ತಿರುವನಂತಪುರ: ವಸತಿ ಯೋಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯದ(ಇ ಡಿ) ಅಧಿಕಾರಿಗಳು ಬಂಧಿಸಿದ್ದಾರೆ.
ಯುಎಇ ಮೂಲದ ಕಂಪನಿ ಪ್ರಾಯೋಜಿತ ವಸತಿ ಯೋಜನೆಯೊಂದರ ಅಕ್ರಮಕ್ಕೆ ಸಂಬಂಧಿಸಿದಂತೆ ಶಿವಶಂಕರ್ ಅವರನ್ನು ಕಳೆದ ಎರಡು ದಿನಗಳಿಂದ ಕೊಚ್ಚಿಯಲ್ಲಿ ಇಡಿ ವಿಚಾರಣೆ ನಡೆಸುತ್ತಿತ್ತು. ಮಂಗಳವಾರ ತಡರಾತ್ರಿ ಅವರನ್ನು ಬಂಧಿಸಲಾಗಿದೆ. ಇಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತ್ರಿಶೂರ್ ಜಿಲ್ಲೆಯ ವಡಕ್ಕಂಚೇರಿಯಲ್ಲಿ ವಸತಿ ಯೋಜನೆಯನ್ನು ಖಾಸಗಿ ಸಂಸ್ಥೆ ಯುನಿಟಾಕ್’ಗೆ ನೀಡಲು ಶಿವಶಂಕರ್ ಲಂಚ ಪಡೆದಿದ್ದಾರೆ ಎಂಬ ಆರೋಪವಿದೆ.
4 ಕೋಟಿಗೂ ಅಧಿಕ ಹಣವನ್ನು ವಿವಿಧ ವ್ಯಕ್ತಿಗಳಿಗೆ ಕಮಿಷನ್ ನೀಡಿರುವುದಾಗಿ ಕಂಪನಿ ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದರು. ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರ ಬ್ಯಾಂಕ್ ಲಾಕರ್’ನಿಂದ ವಶಪಡಿಸಿಕೊಂಡ ಸುಮಾರು 1 ಕೋಟಿ ಹಣ ಶಿವಶಂಕರ್ ಕಮಿಷನ್ ಪಡೆದಿರುವ ಹಣವಿರಬಹುದು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.