ಹೀರೊ ಹೊಸಬ, ಹೀರೊಯಿನ್ ಹೊಸಬರು, ನಿರ್ದೇಶಕ ಹೊಸಬ, ನಿರ್ದೇಶಕರು ಹೊಸಬರೇ… ಹಾಗೆ ನೋಡಿದರೆ ಇಡೀ ಚಿತ್ರ ತಂಡವೇ ಹೊಸತು. ಹೀಗೆ ಹೊಸಬರೆಲ್ಲಾ ಸೇರಿ ನಿರ್ಮಿಸಿದ ಕಾಕ್ಟೈಲ್ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.
ಕಾಕ್ಟೈಲ್ ಚಿತ್ರದ ನಾಯಕ ನಟ ವಿರೇನ್ ಕಿಶನ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದರೆ, ನಟಿ ಚರಿಷ್ಮಾ, ನಿರ್ದೇಶಕ ಶ್ರೀರಾಮ್, ನಿರ್ಮಾಪಕ ಶಿವಪ್ಪ ಎಲ್ಲರೂ ಸೇರಿ ಮಾಡಿರುವ ಹೊಸ ಪ್ರಯತ್ನವಾಗಿದೆ. ವಿಶೇಷ ಅಂದರೆ ನಿರ್ಮಾಪಕ ಶಿವಪ್ಪ ಅವರ ಪುತ್ರ ವೀರೇನ್ ಕಿಶನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.
ಕಾಕ್ಟೈಲ್ ಚಿತ್ರದ ಟ್ರೇಲರ್ ಅನ್ನು ಮಂಗಳವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದರು.

ಕಾಕ್ಟೈಲ್ ಅಂದರೆ ನಾಲ್ಕಾರು ಮಾದರಿಯ ಮದ್ಯಗಳನ್ನು ಒಂದರಲ್ಲಿ ಸೇರಿಸಿ ಸೇವಿಸುವುದು ಎಂದರ್ಥ. ಈ ಚಿತ್ರದಲ್ಲಿ ಕೂಡ ಸೆಂಟಿಮೆಂಟ್, ಆಕ್ಷನ್, ಥ್ರಿಲ್, ಮಿಸ್ಟರಿ ಸೇರಿದಂತೆ ಎಲ್ಲಾ ರೀತಿಯ ಅಂಶಗಳಿದ್ದು, ಸಿದ್ಧ ಸೂತ್ರಗಳನ್ನೆಲ್ಲಾ ಗಾಳಿಗೆ ತೂರಿ ನಿರ್ಮಿಸಿರುವ ಈ ಚಿತ್ರ ಕನ್ನಡ ಚಿತ್ರರಂಗದಲ್ಲೇ ಭಿನ್ನ ಪ್ರಯತ್ನ ಎಂದು ಹೇಳಲಾಗಿದೆ.
ನಾಯಕನಾಗಿ ವೀರೇನ್ ಕಿಶನ್ ಮೊದಲ ಚಿತ್ರದಲ್ಲೇ ನಾಲ್ಕು ಶೇಡ್ ಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟ್ರೇಲರ್ ಗಮನಿಸಿದರೆ ಅನುಭವಿ ನಟನಂತೆ ನಟಿಸಿರುವ ಭರವಸೆ ಮೂಡಿಸಿದ್ದಾರೆ. ಟ್ರೇಲರ್ ಕೂಡ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.
ಟ್ರೇಲರ್ ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ ಶ್ರೀರಾಮ್, ಕಾಕ್ಟೈಲ್ ಚಿತ್ರ ಯಶಸ್ವಿಯಾದರೆ 2ನೇ ಭಾಗ ತೆರೆಗೆ ಬರಲಿದೆ. ಈಗಾಗಲೇ ಎರಡನೇ ಭಾಗದ ಚಿತ್ರಕಥೆಯೂ ಬಹುತೇಕ ಸಿದ್ಧಗೊಂಡಿದೆ ಎಂದರು.









