ಬೆಂಗಳೂರಿನಲ್ಲಿ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಟ 20 ಸೀಟ್ ಗೆಲ್ಲಬೇಕು, ಗೆಲ್ಲುತ್ತೇವೆ ಎಂದು ತಿಳಿಸಿದ್ದಾರೆ. ಈ ಬಾರಿ ಮಂಗಳೂರು, ಉಡುಪಿ ಸೇರಿದಂತೆ ಎಲ್ಲಾ ಕಡೆಯಲ್ಲೂ ಮಹಿಳಾ ಮತದಾರರು ಹೆಚ್ಚು ಮತ ಚಲಾಯಿಸಿದ್ದಾರೆ. ಉತ್ತರ ಕರ್ನಾಟಕ ಮಾತ್ರವಲ್ಲದೆ ಎಲ್ಲಾ ಕಡೆಯಲ್ಲೂ ಮಹಿಳೆಯ ಮತದಾನ ಹೆಚ್ಚಾಗಿ ಮತದಾನ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದಿದ್ದಾರೆ. ವಿಜಯಪುರದಲ್ಲಿ 1 ಲಕ್ಷ ಮತಗಳ ಹಂತರದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೊಡ್ಡವರೇ ನಮ್ಮ ಹಿಂದೆ ಇದ್ದಾರೆ ಎಂಬ ದೇವರಾಜೇಗೌಡ ಹೇಳಿಕೆಗೆ ಬಗ್ಗೆ ಮಾತನಾಡಿರುವ ಎಂ.ಬಿ ಪಾಟೀಲ್, ಈಗ ಎಸ್ಐಟಿ ರಚನೆ ಆಗಿದೆ. ಮಂತ್ರಿಯಾಗಿ ನಾನು ಏನನ್ನೂ ಮಾತನಾಡಲು ಬಯಸಲ್ಲ. ಎಸ್ಐಟಿ ತನ್ನ ಕೆಲಸ ಮಾಡುತ್ತದೆ ಎಂದಿದ್ದಾರೆ. ಪ್ರಜ್ವಲ್ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಅಂತ ಹೆಚ್.ಡಿ ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿರುವ ವಿಚಾರಕ್ಕೆ ವ್ಯಂಗ್ಯವಾಡಿರುವ ಎಂಬಿ ಪಾಟೀಲ್, ಕ್ಲೀನ್ ಚೀಟ್ ಕೊಡೋಕಾ? ವಾಷಿಂಗ್ ಮಿಷನ್ಗೆ ಹಾಕೋಕಾ..? ಎಂದಿದ್ದಾರೆ.
ಕೆಲವೇ ತಿಂಗಳುಗಳಲ್ಲಿ ಸರ್ಕಾರ ಬೀಳುತ್ತೆ ಎಂಬ ಬಿಜೆಪಿ, ಜೆಡಿಎಸ್ ನಾಯಕರ ಹೇಳಿಕೆಗೆ ತಿರುಗೇಟು ಕೊಟ್ಟಿದ್ದು, ಈ ಸರ್ಕಾರ ಬೀಳಿಸಬೇಕಾದ್ರೆ 60 ಶಾಸಕರು ಬೇಕು. ಇಬ್ಬರು ಸೇರಿ ನಾಲ್ಕು ಶಾಸಕರನ್ನ ಕರೆದುಕೊಂಡು ಹೋಗಲಿ, ಬಿಜೆಪಿ ಶಾಸಕರೇ ನಮ್ಮ ಜೊತೆ ಇದ್ದಾರೆ. ಸರ್ಕಾರ ಬೀಳಿಸುವುದು ಅಸಾಧ್ಯವಾದ ಮಾತು. ಇದು ರಾಜಕೀಯ ಹೇಳಿಕೆ ಅಷ್ಟೆ. ಜೆಡಿಎಸ್ನಲ್ಲಿ ಇರುವ ಶಾಸಕರು ಈಗಾಗಲೇ ಅತಂತ್ರರಾಗಿದ್ದಾರೆ. ಲೀಡರ್ಸ್ಗಳು ನಮ್ಮನ್ನ ಸೇರಿಸಿಕೊಳ್ಳಿ ಅಂತ ಕೇಳುತ್ತಿದ್ದಾರೆ. ಈ ಸರ್ಕಾರ ಬೀಳಿಸಬೇಕಾದ್ರೆ 60 ಶಾಸಕರು ಬೇಕು. ಇಬ್ಬರು ಸೇರಿದ್ರೂ ನಾಲ್ಕು ಶಾಸಕರನ್ನ ಸೆಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶ ಬಳಿಕ ಸಚಿವ ಸಂಪುಟ ಪುನರ್ ರಚನೆ ಆಗುವ ವಿಚಾರದ ಬಗ್ಗೆ ಮಾತನಾಡಿ, ಅದನ್ನ ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ. ಕಾಲ ಕಾಲಕ್ಕೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಏನೇನು ಮಾಡಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ. ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿಗೆ ಮಹಿಳೆಯರು ಮತ ಚಲಾಯಿಸಿದ್ದು, ಮಹಿಳಾ ಮತದಾರರು ಹೆಚ್ಚಾಗಿ ಮತ ಚಲಾಯಿಸಿರುವುದು ಕಾಂಗ್ರೆಸ್ಗೆ ಲಾಭ ತರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಈ ವಿಶ್ವಾಸ ಸರಿಯೋ ತಪ್ಪೋ ಅನ್ನೋದನ್ನು ಜೂನ್ 4ರಂದು ಬರುವ ಫಲಿತಾಂಶ ನಿರ್ಧಾರ ಮಾಡಲಿದೆ.
ಕೃಷ್ಣಮಣಿ