• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಅಂಕಣ | ಬಾಹ್ಯಾಕಾಶ ನಡಿಗೆಯಲ್ಲಿ ಮಹಿಳೆಯರ ಹೆಗ್ಗುರುತುಗಳು – ಭಾಗ 8

ನಾ ದಿವಾಕರ by ನಾ ದಿವಾಕರ
September 17, 2023
in ಅಂಕಣ, ಅಭಿಮತ
0
ಅಂಕಣ | ಬಾಹ್ಯಾಕಾಶ ನಡಿಗೆಯಲ್ಲಿ ಮಹಿಳೆಯರ ಹೆಗ್ಗುರುತುಗಳು – ಭಾಗ 8
Share on WhatsAppShare on FacebookShare on Telegram

ಜೀವಂತವಾಗಿರುವ ಪುರುಷಾಧಿಪತ್ಯದ ನಡುವೆಯೂ ಮಹಿಳಾ ವಿಜ್ಞಾನಿಗಳ ಸಾಧನೆ ಅಪೂರ್ವ

ADVERTISEMENT

( ಚಂದ್ರಯಾನದ ಸಂಭ್ರಮವೂ ಚರಿತ್ರೆಯ ಹೆಜ್ಜೆಗಳೂ/ದಾರ್ಶನಿಕ ನಾಯಕತ್ವವೂ ಭಾರತದ ಬಾಹ್ಯಾಕಾಶ ಪಯಣವೂ/ಬಾಹ್ಯಾಕಾಶ ನಡಿಗೆಯೂ – ಮೊದಲ ಹೆಜ್ಜೆಗಳ ನೆನಪುಗಳೂ/ಸ್ವತಂತ್ರ ಭಾರತದ ಮೊದಲ ವೈಜ್ಞಾನಿಕ ತ್ರಿ-ವಿಕ್ರಮ ಹೆಜ್ಜೆಗಳು/ವಸಾಹತು ಕಾಲದಿಂದ ಅಮೃತಕಾಲದತ್ತ ಇಸ್ರೋ ನಡಿಗೆ/ಸಂಕೀರ್ಣ ಸವಾಲುಗಳ ನಡುವೆ ಇಸ್ರೋ ವೈಜ್ಞಾನಿಕ ನಡಿಗೆ , ಇಸ್ರೋ ಚಾರಿತ್ರಿಕ ನಡಿಗೆಯೂ ಚಂದ್ರಯಾನದ ಕನಸೂ —ಈ ಲೇಖನಗಳ ಮುಂದುವರೆದ ಭಾಗ )

ನಾ ದಿವಾಕರ

ಭಾರತದಲ್ಲಿ ಮಹಿಳಾ ಸಮಾನತೆಯ ಕೂಗು 75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಕೇಳಿಬರುತ್ತಲೇ ಇದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮಹಿಳೆಯರ ನೋವು, ಆಕ್ರಂದನ, ನಿತ್ಯ ಬದುಕಿನ ಯಾತನೆ ಹಾಗೂ ದಬ್ಬಾಳಿಕೆಗೆ ಸಿಲುಕಿದ ಕ್ಷೀಣ ಸ್ವರ ಧ್ವನಿಸುತ್ತಲೇ ಇದೆ. ಮಹಿಳಾ ದೌರ್ಜನ್ಯಗಳನ್ನು ಕೇವಲ ಕಾನೂನು ಸುವ್ಯವಸ್ಥೆಯ ಒಂದು ಸಮಸ್ಯೆಯಾಗಿ ನೋಡುವ ಸರ್ಕಾರಗಳು, ಸಹಜ ವಿದ್ಯಮಾನಗಳು ಎಂದು ಭಾವಿಸುವ ಸಮಾಜದ ಒಂದು ವರ್ಗ, ಮಹಿಳಾ ಸಂಕುಲದ ಜೈವಿಕ ದೌರ್ಬಲ್ಯದ ಫಲ ಎಂದೆಣಿಸುವ ಸಾಂಪ್ರದಾಯಿಕ ಸಮಾಜ ಹಾಗೂ ಮಹಿಳೆಯನ್ನು ಸದಾ ಅಧೀನಳಾಗಿಯೇ ಕಾಣುವ ಕರ್ಮಠ ಮನಸುಗಳು – ಇವೆಲ್ಲದರ ನಡುವೆಯೇ ಭಾರತದ ಮಹಿಳೆಯರು ತಾರತಮ್ಯಗಳ ವಿರುದ್ಧ, ಸಾಮಾಜಿಕ-ಆರ್ಥಿಕ ನ್ಯಾಯ ಮತ್ತು ಸಮಾನತೆಗಾಗಿ, ಮುಕ್ತ ಸಾಂಸ್ಕೃತಿಕ ಅವಕಾಶಗಳಿಗಾಗಿ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ತಮ್ಮ ವ್ಯಕ್ತಿಗತ ಘನತೆಗಾಗಿ ದಿನನಿತ್ಯ ಹೋರಾಡುತ್ತಲೇ ಇದ್ದಾರೆ.

