• Home
  • About Us
  • ಕರ್ನಾಟಕ
Tuesday, October 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಸಾಂವಿಧಾನಿಕ ನೈತಿಕತೆಯೂ ಆಡಳಿತ ಸಂಯಮವೂ

ನಾ ದಿವಾಕರ by ನಾ ದಿವಾಕರ
June 18, 2023
in ಅಂಕಣ
0
ಸಾಂವಿಧಾನಿಕ ನೈತಿಕತೆಯೂ ಆಡಳಿತ ಸಂಯಮವೂ
Share on WhatsAppShare on FacebookShare on Telegram

ಸಂವಿಧಾನ ಪೀಠಿಕೆಯ ನಿತ್ಯ ಪಠಣದಿಂದ ಸಾಂವಿಧಾನಿಕ ಆಡಳಿತಬದ್ಧತೆ ಸಾಬೀತಾಗುವುದಿಲ್ಲ

ADVERTISEMENT

ಸ್ಪಷ್ಟ ಬಹುಮತದೊಂದಿಗೆ ಅಧಿಕಾರಗ್ರಹಣ ಮಾಡಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮುಂದೆ ಹಲವು ಆಯಾಮಗಳ ಜವಾಬ್ದಾರಿಗಳಿವೆ. ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನೂ ದಾಟಿ ನಾಡಿನ ಜನತೆ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಸರ್ಕಾರ ಘೋಷಿಸಿರುವ ಉಚಿತ ಗ್ಯಾರಂಟಿಗಳೇ ಪಕ್ಷದ ಗೆಲುವಿಗೆ ಕಾರಣ ಎಂಬ ಒಂದು ವರ್ಗದ ವಿಶ್ಲೇಷಕರ ಅಭಿಪ್ರಾಯಗಳು ಪೂರ್ವಗ್ರಹಪೀಡಿತವಾಗಿದ್ದು, ಬಿಜೆಪಿ ಸರ್ಕಾರದ ಕಾರ್ಯವೈಖರಿ ಮತ್ತು ಜನವಿರೋಧಿ ಆಡಳಿತ ನೀತಿಗಳನ್ನು ಮರೆಮಾಚುವ ಒಂದು ತಂತ್ರವಾಗಿಯೇ ಕಾಣುತ್ತದೆ. ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ನೀಡಿರುವ ಕೆಲವು ಸವಲತ್ತುಗಳು ಈಗಾಗಲೇ ಪುರುಷ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದು, ಪಿತೃಪ್ರಧಾನತೆಯ ಕೊಳಕುಗಳೆಲ್ಲವೂ ಒಮ್ಮೆಲೇ ಹೊರಬರುತ್ತಿದೆ. ಈ ನಡುವೆಯೇ ಈ ಗ್ಯಾರಂಟಿಗಳನ್ನು ಮೀರಿದ ತನ್ನ ಜವಾಬ್ದಾರಿಯನ್ನು ಅರಿತು ಸರ್ಕಾರ ಆಡಳಿತ ನಡೆಸಬೇಕಿದೆ.

ಸಂವಿಧಾನಬದ್ಧವಾಗಿ ಆಡಳಿತ ನಡೆಸುತ್ತೇವೆ ಎಂಬ ಆಶ್ವಾಸನೆ ನೀಡಿರುವ ಹೊಸ ಸರ್ಕಾರ, ಶಾಲಾ ಕಾಲೇಜುಗಳಲ್ಲಿ, ಆಡಳಿತ ಕಚೇರಿಗಳಲ್ಲಿ ಮತ್ತು ಎಲ್ಲ ಸರ್ಕಾರಿ ಸಭೆಗಳಲ್ಲೂ ಸಂವಿಧಾನದ ಪೀಠಿಕೆಯನ್ನು ಓದಿ ಪ್ರಮಾಣೀಕರಿಸಲು ಆದೇಶಿಸಿರುವುದು ಸ್ವಾಗತಾರ್ಹವೇ ಆದರೂ, 75 ವರ್ಷಗಳ ಸ್ವತಂತ್ರ ಭಾರತದಲ್ಲಿ ಪ್ರಮಾಣವಚನಗಳು ತಮ್ಮ ವಾಸ್ತವಿಕ ಮೌಲ್ಯ ಕಳೆದುಕೊಂಡಿರುವುದನ್ನು ಗಮನಿಸದೆ ಇರಲಾಗುವುದಿಲ್ಲ. ಸಂವಿಧಾನಬದ್ಧ ಆಡಳಿತ ಎಂದರೆ ಭಾರತದ ಸಂವಿಧಾನ ಅಪೇಕ್ಷಿಸುವ ಸಾಮಾಜಿಕ ಸಾಮರಸ್ಯ, ಸಾಂಸ್ಕೃತಿಕ ಸಮನ್ವಯ, ಆರ್ಥಿಕ ಸಮಾನತೆ ಹಾಗೂ ಅಧಿಕಾರ ಕೇಂದ್ರಗಳ ಪ್ರಾಮಾಣಿಕ ಪಾರದರ್ಶಕ ಕಾರ್ಯನಿರ್ವಹಣೆ ಎಂದೇ ಭಾವಿಸಬೇಕಿದೆ. ಈ ನಿಟ್ಟಿನಲ್ಲಿ ಹೊಸ ಸರ್ಕಾರ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯವೂ ಆಗಿದೆ. ಈಗ ಘೋಷಿಸಲಾಗಿರುವ ಉಚಿತ ಗ್ಯಾರಂಟಿಗಳು ರಾಜಕೀಯವಾಗಿ ಅಧಿಕಾರಾರೂಢ ಪಕ್ಷಕ್ಕೆ ನೆರವಾಗಬಹುದೇ ಹೊರತು, ಸಾಂವಿಧಾನಿಕ ನಿರೀಕ್ಷೆಗಳನ್ನು ಸರಿಗಟ್ಟುವುದಿಲ್ಲ. ಏಕೆಂದರೆ ಭಾರತದ ಸಂವಿಧಾನ ಮೂಲತಃ ಸುಸ್ಥಿರ ಸಮ ಸಮಾಜವನ್ನು ಕಟ್ಟುವ ಕನಸನ್ನು ಹೊತ್ತಿದೆ.

