ನಾ ದಿವಾಕರ
ಸಾಮಾನ್ಯವಾಗಿ ಸಾಂಸ್ಕೃತಿಕ ಲೋಕವನ್ನು ನಿರ್ವಚಿಸುವಾಗ ಸಮಾಜದಲ್ಲಿ ಪ್ರಚಲಿತವಾಗಿರುವ ದೃಶ್ಯ-ಶ್ರವ್ಯ ಸಾಧನಗಳನ್ನು ಒಳಗೊಳ್ಳಲಾಗುತ್ತದೆ. ದೃಶ್ಯ ಸಾಧನದಲ್ಲಿ ನೃತ್ಯ, ಚಿತ್ರಕಲೆ, ರಂಗಭೂಮಿ ಮತ್ತು ಭಾರತದ ಸಂದರ್ಭದಲ್ಲಿ ಚಲನಚಿತ್ರ ರಂಗವನ್ನೂ ಪರಿಗಣಿಸಲಾಗುತ್ತದೆ. ಶ್ರವ್ಯ ಸಾಧನಗಳಲ್ಲಿ ವಿವಿಧ ಸಂಗೀತ ಪ್ರಕಾರಗಳನ್ನು ಗುರುತಿಸಲಾಗುತ್ತದೆ. ಭಾರತೀಯ ಚಲನಚಿತ್ರ ರಂಗದ ವೈಶಿಷ್ಟ್ಯವೆಂದರೆ ಸಂಗೀತವನ್ನು ಹಾಡುಗಾರಿಕೆಯ ಮೂಲಕ ಚಿತ್ರಕಥೆಗಳ ಒಂದು ಭಾಗವಾಗಿ ರೂಪಿಸುವುದು. ಇದು ವಾಕ್ ಚಿತ್ರಗಳು ಆರಂಭವಾದ 1930ರ ದಶಕದಿಂದಲೂ ಗುರುತಿಸಬಹುದಾದ ವಿದ್ಯಮಾನ. ಹಾಡುಗಳೇ ಇಲ್ಲದ ಚಿತ್ರಗಳ ಸಂಖ್ಯೆ ಬೆರಳೆಣಿಕೆಯಷ್ಟಿರಬಹುದು.
ಹಾಗಾಗಿ ಅಭಿನಯ ಮತ್ತು ಗಾಯನ, ಜೊತೆಗೆ ವಾದ್ಯ ಸಂಗೀತ ಭಾರತೀಯ ಚಿತ್ರರಂಗದ ಒಂದು ಅವಿಭಾಜ್ಯ ಅಂಗವಾಗಿ ಬೆಳೆದುಬಂದಿದೆ. ಸಾಹಿತ್ಯ, ಸಂಗೀತ, ಕಲೆ ಮತ್ತು ಇತರೆ ಕೌಶಲಗಳ ಸಮ್ಮಿಲನವಾಗಿ ಚಲನಚಿತ್ರ ರಂಗ ಸಾಂಸ್ಕೃತಿಕ ಜಗತ್ತಿನ ಒಂದು ಭಾಗವಾಗಿ ಜನಮಾನಸದಲ್ಲಿ ನೆಲೆ ಮಾಡಿದೆ. ಸಮಾಜದ ನೆಲ ಸಂಸ್ಕೃತಿಯನ್ನು ಹಾಗೂ ಪ್ರಾಚೀನ-ಆಧುನಿಕ, ದೇಸಿ-ಪಾಶ್ಚಾತ್ಯ ಸಂಸ್ಕೃತಿಯನ್ನು ಸಮಾಜಕ್ಕೆ ವಿಮರ್ಶಾತ್ಮಕವಾಗಿ ಪರಿಚಯಿಸುವ ಜವಾಬ್ದಾರಿಯೂ ಚಲನಚಿತ್ರಗಳ ಮೇಲಿರುತ್ತದೆ. ಭಾರತೀಯ ಚಲನಚಿತ್ರ ರಂಗ ಈ ಜವಾಬ್ದಾರಿಯನ್ನು ನಿಭಾಯಿಸುತ್ತಾ ಬಂದಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಕನ್ನಡ ಚಿತ್ರರಂಗವೂ ಈ ನಿಟ್ಟಿನಲ್ಲಿ ತನ್ನದೇ ಆದ ಪಾತ್ರ ವಹಿಸಿದೆ. ಸಂದೇಶಾತ್ಮಕ ಚಲನಚಿತ್ರಗಳು ಸಾಮಾಜಿಕ ಸುಧಾರಣೆಯ ಸುಳಿವು-ಸೂಚನೆಗಳನ್ನು ಒದಗಿಸಿರುವುದು ಸತ್ಯ.
