ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ 1.5 ಲಕ್ಷ ಮೌಲ್ಯದ ತಾಳಿ ಸರ ಕಳವು ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಪುಟ್ಟ ಪ್ರವಾಸೀ ಜಿಲ್ಲೆ ಕೊಡಗಿನ ಏಕೈಕ  ಉನ್ನತ ಆಸ್ಪತ್ರೆ ಆಗಿರುವ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ  ಕೋವಿಡ್ ರೋಗಿಗಳ ದೂರು ಇನ್ನೂ ಮುಗಿಯುತ್ತಿಲ್ಲ. ಕಳೆದ ವಾರವಷ್ಟೆ ಇಲ್ಲಿನ ಧನಗಾಹಿ ವೈದ್ಯ ಡಾ ಶಿವ ಕುಮಾರ್  ರೋಗಿಗಳ ಸಂಬಂಧಿಕರಿಂದ  ಚೆನ್ನಾಗಿ ಚಿಕಿತ್ಸೆ ನೀಡಲು ಲಂಚಕ್ಕಾಗಿ ಒತ್ತಾಯಿಸಿ ಪಡೆದುಕೊಂಡಿದ್ದು ಸ್ಟಿಂಗ್ ಆಪರೇಷನ್ ನಲ್ಲಿ ಬಯಲಾಗಿತ್ತು. ಜಿಲ್ಲಾಧಿಕಾರಿಯವರು ತಡ ಮಾಡದೆ ಆತನನ್ನು ಅಮಾನತ್ತುಗೊಳಿಸಿ ಮನೆಗೆ ಕಳಿಸಿದ್ದರು. ಆದರೆ ಇಷ್ಟಾಗಿಯೂ ಇಲ್ಲಿನ ಸಮಸ್ಯೆ ಬಗೆ ಹರಿದಿಲ್ಲ. ಇಲ್ಲಿ ಆಸ್ಪತ್ರೆ ಸಿಬ್ಬಂದಿಗಳ ಬಗ್ಗೆ ಕೇಳಿ ಬಂದಿರುವುದು  ಗಂಭೀರ ಆರೋಪವಾದ ನಿರ್ಲಕ್ಷ್ಯತೆಯಿಂದ  ರೋಗಿ ಸಾವನ್ನಪ್ಪಿರುವ ಘಟನೆ ಮತ್ತು ಮೃತರ ಬೆಲೆ ಬಾಳುವ ವಸ್ತುಗಳ ಕಳ್ಳತನ.  ಈಗಾಗಲೇ ಜಿಲ್ಲೆಯಲ್ಲಿ   298  ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. ಅದರಲ್ಲೂ  ರಾತ್ರಿ ವೇಳೆಯೇ ಮಡಿಕೇರಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳು ಮೃತಪಟ್ಟಿರುವ ಬಗ್ಗೆ  ಅಮೂಲಾಗ್ರ ತನಿಖೆ ನಡೆಯಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸುತ್ತಿವೆ.

ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಫೋನ್ ಕಳ್ಳತನವಾಗಿದ್ದ ಪ್ರಕರಣ ಆಕೆಯ ಮಗಳ ಮನವಿಯಿಂದಾಗಿ ರಾಜ್ಯಾದ್ಯಂತ ಪ್ರಚಾರವಾದ ಬೆನ್ನಲ್ಲೇ  ಇದೇ ಆಸ್ಪತ್ರೆಯಲ್ಲಿ   ಮೃತ ವೃದ್ಧೆಯ ಚಿನ್ನದ ತಾಳಿಯ ಸರವನ್ನೇ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೋವಿಡ್ ನಿಂದ ಮೃತಪಟ್ಟ ಕಮಲ ಎಂಬ ವೃದ್ಧೆಯ ಅಂದಾಜು ಒಂದುವರೆ ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರವನ್ನೇ ದಾದಿಯರು ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದ್ದು ಈ ಕುರಿತು ಸೋಮವಾರ ಪೋಲೀಸ್ ದೂರು ದಾಖಲಾಗಿದೆ.   ಸೋಮವಾರಪೇಟೆ ತಾಲೂಕಿನ ರಸೂಲ್ ಪುರ ಗ್ರಾಮದ ಕಮಲಾ ಅವರನ್ನು  ಕಳೆದ  ಮೇ 1 ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ಸಾಮಾನ್ಯ ವಾರ್ಡಿನಲ್ಲೇ ದಾಖಲಾಗಿದ್ದ ಕಮಲ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದರಿಂದ, ಮೇ 2 ರಂದು ಐಸಿಯು ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ದಾದಿಯರು ಕಮಲ ಅವರ ಕೊರಳಿನಲ್ಲಿದ್ದ ಚಿನ್ನದ ತಾಳಿ ಸರವನ್ನು ತೆಗೆದುಕೊಂಡಿದ್ದರು. ಐಸಿಯು ವಾರ್ಡಿನಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದ ವೃದ್ಧೆ ಕಮಲ ತನ್ನ ಮಗ ಮೊಣ್ಣಪ್ಪ ಅವರಿಗೆ ಕರೆ ಮಾಡಿ  ತಾಳಿ ಸರವನ್ನು  ದಾದಿಯರು ಪಡೆದುಕೊಂಡಿರುವ ಬಗ್ಗೆ  ತಿಳಿಸಿದ್ದರು.

 ಚಿಕಿತ್ಸೆ ಫಲಕಾರಿ ಆಗದೆ  ಮೇ 19 ರಂದು    ಕಮಲ ಮೃತಪಟ್ಟಿದ್ದರು. 20 ರಂದು ಅಂತ್ಯಕ್ರಿಯೆ ನೆರವೇರಿಸಿದ ಮೊಣ್ಣಪ್ಪ 21 ರಂದು ಮಡಿಕೇರಿ ಆಸ್ಪತ್ರೆಗೆ ಬಂದು ತನ್ನ ತಾಯಿಯ ವಸ್ತುಗಳನ್ನು ಕೇಳಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಕೇವಲ ಬ್ಯಾಗನ್ನು ಮಾತ್ರ ನೀಡಿದರು. ತನ್ನ ತಾಯಿಯ ಚಿನ್ನದ ಸರವನ್ನು ಕೊಟ್ಟಿಲ್ಲ ಎಂದು ಮೊಣ್ಣಪ್ಪ ಕೋವಿಡ್ ಆಸ್ಪತ್ರೆ ಡೀನ್ ಮತ್ತು ಮಡಿಕೇರಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನಮ್ಮ ಸಂಪ್ರದಾಯದ ಪ್ರಕಾರ ಗಂಡ ಇರುವಾಗಲೇ ಹೆಂಡತಿ ಕೊರಳಿನಿಂದ ತಾಳಿಯನ್ನು ತೆಗೆಯುವುದಿಲ್ಲ. ಹೀಗಾಗಿ ತಾಯಿಯನ್ನು ಆಸ್ಪತ್ರೆಗೆ ಕಳುಹಿಸುವಾಗ ಚೈನ್ ತೆಗೆಯದೆ ಆಸ್ಪತ್ರೆಗೆ ಕಳುಹಿಸಿದೆವು. ಆದರೆ ಈಗ ತಾಯಿಯ ಚಿನ್ನದ ತಾಳಿಯ ಸರವನ್ನೇ ಕೊಟ್ಟಿಲ್ಲ. ಈಗ ಧಾರ್ಮಿಕ ಕಾರ್ಯಗಳನ್ನು ಮಾಡಲು ತಾಳಿ ಬೇಕಾಗಿದೆ. ಅದನ್ನು ದಯಮಾಡಿ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ.  ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು  ಆಸ್ಪತ್ರೆಯಲ್ಲಿ ಈ ರೀತಿ ಆಗಬಾರದಿತ್ತು. ಇದು ಅತ್ಯಂತ ಅಮಾನವೀಯ ಘಟನೆ. ಈ ಕುರಿತು ಈಗಾಗಲೇ ಆಸ್ಪತ್ರೆಯಲ್ಲಿ ತನಿಖೆ ನಡೆಯುತ್ತಿದೆ. ಎಲ್ಲಾ ವಾರ್ಡುಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ. ಒಟ್ಟಿನಲ್ಲಿ ಕೊವಿಡ್ ನಿಂದ ಮೃತಪಟ್ಟವರ ಬೆಲೆ ಬಾಳುವ ವಸ್ತುಗಳು ಕೊವಿಡ್ ಆಸ್ಪತ್ರೆಯಲ್ಲಿ ನಾಪತ್ತೆಯಾಗುತ್ತಿರುವುದು ಎಲ್ಲರೂ ತಲೆತಗ್ಗಿಸುವಂತೆ ಆಗಿದೆ.

 .ಇದರ ಜತೆಗೇ ಇಂದು ಮತ್ತೋರ್ವ ರೋಗಿಯ ಸಂಬಂದಿಕರು ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಗಂಭೀರ  ಆರೋಪ ಮಾಡಿದ್ದಾರೆ.  ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದರೂ ನಮ್ಮ ಅಣ್ಣನನ್ನು ವೈದ್ಯರೇ ಏನೋ ಮಾಡಿ ಕೊಂದಿದ್ದಾರೆ ಎಂದು ಮೃತ ಸೋಂಕಿತನ ಸಹೋದರ ಮತ್ತು ಆತನ ತಂದೆ ಗಂಭೀರ ಆರೋಪ ಮಾಡಿದ್ದಾರೆ.ತಮ್ಮ ಅಣ್ಣನ ಸಾವಿನ ಸುದ್ದಿ ತಿಳಿದು   ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಗ್ರಾಮದಿಂದ, ಮಡಿಕೇರಿ ಕೋವಿಡ್ ಆಸ್ಪತ್ರೆ ಬಳಿಗೆ ಬಂದಿದ್ದ ಮೃತನ ಸಹೋದರ ಚಂದ್ರು ಮತ್ತು ಆತನ ತಂದೆ ಮಹದೇವ ಬಿಕ್ಕಿ ಬಿಕ್ಕಿ ಅತ್ತು ತಮ್ಮ ಮಗನನ್ನು ಉಳಿಸಿಕೊಡಿ, ತಮ್ಮ ಅಣ್ಣನನ್ನು ಉಳಿಸಿಕೊಡಿ ಎಂದು ಕಣ್ಣೀರು ಸುರಿಸಿದರು.

