ಬಿಎಂಟಿಸಿ ಬಸ್ಸುಗಳು ಎಲ್ಲಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಸರಿಯಾಗಿ ಬ್ರೇಕ್ ಹಿಡಿಯುತ್ತಿಲ್ವಂತೆ. ಇದರಿಂದ ಪ್ರತಿದಿನ ಡಿಪೋದಿಂದ ಬಸ್ ಹೊರ ತೆಗೆಯಲು ಡ್ರೈವರ್ ಕಂಡಕ್ಟರ್ ಭಯ ಬೀಳುತ್ತಿದ್ದಾರೆ. ಕಾರಣ ಡಿಪೋಗಳಲ್ಲಿ ಸ್ಪೇರ್ ಪಾರ್ಟ್ಸ್ ಕೊರತೆ ಎದುರಾಗಿದೆಯಂತೆ. ಅಧಿಕಾರಿಗಳನ್ನು ಕೇಳಿದ್ರೆ ಅಡ್ಜೆಸ್ಟ್ ಮಾಡ್ಕೊಂಡು ಡ್ಯೂಟಿ ಮಾಡ್ರಿ ಅಂತಿದ್ದಾರಂತೆ. ಆಕ್ಸಿಡೆಂಟ್ ಆದರೆ ಮಾತ್ರ ಅದಕ್ಕೆ ಡ್ರೈವರ್ ಕಂಡಕ್ಟರ್ ಕಾರಣ ಅಂತ ಶಿಕ್ಷೆ ನೀಡಲಾಗುತ್ತಿದೆ.
ಬಿಎಂಟಿಸಿಯಲ್ಲಿ ಸ್ಪೇರ್ ಪಾರ್ಟ್ಸ್ ಖರೀದಿ ಮಾಡಲು ಹಣ ಇಲ್ವಾ.?
ಬಿಎಂಟಿಸಿಯಲ್ಲಿ ಒಟ್ಟು 5600 ಬಸ್ಸುಗಳಿವೆ. ಈ ಪೈಕಿ 860 ಬಸ್ಸುಗಳು ವೋಲ್ವೋ ಬಸ್ಸುಗಳು. ಈಗಾಗಲೇ ಕೊರೋನಾ ಅಂತ ಬಹುತೇಕ ಪ್ರಯಾಣಿಕರು ಎಸಿ ಬಸ್ಸುಗಳಲ್ಲಿ ಓಡಾಡುತ್ತಿಲ್ಲ. ನಲವತ್ತೋ.. ಐವತ್ತೋ ಬಸ್ ಗಳು ಮಾತ್ರ ಸದ್ಯ ಸಂಚಾರ ಮಾಡುತ್ತಿದೆ. ಉಳಿದಂತೆ 4800 ಬಸ್ಸುಗಳಲ್ಲಿ ಸುಮಾರು 450 ರಿಂದ 500 ಬಸ್ಸುಗಳು ಡಿಪೋಗಳಲ್ಲಿ ನಿಂತು ನಿಂತು ತುಕ್ಕು ಹಿಡಿಯುವಂತಾಗಿದೆ. ಇದಕ್ಕೆ ಕಾರಣ ಏನು ಅಂತ ನೋಡಿದರೆ ಬಸ್ ಗಳ ರಿಪೇರಿಗೆ ಬಿಎಂಟಿಸಿ ಗ್ಯಾರೇಜ್ ನಲ್ಲಿ ಸ್ಪೇರ್ ಪಾರ್ಟ್ಸ್ ಕೊರತೆ ಇದೆ ಎನ್ನಲಾಗಿದೆ. ಈ ಬಗ್ಗೆ ಬಿಎಂಟಿಸಿಯೇ ಕಲೆ ಹಾಕಿರುವ ಮಾಹಿತಿ ಪಟ್ಟಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.
ಬ್ರೇಕ್ ಲೈನರ್, ಕ್ಲಚ್ ಪ್ಲೇಟ್, ಬ್ಯಾಟರಿ, ಜಾಯಿಂಟ್ ಟ್ಯೂಬ್ ಟೈರ್ ಹಾಗೂ ರೆಡಿಯೇಟರ್ ಫ್ಯಾನ್ ಸಣ್ಣಪುಟ್ಟ ಸ್ಪೇರ್ ಪಾರ್ಟ್ಸ್ ಇಲ್ಲದೆ ಡಿಪೋಗಳಲ್ಲಿ ಬಸ್ಸುಗಳು ನಿಂತಿವೆ. ಇದಕ್ಕೆ ಕಾರಣ ಅಂದರೆ ಸ್ಪೇರ್ ಪಾರ್ಟ್ಸ್ ಖರೀದಿ ಮಾಡಲು ಬಿಎಂಟಿಸಿಯಲ್ಲಿ ಹಣವಿಲ್ಲ ಎಂಬ ಉತ್ತರ ಅಧಿಕಾರಿಗಳಿಂದ ಲಭ್ಯವಾಗುತ್ತಿದೆ. ಹಿಂದೆ ಖರೀದಿ ಮಾಡಿದ್ದ ಸಾಕಷ್ಟು ವಸ್ತುಗಳು ಕಳಪೆಯಾಗಿವೆ. ಹೀಗಾಗಿ ಬಸ್‌ಗಳನ್ನು ಸುಸಜ್ಜಿತವಾಗಿ ರಸ್ತೆಗಿಳಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಈಗಾಗಲೇ ನಗರದಾದ್ಯಂತ ಬಿಎಂಟಿಸಿ ಬಸ್‌ಗಳು ಅಲ್ಲಲ್ಲಿ ಕೈ ಕೊಡುತ್ತಿವೆ. ಪ್ರಯಾಣಿಕರು ಬಿಎಂಟಿಸಿ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ನೌಕರರ ಒಕ್ಕೂಟದ ಮುಖಂಡ ಆನಂದ್, ಬಿಎಂಟಿಸಿ ಸೂಕ್ತ ರೀತಿಯ ವ್ಯವಸ್ಥೆ ಮಾಡಿ ಕೊಡದೆ ಬಸ್‌ಗಳಿಂದ ಏನಾದರು ಅನಾಹುತವಾದರೆ ಅದಕ್ಕೆ ಸಿಬ್ಬಂದಿಗಳನ್ನು ಹೊಣೆ ಮಾಡುತ್ತಾರೆ ಎಂದರು.

