• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

ರಾಜಕೀಯ ಪಕ್ಷಗಳ ಪಿತೃಪ್ರಧಾನ ಅಡಿಪಾಯವನ್ನು ಶಾಶ್ವತವಾಗಿ ಧ್ವಂಸಗೊಳಿಸಬೇಕಿದೆ

ಪ್ರತಿಧ್ವನಿ by ಪ್ರತಿಧ್ವನಿ
April 28, 2026
in ಅಂಕಣ
0
ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

(ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧಿಕ ಅವಕಾಶಗಳು ಲೇಖನದ ಮುಂದುವರಿಕೆ)

ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ (ಶೇಕಡಾ 33) ಏಕೆ ಬೇಕು ? ಯಾರಿಗಾಗಿ ಬೇಕು ? ಈ ಪ್ರಶ್ನೆಗಳು ಮೇಲ್ನೋಟಕ್ಕೆ ಬಾಲಿಶ ಎನಿಸಬಹುದು. ಆದರೆ ಆಳಕ್ಕಿಳಿದು ನೋಡಿ ಉತ್ತರಗಳನ್ನು ಶೋಧಿಸಿದಾಗ ಹಲವು ಆಯಾಮದ ಉತ್ತರಗಳು ದೊರೆಯುತ್ತವೆ. ಪ್ರಪ್ರಥಮವಾಗಿ ಭಾರತ ಸಾಂವಿಧಾನಿಕವಾಗಿ ಒಪ್ಪಿಕೊಂಡಿರುವ ಸಂಸದೀಯ ಪ್ರಜಾಪ್ರಭುತ್ವ ಮತ್ತು ತದನಂತರ ಬಲಗೊಂಡಿರುವ ಅಧಿಕಾರ ವಿಕೇಂದ್ರೀಕರಣದ ಚೌಕಟ್ಟಿನಲ್ಲಿ ನೋಡಿದಾಗ, ಇಲ್ಲಿ ನಮಗೆ ಮುಖ್ಯವಾಗಿ ಕಾಣುವುದು ಒಳಗೊಳ್ಳುವಿಕೆ (Inclusiveness) ಮತ್ತು ಪ್ರಾತಿನಿಧಿಕ (Representative) ಲಕ್ಷಣಗಳು. ಈ ಎರಡೂ ಔದಾತ್ಯಗಳನ್ನು ನಿರ್ವಚಿಸುವಾಗ ಜಾತಿ, ಮತ, ಧರ್ಮ, ಭಾಷೆ, ಪ್ರದೇಶ ಮತ್ತು ಲಿಂಗತ್ವದ ನೆಲೆಯಲ್ಲಿ ವಿಂಗಡನೆ ಮಾಡಲಾಗುವುದಿಲ್ಲ.

ಏಕೆಂದರೆ ನಮ್ಮ ಸಂವಿಧಾನ ಪ್ರಸ್ತಾವನೆ ಆರಂಭವಾಗುವುದೇ “ ಭಾರತದ ಪ್ರಜೆಗಳಾದ ನಾವು ” ಎಂಬ ಉದಾತ್ತ ಪದಗಳಿಂದ.
ಹಾಗಾಗಿ ಎಲ್ಲ ಸ್ತರಗಳ ಎಲ್ಲ ವರ್ಗಗಳನ್ನೂ ಒಳಗೊಳ್ಳುವ ಮತ್ತು ಪ್ರತಿನಿಧಿಸುವ ಆಡಳಿತ ವ್ಯವಸ್ಥೆಯನ್ನು ಮಾತ್ರ ನಾವು ʼಪ್ರಜಾಸತ್ತಾತ್ಮಕ ಅಥವಾ ಸಾಂವಿಧಾನಿಕ ʼಎಂದು ವರ್ಗೀಕರಿಸಬಹುದು. 77 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಇದು ಸಾಧ್ಯವಾಗಿದೆಯೇ ? ದಲಿತ-ಶೋಷಿತ ವರ್ಗಗಳಿಗೆ ಲಭಿಸಿರುವ ಶೈಕ್ಷಣಿಕ-ಔದ್ಯೋಗಿಕ ಮೀಸಲಾತಿ ಸೌಲಭ್ಯಗಳ ಹೊರತಾಗಿಯೂ ಇದು ಪೂರ್ಣವಾಗಿಲ್ಲ. ಮಹಿಳೆಯರ ಪ್ರಶ್ನೆ ಬಂದಾಗ ಶೇಕಡಾ 33ರ ರಾಜಕೀಯ ಮೀಸಲಾತಿಯ ಸಾಂವಿಧಾನಿಕ ಆಶಯ ಚಿಗುರತೊಡಗಿದ್ದು ಸ್ವಾತಂತ್ರ್ಯ ಬಂದು 50 ವರ್ಷಗಳಾದ ಮೇಲೆ, ಈಗ ಮೂರು ದಶಕಗಳಾದರೂ ಈಡೇರಿಸಲಾಗಿಲ್ಲ. ಇದು ಪ್ರಭುತ್ವದ ವೈಫಲ್ಯವೋ, ರಾಜಕೀಯವನ್ನು ಪ್ರತಿನಿಧಿಸುವ ಪಕ್ಷಗಳ ಹಿನ್ನಡೆಯೋ ಅಥವಾ ಸಾರ್ವಜನಿಕ ಅವಜ್ಞೆಯ ಫಲವೋ ? ಈ ಪ್ರಶ್ನೆಗೆ ವರ್ತಮಾನ ಭಾರತ ಉತ್ತರಿಸಬೇಕಿದೆ.

ರಾಜಕೀಯ ಅಧಿಕಾರ ಮತ್ತು ಮಹಿಳೆ
ಶೇಕಡಾ 50ರಷ್ಟು ಜನಸಂಖ್ಯೆ ಇರುವ (ಪ್ರಾದೇಶಿಕ ವ್ಯತ್ಯಯಗಳನ್ನು ಹೊರತುಪಡಿಸಿ) ಮಹಿಳಾ ಸಮುದಾಯಕ್ಕೆ ರಾಜಕೀಯ ಅಧಿಕಾರ-ಆಡಳಿತ ಕೇಂದ್ರಗಳಲ್ಲಿ ʼ ಸಮಪಾಲುʼ ನೀಡುವುದು ಸ್ವತಂತ್ರ ಭಾರತದ ಪ್ರಥಮ ಆದ್ಯತೆಯಾಗಬೇಕಿತ್ತು. ಚಾರಿತ್ರಿಕ ಕಾರಣಗಳಿಂದ ಇದು ಸಾಧ್ಯವಾಗಲಿಲ್ಲ. ಆದರೆ ತದನಂತರದ ಬೆಳವಣಿಗೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೂ ʼ ಮಹಿಳಾ ಪ್ರಾತಿನಿಧ್ಯ ʼ ಒಂದು ಸ್ವಾಭಾವಿಕ ಆದ್ಯತೆಯಾಗಬೇಕಿತ್ತಲ್ಲವೇ ? ನೈತಿಕ ಜವಾಬ್ದಾರಿ ಆಗಬೇಕಿತ್ತಲ್ಲವೇ ? ಈ ಸ್ವಾಭಾವಿಕ-ನೈತಿಕ ಜವಾಬ್ದಾರಿಯನ್ನು ನಿಭಾಯಿಸಲು ಒಂದು ಶಾಸನ ಜಾರಿಯಾಗುವವರೆಗೂ ಕಾಯುವುದು ಅನೈತಿಕ ರಾಜಕಾರಣ ಅಲ್ಲವೇ ? ಮಹಿಳಾ ಸಮಾನತೆ ಮತ್ತು ಸಬಲೀಕರಣವನ್ನು ತಮ್ಮ ಪ್ರಧಾನ ಆದ್ಯತೆಯಾಗಿ ಬಿಂಬಿಸುವ ರಾಜಕೀಯ ಪಕ್ಷಗಳು (ಎಡ-ಬಲ-ದಲಿತ ಇತ್ಯಾದಿ) ಈವರೆಗಿನ ಚುನಾವಣೆಗಳಲ್ಲಿ ಎಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ ?

2019ರಲ್ಲಿ ಪ್ರಜಾಸತ್ತಾತ್ಮಕ ಸುಧಾರಣಾ ಸಂಘಟನೆ (Association for democratic reforms) ಪ್ರಕಟಿಸಿದ ವರದಿಯ ಅನುಸಾರ 51,411 ಅಭ್ಯರ್ಥಿಗಳ ಪೈಕಿ (ಶಾಸಕ ಮತ್ತು ಸಂಸದ ಸ್ಥಾನಗಳಿಗೆ) 4,173 ಮಹಿಳೆಯರಿದ್ದರು. ಆಗ ಚುನಾಯಿತರಾಗಿದ್ದ 4,865 ಜನಪ್ರತಿನಿಧಿಗಳ ಪೈಕಿ ಮಹಿಳೆಯರ ಸಂಖ್ಯೆ 440 (ಶೇಕಡಾ 9) ಆಗಿತ್ತು. ಯಾವುದೇ ರಾಜ್ಯದಲ್ಲೂ ಶೇಕಡಾ 10ಕ್ಕಿಂತಲೂ ಹೆಚ್ಚು ಮಹಿಳೆಯರು ಕಾಣುವುದಿಲ್ಲ. ಈ 4,173 ಮಹಿಳಾ ಅಭ್ಯರ್ಥಿಗಳನ್ನು ಸಂದರ್ಶಿಸಿದಾಗ ದೊರೆತ ಮಾಹಿತಿ ಎಂದರೆ 1,060 (ಶೇಕಡಾ 25) ಮಹಿಳೆಯರು ಕೋಟ್ಯಧಿಪತಿಗಳಾಗಿದ್ದರು. 2004-14ರ ಅವಧಿಯ ಮೂರು ಲೋಕಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ, ಮಹಿಳಾ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಸುಧಾರಣೆ ಕಾಣುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

2014ರಲ್ಲಿ ಬಿಜೆಪಿ ಶೇಕಡಾ 8.9ರಷ್ಟು, ಕಾಂಗ್ರೆಸ್‌ ಶೇಕಡಾ 12.96ರಷ್ಟು, ಇತರೆ ಪಕ್ಷಗಳು ಶೇಕಡಾ 9.6ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದವು. 2019ರ ಚುನಾವಣೆಗಳಲ್ಲಿ ಈ ಪ್ರಮಾಣ ಕ್ರಮವಾಗಿ ಶೇಕಡಾ 8.9 , 12.8 ಮತ್ತು ಶೇಕಡಾ 9.7ರಷ್ಟಿತ್ತು. ಈಗ ನಡೆಯುತ್ತಿರುವ ಪಶ್ಚಿಮ ಬಂಗಾಲ ಚುನಾವಣೆಗಳಲ್ಲಿ 2,920 ಅಭ್ಯರ್ಥಿಗಳ ಪೈಕಿ 385 ಮಹಿಳೆಯರಿದ್ದಾರೆ. ತೃಣಮೂಲ ಕಾಂಗ್ರೆಸ್‌ 55 (291) , ಕಾಂಗ್ರೆಸ್‌ 44 (284) , ಎಡಪಕ್ಷಗಳು 35 (192) , ಬಿಜೆಪಿ 33 (292) ಮಹಿಳೆಯರಿಗೆ ಟಿಕೆಟ್‌ ನೀಡಿವೆ. ಆವರಣದಲ್ಲಿರುವುದು ಒಟ್ಟು ಅಭ್ಯರ್ಥಿಗಳ ಸಂಖ್ಯೆ. ಎಡಪಕ್ಷಗಳನ್ನೂ ಸೇರಿದಂತೆ ಯಾವ ಪಕ್ಷವೂ ಶೇಕಡಾ 15ಕ್ಕಿಂತಲೂ ಹೆಚ್ಚು ಮಹಿಳೆಯರಿಗೆ ಟಿಕೆಟ್‌ ನೀಡದಿರುವುದನ್ನು ಗಮನಿಸಬಹುದು. ಎಲ್ಲ ಪಕ್ಷಗಳೂ ಈ ತಮ್ಮ ಪ್ರಣಾಳಿಕೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸುವ ಅಶ್ವಾಸನೆ ನೀಡಿವೆ.

ನಡೆ ನುಡಿಯ ಅಂತರ
ವಿಡಂಬನೆ ಎಂದರೆ ಪ್ರಸಕ್ತ ವಿಧಾನಸಭಾ ಚುನಾವಣೆಗಳಲ್ಲೇ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ಯಾವ ಪಕ್ಷವೂ ನೀಡಿಲ್ಲ. ಈ ಬೂಟಾಟಿಕೆಯನ್ನು ಹೇಗೆ ವ್ಯಾಖ್ಯಾನಿಸುವುದು ? ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹೇಗಾದರೂ ಮಾಡಿ ಜಾರಿಗೊಳಿಸುವ ಪಣ ತೊಟ್ಟಿದ್ದ ಬಿಜೆಪಿ ಕೇವಲ ಶೇಕಡಾ 11ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದನ್ನು ಗಮನಿಸಬೇಕು. ಅಂದರೆ ಸಾಂವಿಧಾನಿಕವಾಗಿ ಶಾಸನದ ಮೂಲಕ ಕಡ್ಡಾಯಗೊಳಿಸದರೆ ಮಾತ್ರವೇ ನಮ್ಮ ರಾಜಕೀಯ ಪಕ್ಷಗಳು ಮಹಿಳಾ ಪ್ರಾತಿನಿಧ್ಯಕ್ಕೆ ಪ್ರಾಮುಖ್ಯತೆ ನೀಡುತ್ತವೆ ಎನ್ನುವುದು ಸ್ಪಷ್ಟವಾಗುತ್ತದೆ. ಇದಕ್ಕೆ ಕಾರಣ ಪಕ್ಷಗಳ ಒಳಗೆ ಪ್ರಾತಿನಿಧಿಕ ಪ್ರಜಾತಂತ್ರ (Representative Democracy) ಇಲ್ಲದಿರುವುದು.
ಇದನ್ನು ಸರಿಪಡಿಸಬೇಕಾದರೆ ಪಕ್ಷಗಳು ತಳಮಟ್ಟದಿಂದಲೇ ಸಂಘಟನಾತ್ಮಕ ಪ್ರಜಾತಂತ್ರ ಮೌಲ್ಯಗಳನ್ನು (Organisational Democratic values) ವ್ಯವಸ್ಥಿತವಾಗಿ ಬಿತ್ತಬೇಕು. ಯಾವುದೇ ಪಕ್ಷವಾದರೂ ತನ್ನ ಎಲ್ಲ ಅಂಗಗಳಲ್ಲಿ, ವಿಭಾಗಗಳಲ್ಲಿ, ಆಡಳಿತ ಮಂಡಲಿಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಬೇಕು. ಹಾಗೆಯೇ ಅನುಪಾತದ ಆಧಾರದಲ್ಲಾದರೂ ನಾಯಕತ್ವದ ಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು. ಈಗಿನ ಪರಿಸ್ಥಿತಿಯನ್ನೇ ನೋಡಿದರೆ, ಒಂದು ವೇಳೆ ಕ್ಷೇತ್ರ ಪುನರ್ವಿಂಗಡನೆ ಪೂರ್ತಿಯಾದರೆ 850 ಲೋಕಸಭಾ ಸ್ಥಾನಗಳ ಪೈಕಿ 283 ಮಹಿಳೆಯರು ಚುನಾಯಿತರಾಗಬೇಕಾಗುತ್ತದೆ. ಹಾಲಿ ಲೋಕಸಭೆಯಲ್ಲಿ 74 ಮಹಿಳೆಯರಿದ್ದಾರೆ. ಈ ಮಸೂದೆ ಜಾರಿಯಾದರೂ ರಾಜ್ಯಸಭೆ-ವಿಧಾನ ಪರಿಷತ್ತುಗಳಿಗೆ ಅನ್ವಯಿಸದಿರುವುದು ಮತ್ತೊಂದು ತಾರತಮ್ಯದ ನೀತಿಯಾಗಿದ್ದು ಇದನ್ನು ಸರಿಪಡಿಸಬೇಕಿದೆ.

2029ರ ವೇಳೆಗೆ 209 ಹೆಚ್ಚುವರಿ ಮಹಿಳೆಯರನ್ನು ಸಂಸದ ಸ್ಥಾನದ ಅಭ್ಯರ್ಥಿಗಳಾಗಿ ಆಯ್ಕೆ ಮಾಡುವ ಜವಾಬ್ದಾರಿ ರಾಜಕೀಯ ಪಕ್ಷಗಳ ಮೇಲಿರುತ್ತದೆ. ಕುಟುಂಬ ರಾಜಕಾರಣದ ಛಾಯೆ ಇಲ್ಲಿಯೂ ಸಹ ದಟ್ಟವಾಗಿ ಆವರಿಸುವ ಸಾಧ್ಯತೆಗಳು ನಿಚ್ಛಳವಾಗಿವೆ. ಚುನಾಯಿತ/ಪರಾಜಿತ ಜನಪ್ರತಿನಿಧಿಗಳ, ಪಕ್ಷಗಳ ಪ್ರಮುಖ ನಾಯಕರ ಕುಟುಂಬದಿಂದಲೇ ಅಥವಾ ಕಾರ್ಪೋರೇಟ್‌ ಔದ್ಯಮಿಕ ವರ್ಗಗಳಿಂದಲೇ ಮಹಿಳೆಯರು ಅಭ್ಯರ್ಥಿಗಳಾಗಿ ಆಯ್ಕೆಯಾಗುತ್ತಾರೆ. ಈ ಸಾಧ್ಯತೆಯನ್ನು ಅಲ್ಲಗಳೆಯುವಂತಹ ಯಾವುದೇ ಸೂಚನೆಯೂ ಇಂದಿನ ಸನ್ನಿವೇಶದಲ್ಲಿ ಕಾಣಲಾಗುವುದಿಲ್ಲ. ಏಕೆಂದರೆ ತಳಮಟ್ಟದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ, ಕಾರ್ಮಿಕ ಸಂಘಟನೆಗಳಲ್ಲಿ, ಹೋರಾಟಗಳಲ್ಲಿ ಕ್ರಿಯಾಶೀಲವಾಗಿರುವ ಮಹಿಳೆಯರಿಗೆ , ಆಯಾ ಕ್ಷೇತ್ರದಲ್ಲೇ ಸೂಕ್ತ ಪ್ರಾತಿನಿಧ್ಯವನ್ನು ಕಲ್ಪಿಸಲಾಗಿಲ್ಲ.

