ಮತಾಂತರ ನಿಷೇಧ ಮಸೂದೆಯ ವಿಷಯ ಸದನದ ಒಳಹೊರಗೆ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ತನ್ನ ಹಿಂದುತ್ವ ಅಜೆಂಡಾದ ಪ್ರತಿಷ್ಠೆಯ ಪ್ರಶ್ನೆಯಾಗಿ ಈ ಮಸೂದೆಯನ್ನು ತೆಗೆದುಕೊಂಡಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಲ್ಪಸಂಖ್ಯಾತ ಮತಬ್ಯಾಂಕ್ ಕಾರಣಕ್ಕಾಗಿ ಮಸೂದೆಯ ವಿರುದ್ಧ ರೊಚ್ಚಿಗೆದ್ದಿವೆ. ಬೆಳಗಾವಿ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಗುರುವಾರ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನಸಭೆ ವಿವಾದಿತ ಮಸೂದೆಗೆ ಅಂಗೀಕಾರ ನೀಡಿದೆ.
ಈ ನಡುವೆ, ರಾಜ್ಯದ ವಿವಿಧೆಡೆ ಹಲವು ಪ್ರಗತಿಪರ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಂಘಟನೆಗಳು ಮಸೂದೆಯ ವಿರುದ್ಧ ಬೀದಿಗಿಳಿದಿವೆ.
ರಾಜ್ಯದಲ್ಲಿ ನೆರೆ, ಪ್ರವಾಹ, ಬೆಲೆ ಏರಿಕೆ, ದುಬಾರಿ ಜೀವನಮಟ್ಟ, ಕೃಷಿ ಬಿಕ್ಕಟ್ಟು, ಕರೋನಾ ಸಂಕಷ್ಟದಂತಹ ಸಾಲು ಸಾಲು ಸಮಸ್ಯೆಗಳು, ಆತಂಕಗಳಿವೆ. ನೆರೆ=ಬರ ಸಂತ್ರಸ್ತರಿಗೆ, ರೈತರಿಗೆ ಬೆಳೆನಷ್ಟ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣ ಎಡವಿದೆ. ನ್ಯಾಯಯುತ ಪರಿಹಾರದ ಯತ್ನವನ್ನೂ ಮಾಡಿಲ್ಲ. ಬೆಲೆ ಏರಿಕೆಗೆ ಕಡಿವಾಣ ಹಾಕಿ ಜನರ ಆರ್ಥಿಕ ಸಂಕಷ್ಟದ ಹೊತ್ತಲ್ಲಿ ನೆರವಾಗುವ ಬದಲು, ಪೆಟ್ರೋಲ್, ಡೀಸೆಲ್ ಸೆಸ್ ನಯಾಪೈಸೆ ಕಡಿತ ಮಾಡದೆ ಬಡವರ ಮೇಲೆ ಚಪ್ಪಡಿ ಎಳೆಯುತ್ತಿದೆ. ಕರೋನಾ ಸಂಕಷ್ಟದಿಂದ ಜನ ಇನ್ನೂ ಹೊರಬಂದಿಲ್ಲ. ಅಷ್ಟರಲ್ಲಿ ಒಮಿಕ್ರಾನ್ ಅಲೆಯ ಭೀತಿ ತಲೆಎತ್ತಿದೆ.
ಇಂತಹ ಹೊತ್ತಲ್ಲಿ ಜನರ ಸಂಕಷ್ಟಗಳ ಸರಮಾಲೆಯ ಬಗ್ಗೆ ಚರ್ಚಿಸಬೇಕಾದ, ಪರಿಹಾರದ ಕುರಿತು ಯೋಚಿಸಬೇಕಾದ ವಿಧಾನಮಂಡಲ ಅಧಿವೇಶನದಲ್ಲಿ ಜನ ಸಾಮಾನ್ಯರ ಬದುಕಿಗೆ ಯಾವ ರೀತಿಯಲ್ಲೂ ಸಂಬಂಧವೇ ಪಡದ ಮತಾಂತರ ನಿಷೇಧ ಮಸೂದೆಯ ಕುರಿತು ವ್ಯರ್ಥ ಚರ್ಚೆ, ವಾಗ್ವಾದದಲ್ಲಿ ಮುಳುಗಿದೆ. ಮತಬ್ಯಾಂಕ್ ರಾಜಕಾರಣ ಎಂಬುದು ರಾಜಕೀಯ ಪಕ್ಷಗಳನ್ನು ಎಷ್ಟರಮಟ್ಟಿಗೆ ಆವರಿಸಿದೆ ಮತ್ತು ಮತಬ್ಯಾಂಕ್ ರಾಜಕಾರಣದ ಮುಂದೆ ಜನರ ನೈಜ ಸಮಸ್ಯೆಗಳು ಹೇಗೆ ಬದಿಗೆ ಸರಿದಿವೆ ಎಂಬುದಕ್ಕೆ ಮತಾಂತರ ನಿಷೇಧ ಕಾಯ್ದೆ ಒಂದು ಜ್ವಲಂತ ನಿದರ್ಶನ.