ಸಾಮಾಜಿಕ ದುರಸ್ತಿಯ ಅವಶ್ಯಕತೆ

ಈ ಸಮ ಸಮಾಜದ ಕನಸು ಸಾಕಾರವಾಗಲು ಸರ್ಕಾರಗಳು ಕಲ್ಯಾಣ ರಾಜ್ಯದ ಚೌಕಟ್ಟುಗಳನ್ನೂ ಮೀರಿದ ಆರ್ಥಿಕ ನೀತಿಗಳನ್ನು ಅನುಸರಿಸಬೇಕಾಗುತ್ತದೆ. ಅತಿಯಾದ ಕೇಂದ್ರೀಕರಣಕ್ಕೊಳಗಾಗಿರುವ ಒಕ್ಕೂಟ ವ್ಯವಸ್ಥೆಯ ವೈರುಧ್ಯಗಳನ್ನು ಎದುರಿಸುತ್ತಲೇ ರಾಜ್ಯ ಸರ್ಕಾರಗಳು ತಮ್ಮದೇ ಆದ ಸಂಪನ್ಮೂಲ ಕ್ರೋಢೀಕರಣದತ್ತ ಹೆಚ್ಚು ಗಮನ ನೀಡಬೇಕಿದೆ. ಕೃಷಿ ವ್ಯವಸ್ಥೆ ಹಾಗೂ ರೈತ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಹಲವು ಆಯಾಮಗಳಲ್ಲಿ ವ್ಯಕ್ತವಾಗುತ್ತಿವೆ. ಎಪಿಎಂಸಿ ಕಾಯ್ದೆಯನ್ನು ಈಗಾಗಲೇ ಸರ್ಕಾರ ರದ್ದುಪಡಿಸಿದ್ದರೂ, ರೈತ ಸಮುದಾಯದ ಹಿತಾಸಕ್ತಿಯ ದೃಷ್ಟಿಯಿಂದ ಇನ್ನೂ ಜಾರಿಯಲ್ಲಿರುವ ಮೂರು ಕರಾಳ ಕೃಷಿ ಮಸೂದೆಗಳನ್ನು ಹಿಂಪಡೆಯುವುದೂ ,  ನವ ಉದಾರವಾದದ ಅಭಿವೃದ್ಧಿ ನೀತಿಗಳಿಗೆ ಬಲಿಯಾಗುತ್ತಿರುವ ಕೃಷಿ ಭೂಮಿಯನ್ನು ಸಂರಕ್ಷಿಸುವುದೂ ರಾಜ್ಯ ಸರ್ಕಾರದ ಆದ್ಯತೆಯಾಗಬೇಕಿದೆ. ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಯನ್ನೂ ರದ್ದುಪಡಿಸಬೇಕಿದೆ. ಮತಾಂತರ ನಿಷೇಧ ಕಾಯ್ದೆಯನ್ನು ಹೊಸ ಸರ್ಕಾರ ರದ್ದುಪಡಿಸಿದ್ದರೂ, ಈ ಕಾಯ್ದೆಯ ಹಿನ್ನೆಲೆಯಲ್ಲೇ ಸಮಾಜದಲ್ಲಿ ಸೃಷ್ಟಿಯಾಗಿರುವ ಪ್ರಕ್ಷುಬ್ಧ ವಾತಾವರಣವನ್ನು ಸರಿಪಡಿಸುವ ಜವಾಬ್ದಾರಿಯೂ ಸರ್ಕಾರದ ಮೇಲಿದೆ.

