ಮಡಿಕೇರಿ: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿದ್ದು, ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಜೂನ್ ತಿಂಗಳಿಗೆ ಹೋಲಿಸಿದರೆ ಜುಲೈ ಹಾಗೂ ಆಗಸ್ಟ್ ಆರಂಭದಲ್ಲಿ ತಕ್ಕಮಟ್ಟಿನ ಮಳೆಯಾಗಿತ್ತು. ಆದರೆ ಈ ವರ್ಷ ವಾಡಿಕೆಗಿಂತ ಕಮ್ಮಿ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಒಂದೆಡೆ ಮೋಡ ಬಿತ್ತನೆ ಮಾಡಲು ಚಿಂತನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಇನ್ನೊಂದೆಡೆ ದೇವರ ಮೊರೆ ಹೋಗಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ದೇಶನದ ಮೇರೆಗೆ ಕೃಷಿ ಹಾಗೂ ಕೊಡಗು ಉಸ್ತುವಾರಿ ಸಚಿವ ಪಿಎಂ ನರೇಂದ್ರಸ್ವಾಮಿ ಭಾನುವಾರ ಮುಂಜಾನೆ ಪುಣ್ಯಕ್ಷೇತ್ರ ವಿರಾಜಪೇಟೆ ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತ್ತಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ರಾಜ್ಯಕ್ಕೆ ಒಳ್ಳೆಯ ಮಳೆಯಾಗುವಂತೆ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನರೇಂದ್ರಸ್ವಾಮಿ, ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ವತಿಯಿಂದ ಹೆಚ್ಚಿನ ಮಳೆಗಾಗಿ ಪುಣ್ಯಕ್ಷೇತ್ರ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಲಾಗಿದೆ. ತಾಯಿ ಕಾವೇರಿ ಹಾಗೂ ಪಾಡಿ ಶ್ರೀ ಇಗ್ಗುತಪ್ಪ ಪುಣ್ಯಭೂಮಿಯಲ್ಲಿ ಹೆಚ್ಚಿನ ಮಳೆಯಾದರೆ ನಾಡಿನ ಜಲಾಶಯಗಳು ಭರ್ತಿಯಾಗಿ, ಉತ್ತಮ ಬೆಳೆಯ ಜೊತೆಗೆ ಕುಡಿಯುವ ನೀರು ಸಹ ಸಿಗಲಿದೆ. ಹಾಗಾಗಿ ಕಾವೇರಿ ಮತ್ತು ಇಗ್ಗುತಪ್ಪ ನಾಡಿನಲ್ಲಿ ಮುಂದಿನ ದಿನಗಳಲ್ಲಾದರೂ ಹೆಚ್ಚಿನ ಮಳೆಯಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ಕಾವೇರಿ ನದಿ ಪಾತ್ರದಲ್ಲಿ ಸರಾಸರಿ ಮಳೆ ಆಗುವುದರಿಂದ ಅಂತರ ರಾಜ್ಯ ಜಲ ವಿವಾದಗಳು ಬಗೆಹರಿಯುತ್ತವೆ. ಶೇ. 90ರಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ರಾಜ್ಯ ಸರ್ಕಾರ ಎಲ್ಲರ ವಿಶ್ವಾಸ ಗಳಿಸಿ ಶುಭ ಹೆಜ್ಜೆ ಇಟ್ಟಿದೆ. ಮಳೆಯ ಅಭಾವದಿಂದ ಸಮಸ್ಯೆ ಉಂಟಾಗಿದ್ದು ದೇವರಲ್ಲಿ ಹೆಚ್ಚಿನ ಮಳೆಗಾಗಿ ಪ್ರಾರ್ಥಿಸಲಾಗಿದೆ ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು. ಶಾಶ್ವತವಾಗಿ ಕಾಡಾನೆಗಳ ಹಾವಳಿ ನಿಯಂತ್ರಿಸಲು ಸರ್ಕಾರ ಅಗತ್ಯ ಕ್ರಮವಹಿಸಿದೆ. ಆದರೂ ಪ್ರವಾಸಿಗರು, ಕಾರ್ಮಿಕರು ಸೇರಿದಂತೆ ಎಲ್ಲರೂ ಎಚ್ಚರ ವಹಿಸಬೇಕಿದೆ ಎಂದು ಹೇಳಿದರು.

ಈ ವೇಳೆ ವಿರಾಜಪೇಟೆಯ ಶಾಸಕ ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮತ್ತಿರರರು ಉಪಸ್ಥಿತರಿದ್ದರು.






