ಕಾಂಗ್ರೆಸ್ ಸರ್ಕಾರ ಭರ್ಜರಿಯಾಗಿ ಜಯ ದಾಖಲಿಸಿಕೊಂಡು ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರವನ್ನು ಆಪರೇಷನ್ ಕಮಲ ಸೇರಿದಂತೆ ಅನ್ಯ ಮಾರ್ಗಗಳಿಂದ ಸೋಲಿಸುವುದು ಕಷ್ಟ ಸಾಧ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಕಾಂಗ್ರೆಸ್ ದಿನದಿಂದ ದಿನಕ್ಕೆ ತನ್ನದೇ ತುಂಬಿದ ಮಡಿಕೆಗೆ ಕಲ್ಲು ಒಡೆಯುವ ಕೆಲಸ ಶುರು ಮಾಡಿದೆ. ಒಂದು ಕಡೆ ಡಿಸಿಎಂ ಡಿ.ಕೆ ಶಿವಕುಮಾರ್ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಮತ್ತೊಂದು ಕಡೆಯಿಂದ ಸಿದ್ದರಾಮಯ್ಯ ಅವರ ಯಶಸ್ಸನ್ನು ತಡೆಯುವ ಪ್ರಯತ್ನಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದಾರೆ. ಇದೀಗ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಭೀರುವ ಆತಂಕವೂ ಮನೆ ಮಾಡಿದೆ.
ಬಿ.ಕೆ ಹರಿಪ್ರಸಾದ್ ಮುಂದೆ ಬಿಟ್ಟು ಆಟವಾಡಿದ್ದ ಡಿಸಿಎಂ..?

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಿ.ಕೆ ಹರಿಪ್ರಸಾದ್ ಸೇರಿದಂತೆ ಕೆಲವೊಂದಿಷ್ಟು ನಾಯಕರು ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ಸಮರ ನಡೆಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೇ ಬಾಣವಾಗಿಸಿಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಅವರ ಯಶಸ್ಸನ್ನು ಹಣಿಯಲು ಹರಿಪ್ರಸಾದ್ಗೆ ಪ್ರೇರೇಪಿಸಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿಸಿದ್ದರು. ಸಿದ್ದರಾಮಯ್ಯ ಹೆಸರು ಹೇಳದೆ ಸಮಾಜವಾದಿ ಅಲ್ಲ ಮಜವಾದಿ, ಡಿ ದೇವರಾಜ ಅರಸು ಅವರ ಕಾರಿನಲ್ಲಿ ಓಡಾಡಿದ ಮಾತ್ರಕ್ಕೆ ಅರಸು ಆಗಲ್ಲ, ದುಬಾರಿ ಹ್ಯೋಬ್ಲೋಟ್ ವಾಚ್ ಕಟ್ಟಿಕೊಂಡು ಓಡಾಡುವ ನಾಯಕ ಸಮಾಜವಾದಿ ಆಗಲು ಹೇಗೆ ಸಾಧ್ಯ.? ಪಂಚೆ ಒಳಗೆ ಖಾಕಿ ಚೆಡ್ಡಿ ಹಾಕಿದ್ದಾರೆ ಎಂದೆಲ್ಲಾ ವಾಗ್ಬಾಣ ಹರಿಸಿದ್ದರು. ಇದೀಗ ಡಿ.ಕೆ ಶಿವಕುಮಾರ್ ಪ್ರಯೋಗಿಸಿದ ಅಸ್ತ್ರವೇ ಮುಳುವಾಗುವ ಎಲ್ಲಾ ಲಕ್ಷಣ ಕಾಣಿಸಿದೆ.
ಮೂವರು ಡಿಸಿಎಂ ಹುದ್ದೆ ಸೃಷ್ಟಿಸಲು ಬೇಡಿಕೆಯಿಟ್ಟ ರಾಜಣ್ಣ..!

