ಬೆಂಗಳೂರು: ಕೆಪಿಎಸ್‌ಸಿಯಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗಳ ಮಾರಾಟವಾಗಿದ್ದು, 400 ಹುದ್ದೆಗಳಿಗೆ ಎರಡು ಕೋಟಿ ರೂ. ನಂತೆ 800 ಕೋಟಿ ರೂ. ಲಂಚ ಪಡೆಯಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರವಾಗಿ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಎಸ್‌ಸಿ ನಲ್ಲಿ 800 ಕೋಟಿ ಡೀಲ್ ಆಗಿದೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ರ‍್ಯಾಂಕ್ ಬಂದಿರೋರಿಗೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂದ್ರೆ 350ಮಾರ್ಕ್ಸ್ ಬಂದಿದೆ. ಆದರೆ ಕಾಲೇಜುಗಳಲ್ಲಿ ಸಾಧಾರಣ ವಿದ್ಯಾರ್ಥಿ ಆಗಿದ್ದು, ಇಲ್ಲಿ ಕಾಸು ಕೊಟ್ಟವರಿಗೆ 400 ಅಂಕ ಬಂದಿದೆ. ಹಾಗಾಗಿ ಕೆಪಿಎಸ್‌ಸಿ ಆಂತರಿಕ ತನಿಖೆ ಬೇಡ, ಸಿಬಿಐ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕೆಪಿಎಸ್‌ಸಿ ಅಕ್ರಮಕ್ಕೆ ಅವಕಾಶ ಕೊಡಲ್ಲ ಅಂದಿದ್ದರು. ಈಗ ಪಶುವೈದ್ಯಾಧಿಕಾರಿ ಹುದ್ದೆಗಳಲ್ಲಿ ಅಕ್ರಮ ಆಗಿದೆ. ಒಂದೊಂದು ಪೋಸ್ಟ್ ಗೆ 1 ರಿಂದ 2 ಕೋಟಿ ರೂ. ವಸೂಲಿ ಮಾಡಿದ್ದಾರೆ. ಈ ಬಗ್ಗೆ ಆಡಿಯೋ ಕೂಡ ವೈರಲ್ ಆಗಿದೆ. ಅದರಲ್ಲಿ ಐಎಎಸ್ ಅಧಿಕಾರಿ ಅಂತಾನೂ ಪ್ರಸ್ತಾಪಪ ಮಾಡಲಾಗಿದೆ. ಆ ಐಎಎಸ್ ಅಧಿಕಾರಿ ಯಾರು? ಸರ್ಕಾರದ ಮಂತ್ರಿಗಳಿಗೆ ಎಷ್ಟು ಹಣ ಹೋಗುತ್ತದೆ? ಇದರ ಸಂಪೂರ್ಣ ತನಿಖೆ ಆಗಬೇಕು. ಇದುವರೆಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಯಾರನ್ನೂ ಬಂಧಿಸಿಲ್ಲ. ಇದರ ಹಿಂದೆ ದೊಡ್ಡ ಜಾಲ ಇದೆ ಎಂದು ದೂರಿದ್ದಾರೆ.

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಆಂತರಿಕ ತನಿಖೆ ಮಾಡುತ್ತಿದೆಯಂತೆ. ಲಂಚ ಪಡೆದವರೇ ತನಿಖೆ ಮಾಡಿದರೆ ಸತ್ಯ ಹೊರ ಬರುವುದಾದರೂ ಹೇಗೆ? ದಾಖಲೆ ಇದ್ದರೂ ಸರ್ಕಾರ ಯಾಕೆ ತನಿಖೆ ಮಾಡುತ್ತಿಲ್ಲ. ರಾಹುಲ್ ಗಾಂಧಿ ಯಾಕೆ ಇದರ ಬಗ್ಗೆ ಚಕಾರ ಎತ್ತಿಲ್ಲ? ಕೆಪಿಎಸ್‌ಸಿ ಅಧ್ಯಕ್ಷರ ವಜಾ ಆಗಿದೆ, 80 ಲಕ್ಷ ರೂ.ಗೆ ದಾಖಲೆ ಇದೆ. ಯಾಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಾಯಿ ಬಿಡುತ್ತಿಲ್ಲ? ರಾಜ್ಯದಲ್ಲಿ ಯಾವುದೇ ಪರೀಕ್ಷಾ ಅಕ್ರಮ ಆದರೆ ಡಿಸಿ ಹೊಣೆ ಅಂತೆ. ಇದನ್ನ ಹೇಳಿರುವುದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಕೇಂದ್ರದಲ್ಲಿ ಮಂತ್ರಿ ಹೊಣೆ ಅಂತೆ, ರಾಜ್ಯದಲ್ಲಿ ಡಿಸಿ ಹೊಣೆನಾ? ಇದು ನಿಮ್ಮ ದ್ವಂದ್ವ ನಿಲುವು ಅಲ್ಲವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.