21ನೆಯ ಶತಮಾನದ ಡಿಜಿಟಲ್‌ ಯುಗದಲ್ಲಿ ಇದು ವಿಡಂಬನೆಯಂತೆ ಕಂಡುಬಂದರೂ ಇದೇ ವಾಸ್ತವ. ಶಿಕ್ಷಣ, ಆರೋಗ್ಯ, ಉದ್ದಿಮೆ, ಮಾರುಕಟ್ಟೆ ಮತ್ತು ಆಡಳಿತ ವ್ಯವಸ್ಥೆ ಈ ಎಲ್ಲ ನೆಲೆಗಳಲ್ಲೂ ತಮ್ಮ ಸಮಾನ ಹಕ್ಕುಗಳಿಗಾಗಿ ಹೋರಾಡುತ್ತಲೇ ಇರುವ ಭಾರತದ ಮಹಿಳಾ ಸಮೂಹ, ದೌರ್ಜನ್ಯಕ್ಕೊಳಗಾದ ಅಮಾಯಕ ಮಹಿಳೆಯರ ಬೆತ್ತಲೆ ಮೆರವಣಿಗೆಯನ್ನೂ ಸಹಿಸಿಕೊಂಡು ತುಟಿಕಚ್ಚಿ ಮಾತನಾಡಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಾಥಮಿಕ ಸ್ತರದಿಂದ ಉನ್ನತ ಶಿಕ್ಷಣದವರೆಗೆ ಮಹಿಳಾ ಪ್ರಾತಿನಿಧ್ಯದ ಪ್ರಮಾಣ ಹಂತಹಂತವಾಗಿ ಕುಸಿಯುತ್ತಲೇ ಇರುವುದನ್ನು ಗಮನಿಸಬಹುದು. ಮಹಿಳಾ ಸಬಲೀಕರಣದ ಯೋಜನೆಗಳು ಹಾಗೂ ಆಡಳಿತ ನೀತಿಗಳು ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಚಾಲ್ತಿಯಲ್ಲಿದ್ದರೂ ತಳಮಟ್ಟದಲ್ಲಿ ಅಮಾಯಕ ಮಹಿಳಾ ಸಮೂಹ ಅತ್ಯಾಚಾರ, ಬಹಿಷ್ಕಾರ, ದೌರ್ಜನ್ಯಗಳಿಗೊಳಗಾಗುತ್ತಿರುವುದು ಈ ಶತಮಾನದ ವ್ಯಂಗ್ಯ ಎಂದೇ ಹೇಳಬಹುದು.

ಮಹಿಳಾ ದೌರ್ಜನ್ಯದ ಛಾಯೆ

ಭಾರತದಲ್ಲಿ ಸಾಮಾನ್ಯವಾಗಿ ಗಮನಿಸಬಹುದಾದ ಮತ್ತೊಂದು ಸಾರ್ವತ್ರಿಕ ದ್ವಂದ್ವ ಅಥವಾ ವಿಡಂಬನೆ ಎಂದರೆ ದೇಶದ ನೂರಾರು ವಿಶ್ವವಿದ್ಯಾಲಯಗಳಲ್ಲಿ ಪ್ರತಿ ವರ್ಷ ನಡೆಯುವ ಘಟಿಕೋತ್ಸವಗಳಲ್ಲಿ ಸಾವಿರಾರು ಹುಡುಗಿಯರು ಚಿನ್ನದ ಪದಕಗಳನ್ನು ಗಳಿಸುತ್ತಾರೆ. ಅನೇಕ ಬಹುಮಾನಗಳನ್ನು ಪಡೆಯುತ್ತಾರೆ. ಮಾಧ್ಯಮಗಳಲ್ಲಿ ಈ ದೃಶ್ಯಗಳನ್ನು ನೋಡುವಾಗ ಹೃದಯ ತುಂಬಿಬರುತ್ತದೆ. ಬಾಲಕಿಯರ ಈ ಶೈಕ್ಷಣಿಕ ಸಾಧನೆ ಮತ್ತು ಬೌದ್ಧಿಕ ಮುನ್ನಡೆ ಇಡೀ ಸಮಾಜವನ್ನು ಹೆಮ್ಮೆಯಿಂದ ಎದೆಯುಬ್ಬಿಸಿ ಮಾತನಾಡುವಂತೆ ಮಾಡುತ್ತದೆ. ಆದರೆ ಈ ಸಂಭ್ರಮದ ಕ್ಷಣಗಳು ಬಹುಪಾಲು ಹುಡುಗಿಯರ ಬಾಳಿನಲ್ಲಿ ವಿಸ್ಮೃತಿಗೆ ಜಾರಿಬಿಡುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಸಾರ್ವಜನಿಕವಾಗಿ ಬೆಳಕಿಗೆ ಬರುವ ಅಸಂಖ್ಯಾತ ಚಿನ್ನದ ಹುಡುಗಿಯರು ಸಾಂಪ್ರದಾಯಿಕ  ಸಮಾಜದ ಕಟ್ಟುಪಾಡುಗಳಲ್ಲಿ ಬಂಧಿಗಳಾಗಿ ನಾಲ್ಕು ಗೋಡೆಗಳ ಕೌಟುಂಬಿಕ ಬದುಕಿನಲ್ಲಿ ಕಳೆದುಹೋಗುತ್ತಾರೆ. ಅವರ ಜ್ಞಾನ ಸಂಪತ್ತು ಮತ್ತು ಬೌದ್ಧಿಕ ಸಾಮರ್ಥ್ಯ ಕೇವಲ ಪ್ರಮಾಣ ಪತ್ರಗಳಲ್ಲಿ ಉಳಿದುಬಿಡುತ್ತದೆ.

ಈ ನಡುವೆಯೇ ನಮ್ಮ ನಡುವೆ ಮಣಿಪುರದಂತಹ ದುರಂತಗಳೂ ಸಂಭವಿಸಿವೆ. ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಬೆತ್ತಲೆ ಮೆರವಣಿಗೆ ನಡೆಸಿ, ಹತ್ಯೆ ಮಾಡಿರುವ ಅಮಾನುಷ ಘಟನೆಗೆ ಭಾರತದ ವಿಶಾಲ ಸಮಾಜದ ತಣ್ಣನೆಯ ಮೌನದ ನಡುವೆಯೇ ದೇಶದ ಸಮಸ್ತ ಮಹಿಳಾ ಸಂಕುಲ ಹೆಮ್ಮೆ ಪಡುವಂತಹ ಭಗೀರಥ ಸಾಧನೆಯೂ ನಮ್ಮನ್ನು ಆಕರ್ಷಿಸಿದೆ. ಬೆತ್ತಲೆಯಾದ ಮಹಿಳೆಯರ ಕಡೆ ಕಣ್ಣೆತ್ತಿಯೂ ನೋಡದ ಒಂದು ಸಮಾಜ ತನ್ನ ದೃಷ್ಟಿಪೊರೆಯನ್ನು ಕಳಚಿಕೊಂಡು ಬಾಹ್ಯಾಕಾಶದತ್ತ ದೃಷ್ಟಿಹಾಯಿಸಿದಾಗ ಅಲ್ಲಿ ಇಸ್ರೋ ಸಂಸ್ಥೆಯ ಮಹಿಳಾ ವಿಜ್ಞಾನಿಗಳ ಶಿಖರ ಸಾಧನೆ ಕಣ್ಣಿಗೆ ರಾಚುವಂತಿತ್ತು. ಅಷ್ಟರ ಮಟ್ಟಿಗಾದರೂ ಭಾರತದ ಪಿತೃಪ್ರಧಾನ ಸಮಾಜ ಮಹಿಳೆಯರತ್ತ ಗಮನಹರಿಸುತ್ತದೆ ಎಂಬ ಸಮಾಧಾನದೊಂದಿಗೇ ಭಾರತದ ಮಹಿಳಾ ವಿಜ್ಞಾನಿಗಳ ಕೊಡುಗೆಯನ್ನು ದಾಖಲಿಸಬೇಕಿದೆ.

ಈ ವಿಡಂಬನೆಯ ನಡುವೆಯೇ ಬಾಹ್ಯಾಕಾಶ ವಿಜ್ಞಾನ-ತಂತ್ರಜ್ಞಾನದಲ್ಲಿ ಭಾರತದ ಶಿಖರಪ್ರಾಯ ಸಾಧನೆಯಾದ ಚಂದ್ರಯಾನ-3ರ ಯಶಸ್ಸು ವಿಶ್ವದಾದ್ಯಂತ ಪ್ರಶಂಸೆ ಗಳಿಸುತ್ತಿರುವಾಗಲೇ, ಈ ಬಾಹ್ಯಾಕಾಶ ನಡಿಗೆಯಲ್ಲಿ, ವೈಜ್ಞಾನಿಕ ಸಂಶೋಧನೆ ಮತ್ತು ಅಧ್ಯಯನದ ಹಾದಿಯಲ್ಲಿ ಮಹಿಳೆಯರು ನಿರ್ವಹಿಸಿರುವ ಮಹತ್ತರವಾದ ಪಾತ್ರದ ಬಗ್ಗೆ ಜಗತ್ತು ಕೊಂಡಾಡುತ್ತಿದೆ. ವಿಶಾಲ ಮಹಿಳಾ ಸಮುದಾಯದ ನಡುವೆ ಇರುವ ನೋವು ತಲ್ಲಣಗಳ ನಡುವೆಯೇ ಇಸ್ರೋ ಸಂಸ್ಥೆಯ ಮೂಲಕ ಮಹಿಳಾ ವಿಜ್ಞಾನಿಗಳು ಮಾಡಿರುವ ಸಾಧನೆ ಸಮಸ್ತ ಮನುಕುಲದ ಹೆಮ್ಮೆ. ಚಂದ್ರಯಾನದ ಯಶಸ್ಸನ್ನು ಸಂಭ್ರಮಿಸುವಾಗ ಈ ವನಿತೆಯರ ಸಾಧನೆಯನ್ನೂ ನೆನೆಯುವುದು ಸಮಾಜದ ನೈತಿಕ ಕರ್ತವ್ಯವೂ ಹೌದು. ಇಷ್ಟಾದರೂ CSIR ( ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಲಿ) ಯುವ ವಿಜ್ಞಾನಿಗಳಿಗೆ ನೀಡಲಾಗುವ  2022ನೆಯ ಸಾಲಿನ ಶಾಂತಿ ಸ್ವರೂಪ್‌ ಭಟ್ನಾಗರ್‌ ಪ್ರಶಸ್ತಿಯನ್ನು ಘೋಷಿಸಿದಾಗ, ಒಬ್ಬ ಮಹಿಳೆಯೂ ಇಲ್ಲದಿರುವುದು ಸೋಜಿಗವೇ ಸರಿ. ಈ ದ್ವಂದ್ವದ ನಡುವೆಯೇ ಬಾಹ್ಯಾಕಾಶ ನಡಿಗೆಯಲ್ಲಿ ಮಹಿಳಾ ವಿಜ್ಞಾನಿಗಳ ಕೊಡುಗೆ-ಸಾಧನೆಯ ಹಾದಿಯನ್ನು ದಾಖಲಿಸಬೇಕಿದೆ.

ಚಂದ್ರಯಾನದಲ್ಲಿ ಮಹಿಳಾ ಶಕ್ತಿ

ಚಂದ್ರಯಾನ-2 ಅಂತಿಮ ಗಳಿಗೆಯಲ್ಲಿ ವಿಫಲವಾದರೂ ಈ ವೈಜ್ಞಾನಿಕ ಪರಿಶ್ರಮದ ರೂವಾರಿಗಳಾಗಿದ್ದುದು ಮಹಿಳಾ ವಿಜ್ಞಾನಿಗಳಾದ ಮುತ್ತಯ್ಯ ವನಿತಾ ಮತ್ತು ರಿತು ಕರಿಧಾಲ್.‌ ಚಂದ್ರಯಾನ-2ರ ಸಮಗ್ರ ಯೋಜನೆಯ ತಂಡದಲ್ಲಿ ಮೂವತ್ತು ಪ್ರತಿಶತ ಮಹಿಳೆಯರು ಕಾರ್ಯನಿರ್ವಹಿಸಿದ್ದರು. ಚಂದ್ರಯಾನ-2ರ ಸಂದರ್ಭದಲ್ಲಿ ಇಸ್ರೋ ಮಿಷನ್‌ನಲ್ಲಿ ಪ್ರಪ್ರಥಮ ಬಾರಿಗೆ ಯೋಜನಾ ನಿರ್ದೇಶಕರು ಮತ್ತು ಮಿಷನ್‌ ನಿರ್ದೇಶಕರು ಮಹಿಳೆಯರಾಗಿದ್ದರು. ಈ ಇಬ್ಬರೂ ಮಹಿಳೆಯರು ಇಸ್ರೋ ಸಂಸ್ಥೆಯಲ್ಲಿ  20 ವರ್ಷಗಳಿಗೂ ಹೆಚ್ಚಿನ ಸೇವೆ ಸಲ್ಲಿಸಿದ್ದು, ಮುತ್ತಯ್ಯ ವನಿತಾ ಅವರು ಎಂ-ಆರ್ಬಿಟರ್‌, ಲ್ಯಾಂಡರ್‌ ಮತ್ತು ರೋವರ್‌ನ ಯೋಜನಾ ನಿರ್ದೇಶಕರಾಗಿಯೂ, ರಿತು ಕರಿಧಾಲ್‌ ಅವರು GSLV-MK3 ಉಡಾವಣಾ ವಾಹನದ ಉಸ್ತುವಾರಿ ಮಿಷನ್‌ ನಿರ್ದೇಶಕರಾಗಿದ್ದರು. ಚಂದ್ರಯಾನ-3 ಮಿಷನ್‌ನಲ್ಲಿ ಒಟ್ಟು 54 ಮಹಿಳಾ ವಿಜ್ಞಾನಿಗಳು ಹಾಗೂ ಇಂಜಿನಿಯರುಗಳು ಭಾಗಿಯಾಗಿದ್ದಾರೆ. ಇಸ್ರೋ ಸಂಸ್ಥೆಯ 16 ಸಾವಿರ ಸಿಬ್ಬಂದಿಗಳ ಪೈಕಿ ಶೇ 20 ರಿಂದ 25ರಷ್ಟು ಮಹಿಳೆಯರಿದ್ದಾರೆ ಎಂದು ಮಹಿಳಾ ಮಿಷನ್‌ ನಿರ್ದೇಶಕಿ ಟಿ. ಕೆ. ಅನುರಾಧ ಹೇಳುತ್ತಾರೆ. ಇವರ ಪೈಕಿ ಎಂಟು ಮಹಿಳೆಯರು ನಿರ್ದೇಶಕರಾಗಿ, ಉಪ ನಿರ್ದೇಶಕರಾಗಿ ವಿವಿಧ ಯೋಜನೆಗಳ ಮುಂದಾಳತ್ವ ವಹಿಸಿದ್ದಾರೆ.

ಈ ಮಹಿಳೆಯರನ್ನು ಹೆಮ್ಮೆಯಿಂದ “ಭಾರತದ ರಾಕೆಟ್‌ ಮಹಿಳೆಯರು” ಎಂದೇ ಕರೆಯಲಾಗುತ್ತದೆ. ನಿರ್ದೇಶಕ ಪದವಿಯಲ್ಲಿರುವ ಮಹಿಳೆಯರು ಮೂರು ದಶಕಗಳಿಗೂ ಹೆಚ್ಚು ಕಾಲ ಇಸ್ರೋ ಸಂಸ್ಥೆಯ ಹಲವು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದಾರೆ. ಕೇವಲ ಶೇ 2ರಷ್ಟು ವಿಜ್ಞಾನಿಗಳು ಪ್ರತಿಷ್ಠಿತ ಐಐಟಿಗಳಿಂದ ಬಂದವರಾಗಿದ್ದಾರೆ ಎನ್ನುವುದು ವಿಶೇಷ. ಬಹುತೇಕ ಪುರುಷ ವಿಜ್ಞಾನಿಗಳಂತೆಯೇ ಇಸ್ರೋ ಸಂಸ್ಥೆಯ ಮಹಿಳೆಯರೂ ಸಹ ಸಮಾಜದ ಮಧ್ಯಮ ವರ್ಗಗಳಿಂದ, ಸಣ್ಣ ಪುಟ್ಟ ಪಟ್ಟಣಗಳಿಂದ ಬಂದವರಾಗಿದ್ದಾರೆ. ಈ ಎಲ್ಲ ಮಹಿಳೆಯರೂ ಸಹ ಕುಟುಂಬ ವಲಯದಲ್ಲಿ ತಮ್ಮ ಪೋಷಕರಿಂದ, ಗಂಡಂದಿರಿಂದ ಬೆಂಬಲ, ಪ್ರೋತ್ಸಾಹ ಗಳಿಸಿದವರೇ ಆಗಿದ್ದಾರೆ. ಮತ್ತೊಂದೆಡೆ ತಮ್ಮ ಕೌಟುಂಬಿಕ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಲೇ ಈ ಮಹಿಳಾ ವಿಜ್ಞಾನಿಗಳು ಇಸ್ರೋ ಸಂಸ್ಥೆಯ ವೈಜ್ಞಾನಿಕ ಕಾರ್ಯಾಚರಣೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ.

ಆಗಸ್ಟ್‌ 23ರ ಬುಧವಾರ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್‌ ಮಾಡ್ಯೂಲ್‌ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡಿಂಗ್‌ ಮಾಡಿದ ಕ್ಷಣದಲ್ಲಿ ಭಾರತವು ಅಜ್ಞಾತ ದಕ್ಷಿಣ ಧೃವವನ್ನು ತಲುಪಿದ ಮೊದಲ ದೇಶ ಎಂಬ ಹೆಮ್ಮೆಗೆ ಭಾಜನವಾಯಿತು. ಅಮೆರಿಕ, ಚೀನಾ, ರಷ್ಯಾದ ನಂತರ ಭಾರತ ನಾಲ್ಕನೆಯ ರಾಷ್ಟ್ರವಾಗಿ ಚಂದ್ರನ ಮೇಲೆ ಕಾಲಿರಿಸಿದೆ. ಈ ಸಾಧನೆಗೆ ಇಸ್ರೋ ತಂಡದ ವಿಜ್ಞಾನಿಗಳು, ತಂತ್ರಜ್ಞರು ಹಾಗೂ ಸಂಶೋಧಕರ ತಂಡವನ್ನು ಅಭಿನಂದಿಸುವ ಸಂದರ್ಭದಲ್ಲೇ ಇಸ್ರೋ ಸಂಸ್ಥೆಯಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಮಹಿಳಾ ವಿಜ್ಞಾನಿಗಳ ಸಾಧನೆಯ ಬಗ್ಗೆಯೂ ವ್ಯಾಪಕವಾಗಿ ಚರ್ಚೆ ನಡೆದಿದೆ. ಚಂದ್ರಯಾನ-3 ಮಿಷನ್‌ನಲ್ಲಿ ಹಲವು ಮಹಿಳೆಯರು ನೇರವಾಗಿ ಕಾರ್ಯನಿರ್ವಹಿಸಿದ್ದಾರೆ. ಸಹವರ್ತಿಗಳಾಗಿ (Associates), ಉಪ ಯೋಜನಾ ನಿರ್ದೇಶಕರಾಗಿ, ಕೆಲವು ಕಾರ್ಯಾಚರಣೆಗಳಲ್ಲಿ ಯೋಜನಾ ವ್ಯವಸ್ಥಾಪಕರಾಗಿ ಮಹಿಳಾ ವಿಜ್ಞಾನಿಗಳು ತಮ್ಮ ಸೇವೆಗೈದಿರುವುದನ್ನು ಸ್ಮರಿಸಬೇಕಿದೆ.

