ಯಾದಗಿರಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಗುರುಮಠಕಲ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಫೆಬ್ರವರಿ 21ರಂದು ನಡೆದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಗಾಂಧೀಜಿಯನ್ನು ರಾಷ್ಟ್ರಪಿತ ಎಂದು ಒಪ್ಪುವುದಿಲ್ಲ, ನೆಹರುರನ್ನು ಮೊದಲ ಪ್ರಧಾನಿ ಎಂದು ಪರಿಗಣಿಸುವುದಿಲ್ಲ. ಇವರು ತಮ್ಮ ತಮ್ಮ ಚಟಕ್ಕೆ ಭಾರತವನ್ನು ಹಾಳು ಮಾಡಿದರು. ಕಾಶ್ಮೀರಕ್ಕೆ 370 ಕೊಟ್ಟಿದ್ದು ಯಾಕೆಂದ್ರೆ ಅಬ್ದುಲ್ಲಾ ಜೊತೆ ನೆಹರುಗೆ ಲಿಂಕ್ ಇತ್ತು. ಇವರೆಲ್ಲರೂ ದೇಶದ ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡುತ್ತಿರಲಿಲ್ಲ.. ಕೋಲ್ಕತ್ತಾದಿಂದ ಸಿಗರೇಟ್ ತರಿಸಿಕೊಂಡು ಸೇದುತ್ತಿದ್ದರು. ಗಾಂಧಿ ಚರಕ ತಿರುಗಿಸಿದ್ದರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತಾ? ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು. ಅಲ್ಲದೇ ಕೆಲವು ವಿಚಾರಗಳನ್ನು ಉಲ್ಲೇಖಿಸಿ ನಿರ್ದಿಷ್ಟ ಸಮುದಾಯದ ವಿರುದ್ಧ ಮಾತಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಭಾಷಣ ಸಮುದಾಯಗಳ ನಡುವೆ ಅಶಾಂತಿ ಉಂಟುಮಾಡುವ ಸಾಧ್ಯತೆ ಇದೆ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಗುರುಮಠಕಲ್ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯತ್ನಾಳ್ ವಿರುದ್ಧ ಬಿಎನ್ಎಸ್ 196, 299, 302, 352 ಮತ್ತು 353 ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.






