ನಾ ದಿವಾಕರ
ನಾನು ಪ್ರೌಢಾವಸ್ಥೆಗೆ ಬಂದ ನಂತರ ಗಣೇಶ ಒತ್ತಟ್ಟಿಗಿರಲಿ, ಯಾವುದೇ ದೇವರ ಪೂಜೆ ಮಾಡಿದವನಲ್ಲ. ಬಾಲ್ಯದ ಅನುಭವಗಳು ಅದೇಕೋ ನನ್ನನ್ನು ದೇವಾಧಿದೇವತೆಗಳಿಂದ, ಧರ್ಮ-ಆಚರಣೆ-ಸಂಪ್ರದಾಯಗಳಿಂದ ದೂರ ಇರುವಂತೆ ಮಾಡಿಬಿಟ್ಟಿದೆ. ಮಾರ್ಕ್ಸ್ ವಾದಿ ಎನ್ನಿ, ಯಾವುದೇ ಮಾರ್ಕ್ ಅಥವಾ ಟ್ರೇಡ್ ಮಾರ್ಕ್ ಇಲ್ಲದ ವಾದಿ ಎನ್ನಿ, ದೇವರು ಎನ್ನುವವನೊಬ್ಬ ಇದ್ದರೆ ಅವನಿಗೆ ಕೈಮುಗಿದು ಅರ್ಧ ಶತಮಾನವೇ ಕಳೆದಿದೆ.. ಇದು ವ್ಯಕ್ತಿಗತ ವಿಚಾರ ಒಂದು ಬದಿ ಇರಲಿ. ಆದರೂ ಬಾಲ್ಯ ಜೀವನದ ನೆನಪಿನಂಗಳಕ್ಕೆ ಒಮ್ಮೆ ಭೇಟಿ ನೀಡಿದಾಗ ನಾವು ಎಳೆಯರಾಗಿದ್ದಾಗ ಆಚರಿಸಲಾಗುತ್ತಿದ್ದ ವಿನಾಯಕ ಚೌತಿಯ ನೆನಪಾಗುತ್ತದೆ. ಕಾಲ ಬದಲಾಗಿದೆ, ಸಂಪ್ರದಾಯ ಆಂತರಿಕವಾಗಿ ಹಾಗೆಯೇ ಇದ್ದರೂ ಬಾಹ್ಯರೂಪ ಬದಲಾಗಿದೆ. ಆಚರಣೆಗಳು ಯಥಾಸ್ಥಿತಿಯಲ್ಲಿದ್ದರೂ ಆಚರಣೆಯ ಹಿಂದಿನ ಆಡಂಭರ, ಉದ್ದೇಶಗಳು ಬದಲಾಗಿವೆ. ವಿನಾಯಕನ ಸ್ವರೂಪವೂ ಅಷ್ಟೇ ಬದಲಾವಣೆಗಳನ್ನು ಕಂಡಿದೆ. ವಿದ್ಯುನ್ಮಾನ-ಸಂವಹನ ಮಾಧ್ಯಮಗಳ ಅಭಿವೃದ್ಧಿಯ ಪ್ರತಿಫಲವೋ ಏನೋ ಹಬ್ಬಗಳ ಹಿಂದಿನ ಮೌಲ್ಯಗಳಲ್ಲೂ ಬದಲಾವಣೆಗಳು ಕಾಣುತ್ತಿವೆ. ಇದು ಅನಿವಾರ್ಯವೂ ಇರಬಹುದು. ಕೊಂಚ ನೆನಪಿನಂಗಳದತ್ತ ಪಯಣಿಸೋಣ !