ಮುಂಚೂಣಿಯಲ್ಲಿ ಮಹಿಳಾ ಶಕ್ತಿ

ಸಾಂಪ್ರದಾಯಿಕ ಪಿತೃಪ್ರಧಾನ ವ್ಯವಸ್ಥೆಯ ಚೌಕಟ್ಟಿನೊಳಗೇ ಬೆಳೆದು ಕೌಟುಂಬಿಕ ಸಂಕೋಲೆಗಳನ್ನು ಭೇದಿಸಿ ವಿಜ್ಞಾನ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ ಮಹಿಳೆಯರ ಪೈಕಿ ಯೋಜನಾ ನಿರ್ದೇಶಕಿ ಕೆ. ಕಲ್ಪನಾ ಒಬ್ಬರಾಗಿದ್ದಾರೆ. ವಿಕ್ರಂ ಲ್ಯಾಂಡರ್‌ ಯಶಸ್ಸಿನ ಕ್ಷಣಗಳನ್ನು ದೇಶದ ಜನತೆಯ ಮುಂದೆ ಸಂಭ್ರಮಿಸಲು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಇಸ್ರೋ ವಿಜ್ಞಾನಿಗಳ ತಂಡದಲ್ಲಿ ಕಲ್ಪನಾ ಓರ್ವ ಮಹಿಳೆಯಾಗಿದ್ದರು. ಬೆಂಗಳೂರಿನವರೇ ಆದ ಕಲ್ಪನಾ ಖರಗ್‌ಪುರದ ಐಐಟಿ ಪದವೀಧರೆ. 2003ರಲ್ಲಿ ಇಸ್ರೋ ಸಂಸ್ಥೆಗೆ ಸೇರಿದ ಕಲ್ಪನಾ ವಿವಿಧ ಯೋಜನೆಗಳಲ್ಲಿ ಭಾಗಿಯಾಗಿದ್ದು, ಚಂದ್ರಯಾನ-3ರ ಲ್ಯಾಂಡರ್‌ ವ್ಯವಸ್ಥೆಯ ವಿನ್ಯಾಸಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಚಂದ್ರಯಾನ-2 ಮಿಷನ್‌ನಲ್ಲಿ ಮತ್ತು ಮಂಗಳ ಗ್ರಹದ ಆರ್ಬಿಟರ್‌ ಮಿಷನ್‌ನಲ್ಲಿ ಕಲ್ಪನಾ ಸಕ್ರಿಯ ಪಾತ್ರ ವಹಿಸಿದ್ದಾರೆ. ಇದೇ ಸಾಲಿನಲ್ಲಿ ವಿಜೃಂಭಿಸುವ ಮತ್ತೋರ್ವ ಮಹಿಳಾ ವಿಜ್ಞಾನಿ “ ಭಾರತದ ರಾಕೆಟ್‌ ಮಹಿಳೆ ” ಎಂದೇ ಗುರುತಿಸಲ್ಪಡುವ ಡಾ. ರಿತು ಕರಿಧಾಲ್.‌ 1997ರಿಂದ ಇಸ್ರೋದಲ್ಲಿ ಏರೋಸ್ಪೇಸ್‌ ಇಂಜಿನಿಯರ್‌ ಆಗಿರುವ ಕರಿಧಾಲ್‌ ಮಂಗಳ ಯಾನವನ್ನು ಯಶಸ್ವಿ ಮಿಷನ್‌ ಆಗಿ ರೂಪಿಸುವಲ್ಲಿ ಪ್ರಧಾನ ಭೂಮಿಕೆ ವಹಿಸಿದ್ದಾರೆ. 2007ರಲ್ಲಿ ಇಸ್ರೋ ಯುವ ವಿಜ್ಞಾನಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಚಂದ್ರಯಾನ-2ರ ಯೋಜನಾ ನಿರ್ದೇಶಕಿ ವನಿತಾ ಮುತ್ತಯ್ಯ ಇಸ್ರೋದ ಬಾಹ್ಯಾಕಾಶ ನಡಿಗೆಯಲ್ಲಿ ಹೆಗಲು ನೀಡಿದ ಮತ್ತೋರ್ವ ಮಹಿಳಾ ವಿಜ್ಞಾನಿ. ಕಿರಿಯ ಇಂಜಿನಿಯರ್‌ ಹುದ್ದೆಗೆ ಸೇರಿಕೊಂಡ ವನಿತಾ ಇಸ್ರೋ ಸಂಸ್ಥೆಯ ಮೊದಲ ಮಹಿಳಾ ಯೋಜನಾ ನಿರ್ದೇಶಕರೂ ಹೌದು. ಮೂರು ಆಯಾಮದ (Three dimensional) ಚಿತ್ರಗಳನ್ನು ಇಮೇಜ್‌ಗಳನ್ನು ಪುನರಾವರ್ತಿಸುವ ಸಾಮರ್ಥ್ಯ ಹೊಂದಿರುವ ಭಾರತದ ಮೊತ್ತಮೊದಲ ದೂರ ಸಂವೇದಿ ಉಪಗ್ರಹ Cartosat-1 ಅಭಿವೃದ್ಧಿಪಡಿಸಿದ ಸಂದರ್ಭದಲ್ಲಿ ವನಿತಾ ಉಪ ಯೋಜನಾ ನಿರ್ದೇಶಕರಾಗಿದ್ದರು. ಸಾಗರ ಅನ್ವಯಿಕೆಗಳಿಗಾಗಿಯೇ ನಿರ್ಮಿಸಲಾದ ಭಾರತದ ಎರಡನೆ ಉಪಗ್ರಹ Oceansat-2 ದೂರ ಸಂವೇದಿ ಉಪಗ್ರಹ ಸರಣಿಯ ಒಂದು ಭಾಗವಾಗಿದ್ದು Oceansat-1ರಲ್ಲಿನ ಕಾರ್ಯಾಚರಣೆಯ ಬಳಕೆದಾರರಿಗೆ ಸೇವಾ ನಿರಂತರತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲೂ, ಉಷ್ಣವಲಯದ ಹವಾಮಾನ ಮತ್ತು ಹವಾಮಾನದ ಮೇಲೆ ಪ್ರಭಾವ ಬೀರುವ ಸಂವೇದನಾ ವ್ಯವಸ್ಥೆಗಳ ಜೀವನ ಚಕ್ರವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ, ಹಾಗೂ ಉಷ್ಣವಲಯದ ಪ್ರದೇಶಗಳಲ್ಲಿನ ವಾತಾವರಣದ ಸಂಬಂಧಿತ ಶಕ್ತಿ ಮತ್ತು ತೇವಾಂಶದ ಬಜೆಟ್ನಲ್ಲಿ ಅವುಗಳ ಪಾತ್ರವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ರೂಪಿಸಿದ Mega-Trophics ಮಿಷನ್‌ ಅಭಿವೃದ್ಧಿಪಡಿಸುವಾಗಲೂ ಸಹ ವನಿತಾ ಅವರು ಇದೇ ಹುದ್ದೆಯಲ್ಲಿದ್ದರು.  2006ರಲ್ಲಿ ಮುತ್ತಯ್ಯ ವನಿತಾ ಅವರಿಗೆ Astronomical Society of India ವತಿಯಿಂದ ಅತ್ಯುತ್ತಮ ಮಹಿಳಾ ವಿಜ್ಞಾನಿ ಪ್ರಶಸ್ತಿ ನೀಡಲಾಗಿತ್ತು.

