ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಬಗ್ಗೆ ಊಹಾಪೋಹಗಳಿಗೆಲ್ಲಾ ತೆರೆ ಬಿದ್ದಿದೆ. ಉಭಯ ಪಕ್ಷದ ನಾಯಕರು ಮೈತ್ರಿಯ ಬಗ್ಗೆ ಬಹುತೇಕ ಖಾತ್ರಿ ಪಡಿಸಿದ್ದಾರೆ. ಹಲವು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಿಗೆ ವೈಯಕ್ತಿಕವಾಗಿ ಈ ಮೈತ್ರಿಯ ಬಗ್ಗೆ ಒಪ್ಪಿಗೆ ಇಲ್ಲದಿದ್ದರೂ, ತಮ್ಮ ತಮ್ಮ ಪಕ್ಷಗಳ ಉಳಿವಿಗೆ ಮೈತ್ರಿ ಅನಿವಾರ್ಯವಾಗಿದೆ.
ಜಾತ್ಯಾತೀತ ಜನತಾದಳದ ಸೆಕ್ಯುಲರ್ ತತ್ವಗಳಿಗೆ ಈ ನಡೆ ಬಹುತೇಕ ಪೂರ್ಣ ವಿರಾಮ ಹಾಕಲಿದ್ದು, ಅತ್ತ ಕಡೆ ಕುಟುಂಬ ರಾಜಕಾರಣದ ಬಗ್ಗೆ ಟೀಕಿಸಲು ಆಗದಂತಹ ಇಕ್ಕಟ್ಟಿಗೆ ಬಿಜೆಪಿ ನಾಯಕರು ಸಿಲುಕಲಿದ್ದಾರೆ. ಅದಾಗ್ಯೂ, ಮೈತ್ರಿ ಅನಿವಾರ್ಯವಾಗಿದ್ದು, ಕಾಂಗ್ರೆಸ್ ಅನ್ನು ಕಟ್ಟಿ ಹಾಕಲು ಜಾತಿವಾದ ಮತ್ತು ಕೋಮುವಾದ ಎರಡೂ ಕೈ ಜೋಡಿಸಲು ಸಜ್ಜಾಗಿದೆ.
ಈ ನಡೆಯಿಂದ ಎರಡೂ ಪಕ್ಷಗಳ ಕೆಲವು ನಾಯಕರ ಮೇಲೆ ನೇರ ಪರಿಣಾಮ ಬೀರಲಿದೆ. ಅದರಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮಂಡ್ಯ ಸಂಸದೆ ಸುಮಲತಾ, ಕಡೂರು ಮಾಜಿ ಶಾಸಕ ವೈಎಸ್‌ವಿ ದತ್ತಾ ಮೊದಲಾದವರು.
ಈಗಾಗಲೇ ಜೆಡಿಎಸ್ 2 ಕಾಂಗ್ರೆಸ್, ಕಾಂಗ್ರೆಸ್ 2 ಜೆಡಿಎಸ್ ಎಂದು ಜಂಪ್ ಮಾಡಿ ಪಕ್ಷದೊಳಗೆ ಇದ್ದ ಅಲ್ಪಸ್ವಲ್ಪ ವರ್ಚಸ್ಸನ್ನೂ ಕಳೆದುಕೊಂಡಿರುವ ವೈಎಸ್‌ವಿ ದತ್ತಾ ಇದೀಗ ಬಿಜೆಪಿಯೊಂದಿಗಿನ ಮೈತ್ರಿಯನ್ನು ಸಮರ್ಥಿಸಲು ಆರಂಭಿಸಿದ್ದಾರೆ. ಅದು ಪಕ್ಷದೊಳಗಿನ ಅವರ ಅಸ್ತಿತ್ವದ ಪ್ರಶ್ನೆಯಾದರೂ ಸಹ, ಸರಳ ಸಜ್ಜನ ರಾಜಕಾರಣಿ ಎಂದು ಎಲ್ಲಾ ವರ್ಗದವರಿಂದಲೂ ಮನ್ನಣೆ ಪಡೆದುಕೊಂಡಿರುವ ಅವರ ವ್ಯಕ್ತಿತ್ವದ ಮೇಲೆ ಕಲೆ ಮೆತ್ತಲು ಆರಂಭವಾಗಿದೆ.
ಇನ್ನು ಸಿಎಂ ಇಬ್ರಾಹಿಂ ಅವರದ್ದು ಬೇರೆಯದ್ದೇ ಕತೆ. ಕರ್ನಾಟಕದಲ್ಲಿ ಮುಸ್ಲಿಂ ನಾಯಕನಾಗಲು ಹಗಲು ಕನಸು ಕಾಣುತ್ತಿದ್ದ ಸಿಎಂ ಇಬ್ರಾಹಿಂ ಅವರು ವಚನ, ಶರಣ, ಬಸವಣ್ಣನವರನ್ನು ಉದಾಹರಿಸಿ ಮಾತನಾಡುತ್ತಾ ತಮ್ಮ ಮಾತಿನ ಶೈಲಿಯಿಂದಲೇ ಗಮನ ಸೆಳೆಯುತ್ತಿದ್ದವರು. ಜೆಡಿಎಸ್ ಅವರಿಗೆ ನಾಮಕಾವಸ್ಥೆಯ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದೆಯಾದರೂ ಬಿಜೆಪಿ ಜೊತೆಗಿನ ಮೈತ್ರಿಯಿಂದ ಅವರು ಮುಸ್ಲಿಮರ ಕಣ್ಣಲ್ಲಿ ಸಂಪೂರ್ಣವಾಗಿ ದುಷ್ಮನ್ ಆಗುವ ಸಾಧ್ಯತೆ ಇದೆ.
ಮಾತ್ರವಲ್ಲದೆ, ನಿಖಿಲ್ ಕುಮಾರಸ್ವಾಮಿ ಎದುರಲ್ಲಿ ಇಕ್ಬಾಲ್ ಹುಸೇನ್ ರನ್ನು ಗೆದ್ದ ಬಳಿಕ ಕೆಲವು ಜೆಡಿಎಸ್ ಕಾರ್ಯಕರ್ತರು ಬಹಿರಂಗವಾಗಿಯೇ ಮುಸ್ಲಿಮರ ವಿರುದ್ಧ ದ್ವೇಷ, ಅಸಹನೆಗಳನ್ನು ಹರಡುತ್ತಿರುವುದು ಈಗಾಗಲೇ ಜೆಡಿಎಸ್ ಮೇಲೆ ಮುಸ್ಲಿಮರ ನಂಬಿಕೆ ಕಳೆದುಕೊಳ್ಳಲು ಕಾರಣವಾಗಿತ್ತು. ನಜ್ಮಾ ನಝೀರ್, ಯುಟಿ ಫರ್ಝಾನ ಮೊದಲಾದ ಚಾರ್ಮಿಂಗ್ ಯುವ ಮುಸ್ಲಿಂ ಮಹಿಳೆಯರನ್ನು ಪಕ್ಷಕ್ಕೆ ಸೇರಿಸಿ, ಮುಸ್ಲಿಮರ ಮನ ಸೆಳೆಯಲು ಮಾಡಿರುವ ಜೆಡಿಎಸ್ ಪ್ರಯತ್ನವೂ ಈ ಮೈತ್ರಿಯೊಂದಿಗೆ ಸಂಪೂರ್ಣವಾಗಿ ನಿಷ್ಪ್ರಯೋಜಕಾರಿ ಆಗಲಿದೆ.
ಇನ್ನು ಮಂಡ್ಯದ ಸುಮಲತಾ ಅಂಬರೀಶ್ ಅವರ ಕತೆ. ಬಿಜೆಪಿ ಬೆಂಬಲದಿಂದ ಸುಮಲತಾ ಗೆದ್ದಿರುವ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಬಿಟ್ಟು ಕೊಡುವ ಬಗ್ಗೆ ಕಾಣಿಸುತ್ತಿಲ್ಲ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳು ಸಾಂದ್ರೀಕರಿಸಿ ಇರುವ ಮಂಡ್ಯದಲ್ಲಿ ಎದುರಾದ ಸೋಲು ಜೆಡಿಎಸ್‌ನ ಅವನತಿಗೆ ಪ್ರಥಮ ಮೊಳೆಯಂತೆ ಪರಿಗಣಿಸಲಾಗುತ್ತಿದೆ. ಹಾಗಾಗಿ, ಮಂಡ್ಯವನ್ನು ಮತ್ತೆ ತೆಕ್ಕೆಗೆ ತೆಗೆದುಕೊಂಡು ಅಲ್ಲಿ ಪಕ್ಷವನ್ನು ಬಲಪಡಿಸಲು ಟಿಕೆಟ್ ಹಂಚಿಕೆ ವೇಳೆ ಜೆಡಿಎಸ್ ಪ್ರಸ್ತಾಪ ಇಡುವ ಪಕ್ಕಾ ಸಾಧ್ಯತೆ ಇದೆ. ಇದು ಸುಮಲತಾ ಅವರಿಗೆ ಅತಂತ್ರವನ್ನು ಸೃಷ್ಟಿಸಲಿದೆ.
ಸುಮಲತಾರೊಂದಿಗೆ ಹೋಲಿಸಿದರೆ ಬಿಜೆಪಿಗೆ ಜೆಡಿಎಸ್ ಮೈತ್ರಿಯೇ ಲಾಭದಾಯಕವಾಗುವುದರಿಂದ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಮ ಬಲ ಒಂದರಿಂದಲೇ ಗೆದ್ದು ಬಿಡಬಲ್ಲೆವು ಎಂಬ ನಂಬಿಕೆಯಲ್ಲಿದ್ದ ಕಮಲ ನಾಯಕರಿಗೆ ರಾಜ್ಯ ವಿಧಾನಸಭೆ ಚುನಾವಣೆ ಮರ್ಮಾಘಾತ ನೀಡಿದೆ. ಮೋದಿ ಸಾಲು ಸಾಲು ರ್ಯಾಲಿ ನಡೆಸಿಯೂ ಬಿಜೆಪಿಯ ಅತ್ಯಂತ ನಿಕೃಷ್ಟ ಪ್ರದರ್ಶನದಿಂದ ಮೋದಿ-ಶಾ ಜೋಡಿಗೂ ಆತಂಕ ಶುರುವಾಗಿದೆ. ಈ ಬಾರಿಯ ಇಂಡಿಯಾ ಮೈತ್ರಿಕೂಟವೂ ಚಾಣಾಕ್ಷ ನಡೆಯಿಂದ ಗುಜರಾತಿ ನಾಯಕರನ್ನು ಭೀತಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನಂತಹ ಪಕ್ಷದೊಂದಿಗೆ ಮೈತ್ರಿಯಗುವುದು ಬಿಜೆಪಿಗೆ ರಕ್ಷಣಾತ್ಮಕ ಆಟ. ಆದರೆ, ಈ ಆಟದಲ್ಲಿ ಯಾವೆಲ್ಲಾ ರಾಜಕಾರಣಿಗಳು ಮೂಲೆಗುಂಪಾಗಲಿದ್ದಾರೆ ಅನ್ನುವುದು ಸದ್ಯದ ಪ್ರಶ್ನೆ!