ಆರಂಭದಿಂದಲೂ ಸಿದ್ದರಾಮಯ್ಯ ಬಣದಲ್ಲಿ ಗುರ್ತಿಸಿಕೊಂಡಿರುವ ಮಧುಗಿರಿಯ ಕೆ.ಎನ್ ರಾಜಣ್ಣ, ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದೀಗ ಬಿ.ಕೆ ಹರಿಪ್ರಸಾದ್ ಅಸ್ತ್ರಕ್ಕೆ ಸಿದ್ದರಾಮಯ್ಯ ಪ್ರತ್ಯಾಸ್ತ್ರ ಪ್ರಯೋಗ ಮಾಡಿದ್ದು, ಮೂವರು ಡಿಸಿಎಂ ಹುದ್ದೆ ಕೇಳುವ ಮೂಲಕ ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್ ಪ್ರಾಮುಖ್ಯತೆಯನ್ನೇ ಮುಗಿಸಲು ಯೋಜನೆ ರೂಪಿಸಲಾಗಿದೆ. ಈ ಬೇಡಿಕೆ ಕೇವಲ ಬಾಯಿ ಮಾತಿಗೆ ಸೀಮಿತ ಆಗದೆ, ಹೈಕಮಾಂಡ್ ಅಂಗಳಕ್ಕೂ ಪ್ರವೇಶ ಪಡೆದಿದೆ. ಇದೀಗ ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ನಡುವಿನ ಪರೋಕ್ಷ ಯುದ್ಧ ಹೈಕಮಾಂಡ್ಗೆ ಸಂಕಷ್ಟ ತಂದಿಟ್ಟಿದೆ. ಯಾವುದೇ ನಿರ್ಧಾರ ಮಾಡಿದರೂ ಪರಿಣಾಮ ಮಾತ್ರ ಕೆಟ್ಟದಾಗುವ ಸಾಧ್ಯತೆಗಳಿವೆ.
ರಾಜಣ್ಣ ಕೇಳಿರುವ ಬೇಡಿಕೆ ಸರಿಯಿದೆ – ಆದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ..
ಡಿಸಿಎಂ ಡಿ.ಕೆ ಶಿವಕುಮಾರ್ ಸರ್ಕಾರ ರಚನೆ ವೇಳೆಯಲ್ಲಿ ಒಂದೇ ಡಿಸಿಎಂ ಹುದ್ದೆ ಇರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿತ್ತು. ಇದೀಗ ಮತ್ತೆ ಮೂವರು ಡಿಸಿಎಂ ಹುದ್ದೆಗಳನ್ನು ಸೃಷ್ಟಿ ಮಾಡಿದರೆ ಡಿ.ಕೆ ಶಿವಕುಮಾರ್ ಪ್ರಾಮುಖ್ಯತೆ ಕಳೆದುಕೊಳ್ಳಲಿದ್ದಾರೆ. ಆಗ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ಈಗಿನ ಉತ್ಸಾಹದಲ್ಲಿ ಪಕ್ಷವನ್ನು ಸಂಘಟಿಸದೆ ಹೋದರೆ ಚುನಾವಣೆಯಲ್ಲಿ ಸೋಲುವುದು ಶತಸಿದ್ಧ. ಇನ್ನೊಂದು ಕಡೆ ಸಮುದಾಯವಾರು ಡಿಸಿಎಂ ಹುದ್ದೆಯನ್ನು ಕೇಳಲಾಗಿದೆ. ಎಸ್ಸಿ, ಎಸ್ಟಿ ಸಮುದಾಯ ಸೇರಿದಂತೆ ಹಿಂದುಳಿದ ಸಮುದಾಯಗಳ ನಾಯಕರನ್ನು ಡಿಸಿಎಂ ಮಾಡಬೇಕು, ಆ ಮೂಲಕ ಆ ಸಮುದಾಯಗಳ ಮತಗಳನ್ನು ಸೆಳೆಯಬೇಕು ಎನ್ನುವುದು ಬೇಡಿಕೆ. ಒಂದು ವೇಳೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡದಿದ್ದರೆ ಆ ಪಕ್ಷಗಳ ಮತಗಳ ಪ್ರಮಾಣ ಕಾಂಗ್ರೆಸ್ಗೆ ಕಡಿಮೆ ಆಗುವ ಸಂಭವವೂ ಇದೆ. ಒಟ್ಟಾರೆ ಡಿ.ಕೆ ಶಿವಕುಮಾರ್ ಅಸ್ತ್ರಕ್ಕೆ ಬ್ರಹ್ಮಾಸ್ತ್ರ ಬಿಟ್ಟಿರುವ ಸಿದ್ದರಾಮಯ್ಯ, ಮುಟ್ಟಿದರೂ ಕಷ್ಟ.. ಮುಟ್ಟದಿದ್ದರೂ ಕಷ್ಟ ಎನ್ನುವ ಪರಿಸ್ಥಿತಿ ಸೃಷ್ಟಿ ಮಾಡಿದ್ದಾರೆ.
ಕೃಷ್ಣಮಣಿ