ವಯಸ್ಕ ವ್ಯಕ್ತಿಯೊಬ್ಬ ತನಗೆ ಬೇಕಾದ ಧರ್ಮವನ್ನು ಆಯ್ದುಕೊಳ್ಳುವ, ಅನುಸರಿಸುವ, ತನ್ನಿಚ್ಛೆಯ ಧಾರ್ಮಿಕತೆಯನ್ನು ಅಳವಡಿಸಿಕೊಳ್ಳುವ ಧಾರ್ಮಿಕ ಸ್ವಾತಂತ್ರ್ಯವನ್ನು ಸಂವಿಧಾನದ 25 ರಿಂದ 28ರವರೆಗಿನ ಪರಿಚ್ಛೇದಗಳು ನೀಡಿವೆ. ಧಾರ್ಮಿಕ ಸ್ವಾತಂತ್ರ್ಯ ಎಂಬುದು ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಆ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ಮಸೂದೆಯು ಸಂವಿಧಾನ ನೀಡಿರುವ ಈ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವ ಯತ್ನವಾಗಿದೆ. ಕೋಮು ರಾಜಕಾರಣದ ತನ್ನ ಅಜೆಂಡಾದ ಭಾಗವಾಗಿ ಬಿಜೆಪಿ ಮತ್ತು ಅದರ ಮಾತೃಸಂಘಟನೆ ಆರ್ ಎಸ್ ಎಸ್ ಈ ಸಂವಿಧಾನವಿರೋಧಿ ಮಸೂದೆಯನ್ನು ಜಾರಿಗೆ ತರಲು ಹವಣಿಸುತ್ತಿವೆ ಎಂಬುದು ಪ್ರತಿಪಕ್ಷಗಳ ಗಂಭೀರ ಆಕ್ಷೇಪ.
ಬಹುಸಂಖ್ಯಾತ ಹಿಂದೂಗಳ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ಈ ಮಸೂದೆ ರೂಪಿಸಿದೆ. ಈಗಾಗಲೇ ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ತನ್ನ ಆಡಳಿತಾವಧಿಯಲ್ಲಿ ಇಂತಹದ್ದೇ ಕಾಯ್ದೆಯನ್ನು ಜಾರಿಗೆ ತಂದಿರುವ ಬಿಜೆಪಿ, ಕರ್ನಾಟಕದಲ್ಲಿ ಕೂಡ ಯಥಾವತ್ತು ಕಾಯ್ದೆ ಜಾರಿಗೆ ಮುಂದಾಗಿದೆ. ಆದರೆ, ಗುಜರಾತಿನಲ್ಲಿ ಸಂವಿಧಾನದ ಪರಿಚ್ಛೇಧ 21-25ರ ಸ್ಪಷ್ಟ ಉಲ್ಲಂಘನೆ ಎಂಬ ಹಿನ್ನೆಲೆಯಲ್ಲಿ ಕಾಯ್ದೆಗೆ ಅಲ್ಲಿನ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆದಾಗ್ಯೂ ಹಿಂದೂ ರಕ್ಷಕ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳಲು ಬಿಜೆಪಿ ಕರ್ನಾಟಕದಲ್ಲಿ ಮತ್ತೆ ಕಾಯ್ದೆ ಜಾರಿಗೆ ಮುಂದಾಗಿದೆ. ಆ ಮೂಲಕ ಒಂದು ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಮಾಡಿ ಆ ಸಮುದಾಯವನ್ನು ಹಣಿಯಲು ಯತ್ನಿಸಲಾಗುತ್ತಿದೆ ಎಂಬ ಮಾತೂ ಕೇಳಿಬಂದಿದೆ.