ಚಿತ್ರರಂಗದ ಸಾಂಸ್ಕೃತಿಕ ರೂಪ
ಹಾಗಾಗಿಯೇ ಚಲನಚಿತ್ರ ರಂಗವನ್ನು ʼ ಸಾಂಸ್ಕೃತಿಕ ʼ ಎಂಬ ವಿಶಾಲ ಆವರಣದಲ್ಲಿ ಒಳಗೊಳ್ಳಲಾಗುತ್ತದೆ. ಆದರೆ ಡಿಜಿಟಲ್ ಯುಗದ ಸಂದರ್ಭದಲ್ಲಿ ಈ ನಿರ್ವಚನೆ ಅಥವಾ ವ್ಯಾಖ್ಯಾನ ಎಷ್ಟರ ಮಟ್ಟಿಗೆ ಸಮರ್ಥನೀಯ ಎಂದು ಯೋಚಿಸಬೇಕಿದೆ. ಕಾರ್ಪೋರೇಟ್ ಔದ್ಯಮಿಕ ಮಾರುಕಟ್ಟೆ, ಭೂಗತ ಕಪ್ಪು ಹಣ ಮತ್ತು ಬಂಡವಾಳಿಗರ ನೇರ ಪ್ರಭಾವಕ್ಕೊಳಗಾಗಿರುವ ಚಿತ್ರರಂಗ ಇಂದು ಸಾಂಸ್ಕೃತಿಕ ಸಂವೇದನೆಯನ್ನು ಕಳೆದುಕೊಂಡಿರುವುದು ಕಟು ವಾಸ್ತವ. ಕನ್ನಡ ಚಿತ್ರರಂಗವೂ ಇದಕ್ಕೆ ಹೊರತಾಗಿಲ್ಲ. ಈ ದೃಷ್ಟಿಯಿಂದ ಚಿತ್ರರಂಗವನ್ನು ʼ ಸಾಂಸ್ಕೃತಿಕ ʼ ಎಂಬ ವಿಶಾಲ ಆವರಣದಲ್ಲಿಟ್ಟು ವ್ಯಾಖ್ಯಾನಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ.
ಪರದೆಯ ಮೇಲೆ ಬಿಂಬಿಸುವ ಜಗತ್ತು ಎದುರಿಗಿರುವ ಪ್ರೇಕ್ಷಕರು ಪ್ರತಿನಿಧಿಸುವ ಜಗತ್ತಿಗೆ ವಿಮುಖವಾಗುತ್ತಿರುವ ಹೊತ್ತಿನಲ್ಲಿ ಕಥಾನಾಯಕ ಕೇವಲ ಅತಿಮಾನುಷ ಶಕ್ತಿ ಇರುವ ʼ He Manʼ ಆಗಿ ಮಾತ್ರ ಕಾಣುತ್ತಿದ್ದಾನೆ. ಅವನೊಂದಿಗೆ ಮನರಂಜನೆಗಾಗಿ ಅಲ್ಲಲ್ಲಿ ಇಣುಕಿ ನೋಡುವ ಕಥಾನಾಯಕಿ ತಾಳಮೇಳವಿಲ್ಲದ ಹಾಡು-ನೃತ್ಯ ಮತ್ತು ಕೆಲವೇ ಭಾವನಾತ್ಮಕ ದೃಶ್ಯಗಳಿಗೆ ಸೀಮಿತವಾಗುತ್ತಾಳೆ. ಕನ್ನಡದಲ್ಲಿ ಸ್ತ್ರೀ ಪ್ರಧಾನ ಚಿತ್ರವೊಂದು ತೆರೆಕಂಡು ಎಷ್ಟು ವರ್ಷವಾಯಿತು ಎಂದು ಯೋಚಿಸಿದಾಗ ನಿರಾಸೆಯಾಗುತ್ತದೆ.
ಬಹುತೇಕ ಚಿತ್ರಗಳು ಹಲವು ಭಾಷೆಗಳಲ್ಲಿ ಒಟ್ಟಿಗೆ ತೆರೆಕಾಣುವುದರಿಂದ, ಕನ್ನಡದ ಪ್ರಾದೇಶಿಕ ಸೊಗಡು ಮತ್ತು ಸ್ಥಳೀಯ ಸಂಸ್ಕೃತಿಯ ಸಂವೇದನೆಗಳಿಗೆ ಈ ಚಿತ್ರಕಥೆಗಳಲ್ಲಿ ಅವಕಾಶವೇ ಇರುವುದಿಲ್ಲ. ಇತ್ತೀಚೆಗೆ ಮಹಿಳಾ ಸಮೂಹವನ್ನು ಕೆರಳಿಸಿದ ಒಂದು ಹಾಡು ಇದಕ್ಕೆ ಸಾಕ್ಷಿ.ಕನ್ನಡ ಚಿತ್ರರಂಗದಲ್ಲಿ ಗಮನಿಸಬೇಕಾದ ಕೆಲವು ಪ್ರಧಾನ ಅಂಶಗಳೆಂದರೆ ಎಂದರೆ ಅನ್ಯ ಭಾಷೆಗಳಿಂದ ಯಥಾವತ್ತಾಗಿ ರೀಮೇಕ್ ಮಾಡುವ ಪ್ರವೃತ್ತಿ, ನಾಯಕ ಪಾತ್ರಗಳ ಹಿಂಸಾತ್ಮಕ ವಿಜೃಂಭಣೆ ಮತ್ತು ಹೀರೋಗಳ ಸರ್ವಾಂತರ್ಯಾಮಿ, ಸರ್ವಶಕ್ತ ಚಿತ್ರಣ. ಈ ಆಡುಂಬೊಲದಲ್ಲಿ ನಾಯಕಿ ಆಲಂಕಾರಿಕವಾಗುವುದು ಸಹಜ ಎನ್ನುವಂತಾಗಿದೆ. ಐಟಂ ಸಾಂಗ್ ಎಂಬ ಅಸಭ್ಯ-ಅಶ್ಲೀಲ ಸಂಯೋಜನೆ ಚಿತ್ರ ರಸಿಕರನ್ನು ಮನರಂಜಿಸುವ ಅಸ್ತ್ರ ಎಂದು ನಿರ್ಮಾಪಕ-ನಿರ್ದೇಶಕರು ಪರಿಗಣಿಸಿದರೂ ವಾಸ್ತವದಲ್ಲಿ ರಸಿಕತೆ ಎಂಬ ಕಲ್ಪನೆಯನ್ನೇ ಅಪಮಾನಿಸುವ ಒಂದು ವಿಕೃತ ಧೋರಣೆ. ಈ ನಡುವೆ ಕನ್ನಡದಲ್ಲಿ ಸ್ತ್ರೀ ಪ್ರಧಾನ ಕಥಾವಸ್ತು ಅಥವಾ ಕಾದಂಬರಿ ಆಧಾರಿತ ಚಿತ್ರಗಳ ಪರಂಪರೆಯನ್ನೇ ಕೈಬಿಟ್ಟಿರುವುದು ಢಾಳಾಗಿ ಕಾಣುವ ವಾಸ್ತವ.