ಶಾಲೆಗಳಲ್ಲಿ ನಿತ್ಯ ಸಂವಿಧಾನ ಪೀಠಿಕೆಯ ಪಠಣ ಮಾಡುವುದರ ಜೊತೆಗೇ ಬೋಧಕ ವೃಂದದಲ್ಲಿ, ಅಧಿಕಾರಶಾಹಿಯಲ್ಲಿ ವ್ಯಕ್ತಿಗತವಾಗಿ ಬೇರೂರಿರುವ ಮತೀಯ ಭಾವನೆಗಳನ್ನು ಹೋಗಲಾಡಿಸುವುದು ಸರ್ಕಾರದ ಸಾಮಾಜಿಕ ಜವಾಬ್ದಾರಿಯಾಗಿರುತ್ತದೆ. ಮತೀಯ ಸೌಹಾರ್ದತೆ ನೆಲೆಸುವುದು ಸಮಾಜದ ನಿತ್ಯ ಚಟುವಟಿಕೆಗಳ ನೆಲೆಯಲ್ಲೇ ಹೊರತು ಪ್ರಮಾಣೀಕರಣದಲ್ಲಿ ಅಲ್ಲ. ಈ ವಾಸ್ತವವನ್ನು ಗಮನದಲ್ಲಿಟ್ಟು, ಕಳೆದ ಐದಾರು ವರ್ಷಗಳಲ್ಲಿ ಆಳವಾಗಿ ಬೇರೂರಿರುವ ಮತೀಯ ದ್ವೇಷ ಮತ್ತು ಕೋಮುಭಾವನೆಗಳನ್ನು ಹೋಗಲಾಡಿಸಬೇಕಿದೆ. ಪಠ್ಯಕ್ರಮ ಪರಿಷ್ಕರಣೆ ಈ ನಿಟ್ಟಿನಲ್ಲಿ ಒಂದು ಮಾರ್ಗವಾದರೂ, ಶಿಕ್ಷಕರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಉದ್ಧೀಪನಗೊಳಿಸುವುದು ಮುಖ್ಯವಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಆಳವಾಗಿ ಬೇರೂರಿರುವ ಜಾತಿವಾದ ಮತ್ತು ಮತೀಯವಾದವನ್ನು ಹೋಗಲಾಡಿಸಲು ಹೊಸ ಸರ್ಕಾರ ಸಾರ್ವಜನಿಕ ಸಹಯೋಗದೊಡನೆ, ನಾಗರಿಕ ಸಮಾಜದ ಸಂಘಟನೆಗಳ ಸಹಕಾರದೊಂದಿಗೆ ಸಾಮಾಜಿಕ ಸಾಮರಸ್ಯ ಸ್ಥಾಪಿಸುವಂತಹ ಕಾರ್ಯಕ್ರಮಗಳನ್ನು ಯೋಜಿಸಬೇಕಿದೆ.

ಈ ಕ್ರಮಗಳು ಸಫಲವಾಗಬೇಕಾದರೆ ಆಡಳಿತ ವ್ಯವಸ್ಥೆಯ ಎಲ್ಲ ಮೂಲೆಗಳನ್ನೂ ಆವರಿಸಿರುವ ಭ್ರಷ್ಟಾಚಾರದ ಬೇರುಗಳನ್ನು ಕಿತ್ತೊಗೆಯಬೇಕಿದೆ. ತಮ್ಮ ಕಳೆದ ಆಡಳಿತಾವಧಿಯಲ್ಲಿ ಲೋಕಾಯುಕ್ತವನ್ನು ದುರ್ಬಲಗೊಳಿಸಿರುವ ಆರೊಪದೊಂದಿಗೇ ಈ ಬಾರಿ ಜನಬೆಂಬಲ ಪಡೆದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅವರ ಸಚಿವ ಸಂಪುಟ, ಚುನಾವಣಾ ಪ್ರಚಾರದಲ್ಲಿ ಹಿಂದಿನ ಸರ್ಕಾರದ ವಿರುದ್ಧ ಮಾಡಿದ ಎಲ್ಲ ಭ್ರಷ್ಟಾಚಾರದ ಆರೋಪಗಳನ್ನು ಸಾಕ್ಷ್ಯಾಧಾರ ಸಮೇತವಾಗಿ ಸಾಬೀತುಪಡಿಸುವ ನೈತಿಕ ಜವಾಬ್ದಾರಿಯನ್ನು ಹೊತ್ತಿದೆ. 40 ಪರ್ಸೆಂಟ್‌ ಕಮಿಷನ್‌ ಆರೋಪಗಳು ಎಷ್ಟೇ ರೋಚಕವಾಗಿ ಕಂಡರೂ, ತಳಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಬೇರುಗಳು ಆಳಕ್ಕೆ ಇಳಿದಿರುವುದನ್ನು ಸಾಮಾನ್ಯ ಜನತೆ ಗಮನಿಸುತ್ತಲೇ ಇರುತ್ತಾರೆ. ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಹುದ್ದೆಯೂ ಸೇರಿದಂತೆ ಎಲ್ಲ ಸರ್ಕಾರಿ ಹುದ್ದೆಗಳೂ ಸಹ ಮಾರುಕಟ್ಟೆ ಸರಕಿನಂತೆ ಬಿಕರಿಯಾಗುತ್ತಿರುವುದನ್ನು ಜನರು ಗಮನಿಸುತ್ತಲೇ ಇದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಎನ್ನುವುದು ಅಲಂಕಾರಿಕ ಘೋಷಣೆಯಾಗದೆ, ತಳಮಟ್ಟದ ಸಮಾಜದಲ್ಲಿ ಜನತೆಗೆ ಸರ್ಕಾರಿ ಸೇವೆಗಳು ಹೆಚ್ಚಿನ ಹೊರೆಯಾಗದಂತೆ ಮಾಡುವುದು ಸರ್ಕಾರದ ನೈತಿಕ ಜವಾಬ್ದಾರಿಯಾಗಿರುತ್ತದೆ.

ಈ ನಿಟ್ಟಿನಲ್ಲಿ ಹೊಸ ಕಾಂಗ್ರೆಸ್‌ ಸರ್ಕಾರ ಆಡಳಿತ ಯಂತ್ರವನ್ನು ಸಂಪೂರ್ಣ ದುರಸ್ತಿ ಮಾಡಬೇಕಿದೆ. ಲೋಕಾಯುಕ್ತವನ್ನು ಬಲಪಡಿಸುವುದೇ ಅಲ್ಲದೆ ಸಂಸ್ಥೆಯ ಕ್ರಿಯಾಶೀಲ ಕಾರ್ಯನಿರ್ವಹಣೆಗೆ ಸೂಕ್ತವಾದ ಸಿಬ್ಬಂದಿಯನ್ನೂ ಒದಗಿಸಬೇಕಿದೆ. ಡಿಸೆಂಬರ್‌ನಲ್ಲಿ ಲಭ್ಯವಾಗಿರುವ ದತ್ತಾಂಶದ ಅನುಸಾರ ಕರ್ನಾಟಕ ಲೋಕಾಯುಕ್ತದಲ್ಲಿ 2200  ವಿಭಾಗ ಮಟ್ಟದ ತನಿಖೆಗಳು ಬಾಕಿ ಉಳಿದಿದ್ದು, 9318 ದೂರುಗಳನ್ನು ಪರಿಹರಿಸಬೇಕಿದೆ. 132 ಹುದ್ದೆಗಳು ಖಾಲಿ ಉಳಿದಿದೆ. 98 ಕಾನ್ಸ್‌ಟೇಬಲ್‌, 73 ಇನ್ಸ್‌ಪೆಕ್ಟರ್‌, 10 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳನ್ನು ಭರ್ತಿಮಾಡಬೇಕಿದೆ. ಭ್ರಷ್ಟಾಚಾರ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುವ ಈ ಸಂಸ್ಥೆಯನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಿ ಒಂದು ಸ್ವಾಯತ್ತ ಸಂಸ್ಥೆಯಾಗಿ ರೂಪಿಸುವುದೂ ಸರ್ಕಾರದ ನೈತಿಕ ಜವಾಬ್ದಾರಿಯಾಗಿದೆ. ಭ್ರಷ್ಟಾಚಾರದ ಮೂಲ ಬೇರುಗಳು ಎಷ್ಟೇ ಆಳಕ್ಕೆ ಇಳಿದಿದ್ದರೂ, ಆಡಳಿತದ ನಿತ್ಯ ನಿರ್ವಹಣೆಯಲ್ಲಿ ಭ್ರಷ್ಟ ಪರಂಪರೆ ಅಧಿಕಾರಶಾಹಿಯ ಪ್ರತಿಯೊಂದು ಮೂಲೆಯನ್ನೂ ಆವರಿಸಿರುವುದು ಜನಸಾಮಾನ್ಯರನ್ನು ಬಾಧಿಸುತ್ತಿರುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಲೋಕಾಯುಕ್ತ, ಸಿಒಡಿ ಮುಂತಾದ ಸಾಂವಿಧಾನಿಕ ಸಂಸ್ಥೆಗಳು ರಾಜಕೀಯ ವಿರೋಧಿಗಳನ್ನು ಮಣಿಸುವ ಅಸ್ತ್ರಗಳಾಗದೆ, ಆಡಳಿತವನ್ನು ಶುದ್ಧೀಕರಿಸುವ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವುದು ಅತ್ಯವಶ್ಯ.

ಆಡಳಿತ ದಕ್ಷತೆ-ಪಾರದರ್ಶಕತೆ

ಆಡಳಿತಾರೂಢ ಸರ್ಕಾರದ ಪ್ರಾಮಾಣಿಕತೆ, ಸಂವಿಧಾನ ಬದ್ಧತೆ ಹಾಗೂ ಪಾರದರ್ಶಕತೆ ಸ್ಪಷ್ಟವಾಗಿ ಗೋಚರಿಸುವುದು ಇಲ್ಲಿಯೇ. ಹಿಂದಿನ ಸರ್ಕಾರದ ಅಕ್ರಮಗಳನ್ನು, ಭ್ರಷ್ಟಾಚಾರವನ್ನು ತನಿಖೆಗೊಳಪಡಿಸಿ, ತಪ್ಪಿತಸ್ಥರನ್ನು ಕಾನೂನುರೀತ್ಯಾ ಶಿಕ್ಷೆಗೊಳಪಡಿಸುವ ಮೂಲಕ ಕಾಂಗ್ರೆಸ್‌ ಸರ್ಕಾರ ತನ್ನ ಕಾನೂನು/ಸಂವಿಧಾನಬದ್ಧತೆಯನ್ನು ಪ್ರದರ್ಶಿಸಬಹುದು. ಆದರೆ ಈ ರೀತಿಯ ಕ್ರಮಗಳು ಬಹುಪಾಲು ಸಂದರ್ಭಗಳಲ್ಲಿ ರಾಜಕೀಯಪ್ರೇರಿತವಾಗಿದ್ದು, ಅಂತಿಮವಾಗಿ ವ್ಯಕ್ತಿಗತ ರಾಜಕೀಯ ವಿರೋಧದ ನೆಲೆಯಲ್ಲಿ ಪರ್ಯವಸಾನ ಹೊಂದುತ್ತದೆ. ಭ್ರಷ್ಟ ರಾಜಕಾರಣಿಗಳು ಅಡಳಿತಾರೂಢ ಪಕ್ಷದಲ್ಲಿ ಸೇರ್ಪಡೆಯಾಗುವ ಮೂಲಕ ತಮ್ಮ ವಿರುದ್ಧದ ಭ್ರಷ್ಟಾಚಾರ ಹಾಗೂ ಇತರ ಕ್ರಿಮಿನಲ್‌ ಆರೋಪಗಳಿಂದ ಮುಕ್ತರಾಗಬಹುದಾದ ಒಂದು ಹೊಸ ಪರಂಪರೆ ಈಗಾಗಲೇ ದೇಶದಲ್ಲಿ ಜಾರಿಯಲ್ಲಿದ್ದು, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಒಂದು ಮಾರ್ಗಸೂತ್ರವನ್ನೂ ಕಲ್ಪಿಸಿದೆ. ಈ ರೀತಿಯ ಭ್ರಷ್ಟಾಚಾರ ವಿರೋಧಿ ಧೋರಣೆ ಮೂಲತಃ ಭ್ರಷ್ಟರಿಗೆ ರಕ್ಷಣೆ ನೀಡಿ ಪೋಷಿಸುವ ಒಂದು ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತದೆ. ಹಾಗಾಗಿ ಸಾಂವಿಧಾನಿಕ ನೈತಿಕತೆಯ ನೆಲೆಯಲ್ಲಿ ಭ್ರಷ್ಟಾಚಾರವನ್ನು ಹೋಗಲಾಡಿಸುವ ಇಚ್ಚ್ಛಾಶಕ್ತಿ ಇದ್ದರೆ  ಹಾಲಿ ಸರ್ಕಾರದಲ್ಲಿ ವ್ಯಾಪಿಸಿರಬಹುದಾದ ಹಣಕಾಸು ಭ್ರಷ್ಟಾಚಾರ ಹಾಗೂ ಅಧಿಕಾರ ದುರುಪಯೋಗದ ಎಲ್ಲ ಸಂಭಾವ್ಯ ಪ್ರಕರಣಗಳನ್ನೂ ನಿಯಂತ್ರಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ. ಅಧಿಕಾರಿಗಳಲ್ಲಿ, ಸಚಿವ/ಶಾಸಕರಲ್ಲಿ ತಮ್ಮ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್‌ ಅಥವಾ ಕರ್ತವ್ಯಚ್ಯುತಿ ಅಥವಾ ಭ್ರಷ್ಟಾಚಾರದ ಆರೋಪ ಬಂದರೆ ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ಕೊಡುವಷ್ಟು ಸೌಜನ್ಯ ಇಲ್ಲದೆ ಹೋದರೆ, ಸಂವಿಧಾನ ಪೀಠಿಕೆಯ ಪ್ರಮಾಣೀಕರಣ ಕೇವಲ ಔಪಚಾರಿಕ ಪಠಣವಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಸರ್ಕಾರ ಗತಪರಂಪರೆಯನ್ನು ಮರಳಿ ತರುವುದು ಜನತೆಯ ಅಪೇಕ್ಷೆಯಾಗಿರುತ್ತದೆ.

