ಬೀದರ್: ರಾಜಕೀಯದವರೇ ರಾಷ್ಟ್ರವನ್ನು ನಡೆಸುತ್ತೇವೆ. ನಾವುಗಳೇ ಬಿಲ್’ಗಳನ್ನು ಪಾಸ್ ಮಾಡುತ್ತೇವೆ. ಹಾಗಾಗಿ ಮಕ್ಕಳಿಗೆ ರಾಜಕೀಯ ಪ್ರಜ್ಞೆ ಇರಬೇಕು ಎಂದು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಗುನ್ನಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕೆಕೆಆರ್’ಡಿಬಿಯ 2022-23ನೇ ಸಾಲಿನ ಮೈಕ್ರೋ ಯೋಜನೆಯಡಿಯಲ್ಲಿ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆಡಿಟೋರಿಯಂ ಹಾಲ್’ಗೆ ಬುಧವಾರ ಅಡಿಗಲ್ಲು ಹಾಕಿದರು.
ನಂತರ ಮಾತನಾಡಿದ ಅವರು, ಬಸವಣ್ಣನವರ ಕಾಲದಲ್ಲಿ ಸಾಮಾಜಿಕ ಕ್ರಾಂತಿಯಾಗಿದೆ. ಈಗ ಶಿಕ್ಷಣದಲ್ಲಿ ಕ್ರಾಂತಿಯಾಗಬೇಕಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಿಸಬೇಕಾಗಿದೆ. ಕಲ್ಲನ್ನು ಶಿಲ್ಪಿಯೂ ಶಿಲೆಯನ್ನಾಗಿ ಮಾಡಿದಂತೆ ಶಿಕ್ಷಕರು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುತ್ತಾರೆ. ಮಕ್ಕಳು ವಜ್ರವಿದ್ದಂತೆ, ಶಿಕ್ಷಕರು ವಜ್ರವನ್ನು ಶೋಧಿಸಿ ತೆಗೆಯುವ ಕೆಲಸ ಮಾಡುತ್ತಾರೆ ಎಂದರು.
ಅತ್ಯುತ್ತಮ ಸಾಧನೆ ಮಾಡಿದ ಬಹುತೇಕ ಸಾಧಕರು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲೇ ಕಲಿತವರಾಗಿದ್ದಾರೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ. ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ನಿವಾರಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದು ಹೇಳಿದರು.
ಗುನ್ನಳ್ಳಿ ಗ್ರಾಮದಲ್ಲಿನ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸುವಂತೆ ಸಂಬಂಧಿಸಿದವರಿಗೆ ತಿಳಿಸಿದ್ದೇನೆ. ಗುನ್ನಳ್ಳಿ ಶಾಲೆಯಲ್ಲಿನ ನೀರಿನ ಕೊರತೆ ನಿವಾರಿಸುವ ಮತ್ತು ಶೌಚಾಲಯ ನಿರ್ಮಿಸಿ ಕೊಡುವ ಕೆಲಸವನ್ನು ಶೀಘ್ರದಲ್ಲೇ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ವೀರೇಂದ್ರ ಮಾಲಿಪಾಟೀಲ್, ಪವನ್ ಪೊಲೀಸ್ ಪಾಟೀಲ್, ಬಸವರಾಜ ಬಿರಾದಾರ್, ರಮೇಶ್ ಬಿರಾದಾರ, ಸರಸ್ವತಿ, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ಮಕ್ಕಳು, ಗ್ರಾಮಸ್ಥರು ಸೇರಿದಂತೆ ಅನೇಕರಿದ್ದರು.