ತಳಸಮಾಜದ ದಿಟ್ಟ ದನಿಗಾಗಿ
ಮಹಿಳಾ ಮೀಸಲಾತಿ ಮಸೂದೆ ತಳಸಮಾಜದ ಮಹಿಳೆಯರಿಗೆ ಒಂದು ದಿಟ್ಟ ದನಿಯನ್ನು ಕಲ್ಪಿಸಬೇಕಾದರೆ ಅದು ಶಾಸನಸಭೆಗಳಿಗೆ ಆಯ್ಕೆಯಾಗುವವರಿಂದ ಮಾತ್ರ ಸಾಧ್ಯವಾಗುವುದಿಲ್ಲ. ಈ ಶಾಸಕಾಂಗಗಳಲ್ಲಿ ಪಕ್ಷ ನಿಷ್ಠೆ ಮುಖ್ಯವಾಗಿರುತ್ತದೆ. ಮಹಿಳಾ ವಿರೋಧಿ ಮಸೂದೆಗಳು ಜಾರಿಯಾದರೂ, ಮಹಿಳಾ ಶಾಸಕರು/ಸಂಸದರು ಪಕ್ಷದ ಶಿಸ್ತಿಗೆ ಒಳಪಟ್ಟು ಅನುಮೋದಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಲಿಂಗತ್ವ ಅಸ್ಮಿತೆ ಅಥವಾ ಜಾತಿ ಅಸ್ಮಿತೆ , ತಳಸಮಾಜದ ಆಶೋತ್ತರಗಳಿಗೆ ಸ್ಪಂದಿಸಲು ನೆರವಾಗುವುದಾದರೂ, ಶಾಸನಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಪಕ್ಷದ ಬಲಾಬಲ ಮತ್ತು ಬಹುಮತ ಮುನ್ನಲೆಗೆ ಬರುತ್ತದೆ. ಕೇಂದ್ರ ಸರ್ಕಾರದ ಹಲವಾರು ಸಂವಿಧಾನ ವಿರೋಧಿ ಕಾನೂನುಗಳನ್ನು ಬಿಜೆಪಿ ಮತ್ತು ಮಿತ್ರಪಕ್ಷಗಳ ದಲಿತ ಸಂಸದರು ಮೌನವಾಗಿ ಅನುಮೋದಿಸುತ್ತಿರುವುದು ಪ್ರತ್ಯಕ್ಷ ಉದಾಹರಣೆಯಾಗಿ ಕಾಣುತ್ತದೆ.

ಮಹಿಳಾ ಪ್ರತಿನಿಧಿಗಳೂ ಇದೇ ಒತ್ತಡವನ್ನು ಎದುರಿಸುತ್ತಾರೆ. ಬಿಜೆಪಿಯ ಮಹಿಳಾ ಸಂಸದರ ಧೋರಣೆ ಮತ್ತು ವರ್ತನೆಯನ್ನು ಗಮನಿಸಿದರೆ ಇದು ಇನ್ನೂ ಸ್ಪಷ್ಟವಾಗುತ್ತದೆ. ಇದನ್ನು ಮೀರಿ ವಿಶಾಲ ಸಮಾಜದಲ್ಲಿ ಮಹಿಳಾ ಸಮಾನತೆ-ಸಬಲೀಕರಣವನ್ನು ಸಾಧಿಸಬೇಕಾದರೆ, ತಳಮಟ್ಟದಿಂದಲೇ ಮಹಿಳಾ ಸಂವೇದನೆ ಬಲಗೊಳ್ಳಬೇಕು. ಈ ಸಂವೇದನೆಯ ತಂತುಗಳು ರಾಜಕೀಯ ಸ್ಪರ್ಶ ಪಡೆಯಬೇಕಾದರೆ, ಮಹಿಳಾ ಅಸ್ಮಿತೆ ಎನ್ನುವುದು ಪಕ್ಷಾತೀತವಾಗಿ ಪ್ರಕಟವಾಗಬೇಕು. ಆಗ ಬಿಲ್ಕಿಸ್‌ ಬಾನು, ಮಣಿಪುರದ ಮಹಿಳೆಯರ ಪರ ಸಂಸತ್ತಿನಲ್ಲಿ ಏಕೀಕೃತ ದನಿ (Unified Voice) ಕೇಳಿಬರಲು ಸಾಧ್ಯ. ಸಂಘಟನಾತ್ಮಕವಾಗಿ ತಳಮಟ್ಟದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಸೂಕ್ತ ಮಾನ್ಯತೆ ದೊರೆಯದೆ ಹೋದಲ್ಲಿ, ಈಗ ಕಾಣುತ್ತಿರುವ ಬೂಟಾಟಿಕೆಯ ವಿಕೇಂದ್ರೀಕರಣವನ್ನಷ್ಟೇ ಕಾಣಲು ಸಾಧ್ಯ. ಈ ಜಟಿಲ ಸಿಕ್ಕುಗಳನ್ನು ಎಡಪಕ್ಷಗಳನ್ನೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಅರ್ಥಮಾಡಿಕೊಳ್ಳಬೇಕಿದೆ.

ಪಿತೃಪ್ರಧಾನತೆಯ ಗೋಡೆಗಳು
ಮಹಿಳಾ ಮೀಸಲಾತಿ ಮಸೂದೆ ಕಾಯ್ದೆಯಾಗಿ ಜಾರಿಯಾದರೆ, ಮಹಿಳೆಯರ ಸಂಖ್ಯಾ ಪ್ರಾತಿನಿಧ್ಯ ಬಲಗೊಳ್ಳುವುದು ವಾಸ್ತವ. ಆದರೆ ಇಲ್ಲಿ ಪ್ರಶ್ನೆ ಇರುವುದು ಕೇವಲ ಹೆಚ್ಚಿನ ಪ್ರಾತಿನಿಧ್ಯ ಅಲ್ಲ. ಈ ಹೆಚ್ಚಳದ ಪರಿಣಾಮವಾಗಿ ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಇರುವ ರಾಚನಿಕ ತಡೆಗೋಡೆಗಳು ಇಲ್ಲವಾಗುತ್ತದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಸಿಎಸ್‌ಡಿಎಸ್-ಲೋಕನೀತಿ ಸಮೀಕ್ಷೆಯಲ್ಲಿ, ಈ ಮಸೂದೆಯು ಮಹಿಳೆಯರಿಗೆ ಅವಕಾಶಗಳನ್ನು ವಿಸ್ತರಿಸಿದರೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ತಮ್ಮ ರಾಜಕೀಯ ವೃತ್ತಿಯನ್ನು ಸುಸ್ಥಿರವಾಗಿ ಕಾಪಾಡಿಕೊಳ್ಳುವುದು ಸುಲಭವಲ್ಲ ಎಂದು ಅಂಕಿಸಂಖ್ಯೆಗಳ ಮೂಲಕ ನಿರೂಪಿಸಲಾಗಿದೆ. ಕಳೆದ ಹಲವು ವರ್ಷಗಳಲ್ಲಿ ಭಾರತದ ಚುನಾವಣೆಗಳಲ್ಲಿ ಮಹಿಳೆಯರು ಪ್ರಧಾನ ಶಕ್ತಿಯಾಗಿದ್ದಾರೆ. ಮಹಿಳಾ ಕೇಂದ್ರಿತ ಗ್ಯಾರಂಟಿಗಳು, ಯೋಜನೆಗಳು, ನಗದು ಪಾವತಿಗಳು ರಾಜಕೀಯ ಪಕ್ಷಗಳಿಗೆ ನೆರವಾಗುತ್ತಿವೆ.
ಆದರೆ ಮತದಾರರ ಹೆಚ್ಚಳ ಪ್ರಾತಿನಿಧ್ಯದ ವಿಸ್ತರಣೆಗೆ ಕಾರಣವಾಗಿಲ್ಲ.

ಹಾಗಾಗಿ ಮತದಾನ ಮತ್ತು ರಾಜಕೀಯ ಅಸ್ತಿತ್ವ ಅಥವಾ ಭಾಗವಹಿಸುವಿಕೆಯ ನಡುವೆ ಅಪಾರ ಅಂತರವನ್ನು ಕಾಣಬಹುದು. ಈ ಸಮೀಕ್ಷೆಯ ಅನುಸಾರ ಶೇಕಡಾ 74 ರಿಂದ 84ರಷ್ಟು ಮಹಿಳೆಯರು ಮತದಾನದ ಪ್ರಕ್ರಿಯೆಯಿಂದಾಚೆ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಲ್ಲ. ಇದು ಎಲ್ಲ ಜಾತಿ-ವರ್ಗಗಳಿಗೂ ಸಮಾನವಾಗಿ ಅನ್ವಯಿಸುವ ಒಂದು ವಿದ್ಯಮಾನ. ರಾಜಕೀಯ ಪಕ್ಷಗಳ ನಾಯಕತ್ವದ ಧೋರಣೆಯನ್ನು ಗಮನಿಸಿದಾಗ, ಶೇಕಡಾ 44ರಷ್ಟು ಮಹಿಳೆಯರ ಅಭಿಪ್ರಾಯದಲ್ಲಿ, ಸಮಾನ ಅರ್ಹತೆ ಹೊಂದಿದ್ದರೂ ಮಹಿಳೆ ಆಯ್ಕೆ ಪ್ರಕ್ರಿಯೆಯಲ್ಲಿ ಆದ್ಯತೆ ಪಡೆಯುವುದಿಲ್ಲ. ಗೆಲ್ಲುವ ಸಾಧ್ಯತೆಗಳು-ಸಾಮರ್ಥ್ಯವನ್ನು (Winnability) ಕಾರಣ ಮಾಡಲಾಗುತ್ತದೆ.

ಈ ಸಮೀಕ್ಷೆಯ ಅನುಸಾರ ಶೇಕಡಾ 22ರಷ್ಟು ಮಹಿಳೆಯರು ಪಿತೃಪ್ರಧಾನ ಸಂರಚನೆಗಳನ್ನೇ ಪ್ರಧಾನವಾದ ಅಡಚಣೆ ಎಂದು ಪರಿಗಣಿಸುತ್ತಾರೆ. ಇದರೊಟ್ಟಿಗೆ ಕೌಟುಂಬಿಕ ಜವಾಬ್ದಾರಿ ಮತ್ತು ಅರಿವಿನ ಕೊರತೆಯೂ ಸಹ ಮುಖ್ಯವಾಗುತ್ತದೆ. ಎರಡನೆ ಮೂರರಷ್ಟು ಮಹಿಳೆಯರು ತಮ್ಮ ಕುಟುಂಬಗಳಲ್ಲಿ ಪಿತೃಪ್ರಧಾನ ಆಧಿಪತ್ಯ ಇರುವುದನ್ನು ಒಪ್ಪಿಕೊಳ್ಳುತ್ತಾರೆ. ಶೇಕಡಾ 66ರಷ್ಟು ಮಹಿಳೆಯರು ತಮಗೆ ರಾಜಕೀಯ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸ್ವಾತಂತ್ರ್ಯವನ್ನೇ ನೀಡುವುದಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಈ ತಡೆಗೋಡೆಗಳ ಪರಿಣಾಮ ಎಷ್ಟು ಆಳವಾಗಿದೆ ಎಂದರೆ, ಕೇವಲ ಶೇಕಡಾ 22ರಷ್ಟು ಮಹಿಳೆಯರು ರಾಜಕೀಯ ಪ್ರವೇಶಿಸಲು ಸಮ್ಮತಿ ಸೂಚಿಸುತ್ತಾರೆ. ಈ ಅಸಮ್ಮತಿಗೆ ನಿರಾಸಕ್ತಿಯೊಂದೇ ಕಾರಣವಲ್ಲ, ಇದರ ಜೊತೆಗೆ ನಿರ್ಬಂಧಿತ ಸ್ವಾಯತ್ತತೆ, ಸ್ವಾತಂತ್ರ್ಯ, ಸೀಮಿತವಾದ ಸಂಪರ್ಕ ಮತ್ತು ಮಹಿಳೆಯರನ್ನು ಹೊರಗಿಡುವ ರಾಜಕೀಯ ಸಂರಚನೆಗಳೂ ಸಹ ಪ್ರಭಾವ ಬೀರುತ್ತವೆ.

ಭವಿಷ್ಯದ ಜವಾಬ್ದಾರಿಗಳು
ಈ ದೃಷ್ಟಿಯಿಂದ ನೋಡಿದಾಗ ಮಹಿಳಾ ಮೀಸಲಾತಿ ಸಂಖ್ಯೆಯ ಆಧಾರದಲ್ಲಿ ಪ್ರಾತಿನಿಧ್ಯವನ್ನು ವಿಸ್ತರಿಸಿದರೂ ಸಹ ಸಮಾನಾಂತರವಾಗಿ ಪಕ್ಷಗಳ ನಿರ್ಣಾಯಕ ಸ್ಥಾನ, ಹುದ್ದೆಗಳಲ್ಲಿ ಮಹಿಳೆಯರನ್ನು ಒಳಗೊಳ್ಳುವ ಪ್ರವೃತ್ತಿ ಹೆಚ್ಚಾಗದೆ ಹೋದರೆ, ಕುಟುಂಬಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯ, ಸ್ವಾಯತ್ತತೆ ಕಲ್ಪಿಸದೆ ಹೋದರೆ, ಸಂಪನ್ಮೂಲಗಳ ಲಭ್ಯತೆ ಮತ್ತು ಅವಕಾಶಗಳನ್ನು ವಿಸ್ತರಿಸದೆ ಹೋದರೆ , ಮಹಿಳಾ ಮೀಸಲಾತಿ ಮಾತ್ರವೇ ಭಾರತದ ಮಹಿಳಾ ಸಮುದಾಯವನ್ನು ಬಲಪಡಿಸುವುದಿಲ್ಲ. ಈ ಎಲ್ಲ ತಳಮಟ್ಟದ ಸುಧಾರಣೆಗಳನ್ನು ಕಾನೂನುಗಳ ಮೂಲಕ ಜಾರಿಗೊಳಿಸಲಾಗುವುದಿಲ್ಲ. ಇದು ತಳಮಟ್ಟದಲ್ಲಿ, ವೈಯುಕ್ತಿಕ ನೆಲೆಯಲ್ಲಿ, ವ್ಯಕ್ತಿಗತ ಬದುಕಿನಲ್ಲಿ ಕಾರ್ಯಗತವಾಗಬೇಕು. ಕುಟುಂಬಗಳಲ್ಲಿ ಈ ಸುಧಾರಣೆಗಳನ್ನು ಅಪೇಕ್ಷಿಸುವ ಮುನ್ನ, ಬಾಹ್ಯ ಸಮಾಜದಲ್ಲಿ ಕ್ರಿಯಾಶೀಲವಾಗಿರುವ ಎಲ್ಲ ಆಯಾಮಗಳ ಸಂಘ, ಸಂಸ್ಥೆ ಹಾಗೂ ಸಂಘಟನೆಗಳಲ್ಲಿ ಈ ಸುಧಾರಣಾ ಕ್ರಮಗಳು ಜಾರಿಯಾಗಬೇಕು.

ಇಲ್ಲಿ ಎಡಪಕ್ಷಗಳ ಸಮೂಹ ಸಂಘಟನೆಗಳು ( Mass Organisations) ಪ್ರಧಾನ ಪಾತ್ರ ವಹಿಸಬೇಕಾಗುತ್ತದೆ. ಮೇಲಿನಿಂದ ಆದೇಶ ಬರುವವರೆಗೂ ತಳಹಂತದಲ್ಲಿ ಹುಲ್ಲುಕಡ್ಡಿಯೂ ಅಲುಗಾಡದಂತಹ ಒಂದು ಶ್ರೇಣೀಕೃತ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಎಡಪಕ್ಷಗಳು ಆಂತರಿಕವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೇ ಅಲ್ಲದೆ, ವಿಕೇಂದ್ರೀಕರಣ ನೀತಿಯನ್ನೂ ಅನುಸರಿಸಬೇಕಿದೆ. ಪ್ರಜಾತಂತ್ರ ಮತ್ತು ವಿಕೇಂದ್ರೀಕರಣ ಈ ಎರಡೂ ಉದಾತ್ತ ಮೌಲ್ಯಗಳನ್ನು ಅತಿ ಹೆಚ್ಚು ಗೌರವಿಸುವ ಎಡಪಕ್ಷಗಳು, ಆಂತರಿಕವಾಗಿ ಈ ಎರಡನ್ನೂ ಪಾಲಿಸದೆ ಇರುವುದು ಪ್ರಶ್ನಾರ್ಹವಷ್ಟೇ ಅಲ್ಲ, ಭಾರತದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿಯೂ ಪರಿಣಮಿಸುತ್ತದೆ. ಮಹಿಳಾ ಸಬಲೀಕರಣ-ಸಮಾನತೆಯ ದೃಷ್ಟಿಯಿಂದ ಇದು ಇನ್ನೂ ಹೆಚ್ಚು ಅಪಾಯಕಾರಿಯಾಗಿ ಕಾಣುತ್ತದೆ.
ಮಹಿಳಾ ಮೀಸಲಾತಿ ಮಸೂದೆ ಮಹಿಳಾ ಸಬಲೀಕರಣದ ಒಂದು ಹೆಜ್ಜೆ. ಸಮಾನತೆ ಇನ್ನೂ ಬಹುದೂರದ ಗುರಿ. ಇದನ್ನು ಸಾಧಿಸಬೇಕಾದರೆ ತಳಮಟ್ಟದ ಪ್ರಜಾಪ್ರಭುತ್ವೀಯ ನೆಲೆಗಳು ಗಟ್ಟಿಯಾಗಬೇಕು. ಈ ಗಟ್ಟಿಗೊಳಿಸುವ ಕಾಯಕವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಜವಾಬ್ದಾರಿ ರಾಜಕೀಯವಾಗಿ ಎಡಪಕ್ಷಗಳ ಮೇಲೆ, ಸಾಮಾಜಿಕವಾಗಿ ಪುರೋಗಾಮಿ ಸಂಘಟನೆಗಳ ಮೇಲೆ ಇದೆ. ಇದನ್ನು ಅರಿತು ತಮ್ಮ ಅಂತರಾತ್ಮವನ್ನು ಪ್ರಶ್ನಿಸಿಕೊಂಡು, ಪರಿವರ್ತನೆಯ ಹಾದಿಯಲ್ಲಿ ಸಾಗುವುದು ವರ್ತಮಾನದ ಆದ್ಯತೆಯಾಗಬೇಕು. ಭಾರತದ ಭವಿಷ್ಯ ರಾಜಕೀಯವಾಗಿ ಎಡಪಂಥೀಯ-ಪುರೋಗಾಮಿ ಶಕ್ತಿಗಳನ್ನು ಅವಲಂಬಿಸಿದೆ. ಇಲ್ಲಿ ಮಹಿಳಾ ಸಮಾನತೆಯನ್ನು ಪ್ರಮಾಣೀಕರಿಸಿದರೆ ಬಹುಶಃ ಮಿಲೆನಿಯಂ ಜಗತ್ತಿಗೆ ಉಜ್ವಲ ಭವಿಷ್ಯದ ಭರವಸೆಯನ್ನಾದರೂ ಕೊಡಬಹುದು.

(ಲೋಕನೀತಿ-ಸಿಎಸ್‌ಡಿಎಸ್‌ ಸಮೀಕ್ಷೆಯ ಮಾಹಿತಿಗೆ ಆಧಾರ : Why Quotas alone wonʼt increase womenʼs representation ̲ ಕ್ರಿಶಾಂಗಿ ಸಿನ್ಹಾ ಮತ್ತು ಸಂಜಯ್‌ ಕುಮಾರ್‌ ದ ಹಿಂದೂ ಪತ್ರಿಕೆ )
-೦-೦-೦-೦-೦-

 

 

 

 

 

 

 

 

 

 

 

 

 

 

 

 

 

 

 

Tags: #-pratidhvaniDemocracygender equalityIndian PoliticsParliamentPolitical PartiesRepresentationsocial JusticeWomen Reservation
Previous Post

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

Next Post

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧಿಕ ಅವಕಾಶಗಳು

April 27, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 25, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 24, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada