ರಾಹುಲ್ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ನಡೆಸಿದ ಪ್ರತಿಭಟನೆ ಆ ಪಕ್ಷಕ್ಕೆ ಹೊಸ ಹುರುಪು ನೀಡಿದೆ. ಜೊತೆಗೆ ಅಗ್ನಿಪಥ್ ವಿರೋಧಿಸಿ ದೇಶಾದ್ಯಂತ ಯುವಕರು (ಯುವಕರನ್ನು ಬಿಜೆಪಿ ಓಟ್ ಬ್ಯಾಂಕ್ ಎಂದು ಹೇಳಲಾಗುತ್ತದೆ) ಪ್ರತಿಭಟನೆ ನಡೆಸುತ್ತಿರುವುದು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಚೈತನ್ಯ ಮೂಡಿಸಿದೆ. ಈ ಎರಡೂ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಕಾಂಗ್ರೆಸ್ ಹಿರಿಯ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ದೇಶಾದ್ಯಂತ ಹೊಸ ರೀತಿಯ ಜನಾಂದೋಲನ ನಡೆಸುವ ರೂಪುರೇಷೆ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಚಳವಳಿ ನಡೆಸಿದರೆ ಕಾಂಗ್ರೆಸ್ ಕಾರ್ಯಕರ್ತರನ್ನು ಮಾತ್ರ ಬಡಿದೆಬ್ಬಿಸಬಹುದು. ಆದರೆ ನ್ಯೂಟ್ರಲ್ ಆಗಿರುವ ಜನರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ವಿಶೇಷ ರೀತಿಯ ಚಳವಳಿಗಳನ್ನು ರೂಪಿಸಬೇಕು ಎಂದು ನಿರ್ಧರಿಸಲಾಗಿದೆ. ಕಾಂಗ್ರೆಸ್ ಪಕ್ಷ ಪ್ರತಿ ವರ್ಗದವರನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ಹೋರಾಟ ರೂಪಿಸಬೇಕು ಎಂದು ನಿರ್ಧರಿಸಲಾಗಿದೆ. ಇದರ ಮೊದಲ ಹೆಜ್ಜೆಯೇ ನಿನ್ನೆ ದೆಹಲಿಯ ಜಂತರ್ ಮಂತರ್ ನಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ನಡೆದ ಸತ್ಯಾಗ್ರಹ.

ಮೊದಲ ಹಂತ
ಈವರೆಗೆ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹಿಂಸಾಚಾರಕ್ಕೂ ತಿರುಗಿದೆ. ಆದರೆ ರಾಜಕೀಯ ಪಕ್ಷಗಳು ಹೇಳಿಕೆಗಳಿಗೆ, ಖಂಡನೆಗೆ ಮಾತ್ರ ಸೀಮಿತವಾಗಿವೆಯೇ ಹೊರತು ಪ್ರತಿಭಟನೆಗಿಳಿದಿಲ್ಲ. ಹೆಚ್ಚೆಂದರೆ ಪರೋಕ್ಷವಾಗಿ ಬೆಂಬಲ ನೀಡಿವೆ. ಕಾಂಗ್ರೆಸ್ ಈ ವಿಚಾರದಲ್ಲಿ ಮುಂದಡಿ ಇಟ್ಟಿದೆ. ಅಧಿಕೃತವಾಗಿ ನಿನ್ನೆ ದೆಹಲಿಯ ಜಂತರ್ ಮಂತರ್ ನಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ಶಾಂತಿಯುತವಾಗಿ ಸತ್ಯಾಗ್ರಹ ನಡೆಸಿದೆ.
ಎರಡನೇ ಹಂತ
ಇಂದು ದೇಶದಾದ್ಯಂತ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಅಗ್ನಿಪಥ ಯೋಜನೆಯ ವಿರುದ್ಧ ಬೀದಿಗಳಿಯಲಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸತ್ಯಾಗ್ರಹ ಮುಂದುವರೆಸಲಿದ್ದಾರೆ. ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುವಂತೆ ಮತ್ತು ಯುವಕರು ಸ್ವಯಂಪ್ರೇರಿತವಾಗಿ ನಡೆಸುತ್ತಿರುವ ಹೋರಾಟಕ್ಕೆ ಪ್ರತ್ಯೇಕ ಮತ್ತು ಪರೋಕ್ಷ ಬೆಂಬಲ ನೀಡುವಂತೆ ರಾಜ್ಯ ಘಟಕಗಳಿಗೆ ಎಐಸಿಸಿ ಸೂಚನೆ ನೀಡಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ಅವರ ಇಡಿ ವಿಚಾರಣೆಗೆ ಮಾತ್ರವಲ್ಲ ದೇಶದ ನಿಜವಾದ ಸಮಸ್ಯೆಗೂ ಸ್ಪಂದಿಸುತ್ತದೆ ಎಂಬ ಸಂದೇಶ ರವಾನಿಸಲು ಮುಂದಾಗಿದೆ.
ಮೂರನೇ ಹಂತ
ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ, ಕರಾಳ ಕಾನೂನುಗಳು ಹಾಗೂ ಕೇಂದ್ರ ಸರ್ಕಾರದ ದುರಾಡಳಿತದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ದೇಶದ ವಿವಿಧ ರಾಜ್ಯಗಳಿಂದ ದೇಶದ ರಾಜಧಾನಿ ದೆಹಲಿಗೆ ದೊಡ್ಡ ಮಟ್ಟದಲ್ಲಿ ಬಂದು ಪ್ರತಿಭಟನೆ ನಡೆಸುವ ಕಾರ್ಯಸೂಚಿಯೂ ತಯಾರಾಗುತ್ತಿದೆ. ಯಾವ ವಿಷಯ ಪ್ರಸ್ತುತತೆ ಹೊಂದಿರುತ್ತದೋ ಅಂತಹುದನ್ನು ಜನಪರ ಹೋರಾಟವಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.
ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಎಐಸಿಸಿ ಕಚೇರಿ ಅಥವಾ ದೆಹಲಿಯ ಬೇರೆ ಯಾವುದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರೂ ಕಾಂಗ್ರೆಸ್ ಇಷ್ಟೊಂದು ಕ್ರೀಯಾಶೀಲ ಆಗುತ್ತಿರಲಿಲ್ಲವೇನೋ. ಆದರೆ ಈ ಬಾರಿ ಬಹಳ ಅಪರೂಪಕ್ಕೆ ರಾಹುಲ್ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ದೇಶದ ಬಹುತೇಕ ಎಲ್ಲಾ ರಾಜ್ಯಗಳು, ಎಲ್ಲಾ ಜಿಲ್ಲೆಗಳು, ನಗರಗಳು, ತಾಲ್ಲೂಕುಗಳು ಮತ್ತು ಪಟ್ಟಣಗಳಲ್ಲಿ ನಡೆದಿದೆ. ಇದರಿಂದ ಸ್ಫೂರ್ತಿ ಪಡೆದಿರುವ ಕಾಂಗ್ರೆಸ್ ದೆಹಲಿ ನಾಯಕರು ಬೇರೆ ಜನವಿರೋಧಿ ವಿಷಯಗಳ ಬಗ್ಗೆ ಕೂಡ ಇಂತಹುದೇ ಮಾದರಿಯಲ್ಲಿ ಚಳವಳಿ ನಡೆಸಬೇಕು ಎಂದು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಜನಾಂದೋಲನ ರೂಪಿಸಲು ನಿರ್ಧರಿಸಲಾದ ಸಭೆಯಲ್ಲಿ ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದು ಸಣ್ಣ ಸಣ್ಣ ಚಳವಳಿಗಳ ಮೂಲಕ ಜನಜಾಗೃತಿ ಮೂಡಿಸಬೇಕು. ಅಂತಿಮವಾಗಿ ಅಕ್ಟೋಬರ್ 2ರಿಂದ ‘ಭಾರತ್ ಜೋಡೋ’ ಯಾತ್ರೆ ಆರಂಭಿಸಬೇಕು. ರಾಹುಲ್ ಗಾಂಧಿ ಅವರು ಪಾದಯಾತ್ರೆ ಮೂಲಕವೇ ‘ಭಾರತ್ ಜೋಡೋ’ ಯಾತ್ರೆ ಮಾಡಬೇಕು. ಮಾರ್ಗ ಮಧ್ಯೆ ಸಭೆ, ಸಮಾರಂಭ, ಸಮಾಲೋಚನೆ, ಸಂವಾದ ಮತ್ತಿತರರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. 2024ರ ಲೋಕಸಭಾ ಚುನಾವಣೆ ವೇಳೆವರೆಗೂ ವಿರಮಿಸದೆ ಹೋರಾಡಬೇಕು ಎಂದು ನಿಶ್ಚಯಿಸಲಾಗಿದೆ ಎಂದು ತಿಳಿದುಬಂದಿದೆ.

ಹಿಂಸಾಚಾರದ ಹಾದಿಯನ್ನು ಬಿಟ್ಟು ಸತ್ಯಾಗ್ರಹದ ಮೂಲಕ ಆಂದೋಲನ ಮಾಡಿ ಆಳುವ ಸರ್ಕಾರಕ್ಕೆ ತಕ್ಕ ಉತ್ತರ ನೀಡಿ ಎಂದು ಜಂತರ್ ಮಂತರ್ ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ದೇಶದ ಯುವಕರಿಗೆ ಮನವಿ ಮಾಡಿದ್ದು ಕೂಡ ಇತ್ತೀಚೆಗೆ ನಡೆದ ಸಭೆಯ ಕಾರ್ಯಸೂಚಿಯಂತೆ. ಕಾಂಗ್ರೆಸ್ ತನ್ನ ಆಂದೋಲನದ ನೀತಿಗಳಲ್ಲಿ ದೊಡ್ಡ ಬದಲಾವಣೆಯನ್ನು ಪ್ರಾರಂಭಿಸಿದೆ. ಭಾಷಣದ ವೇಳೆ ಯುವಕರೊಂದಿಗೆ ಸಂವಾದ ನಡೆಸಲು ನಿರ್ಧರಿಸಿದೆ.
ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾ ಆಸ್ಪತ್ರೆಗೆ ದಾಖಲಾಗಿರುವ 75 ವರ್ಷದ ಸೋನಿಯಾ ಗಾಂಧಿ ಅವರು ಅಲ್ಲಿಂದಲೇ ಅಗ್ನಿಪಥ್ ಹೋರಾಟಗಾರರಿಗೆ ಶಾಂತಿ ಕಾಪಾಡುವಂತೆ ಕರೆ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಅವರು ಅಗ್ನಿಪಥ್ ಹೋರಾಟದ ಹಿನ್ನೆಲೆಯಲ್ಲಿ ‘ಯುವಕರು ಮತ್ತವರ ಕುಟುಂಬದವರು ಕಷ್ಟದಲ್ಲಿರುವ ಪರಿಸ್ಥಿತಿಯಲ್ಲಿ ತನ್ನ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಬೇಡಿ’ ಎಂದು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಇವೆಲ್ಲವೂ ಕಾಂಗ್ರೆಸ್ ಮೊಗ್ಗಲು ಬದಲಿಸುತ್ತಿರುವ ಸುಳಿವುಗಳು ಎನ್ನುತ್ತಾರೆ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು.