ಬೆಂಗಳೂರು : ಶ್ರೀಮತಿ ಚನ್ನಮ್ಮ ದೇವೇಗೌಡರು ಬಡ ಜನರು ಮತ್ತು ದುರ್ಬಲರಲ್ಲಿ ದೇವರನ್ನು ಕಾಣುತ್ತಿದ್ದ ಮಾನವತಾಮೂರ್ತಿ. ಕಷ್ಟಗಳನ್ನು ಹೊತ್ತು ಮನೆಗೆ ಬರುತ್ತಿದ್ದವರಿಗೆ ನೆರವು ನೀಡುವ ಆಸರೆಯಾಗಿದ್ದರು ಎಂದು ಗ್ರೇಟರ್ ಬೆಂಗಳೂರು ಜೆಡಿಎಸ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹೆಚ್.ಎಂ. ರಮೇಶಗೌಡ ಭಾವುಕರಾಗಿದ್ದಾರೆ.

ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಇಂದು ಏರ್ಪಡಿಸಲಾಗಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಚನ್ನಮ್ಮ ನಮ್ಮೆಲ್ಲರಿಗೂ ಮಾತೃ ಸಮಾನರು ಆಗಿದ್ದರು, ಬಡವರ ಪಾಲಿಗೆ ಸಾಕ್ಷಾತ್ ಅನ್ನಪೂರ್ಣೇಶ್ವರಿ ತಾಯಿಯೇ ಆಗಿದ್ದರು ಎಂದು ಮಾಜಿ ಪ್ರಧಾನಿ ಪತ್ನಿಯ ಬದುಕಿನ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ಮನೆಗೆ ಯಾರೇ ಹೋದರೂ ಅವರು ಯಾರು, ಏನು, ಎತ್ತ ಎಂದು ಯೋಚಿಸದೇ ಅನ್ನ ನೀಡುತ್ತಿದ್ದರು. ಅವರಲ್ಲಿ ಪ್ರತಿಯೊಬ್ಬರು ತಮ್ಮ ತಾಯಿಯನ್ನು ಕಾಣುತ್ತಿದ್ದರು. ಮನೆಯನ್ನೇ ದೇವಾಲಯ ಎಂದು ಭಾವಿಸಿದ್ದ ಅವರು ಪ್ರತಿದಿನವೂ ತಪ್ಪದೇ ತುಳಸಿಕಟ್ಟೆಗೆ ಪೂಜೆ ಮಾಡುತ್ತಿದ್ದರು. ಸಾತ್ವಿಕತೆ, ಧಾರ್ಮಿಕ ಶ್ರದ್ಧೆ ಹಾಗೂ ಮಾತೃವಾತ್ಸಲ್ಯ ಅವರಲ್ಲಿತ್ತು. ನಮ್ಮನ್ನು ಸ್ವಂತ ಮಕ್ಕಳಿಗಿಂತ ಮಿಗಿಲಾಗಿ ನೋಡುತ್ತಿದ್ದರು. ಅಂತಹ ತಾಯಿ ನಿಧನರಾಗಿದ್ದು ನಮಗೆ ಬಹಳ ದುಃಖ ಉಂಟು ಮಾಡಿದೆ ಎಂದು ರಮೇಶ್ ಗೌಡ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ : ಕೆಪಿಎಸ್‌ಸಿಯಲ್ಲಿ 400 ಹುದ್ದೆಗಳಿಗೆ 800 ಕೋಟಿ ಡೀಲ್ : ಆರ್.ಅಶೋಕ್ ಆರೋಪ
ಚನ್ನಮ್ಮ ಎಂದೂ ರಾಜಕೀಯದ ಬಗ್ಗೆ ಮಾತನಾಡುತ್ತಿರಲಿಲ್ಲ. ಸ್ವತಃ ನನಗೆ ಅನುಭವ ಆದಂತೆ, ನಾನು ಅವರ ಮನೆಗೆ ಹೋದರೆ ಎದುರಿಗೆ ಕಂಡ ಕೂಡಲೇ ಅವರು ಕೇಳುತ್ತಿದ್ದ ಒಂದೇ ಮಾತು ‘ಊಟ ಮಾಡಪ್ಪ’ ಎನ್ನುವುದಾಗಿತ್ತು. ಆ ಸಂದರ್ಭದಲ್ಲಿ ಪ್ರಸಾದವನ್ನು ಅಥವಾ ಹಣ್ಣುನ್ನು ಕೊಟ್ಟು ತಲೆ ಮುಟ್ಟಿ ಆಶೀರ್ವಾದ ಮಾಡುತ್ತಿದ್ದರು. ಅಂತಹ ತಾಯಿಯನ್ನು ಕಳೆದುಕೊಂಡಿದ್ದು ನನಗಂತೂ ಬಹಳ ನೋವು ಉಂಟು ಮಾಡಿದೆ. ಅವರಿಲ್ಲ ಎನ್ನುವ ಶೂನ್ಯವನ್ನು ತುಂಬುವುದು ಬಹಳ ಕಷ್ಟ ಎಂದು ನೋವಿನಿಂದ ನುಡಿದಿದ್ದಾರೆ.
ಬಳಿಕ ಖ್ಯಾತ ಹರಿಕಥೆ ವಿದ್ವಾಂಸರಾದ ಶಿವಾರ ಉಮೇಶ್ ಅವರು ತಮ್ಮ ವೃಂದದೊಂದಿಗೆ ಶ್ರೀಮತಿ ಚನ್ನಮ್ಮ ದೇವೇಗೌಡರವರು ನಡೆದು ಬಂದ ಅವರ ಬದುಕಿನ ದಾರಿಯ ಬಗ್ಗೆ ಗೀತೆಗಳ ಮೂಲಕ ನಮನ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಚನ್ನಮ್ಮ ಅವರ ಭಾವಚಿತ್ರಕ್ಕೆ ನಾಯಕರಲ್ಲರೂ ಪುಷ್ಪವ ನಮನ ಸಲ್ಲಿಸಿದರು. ಪಕ್ಷದ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಶಾಸಕರುಗಳಾದ ಟಿ.ಎ. ಶರವಣ, ಟಿ.ಎನ್.ಜವರಾಯಿಗೌಡ, ಮಾಜಿ ಶಾಸಕರಾದ ಕೆ.ಎ.ತಿಪ್ಪೇಸ್ವಾಮಿ, ಗೊಟ್ಟಿಗೆರೆ ಮಂಜುನಾಥ್, ಆರ್.ಪ್ರಕಾಶ್, ಟಿ.ತಿಮ್ಮೇಗೌಡ, ಹೆಚ್.ಸಿ.ಕೃಷ್ಣ, ನಟರಾಜ್ ಗಂಗಾಧರ್, ಶೈಲಾ ಸಂತೋಜಿ ರಾವ್, ಚಂದನ್, ಟಿ.ಆರ್.ತುಳಸಿರಾಮ್, ಎಸ್ ರಮೇಶ, ಎ.ವಿ.ವೇಣುಗೋಪಾಲ್ ಹಾಗೂ ಪಕ್ಷದ ಇನ್ನಿತರ ಮುಖಂಡರು, ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರ ಅಧ್ಯಕ್ಷರು, ವಿವಿಧ ವಿಭಾಗಗಳ ಅಧ್ಯಕ್ಷರು, ಮಹಿಳಾ ವಿಭಾಗದ ಜಿಬಿಎ ಜಿಲ್ಲಾಧ್ಯಕ್ಷರುಗಳು ಉಪಸ್ಥಿತರಿದ್ದರು.






