ಬೆಂಗಳೂರು: ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಕಪೋಲ ಕಲ್ಪಿತ ಆರೋಪಗಳನ್ನು ಮಾಡುತ್ತಿದ್ದಾರೆ. ತಲೆ ತಿರುಕರು ಮತ್ತು ತಲೆ ಸರಿ ಇಲ್ಲದವರು ಮಾತ್ರ ಹೀಗೆ ಮಾತನಾಡಲು ಸಾಧ್ಯ. ತಲೆ ಸರಿ ಇದ್ದವರು ಹೀಗೆಲ್ಲ ಮಾತನಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಭ್ರಷ್ಟಚಾರದ ಆರೋಪಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ನಾಯಕರು ಹುಚ್ಚರು, ತಲೆ ತಿರುಕರು. ತಾವು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಹೀಗಾಗಿ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಇವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಸದನದಲ್ಲಿ ಮಾತನಾಡಲಿ ಅವರಿಗೆ ತಕ್ಕ ಉತ್ತರ ಕೊಡುತ್ತೇವೆ. ತಾವು ಅಧಿವೇಶನಕ್ಕೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ವಿರೋಧಪಕ್ಷದ ನಾಯಕರಿಗೆ ಈ ಮಾತು ಶೋಭೆ ತರುವುದಿಲ್ಲ ಎಂದರು.
ಹಿಂದೆ ಶೇ40 ಲಂಚದ ಆರೋಪ ಮಾಡಿದರು. ಅದಕ್ಕೆ ಒಂದೇ ಒಂದು ದಾಖಲೆ ಕೊಡಲಿಲ್ಲ. ಕಾಂಗ್ರೆಸ್ ನವರು ಒಂದೇ ಒಂದು ಆರೋಪ ಸಾಬೀತು ಮಾಡಲಿಲ್ಲ. ನೀರಾವರಿ ಟೆಂಡರ್ ನಲ್ಲಿ ಅಕ್ರಮ ಆಗಿದ್ದರೆ ದಾಖಲೆ ಕೊಡಲಿ. ಗಾಳಿಯಲ್ಲಿ ಗುಂಡು ಹಾರಿಸಿದಂತೆ ಮಾತನಾಡುವುದು ಸರಿಯಲ್ಲ. ಗೂಳಿಹಟ್ಟಿ ಶೇಖರ್ ಅವರಲ್ಲೂ ದಾಖಲೆ ಕೇಳಿದ್ದೇವೆ ಎಂದರು.






