ಭಾರತಕ್ಕಾಗಿ ದೊಡ್ಡ ಗೆಲುವಿನೊಂದಿಗೆ ಗ್ರಾಮಕ್ಕೆ ಮರಳಿದ ಯುವ ರಾಷ್ಟ್ರೀಯ ಫುಟ್ಬಾಲ್ ಪಟುವೊಬ್ಬ ಮಣಿಪುರ ಹಿಂಸಾಚಾರದಿಂದ ನಿರಾಶ್ರಿತ ಶಿಬಿರದಲ್ಲಿ ಉಳಿಯಬೇಕಾಗಿ ಬಂದಿರುವ ಘಟನೆ ವರದಿಯಾಗಿದೆ.
ಕಳೆದ ವಾರ 16 ವರ್ಷದೊಳಗಿನವರ ದಕ್ಷಿಣ ಏಷ್ಯನ್ ಫುಟ್ಬಾಲ್ ಫೆಡರೇಷನ್ (ಸ್ಯಾಫ್) ಕ್ರೀಡಾಕೂಟ ತಿಂಫುವಿನಲ್ಲಿ ಆಯೋಜನೆಗೊಂಡಿತ್ತು. ಈ ಕೂಟದಲ್ಲಿ ಭಾರತ ತಂಡವನ್ನು ಮುನ್ನಡೆಸಿ, ಚಾಂಪಿಯನ್ ಶಿಪ್ ಜಯಿಸಿದ್ದ ತೆಂಗ್ನೌಪಾಲ್ ಜಿಲ್ಲೆಯ ಗಾಂಗೌಹೌ ಮೇಟಿ ಎಂಬ ಕಿರಿಯ ಫುಟ್ಬಾಲ್ ಪಟು ಸ್ವಗ್ರಾಮಕ್ಕೆ ಮರಳಿದಾಗ ತನ್ನ ಮನೆ ಹಿಂಸಾಚಾರದಿಂದಾಗಿ ನಾಶವಾಗಿರುವುದು ತಿಳಿದು ಬಂದಿದೆ.
ಅಲ್ಲದೆ, ಮಣಿಪುರದಲ್ಲಿ ಆರಂಭಿಕ ಘಟ್ಟದಲ್ಲಿ ಹಿಂಸಾಚಾರ ಸ್ಫೋಟಗೊಂಡಾಗ ಆತನ ಮನೆ ಬೆಂಕಿಗಾಹುತಿಯಾಗಿ, ಪೋಷಕರು ಕಾಂಗ್ಪೋಕ್ಪಿ ಜಿಲ್ಲೆಯಲ್ಲಿನ ನಿರಾಶ್ರಿತ ಶಿಬಿರದಲ್ಲಿ ಉಳಿದುಕೊಂಡೇ ತಮ್ಮ ಪುತ್ರನನ್ನು ಸ್ವಾಗತಿಸುವಂತಾಗಿದೆ. ತನಗೆ ಉಳಿದುಕೊಳ್ಳಲು ಮನೆ ಇಲ್ಲದಿದ್ದರೂ ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಯಾಗಲಿ ಎಂದು 16 ವರ್ಷದೊಳಗಿನ ಕಿರಿಯರ ಭಾರತ ತಂಡದ ನಾಯಕ ಗಾಂಗೌಹೌ ಮೇಟಿ ಆಶಿಸಿದ್ದಾರೆ.
ಭಾರತ ತಂಡದ ಗಾಂಗೌಹೌ ಮೇಟ್ ಹಾಗೂ ತಂಡದ ಇನ್ನಿತರ ಆದಿವಾಸಿ ಸದಸ್ಯರನ್ನು ಗುರುವಾರ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರೆಲ್ಲ ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಯಾಗಲಿ ಎಂಬ ಸಂದೇಶ ರವಾನಿಸಿದರು.
“ನಾವು ನಮ್ಮ ಮೈತೈ ಸಹ ಆಟಗಾರರನ್ನು ಇಷ್ಟಪಡುತ್ತೇವೆ. ನಾವು ಸ್ನೇಹಮಯವಾಗಿದ್ದು, ಒಟ್ಟಾಗಿ ಟ್ರೋಫಿಯನ್ನು ಮೇಲೆತ್ತಿದ್ದೇವೆ. ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಯಾಗಲಿ ಎಂದು ನಾವು ಬಯಸುತ್ತೇವೆ” ಎಂದು 16 ವರ್ಷದೊಳಗಿನವರ ಕಿರಿಯ ಭಾರತೀಯ ತಂಡದ ಸದಸ್ಯ ವುಮ್ಲೆನ್ಲಾಲ್ ಹ್ಯಾಂಗ್ಸ್ ಹಿಂಗ್ ಮನವಿ ಮಾಡಿದ್ದಾರೆ. ಕಿರಿಯ ಭಾರತೀಯ ಫುಟ್ ಬಾಲ್ ತಂಡದ 23 ಸದಸ್ಯರ ಪೈಕಿ 15 ಮಂದಿ ಸದಸ್ಯರು ಮಣಿಪುರದವರಾಗಿದ್ದಾರೆ.