆ ಮಾಡಿತ್ತು. ಇದೀಗ ನೌಕೆ ಪ್ರಮುಖ ಹಂತವನ್ನು ತಲುಪಿದೆ ಎಂದು ವರದಿಯಾಗಿದೆ.
ಚಂದ್ರಯಾನ 3ರ ಆರ್ಬಿಟರ್ ಸಾಫ್ಟ್ ಲ್ಯಾಂಡಿಂಗ್ ಆದರೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಅಮೆರಿಕ, ರಷ್ಯಾ ಹಾಗೂ ಚೀನಾ ಈಗಾಗಲೇ ಈ ಸಾಧನೆ ಮಾಡಿದ ಪಟ್ಟಿಗೆ ಸೇರಿವೆ.