Angry young man ಪರಂಪರೆ
ಈ ಜವಾಬ್ದಾರಿಯನ್ನು ಕಲಾತ್ಮಕ ಚಿತ್ರ ನಿರ್ದೇಶಕರಿಗೆ, ನಿರ್ಮಾಪಕರಿಗೆ ಬಿಟ್ಟುಕೊಡಲಾಗಿದೆ. ಡಾ. ರಾಜ್ ಉತ್ತುಂಗದಲ್ಲಿರುವಾಗಲೇ ಸ್ತ್ರೀ ಪ್ರಧಾನ ಚಿತ್ರಗಳು ಕಡಿಮೆಯಾಗತೊಡಗಿದ್ದು ಗಮನಾರ್ಹ ಅಂಶ. ಇದರ ಕಾರಣವನ್ನು 1970ರ Angry Young Man ಕಲ್ಪನೆಯಲ್ಲಿ ಗುರುತಿಸಬಹುದು. ವ್ಯವಸ್ಥೆಯ ವಿರುದ್ಧ ಸಿಡಿದೇಳುವ, ಸಮಾಜದೊಳಗಿನ ದುಷ್ಟ ಪ್ರವೃತ್ತಿಗಳ ವಿರುದ್ಧ ಜೀವ ಪಣಕ್ಕಿಟ್ಟು ಹೋರಾಡಿ ಗೆದ್ದುಬೀಗುವ ನಾಯಕ ನಟರ ಕಲ್ಪನೆ ಬಾಲಿವುಡ್ನ ಅಮಿತಾಬ್ ಬಚ್ಚನ್ ಅವರಿಂದ ಆರಂಭವಾಗಿ ಕನ್ನಡ ಚಿತ್ರರಂಗವನ್ನೂ ಶೀಘ್ರವಾಗಿ ಆವರಿಸಿತ್ತು. ಡಾ. ರಾಜ್ ಸಹ ತಮ್ಮ ಕೊನೆಯ ದಿನಗಳಲ್ಲಿ ಶಬ್ಧವೇಧಿ, ಧೃವತಾರೆ ಮೊದಲಾದ ಚಿತ್ರಗಳಲ್ಲಿ ಇದನ್ನೇ ಬಿಂಬಿಸಿದ್ದಾರೆ.
ಚಲನ ಚಿತ್ರಗಳ ಈ He man ಕಲ್ಪನೆ ಉಗಮವಾಗುವ ಹೊತ್ತಿಗೇ ಚಿತ್ರ ನಿರ್ಮಾಣವು ಬಂಡವಾಳಶಾಹಿ ಮಾರುಕಟ್ಟೆಯ ಒಂದು ಲಾಭದಾಯಕ ಉದ್ಯಮವಾಗತೊಡಗಿದ್ದು ಕಾಕತಾಳೀಯವೇನಲ್ಲ. ಇದು ಪರಸ್ಪರ ಪೂರಕವಾದ ವಿದ್ಯಮಾನ. ವ್ಯವಸ್ಥೆಯೊಡನೆ ಹೊಡೆದಾಡಿ, ಸಾಮಾನ್ಯ ಜನರ ಸಂಕಟಗಳನ್ನು ನಿವಾರಿಸುವ ಸರ್ವಶಕ್ತ ಹೀರೋ ತನ್ನ ಹಿಂಬಾಲಕರ ಪಡೆಯನ್ನು ಪೋಷಿಸುತ್ತಾನೆಯೇ ಹೊರತು ಅವರಲ್ಲಿ ವ್ಯವಸ್ಥೆಯನ್ನು ಪಲ್ಲಟಗೊಳಿಸುವ ಕ್ರಾಂತಿಕಾರಿ ಮನಸ್ಥಿತಿಯನ್ನು ಉಂಟುಮಾಡುವುದಿಲ್ಲ. ಇದು ಪ್ರಭುತ್ವಕ್ಕೆ, ಆಳ್ವಿಕೆಗಳಿಗೆ ಅಪ್ಯಾಯಮಾನವಾಗಿ ಕಾಣುವ ಒಂದು ಸೂತ್ರ. ಹಾಗಾಗಿ ಮಾರುಕಟ್ಟೆ ಇಂತಹ ಚಿತ್ರಗಳನ್ನು ವೈಭವೀಕರಿಸಿ, ಅಂತಾರಾಷ್ಟ್ರೀಯ ಮಟ್ಟಕ್ಕೂ ಕೊಂಡೊಯ್ಯುತ್ತದೆ.
ಇಂದಿಗೂ ಬಡತನ, ಹಸಿವು, ನಿರ್ವಸತಿ, ಅನಿಶ್ಚಿತತೆ ಎದುರಿಸುತ್ತಿರುವ ಕೋಲಾರ ಚಿನ್ನದ ಗಣಿ ಕಾರ್ಮಿಕರ ಬವಣೆಯನ್ನು ಚಿತ್ರಿಸುವ ನೆಪದಲ್ಲಿ, ಮಾಫಿಯಾ ಕೇಂದ್ರಿತ ʼ ಕೆ ಜಿ ಎಫ್ ʼ ಎಂಬ ಚಿತ್ರ ನಿರ್ಮಿಸುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಮಾರುಕಟ್ಟೆ ಬಂಡವಾಳ ಹೂಡಿಕೆ ಮತ್ತು ಅತ್ಯಧಿಕ ಲಾಭ ಗಳಿಕೆಯನ್ನೇ ಗುರಿಯಾಗಿಟ್ಟುಕೊಂಡು ನಿರ್ಮಾಣವಾಗುವ ಇಂತಹ ಚಿತ್ರಗಳಲ್ಲಿ ರಾಜಕಾರಣಿಗಳನ್ನು ದುಷ್ಟರಂತೆ ಬಿಂಬಿಸಲಾಗುತ್ತದೆ ಆದರೆ ಅವರು ಪ್ರತಿನಿಧಿಸುವ ವ್ಯವಸ್ಥೆಯನ್ನು ಪ್ರಶ್ನಿಸುವುದಿಲ್ಲ. ಹಾಗಾಗಿಯೇ ವರ್ತಮಾನದ ಕನ್ನಡ-ಬಾಲಿವುಡ್ ಚಿತ್ರಗಳು ತಳಸಮಾಜದ ಜನತೆಯ ನಾಡಿ ಮಿಡಿತಕ್ಕೆ ಸ್ಪಂದಿಸುವುದಿಲ್ಲ, ಈ ಜನರ ನಿತ್ಯ ಬದುಕನ್ನು ಸದಾ ಭೀತಿ, ಅನಿಶ್ಚಿತತೆಯಲ್ಲಿಡುವ ಕೋಮುವಾದ, ಮತೀಯವಾದ, ಮತಾಂಧತೆ ಮತ್ತು ಭಾವಾವೇಷದ ಅಸ್ಮಿತೆಯ ನೆಲೆಗಳಿಗೆ ಸ್ಪಂದಿಸುವಂತಿರುತ್ತವೆ. ಇದು ಗಲ್ಲಾಪೆಟ್ಟಿಗೆಯನ್ನು ತುಂಬಿಸುವ ಒಂದು ಮಾರುಕಟ್ಟೆ ತಂತ್ರ.
ಸಮಾಜ-ಸಂಸ್ಕೃತಿಯ ವ್ಯತ್ಯಯಗಳು
ಈ ವಾತಾವರಣದಲ್ಲಿ (Eco system) ಸೃಷ್ಟಿಯಾಗುವ ಸಾಮಾಜಿಕ ಸಂಕಥನಗಳೇ ಹೊರಗಿನ ಸಮಾಜದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಲಯಗಳಲ್ಲಿ ಸಂಘಟನಾತ್ಮಕವಾಗಿ ಪ್ರಭಾವ ಬೀರುತ್ತವೆ. ನವ ಉದಾರವಾದ ಸೃಷ್ಟಿಸಿರುವ ನಿರುದ್ಯೋಗಿ-ಅಸಂಪೂರ್ಣ ಉದ್ಯೋಗಿ (Under Employed) ಯುವ ಜನರೇ ಈ ಸಾಮಾಜಿಕ ಸಂಕಥನಗಳ ಪ್ರಬಾವಕ್ಕೊಳಗಾಗಿ ರಾಜಕೀಯ ಪಕ್ಷಗಳ/ನಾಯಕರ, ಚಲನಚಿತ್ರ ಹೀರೋಗಳ ಮತ್ತು ರಾಜಕೀಯ ಸಹ ಸಂಘಟನೆಗಳ ಕಾಲಾಳುಗಳಾಗಿ ಸಕ್ರಿಯರಾಗಿರುತ್ತಾರೆ. ಕೋಮುವಾದ, ಮತಾಂಧತೆ, ಜಾತೀಯತೆ, ಗೋಹತ್ಯೆ, ಲವ್ ಜಿಹಾದ್, ಅಂತರ್ಜಾತಿ-ಅಂತರ್ ಧರ್ಮೀಯ ವಿವಾಹ ಇಂತಹ ಸಾಮಾಜಿಕ ವಿದ್ಯಮಾನಗಳು ಈ ಕಾಲಾಳುಗಳನ್ನೇ ತುಡುಗು ಪಡೆಗಳಾಗಲು (Fringe Elements) ಅಸ್ತ್ರಗಳಾಗುತ್ತವೆ.
ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಡಾ ರಾಜ್ ಸಮಾಧಿಯನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದನ್ನು ವಿರೋಧಿಸಿ, ಅವರ ಮನೆಗೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ ಸಾ ರಾ ಗೋವಿಂದು ಮತ್ತು ಅವರ ಪಡೆಗಳು ಈ ವಿದ್ಯಮಾನವನ್ನೇ ಬಿಂಬಿಸುತ್ತವೆ. ಸಾಮಾನ್ಯವಾಗಿ ಈ ಯುವಪಡೆಗಳು ಎಲ್ಲೆಡೆಯೂ ಸಲ್ಲುವ ದಾಳಿಕೋರ ಪ್ರವೃತ್ತಿಯನ್ನೇ ಬೆಳೆಸಿಕೊಂಡಿರುತ್ತವೆ. ಭಾವಾತಿರೇಕ ಮತ್ತು ಭಾವಾವೇಷದ ಯಾವುದೇ ಘಟನೆಗಳು ಸಂಭವಿಸಿದರೂ, ಗುರಿ ಇಟ್ಟ ವ್ಯಕ್ತಿ, ಸಂಘಟನೆಯ ಮೇಲೆ ದಾಳಿ ನಡೆಸಲು ಉತ್ಸುಕವಾಗಿರುತ್ತವೆ. ಇಂತಹ ಪಡೆಗಳನ್ನು ಪೋಷಿಸಿ, ಸಂರಕ್ಷಿಸುವ ಹೊಣೆ ಆಯಾ ಸಂಘಟನೆಗಳ ನಾಯಕತ್ವದ್ದಾಗಿರುತ್ತದೆ.