ಕಳೆದ ಸೋಮವಾರವಷ್ಟೇ ಮಗ ಮಂಜುವಿಗೆ ಜ್ವರ ತೀವ್ರವಾಗಿದೆ ಎಂದು ಕೂಡಿಗೆ ಆಸ್ಪತ್ರೆಯಿಂದ ನೇರವಾಗಿ ಮಡಿಕೇರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಬಳಿಕ ನನ್ನ ಮಗ ಚೇತರಿಸಿಕೊಂಡಿದ್ದ. ನಿತ್ಯವೂ ನಾನು ಆಸ್ಪತ್ರೆ ಬಳಿಗೆ ಬಂದು ನೀರು ಮತ್ತಿತರೆ ಅಗತ್ಯ ವಸ್ತುಗಳನ್ನು ಕೊಟ್ಟು ಹೋಗುತ್ತಿದ್ದೆ. ಆದರೆ ಇದ್ದಕ್ಕಿದ್ದ ಹಾಗೆ ನನ್ನ ಮಗ ಸತ್ತು ಹೋಗಿರುವುದಾಗಿ ವೈದ್ಯರು ಹೇಳುತ್ತಿದ್ದಾರೆ ಎಂದು ಮೃತ ಮಂಜು ಅವರ ತಂದೆ ಮಹದೇವ್ ಗಂಭೀರ ಆರೋಪ ಮಾಡಿದ್ದಾರೆ.ಸಹೋದರ ಚಂದ್ರು ಮಾತನಾಡಿ, ನಮ್ಮ ಅಣ್ಣ ಸಂಪೂರ್ಣ ಗುಣಮುಖನಾಗಿದ್ದ. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರೇ ನಿನ್ನೆ ಸಂಜೆ ಹೇಳಿದ್ದರು. ಆದರೆ ರಾತ್ರಿ 12 ಗಂಟೆಗೆ ಫೋನ್ ಮಾಡಿ ನಿಮ್ಮ ಅಣ್ಣ ಸತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆರೋಗ್ಯವಾಗಿದ್ದವರು ಹೇಗೆ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪುವುದಕ್ಕೆ ಸಾಧ್ಯ. ಆತ ಆರೋಗ್ಯವಾಗಿದ್ದರು, ನಿನಗೆ ಉಸಿರಾಟದ ತೊಂದರೆ ಇದೆ ಎಂದು ನನ್ನನ್ನು ಐಸಿಯು ವಾರ್ಡ್ಗೆ ಹಾಕುತ್ತಿದ್ದಾರೆ ಎಂದು ಅಣ್ಣನೇ ಫೋನ್ ಮಾಡಿ ಹೇಳಿದ್ದ. ಹೀಗಾಗಿ ಅವನ ಸಾವು ಸಹಜ ಸಾವಲ್ಲ ವೈದ್ಯರು ಏನೋ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.

ಇಲ್ಲಿ ಈಗಾಗಲೇ 10 ಕ್ಕೂ ಹೆಚ್ಚು ಮೃತ ರೋಗಿಗಳ ಮೊಬೈಲ್ ಗಳು ಕಳ್ಳತನವಾಗಿದ್ದು  ಪೋಲೀಸರಿಗೆ ದೂರು ನೀಡಿದ ನಂತರ  ಮಂಗಳವಾರ ಓರ್ವ ಮೊಬೈಲ್ ಕಳ್ಳನನ್ನು ಬಂಧಿಸಿದ್ದು ಒಂದು ಮೊಬೈಲ್ ನ್ನೂ ವಶಪಡಿಸಿಕೊಂಡಿದ್ದಾರೆ.  ಬಂಧಿತನು ಆಸ್ಪತ್ರೆಗೆ ಊಟ ಕೊಡಲು ಬರುತ್ತಿದ್ದು ಮೊಬೈಲ್  ನ್ನು ಕಳ್ಳತನ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಆಸ್ಪತ್ರೆಯ ಬಗ್ಗೆ  ಆಳವಾದ ತನಿಖೆ ನಡೆದರೆ ಇನ್ನಷ್ಟು ಸತ್ಯ ಹೊರಬೀಳಲಿದೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...