ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈಯುತ್ತಿದ್ದಾರೆ. ಇದೀಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚುನಾವಣ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಏಕವಚನದಲ್ಲಿ ಲೇವಡಿ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಹಾನಗಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರ ಪ್ರಚಾರ ಮಾಡುವ ವೇಳೆ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಿರೇಕೌಂಸಿ-ಬಾಳಬೀಡ ನೀರಾವರಿ ಯೋಜನೆ ಮಾಡಿದ್ದು ಬಿಜೆಪಿ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದ ವೇಳೆ ಎನೂ ಕೆಲಸ ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ. ಕೆರೆ ತುಂಬಿಸುವ ಯೋಜನೆ ಬಗ್ಗೆ ಸಿದ್ದರಾಮಯ್ಯ ನವರಿಗೆ ದಾಖಲೆ ಕಳುಹಿಸಿಕೊಡುವೆ. ಬಾರಪ್ಪ ಬಾ. ಸಿದ್ದರಾಮಣ್ಣ ಬಾ.. ಬಂದು ನೋಡಪ್ಪ ಎಂದು ಸಿಎಂ ಲೇವಡಿ ಮಾಡಿದ್ದಾರೆ. ಬೊಮ್ಮಾಯಿ ಎನು ಅಭಿವೃದ್ಧಿ ಮಾಡಿದ್ದಾರೆ ಅಂತಾ ನೋಡು ಬಾರಪ್ಪ. ನಾವೂ ಜನರ ಜೊತೆ ಇರುವವರು, ನಾವೂ ಭೂಮಿಯಲ್ಲಿ ಆಳವಾಗಿ ಬೇರು ಉರಿರುವವರು. ನಾವೂ ನಿಮ್ಮ ಹಾಗೆ ಕುಂಡಲಿಯಲ್ಲಿ ಇರುವ ಗಿಡಗಳಲ್ಲ ಎಂದು ಸಿದ್ದರಾಮಯ್ಯ ಹಾಗು ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೈಸೂರನಲ್ಲಿ ಮಾಡಲು ಸಾಧ್ಯವಾಗದವರು ಹಾನಗಲ್ಗೆ ಬಂದೂ ಎನು ಮಾಡ್ತೀರಾ. ಮೈಸೂರು ಜನರೇ ನಿಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ಹಾನಗಲ್ ಜನರು ಯಾಕೆ ನಿಮ್ಮ ಮೇಲೆ ವಿಶ್ವಾಸ ಇಡಬೇಕು ಎಂದು ಗುಡುಗಿದ್ದಾರೆ. ಸಿದ್ದರಾಮಣ್ಣ ಮಾತು ಮಾತಿಗೂ ಮೋದಿ ಬಗ್ಗೆ ಮಾತನಾಡುತ್ತಾರೆ. ಮೋದಿಯ ವಿರುದ್ದ ಮಾತನಾಡಿದ್ರೆ ದೊಡ್ಡ ವ್ಯಕ್ತಿ ಆಗುತ್ತೇನೆ ಅಂದುಕೊಂಡಿದ್ದಾರೆ ಎಂದು ಮಾತಿನಲ್ಲೇ ತಿವಿದಿದ್ದಾರೆ.
ಸಿದ್ದರಾಮಯ್ಯ ಅಚ್ಚೇದಿನ ಎಲ್ಲಿದೆ ಅಂತಾ ಪದೇ ಪದೇ ಪ್ರಶ್ನೆ ಮಾಡುತ್ತಾರೆ. ಅಚ್ಚೇ ದಿನ ದೇಶದ ಜನರಿಗೆ ಬರುತ್ತಿದೆ. ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಇರುವವರೆಗೂ ಅಚ್ಚೇ ದಿನ ಬರಲ್ಲ. ಸಿದ್ದರಾಮಯ್ಯ ನವರಿಗೆ ಅಚ್ಚೇದಿನ ಬರಲು ಡಿಕೆಶಿ ಬಿಡಲ್ಲ ಎಂದು ಕಾಂಗ್ರೆಸ್ ಒಳರಾಜಕೀಯದ ಬಗ್ಗ ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಪಿಸು ಮಾತುಗಳು ಶುರುವಾಗಿದೆ. ಸಿದ್ದರಾಮಯ್ಯ ದೆಹಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು. ರಾಜ್ಯದಲ್ಲಿ ಗದ್ದುಗೆ ಗಟ್ಟಿ ಮಾಡಿಕೊಳ್ಳಲು ಸಿದ್ದರಾಮಯ್ಯ ತಮ್ಮ ಶಿಷ್ಯರ ಮೂಲಕ ಪಿಸುಮಾತು ಆಡಿಸುತ್ತಿದ್ದಾರೆ. ಕಾಂಗ್ರೆಸ್ ಮುಗಿಸಲು ಕಾಂಗ್ರೆಸ್ ನಾಯಕರೇ ಸಾಕು ಎಂದು ಸಿಎಂ ಬೊಮ್ಮಾಯಿ ಕೈ ಪಾಳಯದ ವಿರುದ್ಧ ವಾಗ್ಬಾಣ ಬಿಟ್ಟಿದ್ದಾರೆ.

ಚುನಾವಣೆ ಹತ್ತಿರ ಬಂದಾಗ ಸಿದ್ದರಾಮಣ್ಣ ಏಳು ಕೆ.ಜಿ ಅಕ್ಕಿ ಅಂತಾರೆ. ಸಿದ್ದರಾಮಯ್ಯ ಮನೆಗಳನ್ನ ಕಟ್ತೀನಿ ಅಂದರು. ಹಾನಗಲ್ ತಾಲೂಕಿನಲ್ಲಿ ಎಷ್ಟು ಮನೆಗಳನ್ನ ಕಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಕಳೆದ ತಿಂಗಳು ನಾನು ಐದು ಲಕ್ಷ ಮನೆಗಳನ್ನ ಮಂಜೂರು ಮಾಡಿದ್ದೇನೆ. ಹಾನಗಲ್ ತಾಲೂಕಿಗೆ 7400 ಮನೆಗಳನ್ನ ಮಂಜೂರು ಮಾಡಿದ್ದೇವೆ. ಬಡವರ ಮನೆ ಕಟ್ಟೋ ಕೊಡುಗೆ, ಕೆರೆಗಳಿಗೆ ನೀರು ತುಂಬೋ ಕೊಡುಗೆ. ಕೋವಿಡ್ ಸಮಯದಲ್ಲಿ ಜನರ ರಕ್ಷಣೆ ಮಾಡೋ ಕೊಡುಗೆ ಕೊಟ್ಟಿದ್ದೇವೆ. ಇಷ್ಟೆಲ್ಲ ಇದ್ದರೂ ಸಿದ್ದರಾಮಯ್ಯ ಬಿಜೆಪಿಯವರಿಗೆ ಏನು ಕೊಡುಗೆ ಕೊಟ್ಟಿದ್ದೀರಿ ಅಂತಾರೆ.ಎಲ್ಲ ಸಮುದಾಯಗಳನ್ನ ಸಮನಾಗಿ ನೋಡುವಂಥಾ ಸರ್ಕಾರ ನಮ್ಮದು. ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಲು ನಾನು ಬಿಡೋದಿಲ್ಲ. ಎಲ್ಲರಿಗೂ ನ್ಯಾಯ ಕೊಡೋ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.