ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಪಡೆಯಲು ಸಾಕಷ್ಟು ಕಸರತ್ತು ಮಾಡಿದ್ದರು. ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಳಿಕ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದ ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ, ಹೈಕಮಾಂಡ್ ಮಟ್ಟದಲ್ಲಿ ಭರ್ಜರಿ ಕಸರತ್ತು ನಡೆಸಿದ್ದರು. ಆದರೆ ಅಂತಿಮವಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹಾಗು ಡಿ.ಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಆಗಿ ಮಾಡುವ ನಿರ್ಧಾರ ಹೊರಬಿದ್ದಿತ್ತು. ಆದರೆ ಎರಡೂವರೆ ವರ್ಷದ ಬಳಿಕ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂದು ಹೇಳಿಕೊಂಡು ಸುತ್ತು ಹಾಕುತ್ತಿದ್ದಾರೆ ಡಿ.ಕೆ ಶಿವಕುಮಾರ್ ಆಪ್ತರು ಹಾಗು ಸಂಬಂಧಿಕ ರಾಜಕಾರಣಿಗಳು. ಆದರೆ ಮುಖ್ಯಮಂತ್ರಿ ಕುರ್ಚಿ ಮೇಲೆ ಟವೆಲ್ ಹಾಕಲು ಕಾಯುತ್ತಿರುವ ವ್ಯಕ್ತಿ ನಡೆದುಕೊಳ್ಳುತ್ತಿರುವ ರೀತಿ ಹಾಗು ಬಳಸುತ್ತಿರುವ ಭಾಷೆ ಗಡಿಮೀರಿ ಸಾಗುತ್ತಿವೆ ಎನ್ನಲು ಯಾವುದೇ ಸಮಸ್ಯೆ ಇಲ್ಲ.
‘ನೀರಿನ ಕಳ್ಳ ಡಿ.ಕೆ ಶಿವಕುಮಾರ್’ ಚುನಾವಣೆ ಅಷ್ಟೇ ಮುಖ್ಯ..!

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಾವೇರಿ ವಿಚಾರದಲ್ಲಿ ಕಟು ಶಬ್ದಗಳಿಂದ ಟೀಕೆ ನಡೆಸಿದ್ದು, ತಮಿಲುನಾಡಿನಲ್ಲಿ ಮೈತ್ರಿ ರಾಜಕಾರಣಕ್ಕಾಗಿ ಕಾವೇರಿ ನೀರು ಬಿಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಆಕ್ರೋಶ ಹೆಚ್ಚಾಗ್ತಿದ್ದ ಹಾಗೆ ನಾವು ನೀರು ಬಿಡುವುದಿಲ್ಲ ಎನ್ನುತ್ತ ಕದ್ದುಮುಚ್ಚಿ ಕಾವೇರಿ ನೀರು ಬಿಡುತ್ತಿದ್ದಾರೆ ಎನ್ನುವುದನ್ನು ನೀರು ಕಳ್ಳ ಡಿ.ಕೆ ಶಿವಕುಮಾರ್ ಎಂದರೆ ತಪ್ಪಾಗುವುದಿಲ್ಲ. ಚುನಾವಣೆ ಗೆಲ್ಲುವುದಷ್ಟೇ ಡಿ.ಕೆ ಶಿವಕುಮಾರ್ಗೆ ಮುಖ್ಯವಾಗಿದೆಯೇ ಹೊರತು, ಕಾವೇರಿ ವಿಚಾರ ಡಿ.ಕೆ ಶಿವಕುಮಾರ್ಗೆ ಮುಖ್ಯವಲ್ಲ ಎಂದಿದ್ದರು. ಆದರೆ ಈ ಮಾತಿಗೆ ಆಕ್ರೋಶ ವ್ಯಕ್ತಪಡಿಸಿರುವ ಡಿ.ಕೆ ಶಿವಕುಮಾರ್, ತಾನು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೇನೆ ಎನ್ನುವುದನ್ನೇ ಮರೆತು ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದು, ಸಾಕಷ್ಟು ಗ್ರಾಸ ಉಂಟುಮಾಡಿದೆ.
ನನ್ನ ಸುದ್ದಿಗೆ ಬಂದವರಿಗೆ ಈಗಾಗಲೇ ಸೆಟಲ್ಮೆಂಟ್ ಮಾಡಿದ್ದೇನೆ..!

ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಟೀಕೆಯ ಮಾತಿಗೆ ಅತ್ಯಂತ ಕಟು ಭಾಷೆಯಲ್ಲಿ ತಿರುಗೇಟು ಕೊಟ್ಟಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಕಾವೇರಿ ವಿಚಾರದಲ್ಲಿ ‘ನೀರಿನ ಕಳ್ಳ ಡಿಕೆಶಿ’ ಎಂದು ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಈಗ ಈಶ್ವರಪ್ಪ ಎಲ್ಲಿದ್ದಾರೆ..? ನಾನು ಎಲ್ಲಿದ್ದೇನೆ..? ಎಂದು ಪ್ರಶ್ನೆ ಮಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಜನರು ಈಶ್ವರಪ್ಪ ಅವರನ್ನು ರೆಸ್ಟ್ ಮಾಡಲಿ ಎಂದು ಹೇಳಿದ್ದಾರೆ, ಸದ್ಯಕ್ಕೆ ಈಶ್ವರಪ್ಪ ರೆಸ್ಟ್ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ. ಇನ್ನು ನನ್ನ ಸುದ್ದಿಗೆ ಅಥವಾ ನನ್ನ ವಿಚಾರಕ್ಕೆ ಬಂದ ಕೆಲವರಿಗೆ ಸೆಟ್ಲ್ಮೆಂಟ್ ಮಾಡಲಾಗಿದೆ. ಅಸೆಂಬ್ಲಿಯಲ್ಲಿ ನಮ್ಮಪ್ಪನ ಬಗ್ಗೆ ಮಾತನಾಡಿದ್ರು ಎನ್ನುವ ಮೂಲಕ ಈಶ್ವರಪ್ಪ ಅವರಿಗೂ ಕೆಲವು ದಿನಗಳಲ್ಲಿ ಸೆಟ್ಲ್ಮೆಂಟ್ ಮಾಡಲಾಗುತ್ತದೆ ಎನ್ನುವ ಸುಳಿವು ನೀಡಿದ್ದಾರೆ. ಆದರೆ ರೌಡಿಗಳು ಬಳಸುವ ಬೆದರಿಕೆ ರೀತಿ ಓರ್ವ ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್ ಬಳಸಿದ್ದು ಸರೀನಾ..? ಸ್ವತಃ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಬೇಕಿದೆ.
ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಆಗಿರುವ ಡಿಸಿಎಂಗೆ ಬೇಕಿದೆ ಸಭ್ಯತೆ..!
ಡಿಸಿಎಂ ಡಿ.ಕೆ ಶಿವಕುಮಾರ್ ಹಿನ್ನೆಲೆ ಬಗ್ಗೆ ಬಿಜೆಪಿ ಸಾಕಷ್ಟು ಬಾರಿ ಆರೋಪಗಳನ್ನು ಮಾಡುತ್ತಲೇ ಇರುತ್ತದೆ. ರೌಡಿಗಳ ಗುಂಪಿನಲ್ಲಿ ಡಿಕೆ ಶಿವಕುಮಾರ್ ಇದ್ದರು ಎಂದು ನೇರವಾಗಿಯೇ ಆರೋಪಿಸುತ್ತಾರೆ. ಇದೀಗ ಈ ರೀತಿಯ ಮಾತುಗಳಿಂದ ಬಿಜೆಪಿ, ಜೆಡಿಎಸ್ ನಾಯಕರ ಬಾಯಿಗೆ ಆಹಾರವಾಗಿದ್ದಾರೆ. ಒಂದು ರೀತಿ ರೌಡಿಗಳು ಸೆಟ್ಲ್ಮೆಂಟ್ ಮಾಡ್ತೇವೆ ಎಂದು ದರ್ಪ ಮೆರೆಯುವ ರೀತಿಯಲ್ಲೇ ಡಿ.ಕೆ ಶಿವಕುಮಾರ್ ಮಾತನಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಓರ್ವ ಡಿಸಿಎಂ ಆದವರು ತೀಕ್ಷ್ಣ ಪ್ರತಿಕ್ರಿಯೆ ನೀಡುವ ಬದಲು ಟೀಕೆಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಸವಾಲಿಗೆ ಪ್ರತಿಸವಾಲು ಹಾಕಬೇಕೇ ಹೊರತು ಎಲ್ಲೆ ಮೀರಿದ ಮಾತುಗಳಿಂದ ಬೆದರಿಸುವ ಪ್ರಯತ್ನ ಮಾಡಬಾರದು. ಒಂದು ವೇಳೆ ಮುಂದಿನ ದಿನಗಳಲ್ಲಿ ಸಿಎಂ ಕುರ್ಚಿ ಒಲಿದು ಬಂದರೂ ಡಿ.ಕೆ ಶಿವಕುಮಾರ್ ತನ್ನ ಹಾವಭಾವ, ಮಾತಿನ ದರ್ಪ ಬದಲಿಸಿಕೊಳ್ಳುವುದಿಲ್ಲ ಎನ್ನುವ ಆರೋಪ ಬಂದರೂ ಬರಬರಬಹುದು. ಆದಷ್ಟು ಶೀಘ್ರದಲ್ಲೇ ಟೀಕೆಗಳನ್ನು ಸಾಮಾನ್ಯವಾಗಿ ಹೆಸರಿಸುವುದನ್ನು ಕಲಿತುಕೊಂಡರೆ ಉತ್ತಮ ಎನ್ನಬಹುದು. ಈಶ್ವರಪ್ಪ ಟೀಕೆ ಸರಿಯೆಂದು ಹೇಳುವುದಿಲ್ಲ, ಆದರೂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಿರುವ ನಾಯಕ ಎನ್ನುವುದು ಇಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎನ್ನಬಹುದು.
ಕೃಷ್ಣಮಣಿ