ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ 40 ಪರ್ಸೆಂಟ್ ಸರ್ಕಾರ ಎಂದು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮೂಲಕ. ಕಾಂಗ್ರೆಸ್ ಆರೋಪಕ್ಕೆ ಬೂಸ್ಟ್ ಕೊಟ್ಟಿದ್ದು ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬಳಿಕ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಆ ಬಳಿಕ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾದ ಕಾಂಗ್ರೆಸ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, 40 ಪರ್ಸೆಂಟ್ ಕಮಿಷನ್ ಬಗ್ಗೆ ಮಾತನಾಡಿದ್ದು ಟಾನಿಕ್ ಸಿಕ್ಕಂತಾಯ್ತು. ಆ ಬಳಿಕ ಹಲವಾರು ಅಭಿಯಾನ ಮಾಡಿದ ಕಾಂಗ್ರೆಸ್, ಪೇಸಿಎಂ ಸೇರಿದಂತೆ ರಾಜ್ಯದ ಜನರ ಎದುರು ಸರ್ಕಾರದ ಮಾನ ಮೂರಾಬಟ್ಟೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಕಾಂಗ್ರೆಸ್ ಮಾಡಿದ್ದ ಎಲ್ಲಾ ಆರೋಪಗಳ ಬಗ್ಗೆ ತನಿಖೆ ಮಾಡಬೇಕಾದ ಜವಾಬ್ದಾರಿ ನೂತನ ಸರ್ಕಾರದ ಮೇಲಿದೆ.
PSI ಹಗರಣವನ್ನು ಬೆಳಕಿಗೆ ತಂದಿದ್ದ ಪ್ರಿಯಾಂಕ್ ಖರ್ಗೆ..!

ರಾಜ್ಯದಲ್ಲಿ ನಡೆದಿದ್ದ ಪಿಐಎಸ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಬ್ಲ್ಯೂಟೂತ್ ಡಿವೈಸ್ ಮೂಲಕ ಉತ್ತರ ಹೇಳಿಕೊಟ್ಟಿದ್ದು, ಇನ್ನು ಒಎಂಆರ್ ಶೀಟ್ ಖಾಲಿ ಬಿಟ್ಟು ಪರೀಕ್ಷೆ ಮುಗಿದ ಬಳಿಕ ಭರ್ತಿ ಮಾಡಿಕೊಟ್ಟಿದ್ದು ಸೇರಿದಂತೆ ಸಾಕಷ್ಟು ಅವಾಂತರಗಳು ಬಿಜೆಪಿ ಸರ್ಕಾರದಲ್ಲಿ ನಡೆದಿದ್ದವು. ಒಂದು ಪಿಎಸ್ಐ ಪೋಸ್ಟ್ಗೆ 60 ರಿಂದ 80 ಲಕ್ಷ ರೂಪಾಯಿ ಹಣ ಸಂಗ್ರಹದ ಆರೋಪ ಕೇಳಿ ಬಂದಿತ್ತು. ಕೆಲವು ಶಾಸಕರೇ ಮುಂದೆ ನಿಂತು ಈ ದಂಧೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಮರು ಪರೀಕ್ಷೆ ನೆಪಕೊಟ್ಟು ಬಿಜೆಪಿ ಸರ್ಕಾರ ಎಸ್ಕೇಪ್ ಆಗಿತ್ತು. ಉನ್ನತ ಮಟ್ಟದ ಅಧಿಕಾರಿಗಳನ್ನು ಬಂಧಿಸಿ ಜೈಲಿನಲ್ಲಿಟ್ಟು ನಾನು ಮಾತ್ರ ಸಾಚಾ.. ಸಿಕ್ಕಿಬಿದ್ದವರು ಮಾತ್ರ ಅಪರಾಧಿಗಳು ಎಂಬಂತೆ ಅಭಿಪ್ರಾಯ ಸೃಷ್ಟಿಸುವ ಕೆಲಸ ಮಾಡಿತ್ತು. ಈಗ ಸಮಯ ಬಂದಿದೆ. ಜನರು ಭ್ರಷ್ಟರನ್ನು ಮನೆಗೆ ಕಳುಹಿಸಿದ್ದಾರೆ. ಭಷ್ಟರನ್ನು ಜೈಲಿಗೆ ಕಳುಹಿಸುತ್ತಾ ಕಾಂಗ್ರೆಸ್ ಸರ್ಕಾರ ಅನ್ನೋದು ಈಗಿರುವ ಪ್ರಶ್ನೆ..
ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತನಿಖೆಗೆ ಕಾಂಗ್ರೆಸ್ ಶಾಸಕರ ಒಲವು..!

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದ ಹಾಗೆ ಹತ್ತಾರು ಶಾಸಕರು ಈ ಮಾತನ್ನು ಉಲ್ಲೇಖಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ಆಗ್ಬೇಕು ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಸಚಿವ ಎಂ.ಬಿ ಪಾಟೀಲ್ ಸೋಮವಾರ ಮೈಸೂರಿನಲ್ಲಿ ಮಾತನಾಡಿ, ಬಿಜೆಪಿ ಅಧಿಕಾರವಧಿಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ತನಿಖೆ ಮಾಡುತ್ತೇವೆ. PSI ಅಕ್ರಮ, ಆರೋಗ್ಯ ಇಲಾಖೆ ಅಕ್ರಮ, ನೀರಾವರಿ ಇಲಾಖೆ ಅಕ್ರಮ ಸೇರಿದಂತೆ ಪ್ರತಿ ಇಲಾಖೆಯಲ್ಲೂ ಅಕ್ರಮ ನಡೆದಿದ್ದು, ಎಲ್ಲಾ ಹಗರಣಗಳನ್ನು ಲಾಜಿಕಲ್ ಎಂಡ್ಗೆ ಕೊಂಡೊಯ್ಯಲಾಗುತ್ತದೆ ಎಂದಿದ್ದರು. ಮಾಜಿ ಸಚಿವ ದಿನೇಶ್ ಗುಂಡೂರಾವ್ ಕೂಡ ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ಬಗ್ಗೆ ತನಿಖೆ ಆಗ್ಬೇಕು, ಭ್ರಷ್ಟಾಚಾರ ನಿಯಂತ್ರಣ ಮಾಡಬೇಕು ಎಂದಿದ್ದರು. ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಮಾಡಿಲ್ಲ, ಲೂಟಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕಿದೆ ಎಂದಿದ್ದಾರೆ.
ಕಾಂಗ್ರೆಸ್ ತನಿಖೆ ಮಾಡದೆ ಆರೋಪಕ್ಕೆ ಸೀಮಿತ ಮಾಡುತ್ತಾ..?

ಕೊರೊನಾ ಸಮಯದಲ್ಲಿ ಸಾವಿರಾರು ಕೋಟಿ ರೂಪಾಯಿ ಹಗರಣ ಮಾಡಲಾಗಿದೆ ಎಂದು ಸ್ವತಃ ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ಆರೋಪ ಮಾಡಿದ್ದರು. ಆ ಬಳಿಕ ನೀರಾವರಿ ಇಲಾಖೆಯಲ್ಲಿ 22 ಸಾವಿರ ಕೋಟಿ ಟೆಂಡರ್ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಹಾಗು ಹಾಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದರು. ಅದೂ ಕೂಡ ಯಡಿಯೂರಪ್ಪ ಹಾಗು ಅವರ ಪುತ್ರ ಹಾಲಿ ಶಾಸಕ ಬಿ.ವೈ ವಿಜಯೇಂದ್ರ ಕಡೆಗೆ ಬೊಟ್ಟು ಮಾಡಲಾಗಿತ್ತು. ಇನ್ನು ಪಿಎಸ್ಐ ಅಕ್ರಮ ಜಗಜ್ಜಾಹೀರು ಆಗಿದೆ. ವರ್ಗಾವಣೆ ದಂಧೆ ಬಗ್ಗೆ ಆರೋಪ ಕೇಳಿ ಬಂದಿತ್ತು. ಗುತ್ತಿಗೆದಾರ ಸಂತೋಷ್ ಪಾಟೀಲ್ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಎಲ್ಲಾ ಪ್ರಕರಣಗಳಲ್ಲಿ ತನಿಖೆ ನಡೆಸಿ, ಭ್ರಷ್ಟರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಿದರೆ ಕಾಂಗ್ರೆಸ್ ನಾಯಕರನ್ನು ನಂಬಬಹುದು. ಇಲ್ಲದಿದ್ರೆ ಕಾಂಗ್ರೆಸ್ ದೂರುತ್ತಾ ಬಿಜೆಪಿ ಆಡಳಿತ ಮಾಡಿದಂತೆ, ಈಗ ಬಿಜೆಪಿಯನ್ನು ದೂರುತ್ತಾ ಕಾಂಗ್ರೆಸ್ ಆಡಳಿತ ಮಾಡಿದರೆ ಜನರ ನಂಬಿಕೆಗೆ ದ್ರೋಹ ಬಗೆದಂತೆಯೇ ಸರಿ..
ಕೃಷ್ಣಮಣಿ