ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯಗಳಿಗೆ ಬೆದರಿಕೆ ಹಾಕಿದ ಆರೋಪದ ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಕೆಲವರನ್ನು ಬಂಧಿಸಲಾಗಿದ್ದು, ಇನ್ನೂ ಕೆಲ ಆರೋಪಿಗಳು ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ.

ಈ ನಡುವೆ ಪೊಲೀಸರ ಸಂಪರ್ಕಕ್ಕೆ ಸಿಗದೆ ಇದ್ದ ಆರೋಪಿಗಳಲ್ಲಿ ಒಬ್ಬನಾದ ಗೌರವ್ ಶೆಟ್ಟಿ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾನೆ ಎನ್ನಲಾಗಿದೆ. ವಿಜಯಲಕ್ಷ್ಮಿ ಇತ್ತೀಚೆಗೆ ಮಂಗಳೂರಿಗೆ ತೆರಳಿ ದೈವಾರಾಧನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಗೌರವ್ ಶೆಟ್ಟಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಾಕ್ಷ್ಯಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಪುನೀತ್, ಸುಹಾಸ್ ಹಾಗೂ ವೇಣು ಎಂಬುವರನ್ನು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಗೌರವ್ ಶೆಟ್ಟಿ ಮತ್ತು ಕಿರಣ್ ರೆಡ್ಡಿ ಕೂಡ ಆರೋಪಿಗಳಾಗಿದ್ದಾರೆ. ಪುನೀತ್ ಜೊತೆ ಗೌರವ್ ಶೆಟ್ಟಿ ಮತ್ತು ಕಿರಣ್ ರೆಡ್ಡಿ ಸಂಪರ್ಕದಲ್ಲಿದ್ದ ವಿಚಾರ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಬಹಿರಂಗವಾಗಿತ್ತು ಎನ್ನಲಾಗಿದೆ. ಪುನೀತ್ ಬಂಧನದ ಬಳಿಕ ಇಬ್ಬರೂ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಪೊಲೀಸರ ಸಂಪರ್ಕಕ್ಕೆ ಸಿಗದೆ ಇದ್ದರು ಎನ್ನಲಾಗಿದೆ. ಇದೀಗ ಗೌರವ್ ಶೆಟ್ಟಿ ಮಂಗಳೂರಿನಲ್ಲಿ ವಿಜಯಲಕ್ಷ್ಮಿ ಅವರೊಂದಿಗೆ ಕಾಣಿಸಿಕೊಂಡಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.







