
ಪೆಗಾಸಸ್ ಕಣ್ಗಾವಲು ತಂತ್ರಾಂಶ ಪ್ರಕಣದಲ್ಲಿ ಈಗಾಗಲೆ ಮೋದಿ ಸರಕಾರದ ಮೇಲೆ ಆರೋಪ ಕೇಳಿಬಂದಿರುವ ನಡುವೆ ಮತ್ತೊಂದು ಸುದ್ದಿ ಹೊರ ಬರುತ್ತಿದೆ. ಪೆಗಾಸಸ್ ಬಿಟ್ಟು ಜನಪ್ರೀಯವಲ್ಲದ ಕಂಪನಿಗಳಿಂದ ಕಣ್ಗಾವಲು ತಂತ್ರಾಂಶವನ್ನು ಖರಿದಿಸಲು ಮೋದಿ ಸರಕಾರ ಯೋಚಿಸುತ್ತಿದೆ ಎಂದು ಫೈನ್ಸಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ. ಪೆಗಾಸಸ್ ಮಾರಾಟಗಾರ ಎನ್ಎಸ್ಒ ಗ್ರೂಪ್ನ ಪ್ರತಿಸ್ಪರ್ಧಿಗಳಾದ ‘ಸುಮಾರು ಒಂದು ಡಜನ್ ಸ್ಪರ್ಧಿಗಳು’ ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ವರದಿ ಹೇಳುತ್ತದೆ. ಭಾರತವು ಈ ಸ್ಪೈವೇಯರ್ ಗಳ ಖರಿದಿಗಾಗಿ $120 ಮಿಲಿಯನ್ ವರೆಗೆ ಖರ್ಚು ಮಾಡಲು ಬಯಸುತ್ತಿದೆ ಎಂದು ವರದಿಯಾಗಿದೆ. ಈ ಕುರಿತು ‘ದಿ ವೈರ್’ ವೆಬ್ ಜರ್ನಲ್ ಸಿಬ್ಬಂದಿಯೊಬ್ಬರು ಮಾರ್ಚ್ 31, 2023ರ ‘ದಿ ವೈರ್’ ನಲ್ಲಿ ವಿಸ್ತ್ರತ ವರದಿ ಮಾಡಿದ್ದಾರೆ. ಅದನ್ನು ನಾನು ಇಲ್ಲಿ ವಿಮರ್ಶಿಸಿದ್ದೇನೆ.
‘ಪಿಆರ್ ಸಮಸ್ಯೆ’ಯಿಂದ ಕಳವಳಗೊಂಡಿರುವ ನರೇಂದ್ರ ಮೋದಿ ಸರಕಾರವು ಪೆಗಾಸಸ್ ಅನ್ನು ಮಾರಾಟ ಮಾಡುವ ಇಸ್ರೇಲ್ನ ಎನ್ಎಸ್ಒ ಗ್ರೂಪ್ಗಿಂತ ಕಡಿಮೆ ಮಾನ್ಯತೆ ಹೊಂದಿರುವ ಸಂಸ್ಥೆಗಳು ಮಾರಾಟ ಮಾಡುವ ಹೊಸ ಸ್ಪೈವೇರ್ಗಳಿಗಾಗಿ $120 ಮಿಲಿಯನ್ (ರೂ. 986 ಕೋಟಿಗೂ ಹೆಚ್ಚು) ಖರ್ಚು ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಫೈನಾನ್ಶಿಯಲ್ ಟೈಮ್ಸ್ನ ವರದಿ, ಈ ಕ್ರಮದ ಬಗ್ಗೆ ತಿಳಿದಿರುವ ಮೂಲಗಳ ಒಳಹರಿವಿನ ಆಧಾರದ ಮೇಲೆ ಇಲ್ಲಿ ಚರ್ಚಿಸುತ್ತಿದ್ದೇನೆ. ಪೆಗಾಸಸ್ ಮಿಲಿಟರಿ-ದರ್ಜೆಯ ಸ್ಪೈವೇರ್ ಆಗಿದ್ದು ಅದು ತಮ್ಮ ಫೋನ್ಗಳ ಸಹಾಯದಿಂದ ಗುರಿ ಇಟ್ಟ ವ್ಯಕ್ತಿ ˌ ಸಂಸ್ಥೆಗಳ ಮೆಲೆ ಕಣ್ಗಾವಲು ಇಡಬಹುದು. 2021 ರಲ್ಲಿ, ಫ್ರೆಂಚ್ ಮಾಧ್ಯಮ ಲಾಭರಹಿತ ಫರ್ಬಿಡನ್ ಸ್ಟೋರೀಸ್ ನೇತೃತ್ವದ ಸುದ್ದಿವಾಹಿನಿಗಳ ಅಂತರರಾಷ್ಟ್ರೀಯ ಒಕ್ಕೂಟದೊಂದಿಗೆ, ದಿ ವೈರ್ ಪತ್ರಿಕೆಯುˌ ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ಸರಕಾರಿ ವಿಮರ್ಶಕರು ಮತ್ತು ಕಾರ್ಯಕರ್ತರ ಫೋನ್ ಸಂಖ್ಯೆಗಳ ಮೇಲೆ ಮೋದಿ ಸರಕಾರ ಕಣ್ಗಾವಲಿಟ್ಟಿದ್ದನ್ನು ಹೊರಗೆಡವಿತ್ತು.