ಯಾವುದೇ ವ್ಯಕ್ತಿ ತನ್ನ ಸ್ವಂತ ಧರ್ಮ ತ್ಯಜಿಸಿ ಮತ್ತೊಂದು ಧರ್ಮವನ್ನು ಅಳವಡಿಸಿಕೊಳ್ಳುವುದನ್ನು ಮತಾಂತರ ಎಂದು ವ್ಯಾಖ್ಯಾನಿಸಿರುವ ಈ ಮಸೂದೆಯು, ಅಂತಹ ಸಂದರ್ಭದಲ್ಲಿ ಮತಾಂತರಗೊಳ್ಳುವ ಮತ್ತು ಮತಾಂತರ ಮಾಡುವ ವ್ಯಕ್ತಿಗಳಿಬ್ಬರೂ ಜಿಲ್ಲಾಧಿಕಾರಿಗೆ 30 ದಿನಗಳ ಮುನ್ನ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು ಎನ್ನುತ್ತದೆ. ಅರ್ಜಿ ಸಲ್ಲಿಸಿದ ಬಳಿಕ ಆ ಕುರಿತು ಪ್ರಕಟಣೆ ಹೊರಡಿಸಿ, ಆಕ್ಷೇಪಣೆ ಆಹ್ವಾನಿಸಬೇಕು. ಒಂದು ವೇಳೆ ಆಕ್ಷೇಪಣೆ ಬಂದಲ್ಲಿ, ಆ ಕುರಿತು ವಿಚಾರಣೆ ನಡೆಸಬೇಕು. ವಿಚಾರಣೆಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎನ್ನುತ್ತದೆ ಮಸೂದೆ.
ಮುಖ್ಯವಾಗಿ ಮತಾಂತರಕ್ಕೆ ಆಮಿಷ ಒಡ್ಡಲಾಗಿದೆಯೇ ಎಂಬುದನ್ನು ವಿಚಾರಣೆಯ ವೇಳೆ ಪರಿಶೀಲಿಸಲಾಗುತ್ತದೆ. ನಗದು, ಉಡುಗೊರೆ, ಪ್ರತಿಫಲ, ಧಾರ್ಮಿಕ ಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ಉಚಿತ ಶಿಕ್ಷಣ, ಮದುವೆಯಾಗುವ ಭರವಸೆ, ಉತ್ತಮ ಜೀವನ, ದೈವಿಕ ಸಂತೋಷ, ಒಂದು ಧರ್ಮಕ್ಕೆ ವಿರುದ್ಧವಾಗಿ ಮತ್ತೊಂದು ಧರ್ಮವನ್ನು ವೈಭವೀಕರಿಸುವುದು ಮುಂತಾದವನ್ನು ಆಮಿಷ ಎಂದು ಮಸೂದೆಯಲ್ಲಿ ವ್ಯಾಖ್ಯಾನಿಸಲಾಗಿದೆ.
ಮತಾಂತರದ ಉದ್ದೇಶದಿಂದ ಭಿನ್ನ ಧರ್ಮದ ಯುವಕ-ಯುವತಿಯ ನಡುವೆ ನಡೆದ ಮದುವೆಯನ್ನು ಕೌಟುಂಬಿಕ ನ್ಯಾಯಾಲಯ ಅಸಿಂಧು ಎಂದು ಘೋಷಿಸಬಹುದು. ಇಂತಹ ಸಂದರ್ಭದಲ್ಲಿ ಮತಾಂತರಗೊಂಡ ವ್ಯಕ್ತಿ, ಆತನ ತಂದೆತಾಯಿ, ಸಹೋದರ-ಸಹೋದರಿಯರು ಅಷ್ಟೇ ಅಲ್ಲದೆ, ರಕ್ತ ಸಂಬಂಧಿಗಳು ಮತ್ತು ಸಹವರ್ತಿ, ಸಹೋದ್ಯೋಗಿಗಳು ಕೂಡ ದೂರು ಸಲ್ಲಿಸಬಹುದು ಎನ್ನುತ್ತದೆ ಮಸೂದೆ. ಹಾಗೇ ಅಪ್ರಾಪ್ತ, ಅಸ್ವಸ್ಥ ಚಿತ್ತದ ವ್ಯಕ್ತಿ, ಮಹಿಳೆ, ಪರಿಶಿಷ್ಟ ಜಾತಿ/ ಪಂಗಡದ ವ್ಯಕ್ತಿಗಳನ್ನು ಮತಾಂತರ ಮಾಡಿದರೆ ಮೂರು ವರ್ಷದಿಂದ ಹತ್ತು ವರ್ಷ ಜೈಲು ಶಿಕ್ಷೆ ಎಂಬುದೂ ಸೇರಿದಂತೆ ಪರಿಶಿಷ್ಟ ಜಾತಿ/ ಪಂಗಡ ವ್ಯಕ್ತಿಗಳು ಮತಾಂತರಗೊಂಡರೆ ಮೂಲ ಮತದಲ್ಲಿ ಪಡೆಯುತ್ತಿದ್ದ ಮೀಸಲಾತಿ ಸೇರಿದಂತೆ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಅವಕಾಶವಿಲ್ಲ ಎಂದೂ ಹೇಳಲಾಗಿದೆ.
ಮತಾಂತರಗೊಂಡವರಿಗೆ ಮೀಸಲಾತಿ ಸೇರಿದಂತೆ ಸರ್ಕಾರಿ ಸೌಲಭ್ಯ ನಿರಾಕರಿಸುವುದು, ಮಹಿಳೆ ಮತ್ತು ಪರಿಶಿಷ್ಟ ಜಾತಿ/ ಪಂಗಡದ ವ್ಯಕ್ತಿಗಳಿಗೆ ಮತಾಂತರದ ಸ್ವಾತಂತ್ರವ್ಯೇ ಇಲ್ಲ ಎಂಬಂತೆ ಅಂತಹವರ ಮತಾಂತರವನ್ನು ಕ್ರಿಮಿನಲೈಸ್ ಮಾಡಿರುವುದು ಮುಖ್ಯವಾಗಿ ಮತಾಂತರ ನಿಷೇಧ ಮಸೂದೆಯ ಉದ್ದೇಶವೇನು ಎಂಬ ಪ್ರಶ್ನೆಯನ್ನು ಎತ್ತಿದೆ. ಅದೇ ಹೊತ್ತಿಗೆ ಮತಾಂತರ ಎಂಬುದು ವ್ಯಕ್ತಿಯ ಆಯ್ಕೆಯಾಗಿರುವಾಗ, ಭಾರತದ ಸಂವಿಧಾನವನೇ ಆ ಆಯ್ಕೆಯನ್ನು ಮೂಲಭೂತ ಹಕ್ಕು ಎಂದು ನೀಡಿರುವಾಗ ರಾಜ್ಯ ಸರ್ಕಾರವೊಂದು ಮತಬ್ಯಾಂಕ್ ರಾಜಕಾರಣಕ್ಕಾಗಿ ಅಂತಹ ಹಕ್ಕನ್ನು ಮೊಟಕುಗೊಳಿಸುವುದು ಸಾಧ್ಯವೇ ಎಂಬ ಪ್ರಶ್ನೆ ಕೂಡ ಇದೆ.

ಅಷ್ಟಕ್ಕೂ ಮತಾಂತರದಿಂದ ಒಂದು ಧರ್ಮಕ್ಕೆ ಅಪಾಯ ಎದುರಾಗಿದೆ ಎಂದಾದರೆ ಆ ಧರ್ಮದಲ್ಲೇ ಏನೋ ಲೋಪವಿದೆ ಎಂದಲ್ಲವೆ? ತನ್ನ ಅನುಯಾಯಿಗಳಿಗೆ ಆ ಧರ್ಮ ಒಳ್ಳೆಯ ಬದುಕಿಗೆ ಬೇಕಾದ ಅವಕಾಶಗಳನ್ನು ನೀಡುವಲ್ಲಿ ಸೋತಿದೆ ಎಂದಲ್ಲವೆ? ತಾನು ಹುಟ್ಟಿ ಬೆಳೆದ ಧರ್ಮದಲ್ಲಿ, ಮತದಲ್ಲಿ ತನ್ನ ಬದುಕನ್ನು ಸುಸೂತ್ರವಾಗಿ ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ನಿರ್ಧರಿಸಿಯೇ ವ್ಯಕ್ತಿಯೊಬ್ಬ ಮತ್ತೊಂದು ಧರ್ಮದತ್ತ ವಾಲುತ್ತಾನೆ. ತನ್ನ ಧರ್ಮದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಮೇಲು ಕೀಳು ವ್ಯವಸ್ಥೆ, ಅನಿಷ್ಟ ಪದ್ಧತಿಗಳು, ಅವಮಾನ, ದಬ್ಬಾಳಿಕೆ, ಹಿಂಸೆ, ಬಡತನದಂತಹ ಜ್ವಲಂತ ಆತಂಕಗಳಿಂದ ಪಾರಾಗಲು ತಾನೆ ವ್ಯಕ್ತಿಯೊಬ್ಬ ಮತ್ತೊಂದು ಧರ್ಮದತ್ತ ಮುಖ ಮಾಡುವುದು? ಹಾಗಿದ್ದರೆ, ಮತಾಂತರದ ಸಮಸ್ಯೆಯ ಮೂಲ ಕಾರಣ ಪತ್ತೆ ಮಾಡಿ ಅದಕ್ಕೆ ಚಿಕಿತ್ಸೆ ನೀಡಬೇಕಾದ ಸಂವಿಧಾನದತ್ತ ಸರ್ಕಾರ, ಸಂವಿಧಾನಕ್ಕೆ ಪ್ರತಿಯಾಗಿ ಆ ಸಮಸ್ಯೆಯನ್ನು ನಿಭಾಯಿಸುವಲು ಹೊರಟಿರುವುದು ಎಷ್ಟು ಸರಿ? ಎಂಬುದು ಸರ್ಕಾರ ಉತ್ತರಿಸಬೇಕಾದ ಪ್ರಶ್ನೆ.
ನಿಜವಾಗಿಯೂ ಯಾವುದೇ ಸರ್ಕಾರಕ್ಕೆ ಮತಾಂತರದಂತಹ ವಿಷಯವನ್ನು ತಡೆಯಬೇಕು. ಆ ಮೂಲಕ ತನ್ನ ಮತಬ್ಯಾಂಕ್ ಆದ ಧರ್ಮವೊಂದನ್ನು ಉಳಿಸಿಕೊಳ್ಳಬೇಕು ಎಂದಾದರೆ, ಮೊದಲು ಆ ಧರ್ಮದಲ್ಲಿರುವ ಅಮಾನವೀಯ, ಹೇಯ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ತೊಡೆಯಬೇಕು. ಜಾತಿ ವ್ಯವಸ್ಥೆಯೊಂದಿಗೇ ಬರುವ ಅಸಮಾನತೆ, ದಬ್ಬಾಳಿಕೆ, ಅವಮಾನ, ಅವಕಾಶ ವಂಚನೆಯನ್ನು ತಡೆಯಬೇಕು. ಅದೆಲ್ಲವನ್ನೂ ಹಿಂದೆಂದಿಗಿಂತ ಹೆಚ್ಚು ಸಮೃದ್ಧಗೊಳಿಸಿ, ಸಂವಿಧಾನದ ಆಶಯವನ್ನು ಬದಿಗೊತ್ತಿ, ಎಲ್ಲಾ ತಾರತಮ್ಯ, ದಬ್ಬಾಳಿಕೆಯನ್ನು ಇನ್ನಷ್ಟು ವಿಜೃಂಭಿಸಿ ಆಚರಿಸಲು ಅನುವುಮಾಡಿಕೊಟ್ಟು, ಅಂತಹ ನರಕದಿಂದ ಪಾರಾಗುವ ಪ್ರಯತ್ನಗಳಿಗೆ ಮತಾಂತರ ನಿಷೇಧದ ಕತ್ತಿ ಝಳಪಿಸುವುದು ಮತ್ತೊಂದು ರೀತಿಯ ದಬ್ಬಾಳಿಕೆ. ಹಾಗಾಗಿ ಸರ್ಕಾರದ ಈ ಮತಾಂತರ ನಿಷೇಧ ಮಸೂದೆ ಬಲಾಢ್ಯ ಸಮುದಾಯಗಳು ಪರಿಶಿಷ್ಟ ಜಾತಿ, ಪಂಗಡ, ಮಹಿಳೆಯರು ಮುಂತಾದ ದುರ್ಬಲರ ಮೇಲೆ ನಡೆಸುವ ದಬ್ಬಾಳಿಕೆಗೆ, ಅಟ್ಟಹಾಸಕ್ಕೆ ಒಂದು ಕಾನೂನು ಬಲ ನೀಡುವ ಯತ್ನವೆಂದೇ ವ್ಯಾಖ್ಯಾನಿಸಲಾಗುತ್ತಿದೆ.