ನಮ್ಮ ಪೀಳಿಗೆಯವರು ಬಾಲ್ಯಾವಸ್ಥೆಯಲ್ಲಿದ್ದಾಗ, ಅಂದರೆ 1970ರ ದಶಕದಲ್ಲಿ ಗಣಪತಿ ಹಬ್ಬ ಎಂದರೆ ನಾಲ್ಕು ಗೋಡೆಗಳ ನಡುವೆ ಆಚರಿಸಲ್ಪಡುತ್ತಿದ್ದ ಒಂದು ಆಚರಣೆ. ಕರ್ನಾಟಕದ ಮಟ್ಟಿಗಂತೂ ಇದು ಸತ್ಯ. ಮಹಾರಾಷ್ಟ್ರದ ಕಥೆ ಬೇರೆ. ನಾನಿದ್ದ ಊರು, ಬಂಗಾರಪೇಟೆ ಒಂದು ಚಿಕ್ಕ, ಚೊಕ್ಕವಾದ ಪಟ್ಟಣ. ಊರೆಲ್ಲಾ ಸುತ್ತಿದರೂ ಒಂದು ಗಂಟೆ ಸಾಕಾಗುತ್ತಿತ್ತು. ಗಣೇಶನ ಹಬ್ಬ ಎಂದರೆ ಆ ಪುಟ್ಟ ಮಾರುಕಟ್ಟೆಯಲ್ಲಿ ಸಂಭ್ರಮವೋ ಸಂಭ್ರಮ. ಊರಿನಲ್ಲಿದ್ದ ಒಂದೇ ಗಣಪತಿ ದೇವಸ್ಥಾನದಲ್ಲಿ ಒಂದು ತಿಂಗಳ ಮುನ್ನವೇ ಆಚರಣೆಯ ಸಿದ್ಧತೆಗಳು ಆರಂಭವಾಗುತ್ತಿದ್ದವು. ಅಲ್ಲಿದ್ದ ಅರ್ಚಕರು ಖ್ಯಾತ ಸಿನಿಮಾ ನಟ ಉದಯಕುಮಾರ್ ಅವರ ಸಂಬಂಧಿಕರೆಂಬ ಹೆಗ್ಗಳಿಕೆ ಬೇರೆ. ಆದರೂ ಅವರಲ್ಲಿ ಅಹಮಿಕೆ ಇರಲಿಲ್ಲ. ಉತ್ತಮ ಸ್ನೇಹಿಗಳು, ಜನಾನುರಾಗಿಗಳು. ಕಾರಣ ಆಗ ದೇವಸ್ಥಾನವೆಂದರೆ ಭಕ್ತಿಯ ಆಗರ, ಈಗಿನಂತೆ ಧನಾರ್ಜನೆಯ ಮಾರ್ಗವಲ್ಲ. ಇರಲಿ ಈಗ ಮನೆಯ ಪರಿಸರಕ್ಕೆ ಬರೋಣ.
ನಮ್ಮ ಮನೆಯಲ್ಲಿ, ಬಹುತೇಕ ಎಲ್ಲರ ಮನೆಗಳಲ್ಲೂ ನಡೆಯುತ್ತಿದ್ದಂತೆ ಗೌರಿ ಹಬ್ಬದ ಹಿಂದಿನ ದಿನವೇ ಗಣೇಶ ಚತುರ್ಥಿಯ ಸಿದ್ಧತೆಗಳು ನಡೆದಿರುತ್ತಿದ್ದವು. ಗಣಪನನ್ನು ತರಲು ಅಪ್ಪನ ಜೊತೆ ಮಾರುಕಟ್ಟೆಗೆ ಹೋಗುವುದೇ ಒಂದು ಸಂಭ್ರಮ. ಒಂದು ತಟ್ಟೆಯಲ್ಲಿ ಅಕ್ಕಿ ತುಂಬಿಕೊಂಡು, ಗಣೇಶನ ವಿಗ್ರಹವನ್ನು ಅದರಲ್ಲಿ ಕೂಡಿಸಿ ಮನೆಗೆ ತರುವುದು ಒಂದು ವಿಶಿಷ್ಟ ಅನುಭವ. ಅದರಲ್ಲಿ ಮನೆಯ ಹಿರಿಯ ಗಂಡು ಮಕ್ಕಳಿಗೆ ಮಾತ್ರ ಅವಕಾಶ/ಆದ್ಯತೆ. ಹೆಣ್ಣು ಮಕ್ಕಳಿಗೆ ಆ ಭಾಗ್ಯ ಇರಲಿಲ್ಲ, ಅಡುಗೆ, ರಂಗೋಲಿ ಇತ್ಯಾದಿಗಳಿಗೆ ಸೀಮಿತವಲ್ಲವೇ- ಪಿತೃಪ್ರಧಾನತೆಯ ಸಾಂಸ್ಕೃತಿಕ ಆಯಾಮ. ಕಿರಿಯರಿಗೆ ನೀಡಿದರೆ ಬೀಳಿಸಿಬಿಟ್ಟಾರು ಎಂಬ ಆತಂಕ. ಮನೆಗೆ ತಂದಕೂಡಲೇ ಮಂಟಪದ ಸಿದ್ಧತೆ. ಒಂದು ಮರದ ಕುರ್ಚಿಗೆ ಬಾಳೆ ಕಂಬಗಳನ್ನು ಕಟ್ಟಿ ಮನೆಗೆ ಇರುವ ಬಾಗಿಲುಗಳಿಗೆಲ್ಲಾ ಮಾವಿನ ತೋರಣ ಕಟ್ಟುವ ಸಂಭ್ರಮ. ದೊಡ್ಡ ಕುಟುಂಬ, ಒಬ್ಬೊಬ್ಬರದು ಒಂದು ಅಭಿಪ್ರಾಯ ಆದರೂ ತಂದೆ ತಾಯಿಯರ ಇಚ್ಚೆಯಂತೆ ಮಂಟಪ ಸಿದ್ಧ. ತೋರಣಕ್ಕೆ ಮಾವಿನ ಸೊಪ್ಪು, ಗಣೇಶನ ಪೂಜೆಗೆ ಬೇಕಾದ ಹೂವು, ಪತ್ರೆ ಇತ್ಯಾದಿಗಳನ್ನು ತರಲು ಹಬ್ಬದ ಮುಂಜಾನೆಯೇ ನಮ್ಮ ಪಯಣ ಸಿದ್ಧ. ರಸ್ತೆಯ ಬದಿಯಲ್ಲಿಯ ಬೇಲಿಹೂಗಳನ್ನೂ ಬಿಡಿಸಿ ತರುತ್ತಿದ್ದೆವು. ಅನ್ಯರ ಮನೆಯ ಕಾಂಪೌಂಡಿನಲ್ಲಿ, ಹೊರಗಡೆ ಇರುವ ಹೂವುಗಳನ್ನು ಕದಿಯಲು ಪೈಪೋಟಿ ನಡೆಯುತ್ತಿತ್ತು.

ನಾವು ಹುಡುಗರಾಗಿದ್ದರಿಂದ ಕಿತ್ತುಕೊಂಡು ಓಡುತ್ತಿದ್ದೆವು. ಯಾರೂ ಹಿಡಿಯಲಾಗುತ್ತಿರಲಿಲ್ಲ. ಮಾವಿನ ಸೊಪ್ಪಿಗಾಗಿ ತೋಟಕ್ಕೇ ಹೋಗಬೇಕಿತ್ತು. ಅಲ್ಲಿದ್ದ ಮಾಲಿ ಅಥವಾ ಮಾಲಿಕರ ಅನುಮತಿ ಪಡೆದು ಒಳಗೆ ಹೋಗಿ ಸೊಪ್ಪು ಕಿತ್ತು ತರುವಾಗ ತಪಾಸಣೆಯೂ ನಡೆಯುತ್ತಿತ್ತು. ಕೆಲವೊಮ್ಮೆ ಕಳ್ಳತನದಿಂದ ಒಳನುಗ್ಗಿ ತರುತ್ತಿದ್ದುದೂ ಉಂಟು. ಒಮ್ಮೆ ಹೀಗೇ ಮಾಡಿದಾಗ ಕೈಯ್ಯಲ್ಲಿ ಕುಡುಗೋಲು ಹಿಡಿದಿದ್ದ ಮಾಲಿ ನಮ್ಮನ್ನು ಅಟ್ಟಿಸಿಕೊಂಡು ಬಂದಿದ್ದ. ಎದ್ದೆನೋ ಬಿದ್ದೆನೋ ಎಂದು ದಿಕ್ಕಾಪಾಲಾಗಿ ಓಡಿದ ನಾನು ಮತ್ತು ಗೆಳೆಯರು ಯಾರ್ಯಾರೋ ಮನೆಯೊಳಗೆ ನುಗ್ಗಿದ್ದೂ ಆಯಿತು. ನಾಯಿ ಅಟ್ಟಿಸಿಕೊಂಡು ಬಂತೆಂದು ಸುಳ್ಳು ಹೇಳಿ. ಅಯ್ಯೋ ಪಾಪ ಎಂದು ಅವರು ಹಾಲು ನೀಡಿದ್ದೂ ಹೌದು. ಆ ಸ್ನೇಹಿತರಲ್ಲೊಬ್ಬ ಈಗ ಬಜರಂಗದಳದ ಮುಂದಾಳು !!
ಹಾಗೂ ಹೀಗೂ ಪೈಪೋಟಿಯ ಮೇಲೆ ಬುಟ್ಟಿಯ ತುಂಬಾ ಹೂವು, ಪತ್ರೆಗಳನ್ನು ತಂದ ನಂತರ ಪೂಜೆಗಾಗಿ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡು ಅರ್ಚಕರಿಗಾಗಿ ಕಾಯುವುದೇ ಒಂದು ಮಹಾನ್ ಸಾಹಸ. ಊರಿನಲ್ಲಿ ಇರುತ್ತಿದ್ದುದೇ ಬೆರಳೆಣಿಕೆಯಷ್ಟು ಪುರೋಹಿತರು. ಅವರಿಗೆ ತೀವ್ರವಾದ ಬೇಡಿಕೆ. ಕೆಲವೊಮ್ಮೆ ಪಕ್ಕದ ಹಳ್ಳಿಗಳಿಂದ ಬರುತ್ತಿದ್ದುದೂ ಉಂಟು. ಅವರು ಬರುವವರೆಗೂ ಕಾಯುವುದು ಅನಿವಾರ್ಯ. ಊಟಕ್ಕೆ ತಡವಾಗುವ ಕಾರಣ ನಮಗೆಲ್ಲಾ, ಅಂದರೆ ಚಿಕ್ಕವರಿಗೆ ಪ್ರತ್ಯೇಕವಾಗಿ ತಿಂಡಿ ತಯಾರಿಸಿ ಕೊಟ್ಟುಬಿಡುತ್ತಿದ್ದರು. ಪೂಜಾ ಕಾರ್ಯಗಳು ಮುಗಿಯುವವರೆಗೆ ಮಧ್ಯಾಹ್ನವಾಗುತ್ತಿತ್ತು. ಪುರೋಹಿತರ ಊಟವಾಗುವವರೆಗೂ ನಾವ್ಯಾರೂ ಕಮಕ್ ಕಿಮಕ್ ಅನ್ನುವಂತಿಲ್ಲ. ಅದೊಂದು ಕರ್ಮಠ ನಿಯಮ.

ಹಸಿದ ಹೊಟ್ಟೆಯ ಹೊತ್ತು ಬಾಗಿಲ ಹಿಂದೆ ಕುಳಿತು ಪುರೋಹಿತರು ತಿನ್ನುವ ಕಡುಬು, ಹೋಳಿಗೆಯ ಸಂಖ್ಯೆಯನ್ನು ಲೆಕ್ಕ ಹಾಕಿ, ಅಮ್ಮನ ಕೈಲಿ ಬೈಸಿಕೊಳ್ಳುವುದೂ ಒಂದು ಮಜಾ. ಕೆಲವು ಪುರೋಹಿತರು ಅತಿಯಾಗಿ ತಿನ್ನುತ್ತಿದ್ದುದೂ ಉಂಟು. ನಂತರ ಅವರ ಗಂಟನ್ನು ಹೊತ್ತು ಹೊರಟಾಗ ಕೆಲವೊಮ್ಮೆ ಸೈಕಲ್ಲಿನಲ್ಲಿ ಅವರಿಗೆ ಡ್ರಾಪ್ ನೀಡುವ ಸರದಿ ಅಣ್ಣನದು. ಹಸಿವೆ ಇದ್ದರೂ ಹೋಗಲೇ ಬೇಕಲ್ಲ. ದೊಡ್ಡವರ ಕಟ್ಟಾಜ್ಞೆ. ನಂತರವೇ ನಮ್ಮೆಲ್ಲರ ಸಾಮೂಹಿಕ ಭೋಜನ. ಎಲ್ಲರದೂ ಮುಗಿದ ಮೇಲೆ ಸಂಜೆ ನಾಲ್ಕರ ನಂತರ ಅಮ್ಮನ ಮತ್ತು ಒಂದಿಬ್ಬರು ಅಕ್ಕಂದಿರ ಊಟ. ಎಂತಹ ಕ್ರೌರ್ಯ ಎಂದು ಈಗ ಅನಿಸುತ್ತದೆ. ಆಗ ಏನೂ ಅನಿಸುತ್ತಿರಲಿಲ್ಲ. ಕಾಲಾಯ ತಸ್ಮೈ ನಮಃ !