ಡಾ ರಾಜ್ ತಮ್ಮ ಜೀವನ ಪಯಣವನ್ನು ಮುಗಿಸಿ 20 ವರ್ಷಗಳಾಯಿತು. ಒಂದು ಹಂತದವರೆಗೆ ಕನ್ನಡಿಗರ ಸಾಕ್ಷಿಪ್ರಜ್ಞೆಯಾಗಿಯೇ ಗುರುತಿಸಲ್ಪಡುವ ಡಾ. ರಾಜ್ ಕುಮಾರ್ ಜನಸಾಮಾನ್ಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವುದು ಅವರ ನಟನೆ, ಚಿತ್ರಗಳು ಮತ್ತು ವ್ಯಕ್ತಿತ್ವದಿಂದ. ತೆರೆಯ ಮೇಲಿನ ಸಮಾಜಮುಖಿ ರಾಜ್ ವಾಸ್ತವ ಸಮಾಜದಲ್ಲೂ ಅದೇ ಪ್ರವೃತ್ತಿಯನ್ನು ಹೊಂದಿದ್ದುದು ಅವರ ಜನಪ್ರಿಯತೆ ಮೂಲ ಕಾರಣ. ಹಾಗಾಗಿಯೇ ಕನ್ನಡದ ಜನತೆ ಅವರನ್ನು ಅಭಿಮಾನದಿಂದ ಆರಾಧಿಸುವ ಮಟ್ಟಕ್ಕೂ ತಲುಪಿದ್ದಾರೆ. ಸಿನಿಮಾ ಹೀರೋಗಳು ಜನರ ಆರಾಧ್ಯ ದೈವವಾಗುವ ಸಂಸ್ಕೃತಿ ದಕ್ಷಿಣ ಭಾರತದಲ್ಲಿ ಮಾತ್ರವೇ ಇರುವುದನ್ನೂ ಗಮನಿಸಬೇಕು. ಇದಕ್ಕೆ ನಾನಾ ಕಾರಣಗಳಿದ್ದು, ಈ ಬರಹದ ವ್ಯಾಪ್ತಿಗೆ ಒಳಪಡುವುದಿಲ್ಲ.
ವಿವೇಕ ವಿವೇಚನೆ ಮತ್ತು ಪ್ರಜ್ಞೆ
ಆದರೆ ವ್ಯಕ್ತಿಯ ಬಗ್ಗೆ ಇರುವ ಅಭಿಮಾನ ಅತಿರೇಕಕ್ಕೆ ಹೋದಾಗ ಅದು ಅಂಧಾಭಿಮಾನವಾಗುತ್ತದೆ. ಕ್ರಮೇಣ ಇದು ಆ ವ್ಯಕ್ತಿಯನ್ನು ಆರಾಧನೆಯ ಕೇಂದ್ರವನ್ನಾಗಿ ಮಾಡಿಬಿಡುತ್ತದೆ. ಆ ವ್ಯಕ್ತಿಯಲ್ಲಿ ಗುರುತಿಸಲಾಗುವ ಸಾಂದರ್ಭಿಕ ಔದಾರ್ಯ ಮತ್ತು ಸಮಾಜಮುಖಿ ಗುಣಗಳೇ ಈ ಆರಾಧನಾ ಸಂಸ್ಕೃತಿಯನ್ನು ಭಾವಾವೇಷದ ಉನ್ಮಾದವನ್ನಾಗಿ ಪರಿವರ್ತಿಸುತ್ತದೆ. ಡಾ. ರಾಜ್ ಅವರನ್ನು ಅಭಿಮಾನಿಗಳು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಬಣ್ಣಿಸುತ್ತಿರುವುದನ್ನು ಈ ದೃಷ್ಟಿಯಿಂದಲೇ ಗಮನಿಸಬೇಕು. (ಏಕೆಂದರೆ ರಾಜ್ಯ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ) . ವ್ಯಕ್ತಿ ವೈಭವೀಕರಣ ಮತ್ತು ಅತಿರೇಕದ ಆರಾಧನೆಗೊಳಗಾಗುವ ವ್ಯಕ್ತಿ ನಿಧನಾನಂತರ ಭಕ್ತಿಪೂರ್ವಕ ಆರಾಧನೆಗೊಳಗಾಗುವುದು ನಮ್ಮ ಸಾಂಸ್ಕೃತಿಕ ಜಗತ್ತಿನ ವೈಶಿಷ್ಟ್ಯ.