ಅಮ್ನೆಸ್ಟಿ ಇಂಟರ್ನ್ಯಾಶನಲ್ನ ಸೆಕ್ಯುರಿಟಿ ಲ್ಯಾಬ್ನ ವಿವಿಧ ಫೋರೆನ್ಸಿಕ್ ಪರೀಕ್ಷೆಗಳು ಅನೇಕ ಜನ ಪತ್ರಕರ್ತರುˌ ನ್ಯಾಯಾಧೀಶರುˌ ವಿರೋಧಪಕ್ಷಗಳ ನಾಯಕರು ಮತ್ತು ಉನ್ನತ ಅಧಿಕಾರಿಗಳ ಫೋನ್ಗಳಲ್ಲಿ ಸ್ಪೈವೇರ್ ಸಕ್ರಿಯವಾಗಿದೆ ಎಂದು ಬಹಿರಂಗಪಡಿಸಿತ್ತು. ಈ ವರದಿಗಳು ಬಂದ ನಂತರ ಜಾಗತಿಕ ಮತ್ತು ನಿರ್ದಿಷ್ಟವಾಗಿ ಯುಎಸ್ ನೇತೃತ್ವದ ಖಂಡನೆಗೆ ಒಳಗಾದ ಎನ್ಎಸ್ಒ ಗ್ರೂಪ್, ತಾನು ತನ್ನ ಸ್ಪೈವೇರ್ ಗಳನ್ನು “ಪರಿಶೀಲಿಸಿದ ಸರ್ಕಾರಗಳಿಗೆ” ಮಾತ್ರ ಮಾರಾಟ ಮಾಡುತ್ತಿದ್ದು ಆ ಕ್ಲೈಂಟ್ ದೇಶಗಳ ಹೆಸರುಗಳನ್ನು ಬಹಿರಂಗಗೊಳಿಸಲು ನಿರಾಕರಿಸಿತ್ತು. ಕಳೆದ ವರ್ಷ, ಫಾರ್ಬಿಡನ್ ಸ್ಟೋರೀಸ್ ಒಕ್ಕೂಟದ ಭಾಗವಾಗಿಲ್ಲದ ನ್ಯೂಯಾರ್ಕ್ ಟೈಮ್ಸ್, 2017 ರಲ್ಲಿ ವ್ಯಾಪಕವಾಗಿ $ 2 ಬಿಲಿಯನ್ ರಕ್ಷಣಾ ಒಪ್ಪಂದದ ಭಾಗವಾಗಿ ಭಾರತವು ಇಸ್ರೇಲ್ನಿಂದ ಪೆಗಾಸಸ್ ಅನ್ನು ನಿಜವಾಗಿಯೂ ಖರೀದಿಸಿದೆ ಎಂದು ಜೆರುಸಲೆಮ್ನಿಂದ ವರದಿ ಮಾಡಿತ್ತು.
ಈ ಕಣ್ಗಾವಲಿನ ಕೆಲವು ಸಂತ್ರಸ್ತರು ಮತ್ತು ಮಾಧ್ಯಮ ವೃತ್ತಿಪರರು ಈ ಕುರಿತು ತನಿಖೆಗೆ ಒತ್ತಾಯಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಂದ ಪ್ರೇರೇಪಿಸಲ್ಪಟ್ಟ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ, ಮೋದಿ ಸರಕಾರವು ‘ರಾಷ್ಟ್ರೀಯ ಭದ್ರತೆ’ಯ ಕಾರಣದಿಂದ ಈ ಕುರಿತು ಹೆಚ್ಚಿನ ವಿವರ ನೀಡಲು ನಿರಾಕರಿಸಿತ್ತು ˌ ಮತ್ತು ತಾನು ಪೆಗಾಸಸ್ ಬಳಸುತ್ತಿರುವ ಸಂಗತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಕಳೆದ ವರ್ಷ ವರದಿಯಾದ ಆರೋಪಗಳ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸುಪ್ರೀಂ ಕೋರ್ಟ್ ನೇಮಿಸಿದ ತಾಂತ್ರಿಕ ಸಮಿತಿಯು ಸರಕಾರವು ತಾನು ಕೈಗೊಂಡಿರುವ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿತ್ತು. ಸಮಿತಿಯು ತಾನು ಪರೀಕ್ಷಿಸಿದ ಕನಿಷ್ಠ ಎರಡು ಫೋನ್ಗಳಲ್ಲಿ ಮಾಲ್ವೇರ್ ಇರುವಿಕೆಯನ್ನು ಗುರುತಿಸಿರುವುದಾಗಿ ಹೇಳಿದೆ, ಆದರೂ ಹೆಚ್ಚಿನ ಮಾಹಿತಿ ಕಲೆಹಾಕಿ ಇದು ಪೆಗಾಸಸ್ ಸ್ಪೈವೇರ್ ಎಂದು ಧನಾತ್ಮಕವಾಗಿ ಖಚಿತಪಡಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಫೈನಾನ್ಸಿಯಲ್ ಟೈಮ್ಸ್ ವರದಿಗಳು “ಸುಮಾರು ಒಂದು ಡಜನ್ ಎನ್ಎಸ್ಒ ಪ್ರತಿಸ್ಪರ್ಧಿಗಳು” ಈಗ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ಹೇಳುತ್ತವೆ.
ಫೈನಾನ್ಸಿಯಲ್ ಟೈಮ್ಸ್ ವರದಿಯ ಗಮನಾರ್ಹ ಸಾರಾಂಶ ಹೀಗಿದೆ:
“ಮೋದಿ ಸರಕಾರದ ಉನ್ನತ ಅಧಿಕಾರಿಗಳು ಪೆಗಾಸಸ್ ಅನ್ನು ವಿಧಿವಿಜ್ಞಾನವಾಗಿ ಪತ್ತೆಹಚ್ಚಲು ಮಾನವ ಹಕ್ಕುಗಳ ಗುಂಪುಗಳ ಸಾಮರ್ಥ್ಯದಿಂದ ಉಂಟಾದ “PR ಸಮಸ್ಯೆ” ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಜೊತೆಗೆ ಕಣ್ಗಾವಲಿಟ್ಟ ಇಬ್ಬರು ಪರಿಚಯಸ್ಥರ ಆಪಲ್ ಮತ್ತು ವಾಟ್ಸಾಪ್ ನಿಂದ ಎಚ್ಚರಿಕೆಗಳು ರವಾನೆಯಾಗಿವೆ. ” ಇಂತಹ ಸಮಸ್ಯೆಗಳು ಉದ್ಭವಿಸಿರುವುದರಿಂದ ಮೋದಿ ಸರಕಾರವು ಪೇಗಾಸಸ್ ಬದಲಿಗೆ ಜನಪ್ರೀಯವಲ್ಲದ ಬೇರೆ ಸ್ಪೈವೇರ್ಗಾಗಿ ಹುಡುಕಾಟ ನಡೆಸಿದೆ ಎಂದು ಮೇಲೆ ತಿಳಿಸಲಾದ ಇಬ್ಬರು ವ್ಯಕ್ತಿಗಳು ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಈ ಮೂಲಗಳ ಪ್ರಕಾರ ಮೋದಿ ಸರಕಾರವು $16 ಮಿಲಿಯನ್ನಿಂದ ಪ್ರಾರಂಭಿಸಿ ಮುಂದಿನ ಕೆಲವು ವರ್ಷಗಳಲ್ಲಿ $120 ಮಿಲಿಯನ್ನಷ್ಟು ಬೇರೆ ಕಂಪನಿಯ ಸ್ಪೈವೇರ್ ಗಳನ್ನು ಖರಿದಿಸುವ ಯೋಜನೆ ಹೊಂದಿದೆ ಎಂದು ಹೇಳಲಾಗಿದೆ.