14 ಕ್ಕೂ ಹೆಚ್ಚು ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಕಾರ್ಯನಿವರ್ಹಿಸಿರುವ ನಂದಿನಿ ಹರಿನಾಥ್‌ ಕಳೆದ 20 ವರ್ಷಗಳಿಂದಲೂ ಹಲವು ಯೋಜನೆಗಳಲ್ಲಿ ಭಾಗಿಯಾಗಿದ್ದಾರೆ. ಮಂಗಳಯಾನದ ಆರ್ಬಿಟರ್‌ ಮಿಷನ್‌ನಲ್ಲಿ ಉಪ ಕಾರ್ಯಾಚರಣೆಯ ನಿರ್ದೇಶಕರಾಗಿದ್ದರು. ಪ್ರಸ್ತುತ ಪ್ರಾಜೆಕ್ಟ್‌ ಮೇನೇಜರ್‌ ಮತ್ತು ಮಿಷನ್‌ ಡಿಸೈನರ್‌ ಆಗಿದ್ದಾರೆ. ಇಸ್ರೋ ಸಂಸ್ಥೆಯ ಮೊದಲ ಉಪಗ್ರಹ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಟಿ.ಕೆ. ಅನುರಾಧಾ 1982ರಿಂದಲೂ ಸಂಸ್ಥೆಯ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. GSAT-9 ̧  GSAT-17 ಹಾಗೂ GSAT-18 ನಂತಹ ಮೂರು ಸಂವಹನ ಉಪಗ್ರಹಗಳ ಯಶಸ್ವಿ ಉಡಾವಣೆಯಲ್ಲಿ ಅನುರಾಧಾ ಅವರ ಮಹತ್ವದ ಪಾತ್ರ ಇತ್ತು. 34 ವರ್ಷಗಳ ನಿರಂತರ ಸೇವೆಯ ನಂತರ ಅನುರಾಧಾ ಅವರು ನಿವೃತ್ತಿಹೊಂದಿದ್ದರು. ಮಂಗಳಯಾನದ ಆರ್ಬಿಟರ್‌ ಮಿಷನ್‌ನಲ್ಲಿ ಹಾಗೂ ಚಂದ್ರಯಾನ್‌- ಯೋಜನೆಗಳಲ್ಲಿ ಆಪ್ಟಿಕಲ್‌ ಮತ್ತು ಐ ಆರ್‌ ಸಂವೇದಕಗಳು, ಉಪಕರಣಗಳು ಮತ್ತು ಪೇ ಲೋಡ್‌ಗಳ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿದ್ದ ಭೌತಶಾಸ್ತ್ರಜ್ಞೆ ಮೌಮಿತಾ ದತ್ತಾ ಮಂಗಳಯಾನದ ಯಶಸ್ಸಿನ ನಂತರ ಇಸ್ರೋದ Team of Excellence ಪ್ರಶಸ್ತಿಗೆ ಭಾಜನರಾಗಿದ್ದರು. ಗಗನಯಾನದ ನಿರ್ದೇಶಕಿಯಾಗಿರುವ ವಿ.ಆರ್.‌ ಲಲಿತಾಂಬಿಕಾ ಅವರು ಇಸ್ರೋದ ನೂರಕ್ಕೂ ಹೆಚ್ಚು ಮಿಷನ್‌ಗಳ ಕಾರ್ಯಾಚರಣೆಯ ಭಾಗವಾಗಿದ್ದಾರೆ. ವಿಕ್ರಂ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರದ ಉಪನಿರ್ದೇಶಕರಾಗಿದ್ದ ಲಲಿತಾಂಬಿಕಾ ಉಡಾವಣಾ ವಾಹನ ತಂತ್ರಜ್ಞಾನದಲ್ಲಿ ಸಾಧನೆಗಾಗಿ Astronotical Society Of India ವತಿಯಿಂದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪಿತೃಪ್ರಧಾನ ವ್ಯವಸ್ಥೆ, ಪುರುಷಪ್ರಧಾನ ಆಡಳಿತ ಪರಿಸರ ಹಾಗೂ ಪುರುಷಾಧಿಪತ್ಯದ ಔದ್ಯಮಿಕ ಜಗತ್ತಿನ ನಡುವೆಯೇ ಒಂದು ವೈಜ್ಞಾನಿಕ ಸಂಶೋಧನಾ ಸಂಸ್ಥೆಯಾಗಿ ಇಸ್ರೋ ನೂರಾರು ಮಹಿಳಾ ವಿಜ್ಞಾನಿಗಳಿಗೆ, ತಂತ್ರಜ್ಞರಿಗೆ, ಸಂಶೋಧಕರಿಗೆ ಸೂಕ್ತ ಅವಕಾಶ ಮತ್ತು ಸ್ಥಾನಮಾನಗಳನ್ನು ಕಲ್ಪಿಸಿರುವುದು ಪ್ರಶಂಸನಾರ್ಹ ವಿಚಾರ. ಈ ಮಹಿಳಾ ವಿಜ್ಞಾನಿಗಳೂ ಸಹ ತಮ್ಮ ಸಾಮಾಜಿಕ-ಕೌಟುಂಬಿಕ ಕಟ್ಟುಪಾಡುಗಳು ಮತ್ತು ಸಾಂಸ್ಕೃತಿಕ ನಿಬಂಧನೆಗಳನ್ನು ದಾಟಿ ಭಾರತದ ಬಾಹ್ಯಾಕಾಶ ನಡಿಗೆಗೆ ಹೆಜ್ಜೆಯಾಗಿರುವುದು, ಹೆಗಲು ನೀಡಿರುವುದು 75 ವರ್ಷಗಳ ಭಾರತದ ವಿಜ್ಞಾನ ನಡಿಗೆಯ ಒಂದು ಹೆಗ್ಗಳಿಕೆ. ಒಂದು ಸರ್ಕಾರಿ ಸ್ವಾಮ್ಯದ (Public Sector) ಸಂಸ್ಥೆಯಾಗಿ ಇಸ್ರೋ, ವಿಶಾಲ ಸಮಾಜದಲ್ಲಿ ಢಾಳಾಗಿ ಕಾಣುವ ಮಹಿಳಾ ಅಸಮಾನತೆಯ ವಾತಾವರಣಕ್ಕೆ ವ್ಯತಿರಿಕ್ತವಾಗಿ ದಿಟ್ಟ ಹೆಜ್ಜೆಗಳನ್ನಿರಿಸಿದೆ. ಈ ಸಂಸ್ಥೆಗಾಗಿ ದುಡಿದ, ದುಡಿಯುತ್ತಿರುವ ಮಹಿಳಾ ವಿಜ್ಞಾನಿಗಳು ಭಾರತದ ಬಾಹ್ಯಾಕಾಶ ನಡಿಗೆಯಲ್ಲಿ ತಮ್ಮ ಹೆಗ್ಗುರುತುಗಳನ್ನು ಮೂಡಿಸಿದ್ದಾರೆ.

( ಈ ಲೇಖನದ ಕೆಲವು ಮಾಹಿತಿ, ಅಭಿಪ್ರಾಯಗಳನ್ನು ಮಹಿಳಾ ಹೋರಾಟಗಾರ್ತಿ CFTRI ನಿವೃತ್ತ ವಿಜ್ಞಾನಿ ಇ. ರತಿರಾವ್‌ ಅವರ ಬರಹದಿಂದ ಪಡೆಯಲಾಗಿದೆ).

(ಮಹಿಳಾ ವಿಜ್ಞಾನಿಗಳ ವ್ಯಕ್ತಿಗತ ಬದುಕು ವೈಜ್ಞಾನಿಕ ಸಾಧನೆ – ಮುಂದಿನ ಭಾಗದಲ್ಲಿ)

-೦-೦-೦-೦-೦-

Tags: Chandrayaan 3IndiaIndian Institute of ScienceISRO
Previous Post

ದೇವಸ್ಥಾನದ ಹಣ ಹಜ್​ ಯಾತ್ರೆಗೆ ಹೋಗಲ್ಲ.. ಕಾಂಗ್ರೆಸ್​ನಿಂದ ಮಹತ್ವದ ನಿರ್ಧಾರ..!

Next Post

ಭಾರತಕ್ಕಾಗಿ ಕಪ್‌ ಗೆದ್ದ ಫುಟ್ಬಾಲ್‌ ಚಾಂಪಿಯನ್‌ ಗ್ರಾಮಕ್ಕೆ ಮರಳಿದಾಗ ತನ್ನ ಮನೆಯೇ ಇರಲಿಲ್ಲ..!!

Related Posts

Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
0

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಸಾಕ್ಷಿ ಗುಡ್ಡೆಯನ್ನು ಬಿಟ್ಟುಹೋಗಿದ್ದಾರೆ? :ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ಹಗಲು ಗನಸು ಕಾಣುತ್ತಿದೆ. ಬಿಜೆಪಿಯವರು ಸುಳ್ಳನ್ನು ಮಾತ್ರ...

Read moreDetails

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025

Kannada Cinema: ಯಶೋಧರ ನಿರ್ದೇಶನದದಲ್ಲಿ ಅಭಿಮನ್ಯು ನಾಯಕನಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ .

July 2, 2025

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

July 1, 2025

Ravichandran: ಈ ವಾರ ತೆರೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಬಹು‌ ನಿರೀಕ್ಷಿತ ಚಿತ್ರ “ತಪಸ್ಸಿ”

July 1, 2025
Next Post
ಭಾರತಕ್ಕಾಗಿ ಕಪ್‌ ಗೆದ್ದ ಫುಟ್ಬಾಲ್‌ ಚಾಂಪಿಯನ್‌ ಗ್ರಾಮಕ್ಕೆ ಮರಳಿದಾಗ ತನ್ನ ಮನೆಯೇ ಇರಲಿಲ್ಲ..!!

ಭಾರತಕ್ಕಾಗಿ ಕಪ್‌ ಗೆದ್ದ ಫುಟ್ಬಾಲ್‌ ಚಾಂಪಿಯನ್‌ ಗ್ರಾಮಕ್ಕೆ ಮರಳಿದಾಗ ತನ್ನ ಮನೆಯೇ ಇರಲಿಲ್ಲ..!!

Please login to join discussion

Recent News

Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
Top Story

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

by ಪ್ರತಿಧ್ವನಿ
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

July 2, 2025

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada