ಉತ್ತರಪ್ರದೇಶ ಮಾಜಿ ರಾಜ್ಯಪಾಲ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ ಅವರು ತಮ್ಮದೇ ಪಕ್ಷದ ವಿರುದ್ಧ ಕಟುವಾದ ಟೀಕೆಯನ್ನು ಮಾಡಿದ್ದು, ಕಾಂಗ್ರೆಸ್ ನಾಯಕರ ಮೃದು ಹಿಂದುತ್ವದ ವಿರುದ್ಧ ಕಿಡಿ ಕಾರಿದ್ದಾರೆ.
“ಕಾಂಗ್ರೆಸ್‌ನ ಕೆಲವು ನಾಯಕರು ಹಿಂದುತ್ವದವರಂತೆ ವರ್ತಿಸುತ್ತಿದ್ದಾರೆ. ಮುಸ್ಲಿಮರು ಅವರ ಆದೇಶದಂತೆ ವರ್ತಿಸುವ ಗುಲಾಮರಲ್ಲ” ಎಂದು ಖುರೇಷಿ ಎಚ್ಚರಿಸಿದ್ದಾರೆ.
ಉತ್ತರ ಪ್ರದೇಶದ ರಾಜ್ಯಪಾಲರಾಗಿ, ಮಧ್ಯಪ್ರದೇಶದ ಸಚಿವರಾಗಿ ಹಾಗೂ ಲೋಕಸಭೆ ಸಂಸದರಾಗಿ ಸೇವೆ ಸಲ್ಲಿಸಿರುವ 82ರ ಹರೆಯದ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ವಿದಿಶಾದಲ್ಲಿ ನಡೆದ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಅವರು ತಮ್ಮ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.

“ಕೆಲವು ಕಾಂಗ್ರೆಸ್ ನಾಯಕರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ ಮತ್ತು “ಜೈ ಗಂಗಾ ಮೈಯಾ, ಜೈ ನರ್ಮದಾ ಮೈಯಾ” ಎಂದು ಘೋಷಣೆಗಳನ್ನು ಕೂಗುತ್ತಾರೆ. ಇದು ನಾಚಿಕೆಗೇಡಿನ ವಿಷಯ. ನಾನು ಯಾವುದಕ್ಕೂ ಹೆದರುವುದಿಲ್ಲ, ಬೇಕಿದ್ದರೆ ಅವರು ನನ್ನನ್ನು ಪಕ್ಷದಿಂದ ಹೊರಹಾಕಲಿ. ನೆಹರೂ ಅವರ ವಾರಸುದಾರರಾಗಿರುವ ಕಾಂಗ್ರೆಸ್ ನಾಯಕರು ಧಾರ್ಮಿಕ ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ. ಅವರು ಮಧ್ಯಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ವಿಗ್ರಹಗಳನ್ನು ಸಹ ಸ್ಥಾಪಿಸುತ್ತಾರೆ. ಇದನ್ನು ಮುಸ್ಲಿಮರು ಸಹಿಸುವುದಿಲ್ಲ. ಮುಸ್ಲಿಮರು ತಮ್ಮ ಗುಲಾಮರಲ್ಲ ಎಂಬುದನ್ನು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು” ಎಂದು ಖುರೇಷಿ ಹೇಳಿದರು.
“ನೀವು ಅವರಿಗೆ ಕೆಲಸ ಕೊಡುವುದಿಲ್ಲ. ನೀವು ಅವರಿಗೆ ಪೊಲೀಸ್, ಸೈನ್ಯ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಹಾಗೂ ಬ್ಯಾಂಕ್‌ಗಳಲ್ಲಿ ಉದ್ಯೋಗಗಳನ್ನು ನೀಡುವುದಿಲ್ಲ. ಹಾಗಿರುವಾಗ, ಅವರು ನಿಮಗೆ ಏಕೆ ಮತ ಹಾಕಬೇಕು,” ಎಂದು ಖುರೇಷಿ ಪ್ರಶ್ನಿಸಿದರು.
‘ಮುಸ್ಲಿಮರ ಮಸೀದಿಗಳು, ಮನೆಗಳು, ಮಜಾರ್‌ಗಳು (ದರ್ಗಾಗಳು) ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಗುತ್ತದೆ, ಅವರನ್ನು ಮತ್ತು ಅವರ ಮಹಿಳೆಯರನ್ನು ಅಗೌರವದಿಂದ ನಡೆಸಲಾಗುತ್ತಿದೆ, ಆದರೂ ಸಮುದಾಯವು ಇದನ್ನೆಲ್ಲ ಸಹಿಸಿಕೊಳ್ಳುತ್ತಿದೆ, ಅವರ ಮಕ್ಕಳು ಅನಾಥರಾಗುತ್ತಾರೆ, ಅವರು ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳುತ್ತಾರೆ, ಅವರು ಹೇಡಿಗಳಲ್ಲ, ಮಿತಿ ಮೀರಿದರೆ, 22 ಕೋಟಿ ಮುಸ್ಲಿಮರಲ್ಲಿ ಸಮುದಾಯಕ್ಕಾಗಿ 1-2 ಕೋಟಿ ಮುಸ್ಲಿಮರು ಪ್ರಾಣತ್ಯಾಗ ಮಾಡಿದರೂ ತಪ್ಪೇನಿಲ್ಲ’ ಎಂದು ಅವರು ಹೇಳಿದರು.