ನವದೆಹಲಿ: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ಗಾಗಿ ಸಿಪಿ ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ. ಈ ವಿಚಾರವಾಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಅವರು ಇದೀಗ ಬೆಂಗಳೂರಿಗೆ ವಾಪಸಾಗಿದ್ದಾರೆ. ಈ ಮಧ್ಯೆ, ಕುಮಾರಸ್ವಾಮಿ ನಿರ್ಧಾರದ ಮೇಲೆ ಸಿಪಿ ಯೋಗೇಶ್ವರ್ ಭವಿಷ್ಯ ನಿಂತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕುಮಾರಸ್ವಾಮಿ ಒಪ್ಪಿದ್ರೆ ಮಾತ್ರ ಯೋಗೇಶ್ವರ್ ಎನ್ಡಿಎಯಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಈ ಮಧ್ಯೆ, ಬಿಜೆಪಿ ಚಿಹ್ನೆಯಿಂದಲೇ ಸ್ಪರ್ಧಿಸಲು ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧೆಗೆ ಧೈರ್ಯ ಮಾಡದ ಯೋಗೇಶ್ವರ್, ಟಿಕೆಟ್ಗಾಗಿ ದೆಹಲಿಯಲ್ಲಿ ಕಸರತ್ತು ನಡೆಸಿದ್ದಾರೆ. ಪ್ರಲ್ಹಾದ್ ಜೋಶಿ ಮೂಲಕ ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯ ನಾಯಕರು ಟಿಕೆಟ್ ವಿಚಾರದಲ್ಲಿ ನನ್ನ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.
ಆಗಸ್ಟ್ 16ರ ಬಳಿಕ ದೆಹಲಿಗೆ ಬರುವುದಾಗಿ ಕೆಲ ನಾಯಕರು ಯೋಗೇಶ್ವರ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆಗಸ್ಟ್ 16ರ ಬಳಿಕ ದೆಹಲಿಗೆ ಬಂದು ಕುಮಾರಸ್ವಾಮಿ ಜತೆ ಚರ್ಚೆ ಮಾಡಲಿದ್ದೇವೆ. ಆಗಸ್ಟ್ 18ರ ಬಳಿಕ ದೆಹಲಿಯಲ್ಲೇ ಕುಮಾರಸ್ವಾಮಿ ಜತೆ ಸಭೆ ನಿಗದಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಆಗಸ್ಟ್ 18ರ ಬಳಿಕ ದೆಹಲಿಗೆ ಬರುವಂತೆ ಯೋಗೇಶ್ವರ್ಗೆ ಹೈಕಮಾಂಡ್ ನಾಯಕರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮಂಗಳವಾರವಷ್ಟೇ ಸಿಪಿ ಯೋಗೇಶ್ವರ್ ಕೆಲವು ಮಂದಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ಸದ್ಯ ಅವರು ದೆಹಲಿಯಿಂದ ಬೆಂಗಳೂರಿಗೆ ಮರಳಿದ್ದಾರೆ.