ಊಟ ಮುಗಿದ ಕೂಡಲೇ ಸಿದ್ಧತೆ ಶುರು. ಏತಕ್ಕೆ ? ಹೊಸ ಉಡುಪು ಧರಿಸಿ ಗೆಳೆಯರೊಡನೆ ಮನೆಮನೆಗೆ ಹೋಗಿ ಗಣೇಶನಿಗೆ ಅಕ್ಷತೆ ಹಾಕುವ ಕಾರ್ಯಕ್ರಮ. ಒಬ್ಬೊಬ್ಬರಿಗೆ ಒಂದೊಂದು ಡಬ್ಬಿಯ ತುಂಬಾ ಅಕ್ಷತೆ ಕಾಳು. ಕನಿಷ್ಠ ನೂರು ಮನೆಗೆ ಭೇಟಿ ನೀಡುವ ಯೋಜನೆ. ಅಂತು ಇಂತೂ ಕಂಡವರ ಮನೆಗೆಲ್ಲಾ ನುಗ್ಗಿ, ಗಣೇಶನನ್ನು ಕೂಡಿಸಿದ್ದೀರಾ ಎಂದು ಕೇಳುತ್ತಾ ಒಳಹೊಕ್ಕು, ಅಕ್ಷತೆ ಕಾಳನ್ನು ಹಾಕಿ, ಕಿವಿಗಳನ್ನು ಹಿಡಿದು, ದಂಡ ಹೊಡೆದು ಬರುವುದು ಒಂದು ರೀತಿಯ ವ್ಯಾಯಾಮವಾಗುತ್ತಿತ್ತು. ಹುರುಪಿನಲ್ಲಿ ಆಯಾಸ ಎನಿಸುತ್ತಿರಲಿಲ್ಲ. ಕೊಂಡೊಯ್ದ ಅಕ್ಷತೆಯನ್ನು ಕೊನೆಯವರೆಗೂ ಕಾಪಾಡುವ ಜವಾಬ್ದಾರಿಯೂ ಇರುತ್ತಿತ್ತು. ಕೆಲವು ಮನೆಗಳಲ್ಲಿ ಮೀಟರ್‍ಗಟ್ಟಲೆ ಒಳಗೆ ನಡೆಯಬೇಕಾಗುತ್ತಿತ್ತು. ಕೆಲವೆಡೆ ತಿಂಡಿ ನೀಡುತ್ತಿದ್ದರು. ಎಲ್ಲ ಮನೆಗಳನ್ನೂ ಮುಗಿಸಿ ಸಂಜೆ ಏಳರ ವೇಳೆಗೆ ಗಣಪತಿ ದೇವಸ್ಥಾನದಲ್ಲಿ ಹಾಜರ್.
ಅಲ್ಲಿ ಊರಿಗೆ ಊರೇ ನೆರೆದಿರುತ್ತಿತ್ತು. ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಒಂದು ವಿಶಿಷ್ಟ ಕಾರ್ಯಕ್ರಮ. ಉಳಿದ ಅಕ್ಷತೆಯನ್ನೆಲ್ಲಾ ಅಲ್ಲಿಗೇ ಮುಗಿಸಿ ದೊನ್ನೆಗಳಲ್ಲಿ ಪ್ರಸಾದ ಹೊತ್ತು ತರುತ್ತಿದ್ದೆವು. ಇನ್ನು ಗಣೇಶನ ವಿಸರ್ಜನೆಯ ದಿನ ಎಲ್ಲ ಮನೆಗಳವರೂ ತಟ್ಟೆಗಳಲ್ಲಿ ಗಣೇಶನನ್ನು ಹೊತ್ತು ಮೆರವಣಿಗೆಯಂತೆ ಹೋಗಿ ಊರಿನ ಕೆರೆಯಲ್ಲಿ ಮುಳುಗಿಸುವುದು ಒಂದು ವಿಹಂಗಮ ದೃಶ್ಯ. ಗಂಟೆಗಳ ಸದ್ದು ಬಿಟ್ಟರೆ ಬೇರೆ ಗದ್ದಲವಿಲ್ಲ .ಕೆರೆಯ ಬಳಿ ಲಾಟೀನು ಪೆಟ್ರೊಮ್ಯಾಕ್ಸ್ ಹಿಡಿದವರು ಕೆಲವರು ಬೆಳಕಿಗಾಗಿ. ಪಟಾಕಿ, ತಮಟೆ, ವಾದ್ಯಗಳ ಸುಳಿವಿಲ್ಲ. ಆಗೆಲ್ಲಾ ಸಾರ್ವಜನಿಕ ಗಣೇಶೋತ್ಸವ ಎಂದರೆ ಇಷ್ಟೇ. ಊರಿಗೊಂದೇ ಗಣಪ. ದೇವಸ್ಥಾನದಲ್ಲಿ.
ಕಾಲ ಬದಲಾಗಿದೆ. ಮೌಲ್ಯಗಳೂ ಬದಲಾಗಿದೆ ಅಲ್ಲವೇ ? ನಾವಿದ್ದುದು ಮುಸ್ಲಿಮರ ರಸ್ತೆಯಲ್ಲಿ. ಮೊಹರಂನಲ್ಲಿ ಹಿಂದೂಗಳು ಭಾಗವಹಿಸುವಂತೆ ಮುಸ್ಲಿಮರೂ ಸಹ ಸಂಭ್ರಮದಿಂದ ಈ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದರು. ಆಗ ಯಾವುದೇ ಕೋಮು ಭಾವನೆಗಳು ಇರಲಿಲ್ಲವಲ್ಲ. ಗಣೇಶ ಗಣಾಧಿಪತಿಯಾಗಿದ್ದ. ವಿದ್ಯಾಧಾಯಕನಾಗಿದ್ದ. ವಿಘ್ನ ವಿನಾಶಕನಾಗಿದ್ದ. ನೆನಪಿನಂಗಳದಿಂದ ಹೊರಬಂದು ವಾಸ್ತವ ಜಗತ್ತಿಗೆ ಬಂದಾಗ ಎಷ್ಟು ಬದಲಾವಣೆಗಳು ? ಇಂದು ನನ್ನೂರಿನಲ್ಲಿ ಗಣೇಶನನ್ನು ಮುಳುಗಿಸಲು ಕೆರೆಯೇ ಇಲ್ಲ. ಎಲ್ಲರೂ ಬಕೆಟ್ಟುಗಳಲ್ಲಿ ಮುಳುಗಿಸಿ ಗಿಡದ ಬುಡಕ್ಕೆ ಹಾಕುವವರೇ. ದೇವಸ್ಥಾನ ಇನ್ನೂ ಹಾಗೆಯೇ ಇದೆ. ಗಣೇಶ ದೇವಸ್ಥಾನದ ಆವರಣದಿಂದ ಹೊರಬಂದು ಸಾರ್ವಜನಿಕ ವಲಯದ ಸರ್ಕಲ್‍ಗಳನ್ನು, ಗಲ್ಲಿಗಳನ್ನು ಆಕ್ರಮಿಸಿದ್ದಾನೆ.
ಗಣೇಶ ವಿಸರ್ಜನೆ ಎಂದರೆ ಪಟಾಕಿಗಳ ಸಿಡಿತ, ಪಡ್ಡೆ ಹುಡುಗರ ಕೆಟ್ಟ ನೃತ್ಯ, ಸೂಕ್ಷ್ಮ ಕೋಮುಭಾವನೆಗಳ ಮೆರವಣಿಗೆ ಇತ್ಯಾದಿ ಇತ್ಯಾದಿ. ವಿದ್ಯಾರ್ಜನೆಯ ಅಧಿಪತಿಯಾಗಿದ್ದ ಗಣೇಶ ಇಂದು ಧನಾರ್ಜನೆಯ ಸುಲಭೋಪಾಯ. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಗಣೇಶೋತ್ಸವ ಮಾಡುವುದು ಹೊಸ ಪರಂಪರೆ. ಎಲ್ಲೆಡೆ ಆಡಂಭರ, ವೈಭವ, ಗಣೇಶ ಬದಲಾಗಿಲ್ಲ, ಸಂಪ್ರದಾಯ ಆಚರಣೆಗಳು ಬದಲಾಗಿಲ್ಲ.. ಆದರೆ ಆಧುನಿಕತೆಯ ಸ್ಪರ್ಶದಿಂದ ಮೌಲ್ಯಗಳು ಬದಲಾಗಿವೆ. ಎಲ್ಲೋ ಒಂದು ಕಡೆ ಆ ಬಾಲ್ಯದ ನೆನಪುಗಳು ಕಾಡುತ್ತವೆ. ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಕಳೆದುಕೊಂಡಿರುವುದು ನಿಜವೇ ಅಲ್ಲವೇ ?
(ನನ್ನದೇ ಬರಹಗಳ ಸಂಕಲನ “ನೆನಪಿನ ಬುತ್ತಿಯಿಂದ” ಪುಸ್ತಕದಿಂದ ಒಂದೆರಡು ತಿದ್ದುಪಡಿಯೊಂದಿಗೆ)