ಭಾರತೀಯ ರಕ್ಷಣಾ ಮತ್ತು ಗುಪ್ತಚರ ಅಧಿಕಾರಿಗಳು ಪರಿಗಣಿಸುತ್ತಿರುವ ಅನೇಕ ಸ್ಪೈವೇರ್ ಮಾರಾಟಗಾರರು ಇಸ್ರೇಲಿ ಮಿಲಿಟರಿಯೊಂದಿಗೆ ನೇರವಾಗಿ ಅಥವಾ ಸೂಚ್ಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ. ವರದಿಯಲ್ಲಿ ಹೆಸರಿಸಲಾದ ಕಂಪನಿಗಳೆಂದರೆ ಇಂಟೆಲೆಕ್ಸಾ, ಗ್ರೀಸ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ, ಇದು ಇಸ್ರೇಲಿ ಮಿಲಿಟರಿ ಪರಿಣತರ ಒಳಗೊಳ್ಳುವಿಕೆಯೊಂದಿಗೆ ಪ್ರಿಡೇಟರ್ ಸ್ಪೈವೇರ್ ಅನ್ನು ರಚಿಸಿದೆ. ಪ್ರಿಡೇಟರ್ ಈಗಾಗಲೇ ಈಜಿಪ್ಟ್, ಸೌದಿ ಅರೇಬಿಯಾ, ಮಡಗಾಸ್ಕರ್ ಮತ್ತು ಓಮನ್ ಸೇರಿದಂತೆ ಮಾನವ ಹಕ್ಕುಗಳ ಸೂಚ್ಯಂಕದಲ್ಲಿ ಕಳಪೆ ಸೂಚ್ಯಂಕ ಹೊಂದಿರುವ ದೇಶಗಳಲ್ಲಿ ಬಳಸಲ್ಪಟ್ಟ ಸುದೀರ್ಘ ದಾಖಲೆಯನ್ನು ಹೊಂದಿದೆ. ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ನಂತರ ಸೌದಿ ಅರೇಬಿಯಾಕ್ಕೆ ಮಾರಾಟ ಮಾಡಲು ಅನುಮೋದಿಸಲಾಗಿದೆ ಎಂದು ವರದಿಗಳು ಹೇಳಿರುವ ಕ್ವಾಡ್ರೀಮ್ ಅನ್ನು ಸಹ ಉಲ್ಲೇಖಿಸಲಾಗಿದೆ.
ಭಾರತದ ಪಟ್ಟಿಯಲ್ಲಿರುವ ಮತ್ತೊಂದು ಕಂಪನಿಯು ಕಾಗ್ನೈಟ್ ಆಗಿದೆ, ಇದು “ಸಾರ್ವಜನಿಕವಾಗಿ ವ್ಯಾಪಾರ ಮಾಡುವ ವೆರಿಂಟ್ನಿಂದ ಹೊರಹಾಕಲ್ಪಟ್ಟಿದೆ ಮತ್ತು ಮೆಟಾದ ತನಿಖೆಯ ನಂತರ ವ್ಯಾಪಕವಾದ ದುರ್ಬಳಕೆ ಕಂಡುಬಂದ ನಂತರ ನಾರ್ವೆಯ ಸಾರ್ವಭೌಮ ಸಂಪತ್ತು ನಿಧಿಯಿಂದ ಅದರ ಸ್ಟಾಕ್ ಅನ್ನು ಡಂಪ್ ಮಾಡಲಾಗಿದೆ” ಎಂದು ಫೈನಾನ್ಸಿಯಲ್ ಟೈಮ್ಸ್ ಟಿಪ್ಪಣಿಗಳು ಬಹಿರಂಗಪಡಿಸಿವೆ. ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸಚಿವಾಲಯದೊಂದಿಗೆ ಮಾತುಕತೆಗಳು “ಮುಂದುವರಿದ ಹಂತಗಳಲ್ಲಿ” ಇವೆ, ಆದರೆ ಔಪಚಾರಿಕ ‘ಪ್ರಸ್ತಾವನೆಗಾಗಿ ವಿನಂತಿಗಳು’ ಸಂಗ್ರಹಿಸಲು ಇನ್ನೂ ವಾರಗಳು ಕಳೆಯಬಹುದು ಎಂದು ವರದಿ ಹೇಳುತ್ತದೆ. ಕ್ವಾಡ್ರೀಮ್ˌ ಇಂಟೆಲ್ಲೆಕ್ಸಾ ˌ ಕಾಗ್ನೈಟ್ ಮತ್ತು ರಕ್ಷಣಾ ಸಚಿವಾಲಯವನ್ನು ಸಂಪರ್ಕಿಸಲು ಫೈನಾನ್ಸಿಯಲ್ ಟೈಮ್ಸ್ ಗೆ ಸಾಧ್ಯವಾಗಲಿಲ್ಲ ಅಥವಾ ಅವು ಪ್ರತಿಕ್ರಿಯಿಸಲು ನಿರಾಕರಿಸುತ್ತಿವೆ.
ಯುನೈಟೆಡ್ ಸ್ಟೇಟ್ಸ್ ಹೆಚ್ಚಾಗಿ ಅನಿಯಂತ್ರಿತ ಸ್ಪೈವೇರ್ ಉದ್ಯಮದ ಮೇಲೆ ಹಿಡಿತ ಸಾಧಿಸಲು ಹೊಸ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ವರದಿ ಬಂದಿದೆ. ಉಎಸ್ ಅಧ್ಯಕ್ಷ ಜೋ ಬಿಡೆನ್ ಮಾರ್ಚ್ 27 ರಂದು ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದು, ಅದು ನಿರಂಕುಶ ಸರ್ಕಾರಗಳು ಕಣ್ಗಾವಲುಗಾಗಿ ಬಳಸುವ ವಾಣಿಜ್ಯ ಸ್ಪೈವೇರಗಳ ಫೆಡರಲ್ ಬಳಕೆಯನ್ನು ನಿಷೇಧಿಸುತ್ತದೆ. ಮಾರ್ಚ್ 30 ರಂದು, ಯುಎಸ್ ಆಯೋಜಿಸಿದ್ದ ‘ಪ್ರಜಾಪ್ರಭುತ್ವದ ಶೃಂಗಸಭೆ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾ, ಕೆನಡಾ, ಕೋಸ್ಟರಿಕಾ, ಡೆನ್ಮಾರ್ಕ್, ಫ್ರಾನ್ಸ್, ನ್ಯೂಜಿಲೆಂಡ್, ನಾರ್ವೆ, ಸ್ವೀಡನ್, ಸ್ವಿಟ್ಜರ್ಲೆಂಡ್, ಯುಕೆ ಮತ್ತು ಸರ್ಕಾರಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಸ್ಪೈವೇರ್ ಬಳಕೆಗಾಗಿ ಕಾನೂನು ಚೌಕಟ್ಟುಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಎಲ್ಲರೂ ಒಟ್ಟಾಗಿದ್ದೇವೆ ಎಂದು ಯುಎಸ್ ಹೇಳಿದೆ.
“ಈ ಉಪಕರಣಗಳ ದುರುಪಯೋಗವು ನಮ್ಮ ರಾಷ್ಟ್ರೀಯ ಭದ್ರತೆಗೆ ಗಮನಾರ್ಹವಾದ ಅಪಾಯಗಳನ್ನು ತಂದೊಡ್ಡುತ್ತದೆ. ಇದು ನಮ್ಮ ಸರಕಾರಿ ಸಿಬ್ಬಂದಿ, ಮಾಹಿತಿ ಮತ್ತು ಮಾಹಿತಿ ವ್ಯವಸ್ಥೆಗಳ ಸುರಕ್ಷತೆ ಮತ್ತು ಭದ್ರತೆಯೂ ಸೇರಿದಂತೆ ಅನೇಕ ವಿಷಯಗಳಲ್ಲಿ ನಮಗೆ ಸುರಕ್ಷಿತವಲ್ಲವೆಂದು ಶ್ವೇತಭವನವು ಕಳೆದ ವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಜಗತ್ತಿನ ಅನೇಕ ಸರಕಾರಗಳು ತಮ್ಮ ಸ್ವಂತ ಗುಪ್ತಚರ ಪಡೆಗಳಿಂದ ಅಭಿವೃದ್ಧಿಪಡಿಸಿದ ಸ್ಪೈವೇರ್ ಉಪಕರಣಗಳನ್ನು ಹೊಂದಿವೆ ಎಂದು ಫೈನಾನ್ಸಿಯಲ್ ಟೈಮ್ಸ್ ವರದಿಯು ಹೇಳಿದೆ. ಒಟ್ಟಾರೆ ಮೋದಿ ಸರಕಾರ ರಾಷ್ಟ್ರ ಭದ್ರತೆಯ ನೆಪವೊಡ್ಡಿ ಕಣ್ಗಾವಲು ತಂತ್ರಾಂಶಗಳನ್ನು ತಮ್ಮ ವಿರೋಧಿಗಳ ಮೇಲೆ ಅಕ್ರಮವಾಗಿ ಪ್ರಯೋಗಿಸುತ್ತಿದೆ ಎನ್ನುವ ಸಾರ್ವಜನಿಕ ಸಂಶಯದ ಕೂಗಿಗೆ ಸ್ಪಂದಿಸಲು ಅಂತರಾಷ್ಟ್ರೀಯ ಮಟ್ಟದ ನ್ಯಾಯಯುತ ತನಿಖೆಯಾಗಬೇಕಿದೆ.
~ಡಾ. ಜೆ ಎಸ್ ಪಾಟೀಲ.






