ಬೆಳಗಾವಿಯ ಅಧಿವೇಶನದಲ್ಲಿ ಮಂಡಿಸಲಾದ ʼಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆ ವಿಧೇಯಕ-2021 ಅರ್ಥಾತ್ ಮತಾಂತರ ಮಸೂದೆ ನೇರವಾಗಿ ಹಿಂದಿನಿಂದಲು ಶಿಕ್ಷಣ, ಆರೋಗ್ಯ ಮತ್ತು ಉತ್ತಮ ಜೀವನ ಶೈಲಿಯಿಂದ ವಂಚಿತರಾದ ಬಹುಸಂಖ್ಯಾತ ಇತರ ಹಿಂದುಳಿದ ಹಿಂದೂಗಳು ಮತ್ತು ದಲಿತ ವರ್ಗವನ್ನು ಮತ್ತೆ ಇಂತಹ ಸೌಲಭ್ಯಗಳಿಂದ ದೂರ ಇರಿಸಲು ಭಾರತೀಯ ಜನತಾ ಪಾರ್ಟಿ ಸರಕಾರ ಇಂತಹದೊಂದು ಮಸೂದೆಯನ್ನು ತಂದಿದೆ ಎಂಬುದನ್ನು ಮಸೂದೆಯ ಅಂಶಗಳೇ ಸಾರಿ ಹೇಳುತ್ತವೆ.
ಕಲಂ 2ರಲ್ಲಿ ಮಸೂದೆಯ ಪರಿಭಾಷೆಗಳನ್ನು ನೀಡಲಾಗಿದ್ದು, ಎ. 2ರಲ್ಲಿ ಯಾವುದೇ ಧಾರ್ಮಿಕ ಸಂಸ್ಥೆ ನಡೆಸುವ ಶಾಲೆ ಮತ್ತು ಕಾಲೇಜಿನಲ್ಲಿ ಉದ್ಯೋಗ, ಉಚಿತ ಶಿಕ್ಷಣ, ಎ.3ರಲ್ಲಿ ಉತ್ತಮ ಜೀವನ ಶೈಲಿ, ದೈವಿಕ ಅಸಂತೋ, ಅಥವ ಅನ್ಯಥಾ … ಇವುಗಳನ್ನು ಪ್ರಲೋಭನೆ ಎಂದು ಮಸೂದೆ ಹೇಳುತ್ತದೆ.
ಉತ್ತಮ ಜೀವನ ಶೈಲಿಯ ಪರಿಭಾಷೆಯನ್ನೇ ನೋಡುವ ಒಬ್ಬ ಹಿಂದೂವನ್ನು ಓಷನ್ ಪರ್ಲ್ ಯಾ ದೀಪಾ ಕಂಪರ್ಟ್ಸ್ ಹೊಟೇಲಿಗೆಕರಕೊಂಡು ಹೋಗಿ ಒಳ್ಳೆಯ ಊಟ ಕೊಡಿಸುವುದು ಅಥವ ಮಚಿಲಿಗೊ ನಾರಾಯಣ ಹೊಟೇಲಿಗೊ ಕರಕೊಂಡು ಹೋಗಿ ಅಂಜಲ್ ಫ್ರೈ ಊಟ ಕೊಡಿಸುವುದು ಅಥವ ನದಿ ಹಿನ್ನೀರಿನಲ್ಲಿ ತೋಲಾಡುವ ರಾಣಿ ಅಬ್ಬಕ್ಕ ದೋಣಿಯಲ್ಲಿ ಮೀನೂಟ ಕೊಡಿಸುವುದು ಕೂಡ ಉತ್ತಮ ಜೀವನ ಶೈಲಿಯೇ ಆಗುತ್ತದೆ. ಇನ್ನು ಯಾರು ಕೂಡ ತಮ್ಮ ಸ್ನೇಹಿತರಿಗೆ ಮೀನೂಟ ಕೊಡಿಸುವುದು ಕೂಡ ಕಷ್ಟ ಸಾಧ್ಯ ಆಗಲಿದೆ. ಪೊಲೀಸಿಂಗ್ ಕೆಲಸ ಮಾಡುವ ಸಂಘಟನೆಯವರ ಕೈಗೆ ಸಿಕ್ಕಿಬಿದ್ದರೆ ಅಲ್ಲಿಗ ಮುಗಿಯಿತು.
ಶತಮಾನಗಳ ಕಾಲ ಶಿಕ್ಷಣ ಮತ್ತು ಜ್ಞಾನದಿಂದ ದೂರ ಇರಿಸಲಾದ ಬಹುಸಂಖ್ಯಾತ ಹಿಂದೂಗಳಿಗೆ ಕಳೆದ ನೂರು ವರ್ಷಗಳಿಂದ ಕ್ರೈಸ್ತ ಮಿಷನರಿಗಳ ದೆಸೆಯಿಂದ ಶಿಕ್ಷಣ, ಆರೋಗ್ಯ ಸೌಲಭ್ಯ ಸ್ವಲ್ಪ ಮಟ್ಟಿಗೆ ಸಿಗುವಂತಾಯಿತು. ಕ್ರೈಸ್ತ ಸಂಸ್ಥೆಗಳು ನಡೆಸುವ ಶಿಕ್ಷಣ ಸಂಸ್ಥೆಗಳಿಂದಾಗಿ ಇಂದು ದೊಡ್ಡ ಸಂಖ್ಯೆಯ ಹಿಂದುಳಿದ ವರ್ಗದವರು, ಪರಿಶಿಷ್ಟರು ಉತ್ತಮ ಶಿಕ್ಷಣ ಪಡೆಯುವಂತಾಯಿತು. ಸ್ವಘೋಷಿತ ಹಿಂದೂತ್ವ ಸಂಘಟನೆಗಳೆಂಬ ಫ್ರಿಂಜ್ ಗ್ರೂಪುಗಳಮುಖಂಡರು ಎಂದುಕೊಂಡವರ ಮಕ್ಕಳು ಕೂಡ ಇಂದು ಇದೇ ಕ್ರೈಸ್ತ ಧರ್ಮದವರು ನಡೆಸುತ್ತಿರುವ ಶಾಲಾ ಕಾಲೇಜುಗಳಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ಪಡೆಯುತ್ತಿದ್ದಾರೆ. ಅದೂ ರಿಯಾಯತಿ ಮೊತ್ತದ ಫೀಸಿನಲ್ಲಿ ಎಂಬುದು ವಾಸ್ತವ.
Also Read : ಬಿಜೆಪಿ ಮತಬ್ಯಾಂಕ್ ರಾಜಕಾರಣದ ಮತ್ತೊಂದು ಹೆಜ್ಜೆ ಮತಾಂತರ ನಿಷೇಧ ಮಸೂದೆ!
ಕೇವಲ ಹಿಂದುಳಿದವರು ದಲಿತರು ಮಾತ್ರವಲ್ಲದೆ ಕರಾವಳಿಯ ಬ್ಯಾರಿಗಳ ಮಕ್ಕಳಿಗೆ ಕೂಡ ಕಾಲೇಜು ಶಿಕ್ಷಣದ ಬಾಗಿಲು ತೆರೆದಿದ್ದು ಇದೇ ಕ್ರೈಸ್ತ ಶಿಕ್ಷಣ ಸಂಸ್ಥೆಗಳು, ಅನಂತರವಷ್ಟೆ ಇತ್ತೀಚೆಗೆ ಮುಸ್ಲಿಮರು ಕಾಲೇಜುಗಳನ್ನು ತೆರೆದು ಶಿಕ್ಷಣಕ್ಕೆ ಮಹತ್ವಕ್ಕೆ ನೀಡತೊಡಗಿದ್ದು. ಬ್ಯಾರಿಗಳು ಸುಶಿಕ್ಷಿತರಾಗುವುದೂ ಕೂಡ ಈ ದ್ವೇಷ ಹರಡುವ, ಕಲಹ ಪ್ರಿಯರಿಗೆ ಹಿನ್ನಡೆಯೆ. ಏಕೆಂದರೆ, ಸುಶಿಕ್ಷಿತರ ಸಮಾಜದಲ್ಲಿ ಬೆಂಕಿ ಹಚ್ಚುವವರ ಕೆಲಸ ನಡೆಯುವುದಿಲ್ಲ.
ಮುಂದಿನ ದಿನಗಳಲ್ಲಿ ಕ್ರೈಸ್ತರು ನಡೆಸುವ ಅನುದಾನಿತ ಶಾಲೆಗಳಿಗೆ ಅನುದಾನ ನಿಲ್ಲಿಸುವ ಹುನ್ನಾರ ಈ ವಿಧೇಯಕದಲ್ಲಿದೆ. ಕಲದ 10ರಲ್ಲಿ ಸಂಸ್ಥೆಯ ಮೂಲಕ ಉಲ್ಲಂಘನೆಯಾದಾಗ ನೀಡುವ ದಂಡನೆ ವಿವರ ಇದೆ. 10ರ 2ರಲ್ಲಿ ಅಧಿನಿಯಮ ಉಲ್ಲಂಘಿಸುವ ಸಂಸ್ಥೆಗೆ ಯೋವುದೇ ಹಣಕಾಸಿನ ನೆರವು ಅಥವ ಅನುದಾನ ನಡುವಂತಿಲ್ಲ ಎಂದಿದೆ.
ಸಂಸ್ಥೆಗಳು ಅಂದರೆ ಶೈಕ್ಷಣಿಕ ಸಂಸ್ಥೆಗಳು, ಅನಾಥಾಶ್ರಮ, ಆಸ್ಪತ್ರೆಗಳು, ವೃದ್ಧಾಶ್ರಮ, ಸರಕಾರೇತರ ಸಂಘ ಸಂಸ್ಥೆಗಳು ಅಂತಹ ಇತರ ಸಂಸ್ಥೆಗಳು ಎಂದು ವಿಧೇಯಕ ಸ್ಪಷ್ಟವಾಗಿ ಹೇಳುತ್ತದೆ. ಎನ್ ಜಿ ಓಗಳು ನಡೆಸುವ ಯಾವುದೇ ಉಚತ ಕಾರ್ಯಕ್ರಮಗಳು ಈ ವಿಧೇಯಕದ ವ್ಯಾಪ್ತಿಗೆ ಬರಲಿದ್ದು, ಮೊರಲ್ ಪೊಲೀಸಿಂಗ್ ಮಾಡುವ ಅದೇ ಸಂಘಟನೆಗಳು ಇಲ್ಲೂ ಪೊಲೀಸಿಂಗ್ ಮಾಡಲು ಬರಬಹುದು.
ಸೇವಾ ಮಹತ್ವ ಹೊಂದಿರುವ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಅನಾಥಾಶ್ರಮ, ವೃದ್ಧಾಶ್ರಮಗಳನ್ನು ಹೆಚ್ಚಾಗಿ ಸ್ಥಾಪಿಸಿರುವುದು ಕ್ರೈಸ್ತರು. ಶೈಕ್ಷಣಿಕ ವಿಚಾರಕ್ಕೆಬಂದರೆ ಅನ್ಯಧರ್ಮಿಯರಿಗೆ ಕ್ರೈಸ್ತರ ಶಾಲಾ ಕಾಲೇಜುಗಳಲ್ಲಿ ಉಚಿತವಾಗಿ ಅಥವ ರಿಯಾಯತಿ ದರದಲ್ಲಿ ಸೇರ್ಪಡೆ ಮಾಡುವಂತಿಲ್ಲ. ಇದು ಮತಾಂತರ ಪ್ರಲೋಭನೆಯ ಪರಿಭಾಷೆಯಡಿಯಲ್ಲಿ ಬರುತ್ತದೆ.
ಕ್ರೈಸ್ತರ ಸಂಸ್ಥೆಗಳಲ್ಲಿ ಉದ್ಯೋಗ ನೀಡುವುದು ಕೂಡ ಪ್ರಲೋಭನೆಯ ಪರಿಭಾಷೆಯಲ್ಲಿ ಬರುತ್ತದೆ. ಕರಾವಳಿಯ ಕ್ರೈಸ್ತರು ನಡೆಸುವ ಬಹುತೇಕ ಸಂಸ್ಥೆಗಳಲ್ಲಿ ಅಂದಾಜು ಸಾರಸರಿ ಶೇ.60 ರಷ್ಟು ಹಿಂದೂಗಳೇ ಉದ್ಯೋಗಿಗಳಾಗಿದ್ದಾರೆ. ಈ ವಿಧೇಯವು ಇದು ಜಾರಿ ಆಗುವುದಕ್ಕಿಂತ ಹಿಂದಿನ ದಿನಗಳಿಗೆ ಅನ್ವಯ ಆಗದಿದ್ದರೂ ಕೂಡ ಕ್ರೈಸ್ತ ಸಂಸ್ಥೆಗಳಲ್ಲಿ ದುಡಿಯುವ ಹಿಂದೂ ಉದ್ಯೋಗಿಗಳ ಕತೆ ಏನು ಎಂಬುದು ಚರ್ಚಾಸ್ಪದವಾಗಿದೆ. ಈ ಉದ್ಯೋಗಿಗಳಿಗೆ ಕ್ರಿಸ್ ಮಸ್ ಬೋನಸ್ ನೀಡುವುದಾಗಲಿ, ಕ್ರಿಸ್ಮಸ್ ಕೇಕ್ ನೀಡುವುದಾಗಲಿ, ವೇತನ ಹೆಚ್ಚಳ ಮಾಡುವುದನ್ನು ಕೂಡ ವಿಧೇಯಕದ ಪರಿಭಾಷೆಯಲ್ಲಿ ತರಲು ಸಾಧ್ಯವಿದೆ. ಇದನ್ನು ಕೂಡ ಮತಾತಂತರ ಪ್ರಲೋಭನೆ ಎಂದು ವ್ಯಖ್ಯಾನ ಮಾಡಬಹುದು.
Also Read : ಮತಾಂತರ ನಿಷೇಧ ಕಾಯ್ದೆ: ಅಂಬೇಡ್ಕರ್ ಚಿಂತನೆ ಧ್ವಂಸ ಮಾಡುವ ಹುನ್ನಾರ!
ಹೊಸದಾಗಿ ಯಾವುದೇ ಹಿಂದೂಗಳಿಗೆ ಕ್ರೈಸ್ತ ಸಂಸ್ಥೆಗಳು ಉದ್ಯೋಗ ನೀಡುವುದು ಅಸಾಧ್ಯವಾಗಲಿದೆ. ಉದ್ಯೋಗ ನೀಡಿದರೆ ಕೂಡ ಫ್ರಿಂಜ್ ಗ್ರೂಪುಗಳ ಸಂಪರ್ಕದಲ್ಲಿದ್ದವರಾಗಿದ್ದಾಗ ಸುಳ್ಳು ದೂರು ನೀಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಉದ್ಯೋಗ ನೀಡಿ ಸಮಸ್ಯೆ ಎಳೆದು ಹಾಕುವ ಕೆಲಸ ಯಾರಿಗೆ ಬೇಕಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹಿಂದೂಗಳು ಉದ್ಯೋಗಾವಕಾಶಗಳನ್ನು ಕಳಕೊಳ್ಳಲಿದ್ದಾರೆ. ಬಿಜೆಪಿ ಸರಕಾರ ಉದ್ಯೋಗ ನೀಡುವುದರಲ್ಲಿ ಮೊದಲೇ ಇಲ್ಲ. ಇದ್ದ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಅದಾನಿ ಮತ್ತು ಅಂಬಾನಿಗ ಮಾರಾಟ ಮಾಡಲಾಗುತ್ತಿದೆ.
ಅನಾಥರೋ, ವೃದ್ಧರೋ ಇದ್ದರೆ ಅವರನ್ನು ಕ್ರೈಸ್ತರು ನಡೆಸುವ ಆಶ್ರಮಗಳಿಗೆ ಅಥವ ಕ್ರೈಸ್ತರು ಇರುವ ಎನ್ ಜಿ ಓಗಳು ನಡೆಸುವ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸೇರಿಸಲು ಅಸಾಧ್ಯವಾಗಲಿದೆ. ಹಿಂದೂ ಧರ್ಮದ ಸಂಸ್ಥೆಗಳಿಂದ ಸಾಕಷ್ಟು ಸಿಕ್ಷಣ ಸಂಸ್ಥೆ, ಅನಾಥಾಶ್ರಮ, ವೃದ್ಧಾಶ್ರಮಗಳನ್ನು ನಿರ್ಮಾಣ ಮಾಡಿದ ನಂತರ ಇಂತಹ ಕಾಯಿದೆ ತಂದಿದ್ದರೆ ಅದಕ್ಕೊಂದು ಅರ್ಥ ಇರುತಿತ್ತು.
ಸರಕಾರ ತನ್ನ ದೇಶದ ಪ್ರಜೆಗಳ ಬಗ್ಗೆ ಗೊತ್ತುಗುರಿ ಇಲ್ಲದೆ ಲಾಕ್ ಡೌನ್ ಮಾಡಿದಾಗ ದಾರಿಯಲ್ಲಿ ಇರುವ ಜನರಿಗೆ ಯಾವುದೇ ಸಾಮಜ ಸೇವಾ ಸಂಸ್ಥೆಗಳು ಊಟ ಉಪಹಾರ ನೀಡುವಂತಿಲ್ಲ. ಮುಸ್ಲಿಮರ ಸಂಸ್ಥೆಯಾಗಲಿ, ಕ್ರೈಸ್ತರ ಸಂಸ್ಥೆಯಾಗಲಿ ಪ್ರವಾಹ, ಪ್ರಕೃತಿ ವಿಕೋಪ, ಲಾಕ್ ಡೌನ್ ನಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಧನ ಸಹಾಯ ಮಾಡುವುದಾಗಲಿ, ಆಹಾರ ಕಿಟ್ ವಿತರಿಸುವುದಾಗಲಿ ಕಷ್ಟ ಆಗಲಿದೆ. ಅನ್ಯಾಯ ಆಗುವುದು ವಿತರಿಸುವವರಿಗಲ್ಲ ಸಂತ್ರಸ್ತರಿಗೆ ಮತ್ತು ಬಡವರಿಗೆ.
ಹಿಂದೂಗಳ ಸರಕಾರ ಎಂದು ಹೇಳಿಕೊಂಡು ಭಾಷಣ ಮಾಡುವ ಸರಕಾರ ಹಿಂದೂಗಳ ವಿರುದ್ಧವಾಗಿ ಅದರಲ್ಲೂ ದಲಿತರು ಮತ್ತು ಇತರ ಹಿಂದುಳಿದ ವರ್ಗದವರಿಗೆ ವಿರುದ್ಧವಾಗಿ ಮತಾಂತರದ ಹೆಸರಿನಲ್ಲಿ ಕಾಯಿದೆ ತಂದಿದೆ. ಆದರೆ, ಕಾಯಿದೆಯ ಸಂತ್ರಸ್ತರಿಗೆ ವಾಸ್ತವ ಮನವರಿಕೆ ಮಾಡುವುದು ಕಷ್ಟ ಸಾಧ್ಯ.