ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಮುಂಜಾನೆ ಸಮಯದಲ್ಲಿ ತೆರೆಯುತ್ತಿದ್ದ ಬಿರಿಯಾನಿ ಸೆಂಟರ್‌ಗಳು ಹಾಗೂ ಕೆಲವು ಹೋಟೆಲ್‌ಗಳ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಮುಂಜಾನೆ 4 ಗಂಟೆಯಿಂದಲೇ ಬಿರಿಯಾನಿ ಸೆಂಟರ್‌ಗಳನ್ನು ತೆರೆಯುತ್ತಿರುವುದರಿಂದ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗಿ, ಕೆಲವೆಡೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇದರ ಜೊತೆಗೆ ಅಪಘಾತ, ಗಲಾಟೆ ಹಾಗೂ ಕಳ್ಳತನದಂತಹ ಘಟನೆಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್ ಮತ್ತು ಬಿರಿಯಾನಿ ಸೆಂಟರ್ ಮಾಲೀಕರ ಸಭೆ ನಡೆಸಿದ್ದು, ಬಿರಿಯಾನಿ ಸೆಂಟರ್‌ಗಳನ್ನು ಬೆಳಗ್ಗೆ 6 ಗಂಟೆಯ ನಂತರವಷ್ಟೇ ತೆರೆಯಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಎಸ್‌ಟಿಆರ್ ರಸ್ತೆ ಹಾಗೂ ಜಾಲರಹಳ್ಳಿ ಭಾಗದಲ್ಲಿ ಮುಂಜಾನೆ ಬಿರಿಯಾನಿಗಾಗಿ ಬರುವವರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಮತ್ತು ಕೆಲವು ಅಪಘಾತಗಳು ಸಂಭವಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಿನ ಜಾವದ ವ್ಯಾಪಾರಕ್ಕೆ ಸಮಯದ ನಿರ್ಬಂಧ ವಿಧಿಸಲಾಗಿದೆ.

ಇನ್ನು ಟೋಲ್ ಗೇಟ್ ಸುತ್ತಮುತ್ತಲಿನ ಅಂಗಡಿಗಳನ್ನು ರಾತ್ರಿ 11 ಗಂಟೆಯ ನಂತರ ತೆರೆಯಬಾರದು, ಹೋಟೆಲ್ ಮತ್ತು ಬಿರಿಯಾನಿ ಸೆಂಟರ್‌ಗಳ ಆವರಣದಲ್ಲಿ ಮದ್ಯಪಾನಕ್ಕೆ ಅವಕಾಶ ನೀಡಬಾರದು, ಮುಂಜಾನೆ ಬರುವ ಗ್ರಾಹಕರಿಂದ ಗಲಾಟೆ ಅಥವಾ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಒಂದು ವೇಳೆ ಪೊಲೀಸರು ನೀಡಿರುವ ನಿಯಮಗಳನ್ನು ಉಲ್ಲಂಘಿಸಿದರೆ ಅಂತಹ ಹೋಟೆಲ್‌ಗಳು ಮತ್ತು ಬಿರಿಯಾನಿ ಸೆಂಟರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.