ಸಂವಿಧಾನ ಪೀಠಿಕೆಯ ಪಠಣವು ಸಾಂಕೇತಿಕವಾಗಿ ನಾವು ನಮ್ಮ ಸಂವಿಧಾನದ ಆಶಯಗಳಂತೆ ನಡೆದುಕೊಳ್ಳುತ್ತೇವೆ ಎನ್ನುವುದನ್ನು ಸೂಚಿಸುತ್ತದೆ. ಶಾಲಾ ಮಕ್ಕಳಿಂದ ಈ ಪಠಣ ಮಾಡಿಸುವ ಬೋಧಕ ವೃಂದ, ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಯಿಂದ ಪಠಣ ಮಾಡಿಸುವ ಉನ್ನತ ಅಧಿಕಾರಿ ವಲಯ, ಆಡಳಿತ ಕೇಂದ್ರಗಳಲ್ಲಿ ಸಮಸ್ತರಿಂದಲೂ ಪಠಣ ಮಾಡಿಸುವ ಜನಪ್ರತಿನಿಧಿಗಳು ಈ ಸಾಂಕೇತಿಕತೆಯನ್ನು ಮೀರಿ ಸಂವಿಧಾನ ಅಪೇಕ್ಷಿಸುವ ಮತಧರ್ಮ ನಿರಪೇಕ್ಷತೆ, ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕಲ್ಲವೇ ? ಇಲ್ಲವಾದಲ್ಲಿ ನಾವು ಮುಂದಿನ ತಲೆಮಾರಿಗೆ ಎಂತಹ ಸಂದೇಶವನ್ನು ನೀಡಲು ಸಾಧ್ಯ ? ಲಂಚ ನೀಡಿ ಬೋಧಕ ಹುದ್ದೆ ಪಡೆದವರು, ಲಂಚ ಪಡೆದು ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುವವರು, ಸರ್ಕಾರಿ ಉಪನ್ಯಾಸಕರಾಗಿದ್ದು ಖಾಸಗಿ ಕೋಚಿಂಗ್‌ ಸೆಂಟರ್‌ ನಡೆಸುವವರು, ರಿಯಲ್‌ ಎಸ್ಟೇಟ್‌, ಕಲ್ಲುಗಣಿಗಾರಿಕೆ ಮತ್ತಿತರ ಔದ್ಯಮಿಕ ಸಾಮ್ರಾಟರಿಗೆ ಸಂಪತ್ತಿನ ಲೂಟಿಗೆ ಸುಗಮ ಮಾರ್ಗಗಳನ್ನು ಕಲ್ಪಿಸುವ ಜನಪ್ರತಿನಿಧಿಗಳು, ಮೂಲ ಸೌಕರ್ಯಗಳ ನಿರ್ಮಾಣದಲ್ಲಿ ಅಕ್ರಮಗಳಿಂದ ಕಳಪೆ ಕಾಮಗಾರಿ ನಡೆಸುವ ಅಧಿಕಾರಿಗಳು ಸದಾ ರಾಜ್ಯ ಸರ್ಕಾರದ-ಲೋಕಾಯುಕ್ತದಂತಹ ಸಂಸ್ಥೆಯ ಕಣ್ಗಾವಲಿಯಲ್ಲಿರುವಂತಹ ಒಂದು ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ರೂಪಿಸಬೇಕಿದೆ.

ಹಾಗೆಯೇ ಸಂವಿಧಾನ ಪೀಠಿಕೆಯನ್ನು ನಿತ್ಯಪಠಣ ಮಾಡುತ್ತಲೇ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಜಾತಿ ಭೇದ, ಮತಭೇದಗಳನ್ನು ಸೃಷ್ಟಿಸುವಂತಹ ಮತೀಯವಾದಿ ಬೋಧನೆಯನ್ನು ಮಾಡುವ ಬೋಧಕ ವೃಂದ ನಮ್ಮ ನಡುವೆ ಇರುವ ಸಾಧ್ಯತೆಗಳಿವೆ. ಹಿಂದಿನ ಬಿಜೆಪಿ ಸರ್ಕಾರದ ಶಿಕ್ಷಣ ಕೇಸರೀಕರಣ ಪ್ರಕ್ರಿಯೆಯನ್ನು ಕೇವಲ ಶೈಕ್ಷಣಿಕ ನೀತಿ ಮತ್ತು ಪಠ್ಯಬೋಧನೆಗಳ ನೆಲೆಯಲ್ಲಿ ನೋಡದೆ, ಶಾಲಾ ಕಾಲೇಜುಗಳ ಮಕ್ಕಳ ನಡುವೆ ಭಿನ್ನ ಭೇದಗಳನ್ನು ಬಿತ್ತುವ ವ್ಯವಸ್ಥಿತ ವರ್ತನೆಯಲ್ಲಿ ನೋಡಬೇಕಾಗಿದೆ. ಉದಾಹರಣೆಗೆ ಹಿಜಾಬ್‌ ವಿವಾದ ಆರಂಭವಾದದ್ದು ಒಂದು ಕಾಲೇಜು ಆವರಣದಲ್ಲೇ, ಅತಿರೇಕಕ್ಕೆ ಹೋದದ್ದೂ ಸಹ ಶೈಕ್ಷಣಿಕ ವಾತಾವರಣದ ನಡುವೆಯೇ ? ಈ ಮನಸ್ಥಿತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಮಕ್ಕಳಲ್ಲಿ ಸಂವೇದನಾಶೀಲತೆಯನ್ನು ಹೆಚ್ಚಿಸುವ ಹಾಗೂ ಮನುಜ ಸೂಕ್ಷ್ಮತೆಯನ್ನು ಉದ್ಧೀಪನಗೊಳಿಸುವ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ. ಮನೆಮನೆಗಳಲ್ಲೂ ವ್ಯಾಪಿಸಿರುವ ಕೋಮುಭಾವನೆಗಳು ಮನಮನದಲ್ಲೂ ನೆಲೆಸಿರುವುದರಿಂದ ಬಿತ್ತಲಾಗಿರುವ ದ್ವೇಷ ಬೀಜಗಳನ್ನು ಕಿತ್ತೊಗೆಯಲು ಸಾಮಾಜಿಕ ಜಾಗೃತಿಯೊಂದೇ ಮಾರ್ಗವಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಒತ್ತಾಸೆಯೊಂದಿಗೆ ಜನಪ್ರತಿನಿಧಿಗಳು ತಾಲ್ಲೂಕು ಮಟ್ಟದಲ್ಲಿ ಯುವ ಜನತೆಯ ನಡುವೆ ಜಾಗೃತಿ ಉಂಟುಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. 

ಸಾಂಸ್ಕೃತಿಕ ಹೊಣೆಗಾರಿಕೆ

ನಮ್ಮ ಸಮಾಜವನ್ನು ಕಾಡುತ್ತಿರುವುದು ಕೋಮುವಾದ-ಮತದ್ವೇಷ ಮಾತ್ರವೇ ಅಲ್ಲ. ಪಿತೃಪ್ರಧಾನತೆ ಮತ್ತು ಪುರುಷಾಹಮಿಕೆಯೂ ಆಳವಾಗಿದೆ. ಇದರೊಂದಿಗೆ ಜಾತಿ ತಾರತಮ್ಯ-ದೌರ್ಜನ್ಯಗಳೂ ಸೇರಿ ರಾಜ್ಯದಲ್ಲಿ ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆಯ ಆಚರಣೆ, ಮರ್ಯಾದೆಗೇಡು ಹತ್ಯೆ ಇವೆಲ್ಲವೂ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಹೆಣ್ಣು ಮಕ್ಕಳ ವಸತಿ ಶಾಲೆಗಳಲ್ಲಿ-ವಿದ್ಯಾರ್ಜನೆಯ ಕೇಂದ್ರಗಳಲ್ಲಿ ಅಪ್ರಾಪ್ತೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇಡೀ ಸಮಾಜವನ್ನು ತಲೆತಗ್ಗಿಸುವಂತೆ ಮಾಡುತ್ತಿವೆ. ಸಮಾಜದ ಅಂತಃಸತ್ವವನ್ನು ಕಲುಷಿತಗೊಳಿಸುವ ಈ ಪ್ರಕರಣಗಳನ್ನು ಕಾನೂನುರೀತ್ಯಾ ನಿವಾರಣೆ ಮಾಡುವುದರೊಂದಿಗೇ, ಇಂತಹ ಅಮಾನುಷತೆಗೆ ಪ್ರೇರಣೆ ನೀಡುವ ಜಾತಿ-ಧರ್ಮಶ್ರೇಷ್ಠತೆ, ಪಾರಮ್ಯ ಮತ್ತು ಪುರುಷಾಧಿಪತ್ಯದ ಮನೋಭಾವವನ್ನು ಹೋಗಲಾಡಿಸಲು ಮಕ್ಕಳಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಣುವ ಮನಸ್ಥಿತಿಯನ್ನು ಉಂಟುಮಾಡಬೇಕಿದೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳಲ್ಲಿ ಲಿಂಗಸೂಕ್ಷ್ಮತೆಯನ್ನು ಉಂಟುಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕರ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಬಹುಮತ ಪಡೆದ ಪ್ರಜಾಸತ್ತಾತ್ಮಕ ಸರ್ಕಾರ ಇಂತಹ ಪ್ರಯತ್ನಗಳಿಗೆ ಒತ್ತಾಸೆಯಾಗಿ ನಿಲ್ಲಬೇಕಿದೆ.

ಈ ಎಲ್ಲ ಆದರ್ಶಗಳನ್ನು ಸಮಾಜದ ತಳಮಟ್ಟದವರೆಗೂ ತಲುಪಿಸುವುದರ ಮೂಲಕವೇ ನಾವು ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವುದು ಸಾಧ್ಯವಾದೀತು. ಸಂವಿಧಾನದ ಪೀಠಿಕೆಯಲ್ಲಿರುವ ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯ ಮುಂತಾದ ಪ್ರತಿಯೊಂದು ಪದವೂ ವಿಶಾಲಾರ್ಥದ ಆದರ್ಶಗಳನ್ನು ಹೇಳುತ್ತದೆ. ಕೇವಲ ಕಂಠಪಾಠ ಮಾಡಿ ಪಠಿಸುವುದರಿಂದ ಈ ಆದರ್ಶಗಳು ಸ್ಮರಣೆಯಲ್ಲಿ ಉಳಿಯಬಹುದೇ ಹೊರತು, ಹೃದಯಾಂತರಾಳದಲ್ಲಿ ನೆಲೆಸುವುದಿಲ್ಲ. ಶಾಲಾ ಮಟ್ಟದಲ್ಲೇ ಮಕ್ಕಳಲ್ಲಿ ಈ ಉದಾತ್ತ ಆದರ್ಶಗಳನ್ನು ಬಿತ್ತುವುದರ ಮೂಲಕ ಭವಿಷ್ಯದ ಪೀಳಿಗೆಗಾದರೂ ಒಂದು ಮಾನವೀಯ ಸಮಾಜದ ಕನಸನ್ನು ಕಾಣಲು ಸಾಧ್ಯವಾದೀತು. ಇದು ಕಾರ್ಯಗತವಾಗಬೇಕಾದರೆ, ಆಡಳಿತ ವ್ಯವಸ್ಥೆಯಲ್ಲಿನ ಅಧಿಕಾರಿಗಳು, ಶೈಕ್ಷಣಿಕ ವಲಯದ ಪರಿಚಾರಕರು, ಸಾಂಸ್ಕೃತಿಕ ವಲಯದ ಚಿಂತಕರು ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಸಂವಿಧಾನಬದ್ಧತೆಯ ಪ್ರಮಾಣವಚನ ಸ್ವೀಕರಿಸುವ ಚುನಾಯಿತ ಜನಪ್ರತಿನಿಧಿಗಳು ಸಾಂವಿಧಾನಿಕ ನೈತಿಕತೆಯನ್ನು ಪಾಲಿಸುವಂತಾಗಬೇಕು.

ಈ ನೈತಿಕತೆ ಇದ್ದರೆ ಮಾತ್ರ ಆಡಳಿತದಲ್ಲಿ ಸಂಯಮ ಮತ್ತು ಸೌಜನ್ಯಯುತ ವರ್ತನೆಯನ್ನೂ ಕಾಣುವುದು ಸಾಧ್ಯ. ಕೇಂದ್ರದಲ್ಲಾಗಲೀ ರಾಜ್ಯದಲ್ಲಾಗಲೀ ಮತದಾರರು ಆಯ್ಕೆ ಮಾಡುವುದು ಸಂವಿಧಾನಬದ್ಧದ ಪ್ರಜಾಸತ್ತಾತ್ಮಕ ಸರ್ಕಾರವನ್ನೇ ಹೊರತು ಯಾವುದೋ ನಿರ್ದಿಷ್ಟ ಗುಂಪಿನ ಸಂರಕ್ಷಕರನ್ನಲ್ಲ. ಈ ಪರಿಜ್ಞಾನ ಆಡಳಿತ ವ್ಯವಸ್ಥೆಯ ನಿರ್ವಹಣಕಾರರಲ್ಲಿ ಇದ್ದರೆ ಸಾಂವಿಧಾನಿಕ ನೈತಿಕತೆಯನ್ನು ಮೈಗೂಡಿಸಿಕೊಳ್ಳಬಹುದು. ಸಂವಿಧಾನ ಪೀಠಿಕೆಯ ಪಠಣ ಅಲಂಕಾರಿಕ-ಔಪಚಾರಿಕ ನಿತ್ಯಕರ್ಮವಾಗದೆ ಸಂವಿಧಾನದ ಆಶಯಗಳನ್ನು ಈಡೇರಿಸುವ ಸೇತುವೆಯಾದರೆ ಕರ್ನಾಟಕದ ಮಟ್ಟಿಗಾದರೂ ಸಾಮಾಜಿಕ ಸಾಮರಸ್ಯ ಮತ್ತು ಸಮನ್ವಯದ ಸೌಹಾರ್ದಯುತ ಸಮಾಜವೊಂದನ್ನು ಕಟ್ಟಲು ಸಾಧ್ಯವಾದೀತು. ಈ ಸದ್ಭಾವನೆಯ ಬೀಜಗಳನ್ನು ಶತಮಾನಗಳಿಂದ ಬಿತ್ತಲಾಗಿದೆ. ಪೋಷಿಸಿ ನೀರೆರೆದು ಬೆಳೆಸಿ ಹಸನಾಗಿಸುವ ನೈತಿಕ ಜವಾಬ್ದಾರಿ ಚುನಾಯಿತ ಸರ್ಕಾರಗಳ ಮೇಲಿದೆ. ಕರ್ನಾಟಕದ ಜನತೆ ಇದನ್ನೇ ಬಯಸಿದ್ದಾರೆ.

Tags: BJPguarantee schemePreamble to the ConstitutionState Govt
Previous Post

ಬೆಸ್ಕಾಂ, ನಾಡಕಚೇರಿ ಭಾನುವಾರವೂ ಓಪನ್​ : ಇದರ ಹಿಂದಿದೆ ಈ ಕಾರಣ

Next Post

ಪ್ರಧಾನಿ ಮೋದಿ ‘ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ’ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿಕೆ

Related Posts

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
0

ಜ್ವರ ಹಾಗೂ ಯೂರಿನ್ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ್ರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ಕೆಲವು ದಿನಗಳ...

Read moreDetails

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025
Next Post
ಪ್ರಧಾನಿ ಮೋದಿ ‘ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ’ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿಕೆ

ಪ್ರಧಾನಿ ಮೋದಿ ‘ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ' ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿಕೆ

Please login to join discussion

Recent News

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

October 13, 2025

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada