ಬೆಂಗಳೂರು: ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬಹಿರಂಗ ಪತ್ರ ಬರೆದು, ಕರ್ನಾಟಕ ಸರ್ಕಾರದ ಯೋಜನೆಗಳು ಹಾಗೂ ಪರಿಸರದ ಮೇಲೆ ಅದರ ಪರಿಣಾಮ ಸಂಬಂಧಿತ ಪ್ರಮುಖ ವಿಚಾರಗಳಲ್ಲಿ ಮೌನ ಮುರಿಯುವಂತೆ ಒತ್ತಾಯಿಸಿದ್ದಾರೆ.

ಕರ್ನಾಟಕದ ಚಿಂತನಾಶೀಲ ನಾಗರಿಕರು ಮತ್ತು ಪರಿಸರ ನ್ಯಾಯದ ಹೋರಾಟಗಾರರಾದ ನಾವು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೋದಿ ಆಡಳಿತದ ಗ್ರೇಟ್ ನಿಕೋಬಾರ್ ಐಲ್ಯಾಂಡ್ ಪ್ರಾಜೆಕ್ಟ್ (GNIP) ಒಡ್ಡಿರುವ ಪರಿಸರ ವಿನಾಶ ಮತ್ತು ಪರಿಸರ ಅಪಾಯಗಳ ಬಗ್ಗೆ ನಿಮ್ಮ ವಿರೋಧವನ್ನು ಗುರುತಿಸಿ ಗೌರವಿಸುತ್ತೇವೆ ಎಂದಿರುವ ಚೇತನ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಪರಿಸರ ವಿನಾಶವು ರಾಷ್ಟ್ರೀಯ ಆಕ್ರೋಶಕ್ಕೆ ಅರ್ಹವಾಗಿದ್ದರೆ, ಅದೇ ನೈತಿಕ ಮಾನದಂಡವು ನಿಮ್ಮದೇ ಪಕ್ಷದ ಆಡಳಿತವಿರುವ ರಾಜ್ಯಗಳನ್ನೂ ಒಳಗೊಂಡಂತೆ ಎಲ್ಲೆಡೆಯೂ ಅನ್ವಯಿಸಬೇಕು.

ಅದಕ್ಕಾಗಿಯೇ, ಕರ್ನಾಟಕದ ಪರಿಸರ ಬಿಕ್ಕಟ್ಟುಗಳ ಬಗ್ಗೆ ನಿಮ್ಮ ಮೌನವನ್ನು ಅರ್ಥಮಾಡಿಕೊಳ್ಳುವುದು ನಮಗೆ ಅತ್ಯಂತ ಕಷ್ಟಕರವಾಗಿದೆ. ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಅರಣ್ಯಗಳು, ನದಿಗಳು, ಜೀವವೈವಿಧ್ಯತೆ ಮತ್ತು ಸ್ಥಳೀಯ ಸಮುದಾಯಗಳನ್ನು ರಕ್ಷಿಸುವ ಅಧಿಕಾರವನ್ನು ಹೊಂದಿದೆ. ಆದರೆ ಬದಲಾಗಿ, ನಿಮ್ಮ ಪಕ್ಷದ ನಾಯಕತ್ವದ ಬೆಂಬಲದೊಂದಿಗೆ ಪರಿಸರಕ್ಕೆ ಸಂಬಂಧಿಸಿದ ಹಲವು ವಿವಾದಾತ್ಮಕ ಯೋಜನೆಗಳು ನಿರಂತರವಾಗಿ ಮುಂದುವರಿಯುತ್ತಿವೆ ಎಂದು ಆರೋಪಿಸಿದ್ದಾರೆ.
ಈ ಪ್ರತ್ರದಲ್ಲಿ ಕರ್ನಾಟಕದಲ್ಲಿ ಮೂರು ಪ್ರಮುಖ ಪರಿಸರ ಹೋರಾಟಗಳನ್ನು ಉಲ್ಲೇಖಿಸಿರುವ ಅವರು, ತಮ್ಮ ಪ್ರಮುಖ ಬೇಡಿಕೆಗಳನ್ನು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟಿದ್ದಾರೆ. ಅಲ್ಲದೇ ಕರ್ನಾಟಕ ಸರ್ಕಾರ ಕೈಗೊಳ್ಳುತ್ತಿರುವ ಈ ಮೂರು ಪರಿಸರ ವಿರೋಧಿ ಯೋಜನೆಗಳಿಂದ ಆಗುವ ಹಾನಿಯ ಬಗ್ಗೆ ಸವಿವರವಾಗಿ ವಿವರಿಸಿದ್ದಾರೆ.

ಮೂರು ಪ್ರಮುಖ ಬೇಡಿಕೆಗಳು
1.ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಕೈಬಿಡಬೇಕು ಮತ್ತು ಬೆಂಗಳೂರಿಗೆ ಸುಸ್ಥಿರ ಹಾಗೂ ಪರಿಸರ ಸ್ನೇಹಿ ನೀರು ಪೂರೈಕೆ ವಿಧಾನಗಳನ್ನು ಜಾರಿಗೆ ತರಬೇಕು.
2.ಗಣಿಗಾರಿಕೆ ಅನುಮತಿಗಳಿಗಿರುವ ಸಿಂಗಲ್ ವಿಂಡೋ (ಏಕ ಗವಾಕ್ಷಿ) ಆಯ್ಕೆಯನ್ನು ರದ್ದುಪಡಿಸಬೇಕು, ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಗಣಿಗಾರಿಕೆ ಲಾಭದ ಮೇಲಿನ ರಾಜ್ಯ ತೆರಿಗೆಯನ್ನು ಹೆಚ್ಚಿಸಬೇಕು ಮತ್ತು ಅಕ್ರಮ ಗಣಿಗಾರಿಕೆಯನ್ನು ಶಾಶ್ವತವಾಗಿ ಮಟ್ಟಹಾಕಬೇಕು.
3.ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಮತ್ತು ಅಭಿವೃದ್ಧಿ ಯೋಜನೆಗಳನ್ನು ನಿರ್ಲಕ್ಷ್ಯಕ್ಕೊಳಗಾದ ಮಧ್ಯ ಹಾಗೂ ಉತ್ತರ ಕರ್ನಾಟಕದ ಫಲವತ್ತಲ್ಲದ ಪ್ರದೇಶಗಳಿಗೆ ಬದಲಾಯಿಸಬೇಕು ಎಂದು ಟೀಂ ಅಹಿಂಸಾ ಒತ್ತಾಯಿಸಿದೆ.