ಹಾಗಾಗಿಯೇ ಡಾ. ರಾಜ್ ಅವರ ಸಮಾಧಿ ಬೆಂಗಳೂರಿನ ಕೇಂದ್ರ ಸ್ಥಳದಲ್ಲಿದ್ದರೂ ಸಹ ಅದು ಎಲ್ಲ ವರ್ಗದ ಜನರಿಗೆ ಸಹನೀಯವಾಗಿ ಕಾಣುತ್ತದೆ. ನಿಜವಾದ ಅಭಿಮಾನಿಗಳಿಗೆ ಅದು ಭಕ್ತಿ ಕೇಂದ್ರವಾದರೆ, ಡಾ ರಾಜ್ ಸುತ್ತ ನಿರ್ಮಾಣವಾಗಿದ್ದ ಅಭಿಮಾನಿ ಸಂಘಗಳಿಗೆ ಅದು ಶಕ್ತಿ ಕೇಂದ್ರವಾಗಿಬಿಡುತ್ತದೆ. ಅವರ ಮರಣಾನಂತರ 20 ವರ್ಷಗಳಾದರೂ ಸಾ ರಾ ಗೋವಿಂದು ಅವರ ಈ ಸಂಘಟನಾತ್ಮಕ ಅಸ್ತಿತ್ವಕ್ಕೆ ಈ ಶಕ್ತಿ ಕೇಂದ್ರ ಮೂಲ ಆವಾಸ ಸ್ಥಾನವಾದರೆ, ಡಾ. ರಾಜ್ ಅಮೂರ್ತ ಪ್ರತಿಮೆಯಾಗಿಬಿಡುತ್ತಾರೆ.
ಅವರ ಸಮಾಧಿ ಸ್ಥಳ ಜನರ ಭಾವನೆಗಳನ್ನು ಉದ್ಧೀಪನಗೊಳಿಸುವ ʼ ಪವಿತ್ರ ʼ ಜಾಗವಾಗಿ ಪರಿವರ್ತನೆಯಾಗುತ್ತದೆ. ಪರಿಣಾಮ ಆ ಸಮಾಧಿ ಅಥವಾ ಸಮಾಧಿ ಸ್ಥಳದ ಬಗ್ಗೆ ಯಾವುದೇ ವ್ಯತಿರಿಕ್ತ ಹೇಳಿಕೆ, ಭಾವಾವೇಷವನ್ನು ಕೆರಳಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ರಾಜಕೀಯವಾಗಿ ತಮ್ಮದೇ ಆದ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿರುವ ಚೇತನ್ ಅಹಿಂಸಾ, ತಮ್ಮ ಹೇಳಿಕೆ ನೀಡುವ ಮುನ್ನ ಈ ಸೂಕ್ಷ್ಮಗಳನ್ನು ಗಮನಿಸಬಹುದಿತ್ತು. 20 ವರ್ಷಗಳ ಹಿಂದೆ ಗುರುತಿಸಲಾದ ಸಮಾಧಿ ಸ್ಥಳದ ಔಚಿತ್ಯವನ್ನು ಈಗ ಪ್ರಶ್ನಿಸುವುದು ಅಥವಾ ಅದನ್ನು ಅನುಮತಿಸಿದ ಸರ್ಕಾರದ ಕ್ರಮವನ್ನು ಖಂಡಿಸುವುದು, ಮೇಲ್ನೋಟಕ್ಕೆ ಸಹನೀಯ ಎನಿಸಬಹುದು. ಆದರೆ ಔಚಿತ್ಯದ ನೆಲೆಯಲ್ಲಿ ನೋಡಿದಾಗ ಇದು ಅವಿವೇಕದ, ಅನಗತ್ಯ ಅಥವಾ ವಿವೇಚನಾರಹಿತ ಹೇಳಿಕೆಯಾಗಿ ಕಾಣುತ್ತದೆ. ಹಾಗೆಂದ ಮಾತ್ರಕ್ಕೆ ಚೇತನ್ ಅಹಿಂಸಾ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸಲಾಗುವುದಿಲ್ಲ. ಗಾಂಧಿ ಸಮಾಧಿ ರಾಜಘಾಟ್ ಬಗ್ಗೆಯೂ ತಮ್ಮದೇ ಆದ ನಿಲುವು ವ್ಯಕ್ತಪಡಿಸುವ ಸ್ವಾತಂತ್ರ್ಯ ಅವರಿಗಿದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಅಮೂರ್ತ ಕಲ್ಪನೆಯಲ್ಲ, ವಾಸ್ತವಿಕ ಸನ್ನಿವೇಶಗಳ ಚೌಕಟ್ಟಿನಲ್ಲಿ ಕ್ರಿಯಾಶೀಲವಾಗಿರಬೇಕಾದ ಒಂದು ಸಾಂವಿಧಾನಿಕ ಹಕ್ಕು.
ಸಾಮಾಜಿಕ ವ್ಯಾಧಿಯ ಲಕ್ಷಣ
ಚೇತನ್ ಅವರ ಹೇಳಿಕೆಯನ್ನು ಒಪ್ಪುವುದು ಬಿಡುವುದು ವೈಯುಕ್ತಿಕ ವಿವೇಚನೆಯ ವಿಚಾರ. ಅದನ್ನು ಖಂಡಿಸುವ ಹಕ್ಕು ಸಹ ರಾಜ್ ಅಭಿಮಾನಿಗಳಗಷ್ಟೇ ಅಲ್ಲ ಸಾರ್ವಜನಿಕರಿಗೂ ಇರುತ್ತದೆ. ಆದರೆ ಸಾ ರಾ ಗೋವಿಂದು ಅವರ ಬಳಗ ಚೇತನ್ ಮನೆಯ ಮೇಲೆ ದಾಳಿ ನಡೆಸಿರುವುದು, ಸಾಮಾಜಿಕ ತಾಣಗಳಲ್ಲಿ ಅವರ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್ ಮಾಡುವುದು, ಅವರ ತಂದೆ ತಾಯಿಯರನ್ನೂ ಎಳೆದು ತರುವುದು, ಅಸಭ್ಯ ಭಾಷೆಯಲ್ಲಿ ಟ್ರೋಲ್ ಮಾಡುವುದು ಇವೆಲ್ಲವೂ ಸಂಸ್ಕೃತಿಹೀನ ನಡವಳಿಕೆ. ʼ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ʼ ಎಂಬ ನೆಪದಲ್ಲಿ ಹಿಂಸಾತ್ಮಕ ದಾಳಿ ನಡೆಸುವ ಮತಾಂಧ ತುಡುಗುಪಡೆಗಳಿಗೂ, ಸಾ ರಾ ಗೋವಿಂದ್ ಅವರ ಹಿಂಬಾಲಕರಿಗೂ ವ್ಯತ್ಯಾಸವೇನಿದೆ ? ಅಲ್ಲಿ ರಾಮ, ಹನುಮ, ಪ್ರವಾದಿ ಪ್ರತಿಮೆಗಳಾದರೆ ಇಲ್ಲಿ ಡಾ. ರಾಜ್ ಪ್ರತಿಮೆಯಾಗುತ್ತಾರೆ. ನಮ್ಮ ನಡುವೆ ಬದುಕಿದ ಡಾ. ರಾಜ್ ಕುಮಾರ್ ಈ ರೀತಿಯ ಪ್ರತಿಮೆಯಾಗಲು ಖಂಡಿತವಾಗಿಯೂ ಅರ್ಹರಲ್ಲ.
ಆದರೆ ಅಭಿಮಾನಿ ಸಂಘಗಳಿಗೆ ಡಾ. ರಾಜ್ ವ್ಯಕ್ತಿತ್ವ ನಗಣ್ಯವಾಗಿರುತ್ತದೆ. ತುಡುಗುಪಡೆಗಳಿಗೆ ರಾಮಾಯಣದ ರಾಮ ಅಥವಾ ಪ್ರವಾದಿ ಆದರ್ಶವಾಗುವುದಿಲ್ಲ. ಹಾಗೆಯೇ ಡಾ ರಾಜ್ ಸಹ ಅಪ್ರಸ್ತುತವಾಗಿ ಕೇವಲ ಅಮೂರ್ತ ಪ್ರತಿಮೆಯಾಗಿಬಿಡುತ್ತಾರೆ. ವರ್ತಮಾನದ ವ್ಯಕ್ತಿಗತ ದ್ವೇಷಾಸೂಯೆಗಳು ಗತಕಾಲದ ಬೆಳವಣಿಗೆಗಳನ್ನು ಸಮರ್ಥಿಸಿಕೊಳ್ಳುವ-ವಿರೋಧಿಸುವ ಅಸ್ತ್ರಗಳಾಗಿಬಿಡುತ್ತವೆ. ಕಳೆದ ನಾಲ್ಕು ದಶಕಗಳಲ್ಲಿ ಭಾರತ ಈ ವಿದ್ಯಮಾನದ ಪ್ರಯೋಗಾಲಯವಾಗಿರುವುದನ್ನು ದೆಹಲಿಯಿಂದ ಬೆಂಗಳೂರಿನವರೆಗೂ ನೋಡಿದ್ದೇವೆ. ಸಾ ರಾ ಗೋವಿಂದು ಮೀಟೂ ಚಳುವಳಿಯಲ್ಲಿ ಉಂಟಾದ ವೈಮನಸ್ಯದ ಹಿನ್ನೆಲೆಯಲ್ಲಿ ಚೇತನ್ ಅವರನ್ನು ಗುರಿಯಾಗಿಸಿರುವುದು ಈ ಪ್ರಕರಣದ ಸೂಕ್ಷ್ಮಗಳಲ್ಲೊಂದು.
ಬೌದ್ಧಿಕ ಚರ್ಚೆಗಳ ಮೂಲಕ ಬಗೆಹರಿಸಬಹುದಾದ ಸಮಸ್ಯೆಯನ್ನು ಭೌತಿಕ ದಾಳಿಯ ಮುಖಾಂತರ ಉಲ್ಬಣಿಸುವಂತೆ ಮಾಡುವ ಒಂದು ಹೊಸ ಪರಂಪರೆಗೆ ನವ ಭಾರತ ಸಾಕ್ಷಿಯಾಗುತ್ತಿದೆ. ಇದು ಎಲ್ಲ ರಾಜಕೀಯ ಪಕ್ಷಗಳ, ಮತೀಯ ಶಕ್ತಿಗಳ, ಧಾರ್ಮಿಕ ಕೇಂದ್ರಗಳ ಹಾಗೂ ವ್ಯಕ್ತಿ-ಸಂಘಟನೆಗಳ ಕಾರ್ಯವೈಖರಿಯಲ್ಲಿ ವ್ಯಕ್ತವಾಗುತ್ತಲೇ ಇದೆ. ಇಂತಹ ವಾತಾವರಣದಲ್ಲಿ ಸಾಮಾಜಿಕ ಕಾರ್ಯಕರ್ತರು ಹೋರಾಟಗಾರರು ವಿವೇಕಯುತವಾಗಿ ಮಾತನಾಡಬೇಕು. ಅಳೆದು ತೂಗಿ ಎಲ್ಲರನ್ನೂ ತೃಪ್ತಿಪಡಿಸುವ ಮಾತುಗಳ ಅವಶ್ಯಕತೆ ಇಲ್ಲ. ಆದರೆ ತಾವು ನಿಂತ ನೆಲದ ಜನತೆಯ ನಾಡಿಮಿಡಿತವನ್ನು ಅರಿತು ಹೇಳುವುದು ಅಪ್ರಿಯ ಸತ್ಯವೇ ಆದರೂ, ಹೇಳಬೇಕಾದ ರೀತಿಯಲ್ಲಿ ಹೇಳುವುದು ಮುಖ್ಯ. ಇಲ್ಲಿ ಸಾಂದರ್ಭಿಕ ಪ್ರಜ್ಞೆ ಮುಖ್ಯವಾಗುತ್ತದೆ.
ಅಪಾಯಕಾರಿ ಭವಿಷ್ಯದ ಆತಂಕದಲ್ಲಿ
ಆದರೆ ಈ ಪ್ರಜ್ಞೆಯ ನೆಪದಲ್ಲಿ ಸಮಾಜದ ದಿಕ್ಕು ತಪ್ಪಿಸುವ ಗೂಂಡಾಗಿರಿಯ ಪ್ರವೃತ್ತಿಯನ್ನು ಸಮರ್ಥಿಸಲಾಗುವುದಿಲ್ಲ, ಖಂಡಿಸದೆ ಇರುವುದೂ ಸಾಧ್ಯವಿಲ್ಲ. ಸಾ ರಾ ಗೋವಿಂದು ಮತ್ತವರ ಹಿಂಬಾಲಕರು ತಮ್ಮ ದುರ್ವರ್ತನೆಯಿಂದ ಕನ್ನಡಕ್ಕೆ ಅಥವಾ ಕನ್ನಡಿಗರ ಸಂಸ್ಕೃತಿಗೆ ಉಪಕಾರವನ್ನೇನೂ ಮಾಡಿಲ್ಲ ಬದಲಾಗಿ, ಸಭ್ಯತೆ, ಸೌಜನ್ಯ, ಸರಳತೆ ಮತ್ತು ಸಾಮಾಜಿಕ ಸೂಕ್ಷ್ಮತೆಗಳ ಪ್ರತಿರೂಪವಾಗಿದ್ದ ಡಾ. ರಾಜ್ ಕುಮಾರ್ ಅವರನ್ನು ಅಪಮಾನಿಸಿದ್ದಾರೆ. ಇದೇ ಗುಂಪಿನ ಹಿರಿಯ ತಲೆಮಾರು ಲಂಕೇಶ್ ಪತ್ರಿಕೆಯ ಮೇಲೆ ದಾಳಿ ನಡೆಸಿದ ಪ್ರಸಂಗವನ್ನು ನೆನಪಿಸಿಕೊಂಡರೆ ಇದು ಅರ್ಥವಾಗುತ್ತದೆ. ಈ ಪ್ರಕರಣದಲ್ಲಿ ಕನ್ನಡಿಗರ ಭಾವನೆಗೂ ಧಕ್ಕೆ ಉಂಟಾಗಿಲ್ಲ ಅಥವಾ ಕನ್ನಡಿಗರ ಸ್ವಪ್ರಜ್ಞೆಗೆ ಹಿರಿಮೆಯೂ ದೊರೆತಿಲ್ಲ. ಎರಡೂ ಬದಿಯಲ್ಲಿ ಕಾಣುವುದು ವಿವೇಚನೆಯ ಕೊರತೆ ಮಾತ್ರ.
ಈ ಘಟನೆಯಲ್ಲಿ ನಾವು ಗುರುತಿಸಬೇಕಿರುವುದು ಯುವ ಪೀಳಿಗೆಯನ್ನು ಆಳವಾಗಿ ಪ್ರಭಾವಿಸಿರುವ ಸಾಮಾಜಿಕ ವ್ಯಸನವನ್ನು. ಅಸಹಿಷ್ಣುತೆ ಕೇವಲ ಧಾರ್ಮಿಕ ಅಥವಾ ಜನಾಂಗೀಯ ನೆಲೆಯಲ್ಲಿ ಮಾತ್ರ ಕಾಣುವುದಿಲ್ಲ. ಸಮಾಜದ ಎಲ್ಲ ಮಗ್ಗುಲುಗಳಲ್ಲೂ ವಿಭಿನ್ನ ಆಯಾಮಗಳಲ್ಲಿ ಪ್ರಕಟವಾಗುತ್ತಿರುತ್ತದೆ. ತಳಸಮಾಜದ ಯುವ ಜನಾಂಗದಲ್ಲಿ ಕಾಣುವ ಈ ಅಸಹಿಷ್ಣುತೆಯ ಸೂತ್ರಧಾರರು ಹಿರಿಯ ತಲೆಮಾರಿನ ನಾಯಕರೇ ಆಗಿರುತ್ತಾರೆ. ಈ ನಾಯಕರು ಕಟ್ಟಿಕೊಂಡಿರುವ ಪುಟ್ಟ ಸಾಮ್ರಾಜ್ಯಕ್ಕೆ ಒಂದು ಕೇಂದ್ರ ಪ್ರತಿಮೆ ಅನಿವಾರ್ಯವಾಗಿರುತ್ತದೆ. ಈ ಘಟನೆಯಲ್ಲಿ ಡಾ. ರಾಜ್ ಆ ಪ್ರತಿಮೆಯಾಗಿರುವುದು ದುರದೃಷ್ಟಕರ. ಇಲ್ಲಿ ಪೋಷಿಸಲಾಗುವ ಸಾಮಾಜಿಕ ವ್ಯಸನ, ವ್ಯಾಧಿಯಾಗಿ ಪರಿಣಮಿಸಿ , ವ್ರಣವಾಗಿ ಕೊಳೆಯುವ ಮುನ್ನ ನಾಗರಿಕ ಪ್ರಜ್ಞೆ ಎಚ್ಚೆತ್ತುಕೊಳ್ಳುವುದು ಅನಿವಾರ್ಯ.
-೦-೦-೦-೦-





