ಗುತ್ತಿಗೆದಾರರ ಬಾಕಿ ಬಿಲ್ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶುಕ್ರವಾರ (ಆಗಸ್ಟ್ 11) ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. “ನಾವು ಲಂಚದ ಹಿಂದೆ ಬಿದ್ದಿಲ್ಲ. ಲಂಚದ ಹಗೃಣದ ಆರೋಪಿಗಳ ಬೆನ್ನು ಬಿದ್ದಿದ್ದೇವೆ” ಎಂದು ತಿವಿದಿದ್ದಾರೆ.
ಆರೋಪಗಳಿಗೆ ಟ್ವೀಟ್ ಮೂಲಕ ವಿವರವಾದ ಹೇಳಿಕೆ ನೀಡಿರುವ ಅವರು ಗುತ್ತಿಗೆದಾರರು ಮಾಡಿರುವ ಮನವಿ ಪತ್ರವನ್ನು ಹಂಚಿಕೊಂಡಿದ್ದಾರೆ.
“ನಾವು ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಗರಣಗಳನ್ನು ತನಿಖೆ ಮಾಡಿಸುವ ಭರವಸೆ ನೀಡಿದ್ದೆವು. ಮತದಾರರು ನಮಗೆ ಬಿಜೆಪಿಯ ಭ್ರಷ್ಟಾಚಾರ, ಕಮಿಷನ್ ಹಾವಳಿ, ತೆರಿಗೆ ಲೂಟಿಯ ವಿರುದ್ಧ ಮತ ಚಲಾಯಿಸಿ 135 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಸುಭದ್ರ, ಸುಸ್ಥಿರ ಸರ್ಕಾರ ರಚನೆಗೆ ಅವಕಾಶ ನೀಡಿದ್ದಾರೆ. ಈಗ ಜನರಿಗೆ ನೀಡಿದ್ದ ಮಾತು ಪಾಲನೆ ನಮ್ಮ ಕರ್ತವ್ಯವಾಗಿದ್ದು ಬಿಜೆಪಿ ಸರ್ಕಾರದ ಶೇ 40 ಕಮಿಷನ್ ಹಗರಣವನ್ನು ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
“ಬಿಜೆಪಿ ಅವಧಿಯಲ್ಲಿ ಕಾಮಗಾರಿಯನ್ನೇ ನಡೆಸದೆ, ಹಳೆಯ , ಅರ್ಧಂಬರ್ದ ಕೆಲಸ ಮಾಡಿದ ಕಾಮಗಾರಿಗಳಿಗೆ ಬಿಲ್ ಹಣ ಪಡೆಯಲಾಗಿದೆ. ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿಯು ಈ ಎಲ್ಲಾ ಹಗರಣಗಳ ಕುರಿತು ತನಿಖೆ ನಡೆಸುತ್ತಿದ್ದು, ತನಿಖೆ ಪೂರ್ಣವಾಗಿ ವರದಿ ಬರುವ ಮೊದಲೇ ಬಾಕಿಯಿರುವ ಬಿಲ್ ಹಣ ಬಿಡುಗಡೆ ಮಾಡುವುದು ಸಮಂಜಸವಲ್ಲ” ಎಂದು ಗುತ್ತಿಗೆದಾರರಿಗೆ ಹೇಳಿದ್ದಾರೆ.
“ನ್ಯಾಯಯುತವಾಗಿ ಕಾಮಗಾರಿ ಮಾಡಿದ ಯಾವೊಬ್ಬ ಗುತ್ತಿಗೆದಾರನಿಗೂ ಅನ್ಯಾಯವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ಭಯ ಬೇಡ. ಆದರೆ ಉಪ್ಪು ತಿಂದವರು ನೀರು ಕುಡಿಯಬೇಕಲ್ಲವೇ?”.
“ನಮ್ಮ ಮೇಲಿನ ಆರೋಪಗಳನ್ನು ಸವಾಲಿನಂತೆ ಸ್ವೀಕರಿಸಿ, ಈ ಅಗ್ನಿಪರೀಕ್ಷೆಯಲ್ಲಿ ಗೆದ್ದುಬಂದು ನಮ್ಮದು ಬರೀ ಉತ್ತಮವಲ್ಲ ಅತ್ಯುತ್ತಮ, ಪಾರದರ್ಶಕ, ಜನಪರ ಸರ್ಕಾರ ಎಂಬುದನ್ನು ನಾಡಿನ ಜನತೆಯೆದುರು ಸಾಬೀತು ಮಾಡುತ್ತೇವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
“ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಬಾಕಿ ಬಿಲ್ ಹಣ ಪಾವತಿ ಮಾಡುತ್ತಿಲ್ಲ. ಹೀಗಾಗಿ ರಾಹುಲ್ ಗಾಂಧಿಯವರು ಮಧ್ಯ ಪ್ರವೇಶಿಸಿ ಬಿಲ್ ಹಣ ಬಿಡುಗಡೆ ಮಾಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒತ್ತಾಯಿಸಿದ್ದಾರೆ. ಆದರೆ ರಾಜ್ಯ ಸರ್ಕಾರಗಳಿಗೆ ಸೂಚನೆ, ನಿರ್ದೇಶನ ನೀಡುವ ಅಧಿಕಾರವಿರುವುದು ದೇಶದ ಪ್ರಧಾನಿಗಳಿಗೆ, ನರೇಂದ್ರ ಮೋದಿ ಅವರು ಮಾಡಬೇಕಿರುವ ಕೆಲಸವನ್ನು ರಾಹುಲ್ ಗಾಂಧಿಯವರಿಗೆ ಹೇಳುವುದು ತರವಲ್ಲ” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಅಚ್ಚರಿ ಆದರೂ ಸತ್ಯ ! ಕಳವಾದ ಮೊಬೈಲ್‌ಗಳ ಪತ್ತೆಯಲ್ಲಿ ದೇಶದಲ್ಲೇ ಕರ್ನಾಟಕವೇ ಮೊದಲು
“ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘದವರು ಬಾಕಿ ಬಿಲ್ ಹಣ ಬಿಡುಗಡೆಗೆ ಸಂಬಂಧಿಸಿದಂತೆ ನನ್ನೊಂದಿಗೆ ಚರ್ಚಿಸಿದ್ದಾರೆ, ಪಿಒಡಬ್ಲ್ಯು ಕಾಮಗಾರಿಗಳ ಬಿಲ್ ಅನ್ನು ಬಿಡುಗಡೆ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ. ಕಾಮಗಾರಿಗಳ ಬಿಲ್ ಬಿಡುಗಡೆಗೆ ಸಂಬಂಧಿಸಿದಂತೆ ಇರುವ ಕೆಲವು ಸಾಮಾನ್ಯ ಪ್ರಕ್ರಿಯೆಗಳು ಮುಗಿದ ಕೂಡಲೇ ಈ ಹಣವನ್ನು ಬಿಡುಗಡೆ ಮಾಡಲಾಗುತ್ತದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
“ಕೆಲವು ಗುತ್ತಿಗೆದಾರರು ತಮ್ಮ ಸ್ವಾರ್ಥ ಹಾಗೂ ದುರುದ್ದೇಶದ ಈಡೇರಿಕೆಗಾಗಿ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆಂದು ಸ್ವತಃ ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘದವರೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ನಮ್ಮದು ಕಮಿಷನ್ ಹಿಂದೆ ಬಿದ್ದಿರುವ ಸರ್ಕಾರವಲ್ಲ” ಎಂದು ಸ್ಪಷ್ಟಪಡಿಸಿದರು.