ಬ್ರೇಕ್ ಫೇಲ್ ಆಗಿ ಆಕ್ಸಿಡೆಂಟ್ ಆದ್ರೆ ಅಮಾಯಕರ ಪ್ರಾಣಕ್ಕೆ ಯಾರು ಹೊಣೆ?
ಇನ್ನೂ ಈಗಾಗಲೇ ನಗರದಲ್ಲಿ ಕಂಡ ಕಡೆಗಳಲ್ಲಿ ಬಿಎಂಟಿಸಿ ಬಸ್ಸುಗಳು ಬ್ರೇಕ್ ಡೌನ್ ಆಗಿ ನಿಲ್ಲುತ್ತಿವೆ. ಬ್ರೇಕ್ ಫೇಲ್ ಆಗಿ ಆಕ್ಸಿಡೆಂಟ್ ಗಳೂ ಆಗಿರುವ ಘಟನೆಗಳಿವೆ. ಇದಕ್ಕೆ ಕಾರಣ ಅಂದರೆ ಬಿಡಿಭಾಗಗಳು ಸವೆದು ಹೋಗಿರುವುದು. ಹೊಸ ಬಿಡಿ ಭಾಗಗಳನ್ನು ತರಿಸಿಕೊಳ್ಳಲು ಕೇಳಿಕೊಂಡರೆ ಅಧಿಕಾರಿಗಳು ಈ ಬಗ್ಗೆ ತಲೆಯೇ ಕೆಡಿಸಿಕೊಳ್ಳುತ್ತಿಲ್ಲವಂತೆ. ಸದ್ಯ ಗ್ಯಾರೇಜ್‌ಗಳಿಗೆ ಪೂರೈಕೆ ಆಗುತ್ತಿರುವ ಬಿಡಿ ಭಾಗಗಳು ಕಳಪೆ ಗುಣ ಮಟ್ಟದ್ದು ಹಾಗೂ ಸೆಕೆಂಡ್ ಹ್ಯಾಂಡ್ ವಸ್ತುಗಳೂ ಎಂಬ ಆರೋಪವು ಇದೆ. ಹೀಗಾಗಿ ಬಸ್‌ಗಳು ತನ್ನ ಆಯಸ್ಸಿಗೂ ಮುಂಚಿತವಾಗಿ ಸ್ಕ್ರಾಪ್‌ಗೆ ಹೋಗುವ ಸಂಭವ ಎದುರಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಸದ್ಯ ಕೊರೋನಾ ಅಂತ ಉತ್ತಮ ಗುಣ ಮಟ್ಟದ ಬಸ್‌ಗಳನ್ನು ರಸ್ತೆಗೆ ಇಳಿಸುತ್ತಿಲ್ಲ. ಮುಂದಿನ ದಿನದಲ್ಲಿ ಒಳ್ಳೆಯ ಬಸ್‌ಗಳನ್ನು ರಸ್ತೆಗೆ ಇಳಿಸಿ ಸೇವೆ ಒದಗಿಸಲಾಗುವುದು ಎಂದು ಆಫ್ ದಿ ರೆಕಾರ್ಡ್ ಮಾಹಿತಿ ಕೊಟ್ಟಿದ್ದಾರೆ.
ಒಟ್ಟಾರೆಯಾಗಿ ಬಿಎಂಟಿಸಿಯಲ್ಲಿ ಬಿಡಿ ಭಾಗಗಳು ಇಲ್ಲದೆ ಸಾಕಷ್ಟು ಬಸ್ಸುಗಳು ಸಂಚಾರ ಮಾಡುತ್ತಿವೆ. ಇದರಿಂದ ಏನಾದರೂ ಅನಾಹುತವಾದರೆ ಚಾಲಕ ಕೆಲಸ ಕಳೆದುಕೊಳ್ಳುತ್ತಾನೆ. ಅಮಾಯಕರು, ಕಾರು, ಬೈಕ್ ಸವಾರರು ಪ್ರಾಣ ಕಳೆದುಕೊಳ್ಳುತ್ತಾರೆ. ಕೂಡಲೇ ಈ ಬಗ್ಗೆ ಸಾರಿಗೆ ಸಚಿವ ಶ್ರೀ ರಾಮುಲು ಅವರು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.